ನವದೆಹಲಿ, ಡಿಸೆಂಬರ್ 8: ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋ ದರದ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ. ಮೂರು ದಿನಗಳ ಎಂಪಿಸಿ ಸಭೆ ಬಳಿಕ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸುತ್ತಿರುವುದಾಗಿ ಘೋಷಿಸಿದ್ದಾರೆ. ಸತತ ಐದನೇ ಬಾರಿ ರೆಪೋ ದರ ಶೇ. 6.5ರ ದರದ ಮಟ್ಟದಲ್ಲೇ ಇದೆ.
ಪ್ರತೀ ಎರಡು ತಿಂಗಳು ನಡೆಯುವ ಎಂಪಿಸಿ ಸಭೆಯಲ್ಲಿ ರೆಪೋ ದರ ಮಾತ್ರವಲ್ಲ ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರವನ್ನು ಕ್ರಮವಾಗಿ ಶೇ. 6.25 ಮತ್ತು ಶೇ. 6.75ರಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಇನ್ನು, ಹಣದುಬ್ಬರಕ್ಕೆ ಕಡಿವಾಣ ಹಾಕಲು ಒಂದು ಪ್ರಮುಖ ಅಸ್ತ್ರವೆನ್ನಲಾದ ವಿತ್ಡ್ರಾಯಲ್ ಆಫ್ ಅಕಾಮಡೇಶನ್ನ ಕ್ರಮವನ್ನು ಮುಂದುವರಿಸಲು ನಿರ್ಧರಿಸಲಾಯಿತು. ಆರ್ಬಿಐನ ಆರು ಮಂದಿ ಎಂಪಿಸಿ ಸದಸ್ಯರ ಪೈಕಿ ಐವರು ಇದಕ್ಕೆ ಬೆಂಬಲ ಸೂಚಿಸಿದ್ದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರು ಸಮೀಪ ದೇಶದ ಅತಿದೊಡ್ಡ ಐಫೋನ್ ಘಟಕ; ಹೊಸೂರಿನಲ್ಲಿ ಟಾಟಾ ಯೋಜನೆ; 50,000 ಮಂದಿಗೆ ಉದ್ಯೋಗ
ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಶೇ. 7.6ರಷ್ಟು ಬೆಳೆದು ಎಲ್ಲರ ನಿರೀಕ್ಷೆಮೀರಿಸಿರುವ ಬೆನ್ನಲ್ಲೇ ಇದೀಗ ಆರ್ಬಿಐ ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಅಂದಾಜನ್ನು ಬದಲಿಸಿದೆ. 2023-24ರ ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟಿರಬಹುದು ಎಂದು ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ ಆರ್ಬಿಐ ಅಂದಾಜು ಮಾಡಿತ್ತು. ಈ ಬಾರಿ ತನ್ನ ಅಭಿಪ್ರಾಯವನ್ನು ಬದಲಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಶೇ. 7ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಿದೆ.
ಇದನ್ನೂ ಓದಿ: ಚಿದಂಬರಂ, ರಾಜನ್ರಿಗೆ ಮ್ಯಾನುಫ್ಯಾಕ್ಚರಿಂಗ್ ಪಾಠ ಬೋಧಿಸಿ, ಟ್ರೋಲ್ ಮಾಡಿದ ಸಚಿವ ಎ ವೈಷ್ಣವ್
ಈ ಹಣಕಾಸು ವರ್ಷದಲ್ಲಿ (2023-24) ಗ್ರಾಹಕ ಬೆಲೆ ಅನುಸೂಚಿ (ಸಿಪಿಐ) ಆಧಾರಿತ ಹಣದುಬ್ಬರ ಅಥವಾ ರೀಟೇಲ್ ಇನ್ಫ್ಲೇಶನ್ ಶೇ. 5.4ರಷ್ಟು ಇರಬಹುದು ಎಂದು ಆರ್ಬಿಐ ಅಂದಾಜು ಮಾಡಿದೆ. ಸದ್ಯದಲ್ಲೇ ಹಣದುಬ್ಬರ ನಿಗದಿತ ಗುರಿಯಾದ ಶೇ. 4ರ ದರಕ್ಕೆ ಇಳಿಸುವುದು ಸಾಧ್ಯವಿಲ್ಲ ಎನ್ನುವ ಸೂಚನೆಯನ್ನು ಆರ್ಬಿಐ ರವಾನಿಸಿದೆ. ಆಹಾರ ಬೆಲೆ ಏರಿಕೆಯು ಹಣದುಬ್ಬರ ನಿಯಂತ್ರಣ ಕಾರ್ಯವನ್ನು ಕಷ್ಟವಾಗಿಸಿದೆ ಎಂಬುದು ಆರ್ಬಿಐ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:12 am, Fri, 8 December 23