ನವದೆಹಲಿ, ಅಕ್ಟೋಬರ್ 24: ಬೀದಿ ಬದಿ ವ್ಯಾಪಾರಿಗಳ ಉದ್ಯಮಶೀಲತೆ ಪ್ರೋತ್ಸಾಹಿಸುವುದಕ್ಕಾಗಿ ಕೇಂದ್ರ ಸರ್ಕಾರ ಆರಂಭಿಸಿದ್ದ ಮೈಕ್ರೋ ಕ್ರೆಡಿಟ್ ಸ್ಕೀಮ್ ‘ಪಿಎಂ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ’ ಅಥವಾ ‘ಪಿಎಂ ಸ್ವನಿಧಿ ಯೋಜನೆ (PM SVANidhi)’ಯ ಪ್ರಯೋಜನ ಪಡೆದವರಲ್ಲಿ ಶೇ 75ರಷ್ಟು ಮಂದಿ ಸಾಮಾನ್ಯೇತರ ವರ್ಗದವರು (Non-General Category) ಎಂಬುದು ಸಂಶೋಧನಾ ವರದಿಯಿಂದ ತಿಳಿದುಬಂದಿದೆ. ಯೋಜನೆಯ ಪ್ರಯೋಜನ ಪಡೆದವರಲ್ಲಿ ಶೇ 75ರಷ್ಟು ಮಂದಿ ಸಾಮಾನ್ಯ ವರ್ಗೇತರರು ಇದ್ದಾರೆ. ಒಬಿಸಿ ವರ್ಗದ ಶೇ 44 ರಷ್ಟು ಮಂದಿ ಪ್ರಯೋಜನ ಪಡೆದಿದ್ದಾರೆ ಎಂಬುದು ಎಸ್ಬಿಐ ಸಂಶೋಧನಾ ವರದಿಯಿಂದ (An SBI research report) ಬಹಿರಂಗಗೊಂಡಿದೆ.
ಎಸ್ಸಿ, ಎಸ್ಟಿ ವರ್ಗದ ಶೇ 22ರಷ್ಟು ಮಂದಿ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಯೋಜನೆಯ ಒಟ್ಟು ಫಲಾನುಭವಿಗಳ ಪೈಕಿ ಶೇ 43ರಷ್ಟು ಮಂದಿ ಮಹಿಳೆಯರು ಎಂದು ವರದಿ ತಿಳಿಸಿದೆ.
ಫಲಾನುಭವಿಗಳಲ್ಲಿ ಮಹಿಳೆಯರ ಪಾಲು ನಗರ ಪ್ರದೇಶದ ಮಹಿಳೆಯರ ಉದ್ಯಮಶೀಲತಾ ಸಾಮರ್ಥ್ಯಗಳ ಸಬಲೀಕರಣವನ್ನು ಸೂಚಿಸುತ್ತದೆ ಎಂದು ವರದಿ ಹೇಳಿದೆ.
‘ಪಿಎಂ ಸ್ವನಿಧಿ ಯೋಜನೆ’ ಬಗ್ಗೆ ಎಸ್ಬಿಐ ಸಿದ್ಧಪಡಿಸಿರುವ ಸಂಶೋಧನಾ ವರದಿಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಎಸ್ಬಿಐನ ಸೌಮ್ಯಾ ಕಾಂತಿ ಘೋಷ್ ಅವರು ಸಿದ್ಧಪಡಿಸಿರುವ ವಿಸ್ತೃತ ಸಂಶೋಧನಾ ವರದಿಯು ಪಿಎಂ ಸ್ವನಿಧಿ ಯೋಜನೆಯ ಪರಿಣಾಮದ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದೆ. ಇದು ಈ ಯೋಜನೆಯ ಅಂತರ್ಗತ ಸ್ವರೂಪವನ್ನು ಗಮನಿಸುವುದರ ಜತೆಗೆ ಅದು ಹೇಗೆ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ ಎಂಬುದನ್ನು ಎತ್ತಿ ತೋರಿಸಿದೆ ಎಂದು ಉಲ್ಲೇಖಿಸಿದ್ದಾರೆ.
This in-depth research by @kantisoumya of @TheOfficialSBI provides a very clear picture of the transformative impact of PM SVANidhi. It notes the inclusive nature of this scheme and highlights how it has led to financial empowerment. https://t.co/zJ2PLWVkcK
— Narendra Modi (@narendramodi) October 24, 2023
ನರೇಂದ್ರ ಮೋದಿ ಸರ್ಕಾರವು 2020 ರಲ್ಲಿ ಪ್ರಾರಂಭಿಸಿದ ಪಿಎಂ ಸ್ವನಿಧಿ ಯೋಜನೆಯು ನಗರ ಪ್ರದೇಶಗಳ ಬೀದಿ ವ್ಯಾಪಾರಿಗಳಿಗೆ ಕಿರುಸಾಲ ನೀಡುವ ಯೋಜನೆಯಾಗಿದೆ. ಇದರ ಅಡಿಯಲ್ಲಿ 50,000 ರೂ. ವರೆಗೆ ಮೇಲಾಧಾರ-ಮುಕ್ತ ಸಾಲವನ್ನು ನೀಡಲಾಗುತ್ತದೆ.
ಇದನ್ನೂ ಓದಿ: PM SVANIdhi: ಸರ್ಕಾರದ ಪಿಎಂ ಸ್ವನಿಧಿ ಯೋಜನೆ ಬಗ್ಗೆ ಗೊತ್ತಿರಬೇಕಾದ ಸಂಗತಿಗಳಿವು
ಈ ಯೋಜನೆಯಡಿ ಈವರೆಗೆ ಸುಮಾರು 70 ಲಕ್ಷ ಸಾಲವನ್ನು (ಒಟ್ಟು 9,100 ಕೋಟಿ ರೂಪಾಯಿಗೂ ಹೆಚ್ಚು) ಮೂರು ಹಂತಗಳಲ್ಲಿ ವಿತರಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ