India GDP: ಇನ್ನು ಆರೇಳು ವರ್ಷದಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ: S&P ಭವಿಷ್ಯ
S&P Prediction on India: ಭಾರತ ಸದ್ಯ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ಅಮೆರಿಕ ಮತ್ತು ಚೀನಾ ಮೊದಲೆರಡು ಸ್ಥಾನದಲ್ಲಿ ಉಳಿದವರಿಗಿಂತ ಬಹಳ ಮುಂದಿವೆ. ಜಪಾನ್ ಮತ್ತು ಜರ್ಮನಿ ದೇಶಗಳು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಭಾರತ ಐದನೇ ಸ್ಥಾನದಲ್ಲಿದ್ದು, ಜರ್ಮನಿಗಿಂತ ತುಸು ಮಾತ್ರವೇ ಹಿಂದಿದೆ. ಎಸ್ ಅಂಡ್ ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ರಿಪೋರ್ಟ್ ಪ್ರಕಾರ ಭಾರತದ ಜಿಡಿಪಿ 2030ರಲ್ಲಿ 7.3 ಟ್ರಿಲಿಯನ್ ಡಾಲರ್ ಆಗಬಹುದು. ಜಪಾನ್ನ ಜಿಡಿಪಿಗಿಂತ ಹೆಚ್ಚಾಗುತ್ತದೆ ಎಂದಿದೆ.
ನವದೆಹಲಿ, ಅಕ್ಟೋಬರ್ 24: ಭಾರತದ ಆರ್ಥಿಕತೆ ಇದೇ ವೇಗದಲ್ಲಿ ಸಾಗಿದರೆ ಬಹಳ ಬೇಗ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿ (Biggest Economies) ಬೆಳೆಯಲಿದೆ ಎಂಬುದು ತಜ್ಞರ ಅಭಿಮತ. ಎಸ್ ಅಂಡ್ ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ರಿಪೋರ್ಟ್ (S&P global market intelligence) ಪ್ರಕಾರ ಭಾರತದ ಜಿಡಿಪಿ 2030ರಲ್ಲಿ 7.3 ಟ್ರಿಲಿಯನ್ ಡಾಲರ್ (600 ಲಕ್ಷಕೋಟಿ ರೂ) ಆಗಬಹುದು. ಜಪಾನ್ನ ಜಿಡಿಪಿಗಿಂತ ಹೆಚ್ಚಾಗುತ್ತದೆ ಎಂದಿದೆ. ಇದರೊಂದಿಗೆ ಭಾರತ ಇನ್ನು ಆರೇಳು ವರ್ಷದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿ ಜಪಾನ್ ಅನ್ನು ಭಾರತ ಹಿಂದಿಕ್ಕಲಿದೆ ಎಂದು ಎಸ್ ಅಂಡ್ ಪಿ ವರದಿಯಲ್ಲಿ ಭವಿಷ್ಯ ನುಡಿಯಲಾಗಿದೆ.
ಭಾರತ ಸದ್ಯ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ಅಮೆರಿಕ ಮತ್ತು ಚೀನಾ ಮೊದಲೆರಡು ಸ್ಥಾನದಲ್ಲಿ ಉಳಿದವರಿಗಿಂತ ಬಹಳ ಮುಂದಿವೆ. ಜಪಾನ್ ಮತ್ತು ಜರ್ಮನಿ ದೇಶಗಳು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಭಾರತ ಐದನೇ ಸ್ಥಾನದಲ್ಲಿದ್ದು, ಜರ್ಮನಿಗಿಂತ ತುಸು ಮಾತ್ರವೇ ಹಿಂದಿದೆ.
ಇದನ್ನೂ ಓದಿ: ಉದ್ಯೋಗ ಬಹಳ ರಿಸ್ಕ್; ಬಿಸಿನೆಸ್ ಮಾಡ್ರಪ್ಪ ಅಂತಿದಾರೆ ಮೈಕ್ರೋಸಾಫ್ಟ್ ಇಂಡಿಯಾ ಮಾಜಿ ಛೇರ್ಮನ್ ರವಿ ವೆಂಕಟೇಸನ್
ಕೋವಿಡ್ ಬಳಿಕ ಭಾರತದ ಆರ್ಥಿಕತೆ ಗಮನಾರ್ಹವಾಗಿ ಚೇತರಿಸಿಕೊಂಡಿದೆ. 2021 ಮತ್ತು 2022ರ ಕ್ಯಾಲಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಉತ್ತಮವಾಗಿತ್ತು. 2023ರಲ್ಲೂ ಅದೇ ವೇಗವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಶೇ. 8ರಷ್ಟು ವೇಗವನ್ನು ನಿರೀಕ್ಷಿಸಲಾಗಿದ್ದರೂ ಶೇ. 6ರಿಂದ 7ರಷ್ಟು ಜಿಡಿಪಿ ದರ ಇರಬಹುದು. ಆದರೂ ಜಾಗತಿಕ ಆರ್ಥಿಕತೆಗೆ ಹೋಲಿಸಿದರೆ ಭಾರತದ ಬೆಳವಣಿಗೆ ಗಣನೀಯವಾಗಿದೆ. ಅಭಿವೃದ್ಧಿಶೀಲ ದೊಡ್ಡ ಆರ್ಥಿಕತೆಯ ದೇಶಗಳ ಪೈಕಿ ಅತಿವೇಗದ ಜಿಡಿಪಿ ಬೆಳವಣಿಗೆ ಹೊಂದುತ್ತಿರುವುದು ಭಾರತವೇ.
2022ರಲ್ಲಿ ಭಾರತದ ಜಿಡಿಪಿ 3.5 ಟ್ರಿಲಿಯನ್ ಡಾಲರ್ ಇತ್ತು. 2023ರಲ್ಲಿ ಅದು 4 ಟ್ರಿಲಿಯನ್ ಡಾಲರ್ಗೂ ಹೆಚ್ಚಿರುವ ನಿರೀಕ್ಷೆ ಇದೆ. 2030ರಲ್ಲಿ 7.3 ಟ್ರಿಲಿಯನ್ ಡಾಲರ್ನಷ್ಟು ಜಿಡಿಪಿ ಭಾರತದ್ದಾಗಬಹುದು. ಮುಂದಿನ ವರ್ಷದೊಳಗೆ ಜರ್ಮನಿಯನ್ನೂ, 2030ರೊಳಗೆ ಜಪಾನ್ ಅನ್ನೂ ಹಿಂದಿಕ್ಕಿ ಭಾರತ ನಂಬರ್ 3ನೇ ದೇಶವಾಗಬಹುದು.
ಇದನ್ನೂ ಓದಿ: Explained: ಕ್ಯಾಷ್ಬ್ಯಾಕ್, ಡಿಸ್ಕೌಂಟ್ ಆಫರ್ಗಳಿಂದ ಯಾರಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ಮಾರ್ಕೆಟಿಂಗ್ ರಹಸ್ಯ
ಸದ್ಯ ಅಮೆರಿಕದ ಜಿಡಿಪಿ 25.5 ಟ್ರಿಲಿಯನ್ ಡಾಲರ್ ಇದೆ. ಚೀನಾದ ಆರ್ಥಿಕತೆ 18 ಟ್ರಿಲಿಯನ್ ಡಾಲರ್ನಷ್ಟಿದೆ. ಇವೆರಡು ದೇಶಗಳ ಜಿಡಿಪಿಯ ಸಮಕ್ಕೆ ಭಾರತ ಬರಲು ಹಲವು ವರ್ಷಗಳೇ ಬೇಕಾಗುತ್ತದೆ. ಈಗಿರುವ ವೇಗದಲ್ಲೇ ಸಾಗಿದರೆ 2047ರಲ್ಲಿ ಚೀನಾ ಮತ್ತು ಭಾರತ ದೇಶಗಳು ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಯ ದೇಶಗಳಾಗಲಿವೆ ಎಂದು ಹಲವು ಹಣಕಾಸು ವಿಶ್ಲೇಷಕ ಸಂಸ್ಥೆಗಳು ಅಂದಾಜು ಮಾಡಿರುವುದು ಹೌದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ