ನವದೆಹಲಿ, ಅಕ್ಟೋಬರ್ 9: ಭಾರತದ ಅತಿದೊಡ್ಡ ಸಿನಿಮಾ ಪ್ರದರ್ಶಕ ಸಂಸ್ಥೆಯಾದ ಪಿವಿಆರ್ ಐನಾಕ್ಸ್ ಇದೀಗ ಸಿನಿಮಾ ಜಾಹೀರಾತು ಕ್ಷೇತ್ರದಲ್ಲಿ ಗಟ್ಟಿ ಹೆಜ್ಜೆಗಳನ್ನು ಇರಿಸುತ್ತಿದೆ. ತನ್ನ ದೀರ್ಘಕಾಲದ ಬಿಸಿನೆಸ್ ಪಾರ್ಟ್ನರ್ ಆದ ಖುಷಿ ಅಡ್ವರ್ಟೈಸಿಂಗ್ ಐಡಿಯಾಸ್ ಪ್ರೈ ಲಿ (ಕೆಎಐಪಿಎಲ್) ಸಂಸ್ಥೆ ಜೊತೆ ಪಿವಿಆರ್-ಐನಾಕ್ಸ್ ಮಹತ್ವದ ಜಾಹೀರಾತು ಒಪ್ಪಂದವೊಂದನ್ನು ಕುದುರಿಸಿದೆ.
ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಸಿನಿಮಾ ಜಾಹೀರಾತು ಮಾರಾಟ ನಿರ್ವಹಣೆಗೆ ಐದು ವರ್ಷದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಖುಷಿ ಅಡ್ವರ್ಟೈಸಿಂಗ್ ಸಂಸ್ಥೆ ದಕ್ಷಿಣ ಭಾರತ ಪ್ರದೇಶದಲ್ಲಿ ಪಿವಿಆರ್-ಐನಾಕ್ಸ್ಗೆ ಆ್ಯಡ್ ಸೇಲ್ಸ್ ಅಫಿಲಿಯೇಟ್ ಆಗಿರಲಿದೆ.
‘ಉದ್ಯಮದ ಎರಡು ಮುಂಚೂಣಿ ಸಂಸ್ಥೆಗಳ ಮಧ್ಯೆ ಆಗಿರುವ ಹೊಸ ಸಹಭಾಗಿತ್ವವು ಬಹಳ ಮಹತ್ವದ್ದು. ಮಾರುಕಟ್ಟೆಯ ಸುಧಾರಣೆ ತರಲು, ಮಾರುಕಟ್ಟೆಯ ಮೇಲೆ ಉತ್ತಮ ನಿಯಂತ್ರಣ ತರಲು ಈ ಒಪ್ಪಂದ ಸಹಾಯವಾಗಲಿದೆ. ಅಷ್ಟೇ ಅಲ್ಲ, ನಮ್ಮ ಪ್ರತಿಷ್ಠಿತ ಜಾಹೀರಾತುದಾರರು ಮತ್ತು ವ್ಯಾಪಾರ ಪಾಲುದಾರರಲ್ಲಿ ಸಿನಿಮಾ ಜಾಹೀರಾತಿನ ಮೌಲ್ಯ ಎತ್ತಿಹಿಡಿಯಲು ನೆರವಾಗುತ್ತದೆ’ ಎಂದು ಪಿವಿಆರ್ ಐನಾಕ್ಸ್ ಸಂಸ್ಥೆಯ ರೆವಿನ್ಯೂ ಮತ್ತು ಆಪರೇಷನ್ಸ್ ವಿಭಾಗದ ಸಿಇಒ ಗೌತಮ್ ದತ್ತಾ ಹೇಳಿದ್ದಾರೆ.
ಇದನ್ನೂ ಓದಿ: ಸಮಂತಾರನ್ನು ಹೊಗಳಿ ಅಟ್ಟಕ್ಕೇರಿಸಿದ ಆಲಿಯಾ ಭಟ್
ಸಾಂಪ್ರದಾಯಿಕವಾಗಿ, ನಮ್ಮ ಒಟ್ಟು ಆದಾಯದಲ್ಲಿ ಜಾಹೀರಾತು ಮಾರಾಟದ ಪಾಲು ಶೇ. 10-11ರಷ್ಟಿರುತ್ತದೆ. ಕೋವಿಡ್ ನಂತರ ಇದು ಶೇ. 7-8ಕ್ಕೆ ಇಳಿದಿದೆ. ಈಗ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದೇವೆ. ಕೋವಿಡ್ ಮುಂಚಿನ ಸ್ಥಿತಿಗೆ ಮರಳಲು ಈ ಒಪ್ಪಂದ ಸಹಕಾರಿಯಾಗಲಿದೆ ಎಂದು ಗೌತಮ್ ದತ್ತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಖುಷಿ ಅಡ್ವರ್ಟೈಸಿಂಗ್ ಸಂಸ್ಥೆ OOH (Out of Home) ತಂತ್ರದಲ್ಲಿ ಪರಿಣತಿ ಹೊಂದಿದೆ. ಮಾಲ್, ಏರ್ಪೋರ್ಟ್, ಕಾರ್ಪೊರೇಟ್ ಪಾರ್ಕ್ ಇತ್ಯಾದಿ ಸ್ಥಳದಲ್ಲಿ ಜಾಹೀರಾತುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ಖುಷಿ ಅಡ್ವೈರ್ಟೈಸಿಂಗ್ ಸಂಸ್ಥೆಯ ಸಿಇಒ ವಿಷ್ಣು ತೆಲಂಗ್ ಅವರು, ಜಾಹೀರಾತುದಾರರ ಯಾವುದೇ ಸಂದೇಶವನ್ನು ಅದು ತಲುಪಬೇಕಾದವರಿಗೆ ತಲುಪಿಸಬಲ್ಲ ಸಾಮರ್ಥ್ಯ ಹೊಂದಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಈ ಗೌರವ ನಮ್ಮದಲ್ಲ, ನಿಮ್ಮದು: ರಾಷ್ಟ್ರ ಪ್ರಶಸ್ತಿ ಕೈಯಲ್ಲಿ ಹಿಡಿದು ಪ್ರೇಕ್ಷಕರನ್ನು ನೆನೆದ ರಿಷಬ್ ಶೆಟ್ಟಿ
ಖುಷಿ ಅಡ್ವರ್ಟೈಸಿಂಗ್ ಸಂಸ್ಥೆಯ ನಿರ್ದೇಶಕ ಪ್ರಣಯ್ ಶಾ ಅವರು ಪಿವಿಆರ್ ಐನಾಕ್ಸ್ ಜೊತೆಗಿನ ಪಾರ್ಟ್ನರ್ಶಿಪ್ನಿಂದ ಸಿನಿಮಾ ಜಾಹೀರಾತು ಕ್ಷೇತ್ರದಲ್ಲಿ ಕ್ರಾಂತಿಯನ್ನೇ ತರಬಲ್ಲುದು ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Wed, 9 October 24