ಅಮೆರಿಕದ ಸುಂಕ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟಿನ ನಡುವೆಯೂ ಭಾರತೀಯ ಆರ್ಥಿಕತೆ ಬಲವಾಗಿದೆ: ಆರ್‌ಬಿಐ
RBI bulletin observes resilience in Indian economy: ಹಲವು ಜಾಗತಿಕ ಅಡೆತಡೆಗಳ ನಡುವೆಯೂ ಭಾರತದ ಆರ್ಥಿಕತೆಯು ದೃಢತೆಯನ್ನು ತೋರುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ವರದಿಯೊಂದು ಹೇಳಿದೆ. ಆಂತರಿಕ ಬೇಡಿಕೆ ಹೆಚ್ಚಾಗಿರುವುದು, ಉತ್ಪಾದನೆ, ಸೇವಾ ಕ್ಷೇತ್ರಗಳ ಚಟುವಟಿಕೆ ಉತ್ತಮವಾಗಿರುವುದು ಆರ್ಥಿಕತೆಗೆ ಬಲ ಕೊಟ್ಟಿದೆ. ಈ ವರ್ಷ ಉತ್ತಮ ಮುಂಗಾರು ಮಳೆ, ವಿದೇಶೀ ಬಂಡವಾಳ ಒಳಹರಿವು ಸಕಾರಾತ್ಮಕವಾಗಿರುವ ಅಂಶಗಳೆನ್ನಲಾಗಿದೆ.

ನವದೆಹಲಿ, ಆಗಸ್ಟ್ 26: ಜಾಗತಿಕ ಮಟ್ಟದಲ್ಲಿನ ಅನಿಶ್ಚಿತತೆಗಳು, ಹೊಸ ಅಮೆರಿಕನ್ ಸುಂಕಗಳು (US Tariffs) ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳ ನಡುವೆಯೂ ಭಾರತದ ಆರ್ಥಿಕತೆಯು ದೃಢತೆ (Resilience) ಮೆರೆಯುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ತಿಳಿಸಿದೆ. ದೇಶದಲ್ಲಿನ ಬಲವಾದ ಆಂತರಿಕ ಬೇಡಿಕೆ, ಉತ್ಪಾದನಾ (Manufacturing) ಮತ್ತು ಸೇವಾ ವಲಯಗಳ ಚಟುವಟಿಕೆಗಳು ಭಾರತೀಯ ಆರ್ಥಿಕತೆಗೆ ಭದ್ರವಾದ ಬೆಂಬಲವಾಗಿ ನಿಂತಿವೆ ಎಂದು ರಿಸರ್ವ್ ಬ್ಯಾಂಕ್ನ ವರದಿಯಲ್ಲಿ ಹೇಳಲಾಗಿದೆ.
ಅಮೆರಿಕದ ಸುಂಕಗಳ ಪ್ರಭಾವ ಎಷ್ಟಿದೆ?
ಅಮೆರಿಕ ವಿಧಿಸಿರುವ ಹೊಸ ಸುಂಕಗಳಿಂದ ಚೀನಾ, ವಿಯೆಟ್ನಾಮ್ ಮತ್ತು ಥೈಲ್ಯಾಂಡ್‌ನಂತಹ ಇತರ ಏಷ್ಯನ್ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಕಡಿಮೆ ಪರಿಣಾಮವಾಗುವ ನಿರೀಕ್ಷೆಯಿದೆ. ಭಾರತದ ಪ್ರಮುಖ ರಫ್ತು ಸರಕುಗಳಾದ ಸ್ಮಾರ್ಟ್‌ಫೋನ್‌ಗಳು, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಔಷಧಗಳು ಅಮೆರಿಕದ ಟ್ಯಾರಿಫ್ ವ್ಯಾಪ್ತಿಯಿಂದ ಹೊರಗಿವೆ ಎಂಬ ಸಂಗತಿಯನ್ನು ಆರ್‌ಬಿಐ ಬುಲೆಟಿನ್‌ನಲ್ಲಿ ಗುರುತಿಸಲಾಗಿದೆ.
ಇದನ್ನೂ ಓದಿ: ಇರಾನ್ನೊಂದಿಗೆ ವ್ಯಾಪಾರ: 4 ಭಾರತೀಯ ಕಂಪನಿಗಳು ಹಾಗು 3 ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ
ಮುಂಗಾರು ಮಳೆಯ ಚೇತರಿಕೆಯು ಕೃಷಿ ವಲಯದ ಮೇಲಿನ ಆತಂಕವನ್ನು ಕಡಿಮೆ ಮಾಡಿದೆ. ವಿದೇಶಿ ನೇರ ಹೂಡಿಕೆ (FDI) ಸುಧಾರಿಸಿದ್ದು, ಜುಲೈ ತಿಂಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FPI) ಷೇರುಪೇಟೆಯಲ್ಲಿ ಖರೀದಿಗೆ ಮುಂದಾಗಿದ್ದಾರೆ. ಈ ಎಲ್ಲಾ ಸಂಗತಿಗಳು ಭಾರತದ ಆರ್ಥಿಕತೆಗೆ ಸಕಾರಾತ್ಮಕ ಎನಿಸುತ್ತವೆ ಎಂದು ರಿಸರ್ವ್ ಬ್ಯಾಂಕ್ ಅಭಿಪ್ರಾಯಪಟ್ಟಿದೆ.
ಜಾಗತಿಕವಾಗಿ ಪ್ರತಿಕೂಲ ವಾತಾವರಣವಿದ್ದರೂ ಭಾರತದ ಬಲವಾದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು (Macroeconomic Fundamentals) ಆರ್ಥಿಕ ಬೆಳವಣಿಗೆಗೆ ರಕ್ಷಣೆ ಒದಗಿಸುತ್ತಿವೆ ಎಂದು ಆರ್‌ಬಿಐನ ಸಂಶೋಧಕರು ಮತ್ತು ಆರ್ಥಿಕ ತಜ್ಞರು ರಚಿಸಿರುವ ಬುಲೆಟಿನ್‌ನಲ್ಲಿ ವಿಶ್ವಾಸ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ: ಡಿಆರ್ಡಿಒ ಮಿಸೈಲ್ ಸಿಸ್ಟಂಗಳ ತಂತ್ರಜ್ಞಾನ ರಕ್ಷಣಾ ಉದ್ಯಮಕ್ಕೆ ಹಸ್ತಾಂತರ; ದೇಶೀಯವಾಗಿ ಕ್ಷಿಪಣಿ ತಯಾರಿಕೆಗೆ ಭರ್ಜರಿ ಪುಷ್ಟಿ
ಈ ತಿಂಗಳು ಮೊದಲ ವಾರದಲ್ಲಿ ನಡೆದ ಆರ್‌ಬಿಐ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು ಶೇ. 5.25ರಲ್ಲೇ ಮುಂದುವರಿಸಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಹಣದುಬ್ಬರವು ತುಸು ಮೇಲ್ಗಡೆಗೆ ಹೋಗುವುದರಿಂದ ಬಡ್ಡಿದರವನ್ನು ಸ್ವಲ್ಪವಾದರೂ ಹೆಚ್ಚಿಸಬಹುದು ಎನ್ನುವ ಸುಳಿವನ್ನು ಎಂಪಿಸಿ ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




