Policybazaar IPO: ಪಾಲಿಸಿ ಬಜಾರ್ ಐಪಿಒ ಇಂದಿನಿಂದ ಶುರು, ಷೇರಿಗೆ ತಲಾ 940ರಿಂದ 980 ರೂ. ನಿಗದಿ
ಪಾಲಿಸಿಬಜಾರ್ ಐಪಿಒ ಇಂದಿನಿಂದ ಅಂದರೆ ನವೆಂಬರ್1, 2021ರಿಂದ ಶುರುವಾಗಿದೆ. ದರ ಮತ್ತಿತರ ಮಾಹಿತಿ ಈ ಲೇಖನದಲ್ಲಿ ಇದೆ. ಹೂಡಿಕೆದಾರರು ಈ ಮಾಹಿತಿಯ ಉಪಯೋಗ ಪಡೆಯಬಹುದು.
ಆನ್ಲೈನ್ ಮಾರ್ಕೆಟ್ ಪ್ಲೇಸ್ ಪಾಲಿಸಿಬಜಾರ್ ಮತ್ತು ಸಾಲದ ಹೋಲಿಕೆ ಮಾಡುವಂಥ ಪೋರ್ಟಲ್ ಪೈಸಾಬಜಾರ್ ಇವನ್ನು ನಡೆಸುವಂಥ PB Fintech Ltd (PBFL) ತನ್ನ ಮೊದಲ ಸಾರ್ವಜನಿಕ ಷೇರು ವಿತರಣೆಯ ಸಬ್ಸ್ಕ್ರಿಪ್ಷನ್ ನವೆಂಬರ್ 1, 2021ರಿಂದ ಆರಂಭಿಸಿದೆ. 5,710 ಕೋಟಿ ರೂಪಾಯಿಯನ್ನು ಈ ಮೂಲಕ ಸಂಗ್ರಹಿಸುವ ಗುರಿ ಇದೆ. ಸಬ್ಸ್ಕ್ರಿಪ್ಷನ್ ನವೆಂಬರ್ 3ನೇ ತಾರೀಕಿಗೆ ಕೊನೆ ಆಗುತ್ತದೆ. 940ರಿಂದ 980 ರೂಪಾಯಿ ತಲಾ ಷೇರಿಗೆ ದರ ನಿಗದಿ ಮಾಡಲಾಗಿದೆ. ಈ ವಿತರಣೆಯಲ್ಲಿ ಆಫರ್ ಫಾರ್ ಸೇಲ್ (OFS) ಕೂಡ ಒಳಗೊಂಡಿದೆ. ಈ ಆಫರ್ ಫಾರ್ ಸೇಲ್ ಮೂಲಕ ಬರುವಂಥ ಮೊತ್ತವು ಕಂಪೆನಿಗೆ ಸಿಗುವುದಿಲ್ಲ. ನಿವ್ವಳ ಮಾರಾಟದಿಂದ ದೊರೆಯುವ 1500 ಕೋಟಿ ರೂಪಾಯಿಯನ್ನು ಬ್ರ್ಯಾಂಡ್ಗಳ ಬಗೆಗಿನ ಜಾಗೃತಿ ಮತ್ತು ಎಲ್ಲರ ಗಮನಕ್ಕೆ ತರುವುದಕ್ಕೆ ಬಳಸಲಾಗುತ್ತದೆ. ಕಂಪೆನಿಯು ಹೇಳಿರುವ ಪ್ರಕಾರ, ಆ್ಯಂಕರ್ ಹೂಡಿಕೆದಾರರಿಂದ 2569 ಕೋಟಿ ರೂಪಾಯಿಯಷ್ಟು ಮೊತ್ತವು ಐಪಿಒಗೆ ಮುಂಚಿತವಾಗಿಯೇ ಸಂಗ್ರಹವಾಗಿದೆ.
ಒಟ್ಟು 5710 ಕೋಟಿ ರೂಪಾಯಿಯ ಈ ಐಪಿಒದಲ್ಲಿ ಹೊಸದಾಗಿ 3750 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಹೊಸದಾಗಿ ವಿತರಿಸಲಾಗುತ್ತದೆ. ಇನ್ನು 1960 ಕೋಟಿ ಮೌಲ್ಯದ ಷೇರುಗಳನ್ನು ಈಗಾಗಲೇ ಇರುವ ಷೇರುದಾರರು ಮಾರಾಟ ಮಾಡುತ್ತಾರೆ. ಪಿಬಿ ಫಿನ್ಟೆಕ್ ಎಂಬುದು ಪ್ರಮುಖ ಆನ್ಲೈನ್ ಪ್ಲಾಟ್ಫಾರ್ಮ್. ಇನ್ಷೂರೆನ್ಸ್ ಮತ್ತು ಸಾಲದ ಉತ್ಪನ್ನಗಳಿಗಾಗಿ ಇರುವಂಥದ್ದು. ಇನ್ಷೂರೆನ್ಸ್, ಕ್ರೆಡಿಟ್ ಮತ್ತು ಇತರ ಹಣಕಾಸು ಉತ್ಪನ್ನಗಳಿಗೆ ಸಂಪರ್ಕ ಒದಗಿಸುತ್ತದೆ. ಮಾರುಕಟ್ಟೆ ತಜ್ಞರ ಪ್ರಕಾರ, ಪಾಲಿಸಿಬಜಾರ್ನ ಷೇರುಗಳು ಇವತ್ತು ಗ್ರೇ ಮಾರ್ಕೆಟ್ನಲ್ಲಿ ಪ್ರೀಮಿಯಂ (GMP) 150 ರೂಪಾಯಿಗೆ ಲಭ್ಯವಿದೆ. ನವೆಂಬರ್ 15ನೇ ತಾರೀಕಿನಂದು ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಲಿಸ್ಟ್ ಮಾಡಲು ಕಂಪೆನಿ ಯೋಜನೆ ರೂಪಿಸಿದೆ.
ಸ್ಥೂಲವಾಗಿ ಇನ್ಷೂರೆನ್ಸ್ ವಲಯವು ಸಕಾರಾತ್ಮಕವಾಗಿದೆ ಮತ್ತು ಪಿಬಿಎಫ್ಎಲ್ನ ಮೂಲಭೂತ ಅಂಶಗಳು ಅದೇ ರೀತಿ ಇವೆ. ಡಿಜಿಟಲ್ ಇನ್ಷೂರೆನ್ಸ್ ಮತ್ತು ಕ್ರೆಡಿಟ್ ಮಾರ್ಕೆಟ್ನಲ್ಲಿ ಪಾರಮ್ಯ ಹೊಂದಿರುವ ಈ ಕಂಪೆನಿ, ಎರಡೂ ಮಾರ್ಕೆಟ್ನಲ್ಲಿ ಇರುವ ವಿಫುಲ ಅವಕಾಶಗಳ ಲಾಭ ಪಡೆಯುವ ಸಾಧ್ಯತೆಗಳಿವೆ, ಹೆಚ್ಚಿನ ದರದ ಬ್ಯಾಂಡ್ ಆದ 980 ರೂಪಾಯಿಯಲ್ಲಿ ಪಿಬಿಎಫ್ಎಲ್ EV/TTM ಮಾರಾಟ ಬೇಡಿಕೆ 40.5X ಗುಣಕದಲ್ಲಿದೆ. ಇದು ಬಹಳ ಹಿಗ್ಗಿಸಿದಂತೆ ಕಾಣುತ್ತದೆ. ಈ ಮೇಲ್ಕಂಡದ್ದನ್ನು ಗಮನದಲ್ಲಿ ಇಟ್ಟುಕೊಂಡು, ದೀರ್ಘಾವಧಿಗೆ ಸಬ್ಸ್ಕ್ರೈಬ್ ಆಗುವಂತೆ ರೇಟಿಂಗ್ ನೀಡಿದ್ದೇವೆ ಎಂದು ಬ್ರೋಕರೇಜ್ ಸಂಸ್ಥೆಯೊಂದು ಹೇಳಿದೆ.
ಇನ್ಷೂರೆನ್ಸ್ ಬ್ರೋಕರ್ಗಳ ಪರವಾನಗಿ ಹಾಗೂ ಭಾರತದಲ್ಲಿ ಇರುವ ತೀರಾ ಕನಿಷ್ಠ ಮಟ್ಟದ ಆನ್ಲೈನ್ ಇನ್ಷೂರೆನ್ಸ್ ಪ್ರಮಾಣವು ಕಂಪೆನಿಗೆ ದೀರ್ಘಾವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಅವಕಾಶ ನೀಡುತ್ತದೆ. ಆದರೆ ಸದ್ಯಕ್ಕೆ ಹೇಳುವುದಾದರೆ ಮೌಲ್ಯಮಾಪನ ಜಾಸ್ತಿ ಎಂದೆನಿಸುತ್ತದೆ. ಆದ್ದರಿಂದ ದೀರ್ಘಾವಧಿ ಹೂಡಿಕೆದಾರರು ಹಣ ತೊಡಗಿಸುವುದು ಉತ್ತಮ. ದೊಡ್ಡ ಮಟ್ಟದಲ್ಲಿ ಅಪಾಯವನ್ನು ತಡೆದುಕೊಳ್ಳುವ ಸಾಮರ್ಥ್ಯ ಮತ್ತು ಕಂಪೆನಿಯ ರಿಟರ್ನ್ಸ್ ಅನುಪಾತ ಚೇತರಿಸಿಕೊಳ್ಳುವ ತನಕ ಕಾಯುವಂಥ ತಾಳ್ಮೆ ಇರುವವರು ಐಪಿಒಗೆ ಸಬ್ಸ್ಕ್ರೈಬ್ ಆಗಬಹುದು ಎನ್ನುತ್ತಾರೆ ವಿಶ್ಲೇಷಕರು.
ಗೋಲ್ಡ್‌ಮನ್ ಸ್ಯಾಚ್ಸ್, ನೋಮುರಾ, ಬ್ಲ್ಯಾಕ್‌ರಾಕ್ ಗ್ಲೋಬಲ್ ಫಂಡ್ಸ್, ಮೋರ್ಗನ್ ಸ್ಟಾನ್ಲಿ, ಕೆನಡಾ ಪಿಂಚಣಿ ಯೋಜನೆ ಹೂಡಿಕೆ ಮಂಡಳಿ, ಫಿಡೆಲಿಟಿ, ಅಬುಧಾಭಿ ಹೂಡಿಕೆ ಪ್ರಾಧಿಕಾರ, ಐಸಿಐಸಿಐ ಪ್ರುಡೆನ್ಷಿಯಲ್ ಮ್ಯೂಚುವಲ್ ಫಂಡ್ (ಎಂಎಫ್), ಎಸ್‌ಬಿಐ ಎಂಎಫ್, ಆಕ್ಸಿಸ್ ಎಂಎಫ್ ಮತ್ತು ಯುಟಿಐ ಎಂಎಫ್ ಷೇರುಗಳು ಹಂಚಿಕೆ ಆಗಿರುವ ಆ್ಯಂಕರ್ ಹೂಡಿಕೆದಾರರಲ್ಲಿ ಸೇರಿವೆ.
ಅಂದಹಾಗೆ ಹೂಡಿಕೆದಾರರು ಕನಿಷ್ಠ 15 ಷೇರುಗಳಿಗೆ ಬಿಡ್ ಮಾಡಬೇಕಾಗುತ್ತದೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಗಾದಲ್ಲಿ 15ರ ಗುಣಕದಲ್ಲಿ ಅಂದರೆ 30, 45, 60… ಹೀಗೆ ಅಪ್ಲೈ ಮಾಡಬೇಕಾಗುತ್ತದೆ. ಕನಿಷ್ಠ ಪ್ರಮಾಣದ ಷೇರುಗಳಿಗಾಗಿ 14,700 ರೂಪಾಯಿ ಬೇಕಾಗುತ್ತದೆ.
ಇದನ್ನೂ ಓದಿ: Paytm IPO: ಪೇಟಿಎಂನ 16,600 ಕೋಟಿ ರೂಪಾಯಿಯ ಐಪಿಒಗೆ ಸೆಬಿಯಿಂದ ಅನುಮತಿ