ನವದೆಹಲಿ, ಜೂನ್ 6: ಆರ್ಬಿಐ ಸತತ ಮೂರನೇ ಬಾರಿ ರಿಪೋ ದರ ಕಡಿತಗೊಳಿಸಿದೆ. ನಿರೀಕ್ಷೆಯಂತೆ ಈ ಬಾರಿ ಬಡ್ಡಿದರವನ್ನು 50 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಶೇ. 6ರಷ್ಟಿರುವ ಬಡ್ಡಿದರ ಈಗ ಶೇ. 5.50ಕ್ಕೆ ಇಳಿಕೆಯಾಗಿದೆ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆಯ ಈ ನಿರ್ಧಾರವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಆರ್ಬಿಐ ತನ್ನ ರಿಪೋ ದರವನ್ನು ಸತತ ಮೂರನೇ ಬಾರಿ ಇಳಿಕೆ ಮಾಡಿದಂತಾಗಿದೆ. ಈ ವರ್ಷದ ಆರಂಭದಲ್ಲಿ ರಿಪೋ ದರ ಶೇ. 6.50ರಷ್ಟಿತ್ತು. ಆರು ತಿಂಗಳ ಅವಧಿಯಲ್ಲಿ ಶೇ. 1ರಷ್ಟು ದರ ಇಳಿದಂತಾಗಿದೆ. ಈ ಹೊಸ ದರವು ತತ್ಕ್ಷಣದಿಂದಲೇ ಜಾರಿಗೆ ಬರಲಿದೆ.
ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ರಿಪೋ ದರ ಇಳಿಸುವ ನಿರ್ಧಾರಕ್ಕೆ ಪ್ರಮುಖ ಕಾರಣವನ್ನೂ ಹೆಸರಿಸಿದ್ದಾರೆ. ಹಣದುಬ್ಬರ ನಿಯಂತ್ರಣದಲ್ಲಿರುವುದರಿಂದ ಆರ್ಬಿಐಗೆ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿದೆ. ಜಾಗತಿಕ ಅನಿಶ್ಚಿತ ವಾತಾವರಣದಿಂದ ಹಿನ್ನಡೆಯಲ್ಲಿರುವ ಆರ್ಥಿಕತೆಗೆ ರಿಪೋ ದರ ಇಳಿಕೆಯು ಪುಷ್ಟಿ ಕೊಡುವ ನಿರೀಕ್ಷೆ ಇದೆ.
ಇದನ್ನೂ ಓದಿ: ಭಾರತದಲ್ಲಿ ತಯಾರಾಗಲಿದೆ ರಫೇಲ್ ಯುದ್ಧವಿಮಾನದ ಫ್ಯೂಸಲಾಜ್; ಡಸೋ ಏವಿಯೇಶನ್ ಜೊತೆ ಟಾಟಾ ಗ್ರೂಪ್ ಒಪ್ಪಂದ
ಮತ್ತೊಂದು ಪ್ರಮುಖ ನಿರ್ಧಾರದಲ್ಲಿ ಆರ್ಬಿಐ ತನ್ನ ಮಾನಿಟರಿ ಪಾಲಿಸಿ ಸ್ಟ್ಯಾನ್ಸ್ ಅಥವಾ ಹಣಕಾಸು ನೀತಿ ನಿಲುವನ್ನು ಬದಲಾಯಿಸಿದೆ. ಅಕಾಮೊಡೇಟಿವ್ ಎಂದಿದ್ದ ನಿಲುವನ್ನು ನ್ಯೂಟ್ರಲ್ಗೆ ಬದಲಾಯಿಸಲಾಗಿದೆ. ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ ನೀತಿ ನಿಲುವನ್ನು ನ್ಯೂಟ್ರಲ್ನಿಂದ ಅಕಾಮೊಡೇಟಿವ್ಗೆ ಬದಲಾಯಿಸಲಾಗಿತ್ತು. ಈಗ ವಾಪಸ್ ನ್ಯೂಟ್ರಲ್ ನಿಲುವಿಗೆ ಬರಲಾಗಿದೆ.
ಹಾಗೆಯೇ, ಕ್ಯಾಷ್ ರಿಸರ್ವ್ ರೇಶಿಯೋವನ್ನು 100 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಇದರೊಂದಿಗೆ ಬ್ಯಾಂಕಿಂಗ್ ವ್ಯವಸ್ಥೆಗೆ 2.5 ಲಕ್ಷ ಕೋಟಿ ರೂ ಮೊತ್ತದ ಹಣದ ಹರಿವು ಆಗಲು ಸಾಧ್ಯವಾಗಲಿದೆ.
ಇದನ್ನೂ ಓದಿ: ಸರ್ಕಾರಕ್ಕೆ ಅದಾನಿ ಗ್ರೂಪ್ನಿಂದ ಸಖತ್ ಟ್ಯಾಕ್ಸ್ ಕಲೆಕ್ಷನ್; ಇಡೀ ಬೆಂಗಳೂರು ಮೆಟ್ರೋ ನಿರ್ಮಾಣಕ್ಕಾಗುವಷ್ಟು ಹಣ ಅದು
ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಭಾರತದ ಆರ್ಥಿಕತೆ ಈ ವರ್ಷ (2025-26) ಶೇ. 6.5ರಷ್ಟು ಹೆಚ್ಚಬಹುದು ಎಂದಿದ್ದಾರೆ. ಹಾಗೆಯೇ, ಹಣದುಬ್ಬರವು ಈ ವರ್ಷ ಶೇ. 3.7ರಷ್ಟು ಇರುವ ಸಾಧ್ಯತೆ ಇದೆ ಎಂದಿದ್ಧಾರೆ. ಇದು ಈ ಬಾರಿ ಸರಿಯಾದ ಪ್ರಮಾಣದಲ್ಲಿ ಮುಂಗಾರು ಮಳೆ ಬಂದು ಉತ್ತಮ ಬೆಳೆಯಾದರೆ ಇರುವ ಹಣದುಬ್ಬರ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:26 am, Fri, 6 June 25