ನವದೆಹಲಿ, ಫೆ. 5: ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ ದ್ವೈಸಿಕ ವಾಗಿ (RBI MPC Meet) ನಡೆಸುವ ಸಭೆ ನಾಳೆ (ಫೆ. 6) ಆರಂಭವಾಗಲಿದೆ. ನಾಳೆ ಆರಂಭವಾಗಿ ಎರಡು ದಿನ ಸಭೆ ನಡೆಯುತ್ತದೆ. ಬಳಿಕ ಫೆಬ್ರುವರಿ 8ರಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ತಜ್ಞರ ಪ್ರಕಾರ ಈ ಬಾರಿಯೂ ಬಡ್ಡಿದರದಲ್ಲಿ (repo rate) ವ್ಯತ್ಯಯ ಆಗುವ ಸಾಧ್ಯತೆ ಇಲ್ಲ. ರಾಯ್ಟರ್ಸ್ ನಡೆಸಿದ ಆರ್ಥಿಕ ತಜ್ಞರ ಅಭಿಮತ ಸಂಗ್ರಹದಲ್ಲೂ ಇದೇ ಅನಿಸಿಕೆ ವ್ಯಕ್ತವಾಗಿದೆ. ಸದ್ಯ ಬಡ್ಡಿದರ ಅಥವಾ ರೆಪೋ ದರ ಶೇ. 6.5ರಷ್ಟಿದೆ. ಅದೇ ದರ ಮುಂದುವರಿಯಬಹುದು ಎನ್ನಲಾಗಿದೆ.
ಆರ್ಬಿಐ ರೆಪೋ ದರ ಪರಿಷ್ಕರಿಸಿ ಸರಿಯಾಗಿ ಒಂದು ವರ್ಷ ಆಯಿತು. 2023ರ ಫೆಬ್ರುವರಿಯಲ್ಲಿ ನಡೆದಿದ್ದ ಎಂಪಿಸಿ ಸಭೆಯಲ್ಲಿ ಶೇ. 6.25ರಷ್ಟಿದ್ದ ರೆಪೋ ದರವನ್ನು ಶೇ. 6.50ಕ್ಕೆ ಹೆಚ್ಚಿಸಲಾಗಿತ್ತು. ಅದಾದ ಬಳಕ ಸತತವಾಗಿ ದರದ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಆರ್ಬಿಐ ರೆಪೋ ದರ ಪರಿಷ್ಕರಣೆಗೆ ಬಹುತೇಕ ಹಣದುಬ್ಬರ ದರವೇ ಆಧಾರವಾಗಿರುತ್ತದೆ. ಆರ್ಥಿಕತೆಯ ಓಟವನ್ನು ಇನ್ನಷ್ಟು ಸರಾಗಗೊಳಿಸಲು ಬಡ್ಡಿದರ ಕಡಿಮೆ ಮಾಡುವ ಅವಶ್ಯಕತೆ ಇದೆ. ಆದರೆ, ಹಣದುಬ್ಬರ ಈ ಕ್ರಮಕ್ಕೆ ಅಡ್ಡಿಯಾಗುತ್ತಾ ಬಂದಿದೆ. ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 5.69ರಷ್ಟಿದೆ. ಜನವರಿಯಲ್ಲೂ ಹೆಚ್ಚು ವ್ಯತ್ಯಯವಾಗುವುದು ಅನುಮಾನ. ಹೀಗಾಗಿ, ರೆಪೊ ದರವನ್ನು ಶೇ. 6.5ರ ದರದಲ್ಲೇ ಮುಂದುವರಿಸುವುದು ಆರ್ಬಿಐಗೆ ಅನಿವಾರ್ಯ ಆಗಬಹುದು.
ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯಲ್ಲಿ ಆರು ಸದಸ್ಯರಿದ್ದಾರೆ. ಇದರಲ್ಲಿ ಮೂವರು ಆರ್ಬಿಐಗೆ ಸೇರಿದವರೇ ಆಗಿದ್ದರೆ, ಇತರ ಮೂವರು ಹೊರಗಿನವರಾಗಿದ್ದಾರೆ. ಈ ಸಮಿತಿ ಸದಸ್ಯರ ಪಟ್ಟಿ ಇಂತಿದೆ:
ಶಕ್ತಿಕಾಂತ ದಾಸ್ ಆರ್ಬಿಐನ ಗವರ್ನರ್ ಆಗಿದ್ದಾರೆ. ರಾಜೀವ್ ರಂಜನ್ ಆರ್ಬಿಐನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದರೆ ಮೈಕೇಲ್ ದೇಬಬ್ರತಾ ಪಾಲ್ ಉಪಗವರ್ನರ್ ಆಗಿದ್ದಾರೆ.
ಇದನ್ನೂ ಓದಿ: ಖಾಸಗಿ ಬಂಡವಾಳ ವೆಚ್ಚ ಬರದಿದ್ದರೂ ಇದೇ ಆರ್ಥಿಕ ವೇಗ ಉಳಿಯಲು ಸಾಧ್ಯ: ಟಿವಿ ಸೋಮನಾಥನ್
ಉಳಿದ ಮೂವರಾದ ಶಶಾಂಕ್ ಭಿಡೆ, ಆಶಿಮಾ ಗೋಯಲ್ ಮತ್ತು ಜಯಂತ್ ವರ್ಮಾ ಸ್ವತಂತ್ರ ಸದಸ್ಯರು. ಈ ಮೂವರನ್ನು ಸರ್ಕಾರ 2020ರಲ್ಲಿ ಸಮಿತಿಗೆ ನೇಮಕ ಮಾಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ