Punit Goenka: ಸೋನಿ-ಝೀ ಒಪ್ಪಂದ ರದ್ದು: ಇದು ದೇವರೇ ಕಳುಹಿಸಿದ ಸಂದೇಶ: ಅಯೋಧ್ಯೆಯಿಂದ ಪುನೀತ್ ಗೋಯಂಕಾ ಟ್ವೀಟ್

|

Updated on: Jan 22, 2024 | 2:56 PM

Sony-ZEE Merger Deal: ಝೀ ಮತ್ತು ಸೋನಿ ವಿಲೀನ ಒಪ್ಪಂದ ಮುರಿದುಬಿದ್ದ ಬೆನ್ನಲ್ಲೇ ಅಯೋದ್ಯೆಯಿಂದ ಝೀ ಸಿಇಒ ಪುನೀತ್ ಗೋಯಂಕಾ ಟ್ವೀಟ್ ಮಾಡಿದ್ದಾರೆ. ಇದು ದೈವೇಚ್ಛೆ. ಸಕಾರಾತ್ಮಕವಾಗಿ ಸ್ವೀಕರಿಸಿ ಮುಂದುವರಿಯುತ್ತೇನೆ ಎಂದು ಅವರು ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ. ಝೀ ಮತ್ತು ಸೋನಿ ನಡುವಿನ 10 ಬಿಲಿಯನ್ ಡಾಲರ್ ಒಪ್ಪಂದ ಮುರಿದುಬಿದ್ದ ಬೆನ್ನಲ್ಲೇ ಎರಡೂ ಸಂಸ್ಥೆಗಳು ಕಾನೂನು ಸಮರಕ್ಕೆ ಸಜ್ಜಾಗುತ್ತಿವೆ.

Punit Goenka: ಸೋನಿ-ಝೀ ಒಪ್ಪಂದ ರದ್ದು: ಇದು ದೇವರೇ ಕಳುಹಿಸಿದ ಸಂದೇಶ: ಅಯೋಧ್ಯೆಯಿಂದ ಪುನೀತ್ ಗೋಯಂಕಾ ಟ್ವೀಟ್
ಪುನೀತ್ ಗೋಯಂಕಾ
Follow us on

ನವದೆಹಲಿ, ಜನವರಿ 22: ಝೀ ಮತ್ತು ಸೋನಿ ನೆಟ್ವರ್ಕ್ ವಿಲೀನ ಒಪ್ಪಂದ (Zee Sony Merger Deal) ಮುರಿದುಬಿದ್ದ ಕೆಲ ಹೊತ್ತಿನಲ್ಲೇ ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿ ಸಂಸ್ಥೆ ಎಂಡಿ ಪುನೀತ್ ಗೋಯಂಕಾ (Punit Goenka) ಟ್ವೀಟ್ ಮಾಡಿದ್ದು, ಮುಂದಿನ ಮಾರ್ಗಗಳನ್ನು ಅವಲೋಕಿಸುವ ಸುಳಿವು ನೀಡಿದ್ದಾರೆ. ಪುನೀತ್ ಗೋಯಂಕಾ ಟ್ವೀಟ್ ಮಾಡಿದಾಗ ಅಯೋಧ್ಯೆಯ ರಾಮ ಮಂದಿರ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರು ಈ ಬೆಳವಣಿಗೆಯನ್ನು ಆ ಭಗವಂತನ ಸೂಚನೆ ಎಂದು ಬಣ್ಣಿಸಿದ್ದಾರೆ.

‘ನಾನು ಈ ದಿನ ಬೆಳಗ್ಗೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕಾಗಿ ಅಯೋಧ್ಯೆಗೆ ಬಂದಿದ್ದಾಗ ಒಪ್ಪಂದ ಮುರಿದುಬಿತ್ತೆಂಬ ಮೆಸೇಜ್ ಬಂತು. ನಾನು ಬಹಳ ಪ್ರಾಮಾಣಿಕವಾಗಿ ಸಕಲ ಪ್ರಯತ್ನಗಳನ್ನು ಮಾಡಿಯೂ ಎರಡು ವರ್ಷ ನಾನು ಕನಸು ಕಂಡಿದ್ದ ಯೋಜನೆ ಅಂತ್ಯಗೊಂಡಿತ್ತು.

‘ಇದನ್ನು ನಾವು ದೈವೇಚ್ಛೆ ಎಂದು ನಂಬುತ್ತೇನೆ. ಸಕಾರಾತ್ಮಕವಾಗಿ ಇದನ್ನು ಪರಿಗಣಿಸಿ ಮುಂದಡಿ ಇಡುತ್ತೇನೆ. ಈ ಮಾಧ್ಯಮ ಸಂಸ್ಥೆಯನ್ನು ಬಲಪಡಿಸಲು ಕೆಲಸ ಮಾಡುತ್ತೇನೆ. ಜೈ ಶ್ರೀ ರಾಮ್’ ಎಂದು ಝೀ ಸಂಸ್ಥೆಯ ಎಂಡಿ ಮತ್ತು ಸಿಇಒ ಆಗಿರುವ ಪುನೀತ್ ಗೋಯಂಕಾ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ. ತಮ್ಮ ಕುಟುಂಬ ಸದಸ್ಯರ ಜೊತೆ ರಾಮ ಮಂದಿರ ಸ್ಥಳದಲ್ಲಿ ಇರುವ ಫೋಟೋಗಳನ್ನೂ ಅವರು ಷೇರ್ ಮಾಡಿದ್ದಾರೆ.

ಇದನ್ನೂ ಓದಿ: Sony-Zee: ಕೊನೆಗೂ ಉತ್ತರ ಸಿಗದ ಸಿಇಒ ಪ್ರಶ್ನೆ; ಮುರಿದುಬಿತ್ತು ಸೋನಿ-ಝೀ ಡೀಲ್; ಟರ್ಮಿನೇಶನ್ ಲೆಟರ್ ಬರೆದ ಸೋನಿ

ಒಪ್ಪಂದ ಹೋಯ್ತು, ಈಗ ಕಾನೂನು ಸಮರ

ಝೀ ಮತ್ತು ಸೋನಿ ನಡುವಿನ 10 ಬಿಲಿಯನ್ ಡಾಲರ್ ಒಪ್ಪಂದ ಮುರಿದುಬಿದ್ದ ಬೆನ್ನಲ್ಲೇ ಎರಡೂ ಸಂಸ್ಥೆಗಳು ಕಾನೂನು ಸಮರಕ್ಕೆ ಸಜ್ಜಾಗುತ್ತಿವೆ. ವಿಲೀನ ಒಪ್ಪಂದ ರದ್ದುಗೊಳಿಸಲು ನೋಟೀಸ್ ನೀಡಿದ ಸೋನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಝೀ ಯೋಜಿಸಿದೆ. ಇನ್ನೊದೆಡೆ, ಒಪ್ಪಂದದ ನಿಯಮಗಳನ್ನು ಝೀ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಸೋನಿ ಸಂಸ್ಥೆ 90 ಮಿಲಿಯನ್ ಡಾಲರ್ ಟರ್ಮಿನೇಶನ್ ಫೀಗೆ ಆಗ್ರಹಿಸಿ ಕೋರ್ಟ್ ಮೆಟ್ಟಿಲೇರುವುದಾಗಿ ಸುಳಿವು ನೀಡಿದೆ.

ಇದನ್ನೂ ಓದಿ: ಕ್ಯಾಷ್​ಲೆಸ್ ಪೇಮೆಂಟ್ಸ್; ಅಮೆರಿಕನ್ನರು 3 ವರ್ಷದಲ್ಲಿ ಮಾಡುವುದಕ್ಕಿಂತ ಭಾರತೀಯರು 1 ತಿಂಗಳಲ್ಲಿ ಹೆಚ್ಚು ವಹಿವಾಟು ಮಾಡುತ್ತಾರೆ: ಜೈಶಂಕರ್

ಒಪ್ಪಂದಕಕ್ಕೆ ಕಗ್ಗಂಟಾದ ಪುನೀತ್ ಗೋಯಂಕಾ

ಸೋನಿ ಸಂಸ್ಥೆ ತನ್ನ ಭಾರತೀಯ ವ್ಯವಹಾರಗಳನ್ನು ಝೀ ಜೊತೆ ವಿಲೀನಗೊಳಿಸಲು 10 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. ವಿಲೀನಗೊಂಡ ಸಂಸ್ಥೆಗೆ ಯಾರು ಮುಖ್ಯಸ್ಥರಾಗಬೇಕು ಎಂಬುದು ಕೊನೆಯವರೆಗೂ ಬಗೆಹರಿಯದ ಕಗ್ಗಂಟಾಗಿ ಉಳಿಯಿತು. ಝೀ ಸಂಸ್ಥೆಯ ಮುಖ್ಯಸ್ಥ ಪುನೀತ್ ಗೋಯಂಕಾ ಕೋರ್ಟ್ ಕೇಸ್​ನಲ್ಲಿ ಇನ್ನೂ ಪೂರ್ಣ ಆರೋಪಮುಕ್ತ ಆಗಿಲ್ಲವಾದ್ದರಿಂದ ಅವರು ಸಿಇಒ ಆಗುವುದು ಬೇಡ ಎಂಬುದು ಸೋನಿ ಹಿಡಿದಿದ್ದ ಪಟ್ಟು. ಇದಕ್ಕೆ ಝೀ ಒಪ್ಪಲು ತಯಾರಿರಲಿಲ್ಲ. ಹೀಗಾಗಿ, ಸೋನಿ ಒಪ್ಪಂದದಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿತು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Mon, 22 January 24