RBI MPC Meet: ಬಡ್ಡಿದರ ಶೇ. 5.25ಕ್ಕೆ ಇಳಿಯುತ್ತಾ?; ಬುಧವಾರ ಆರ್​ಬಿಐ ಎಂಪಿಸಿ ಸಭೆ ನಿರ್ಧಾರ ಪ್ರಕಟ

RBI MPC meeting August 2025: ಭಾರತೀಯ ರಿಸರ್ವ್ ಬ್ಯಾಂಕ್​ನ ಮೂರು ದಿನಗಳ ಎಂಪಿಸಿ ಸಭೆ ನಡೆಯುತ್ತಿದ್ದು, ನಾಳೆ (ಆಗಸ್ಟ್ 6) ಸಭೆಯ ನಿರ್ಧಾರವನ್ನು ಪ್ರಕಟಿಸಲಾಗುತ್ತದೆ. ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಪತ್ರಿಕಾಗೋಷ್ಠಿಯಲ್ಲಿ ಎಂಪಿಸಿ ನಿರ್ಧಾರಗಳನ್ನು ಘೋಷಿಸಲಿದ್ದಾರೆ. ಎಂಪಿಸಿ ಸಭೆಯು ರಿಪೋ ದರದ ಯಥಾಸ್ಥಿತಿ ಮುಂದುವರಿಸಬಹುದು ಎಂದು ಹಲವು ತಜ್ಞರು ಅಂದಾಜಿಸಿದ್ದಾರೆ.

RBI MPC Meet: ಬಡ್ಡಿದರ ಶೇ. 5.25ಕ್ಕೆ ಇಳಿಯುತ್ತಾ?; ಬುಧವಾರ ಆರ್​ಬಿಐ ಎಂಪಿಸಿ ಸಭೆ ನಿರ್ಧಾರ ಪ್ರಕಟ
ಆರ್​ಬಿಐ

Updated on: Aug 05, 2025 | 2:10 PM

ನವದೆಹಲಿ, ಆಗಸ್ಟ್ 5: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾನಿಟರಿ ಪಾಲಿಸಿ ಕಮಿಟಿ ಸಭೆ (RBI MPC meeting) ಆಗಸ್ಟ್ 4ರಂದು ಆರಂಭವಾಗಿದ್ದು, ನಾಳೆ ಬುಧವಾರದಂದು ನಿರ್ಧಾರಗಳು ಪ್ರಕಟವಾಗಲಿವೆ. ಸತತ ಮೂರು ಬಾರಿ ಕಡಿತಗೊಂಡಿರುವ ರಿಪೋ ದರ (repo rate) ಮತ್ತಷ್ಟು ಇಳಿಯುವ ಸಾಧ್ಯತೆ ಇದೆ. ಫೆಬ್ರುವರಿ, ಏಪ್ರಿಲ್​ನ ಸಭೆಗಳಲ್ಲಿ ತಲಾ 25 ಮೂಲಾಂಕಗಳಷ್ಟು ರಿಪೋ ದರ ಇಳಿಸಲಾಗಿತ್ತು. ಜೂನ್ ಸಭೆಯಲ್ಲಿ ಒಮ್ಮೆಗೇ 50 ಅಂಕಗಳಷ್ಟು ಬಡ್ಡಿ ಇಳಿಸಲಾಗಿತ್ತು. ಈ ಮೂರು ಸಭೆಗಳಲ್ಲಿ ರಿಪೋ ದರ ಒಟ್ಟು 100 ಮೂಲಾಂಕಗಳಷ್ಟು ಕಡಿಮೆಗೊಂಡಿದೆ.

ಕೆಲ ತಜ್ಞರ ಅಂದಾಜು ಪ್ರಕಾರ ಈ ಬಾರಿಯ ಎಂಪಿಸಿ ಸಭೆಯಲ್ಲಿ 25 ಮೂಲಾಂಕಗಳಷ್ಟು ಬಡ್ಡಿ ಕಡಿಮೆಗೊಳ್ಳುವ ಸಂಭವ ಇದೆ. ಆದರೆ ಹೆಚ್ಚಿನ ತಜ್ಞರು ಬಡ್ಡಿದರದ ಯಥಾಸ್ಥಿತಿ ಕಾಯ್ದುಕೊಳ್ಳಬಹುದು ಎಂದು ಅಂದಾಜು ಮಾಡಿದ್ದಾರೆ.

ಇದನ್ನೂ ಓದಿ: ಫ್ರಂಟ್ ರನ್ನಿಂಗ್ ಮಾಡುತ್ತಿದ್ದ ಮಾಜಿ ಎಕ್ಸಿಸ್ ಎಂಎಫ್ ಮ್ಯಾನೇಜರ್ ವೀರೇಶ್ ಜೋಶಿ ಬಂಧನ; ಏನಿದು ಫ್ರಂಟ್ ರನ್ನಿಂಗ್?

ಸಂದಿಗ್ಧ ಸ್ಥಿತಿಯಲ್ಲಿ ಭಾರತದ ಮಾರುಕಟ್ಟೆ

ಭಾರತದ ಆರ್ಥಿಕತೆಯ ಭವಿಷ್ಯದ ದಾರಿ ಸಾಕಷ್ಟು ಏರಿಳಿತಗಳನ್ನು ಹೊಂದಿದಂತಿದೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಎನಿಸುವ ಅಂಶಗಳಿವೆ. ಹಣದುಬ್ಬರ ನಿಯಂತ್ರಣದಲ್ಲಿರುವುದು, ಆಂತರಿಕ ಅನುಭೋಗ ಪ್ರಬಲವಾಗಿರುವುದು ಸಕಾರಾತ್ಮಕ ಅಂಶಗಳಾಗಿವೆ. ಆದರೆ, ನಕಾರಾತ್ಮಕ ಅಂಶವು ಹೊರಗಿನ ವಾತಾವರಣದ್ದು. ಟ್ರಂಪ್ ತಂದಿಟ್ಟ ಟ್ಯಾರಿಫ್​ಗಳು ಭಾರತದ ಆರ್ಥಿಕತೆಯ ಮೇಲೆ ಅನಿಶ್ಚಿತ ಪರಿಣಾಮ ಬೀರುವ ಸಂಭವ ಹೆಚ್ಚು.

ಹೀಗಾಗಿ, ಹಲವು ತಜ್ಞರು ಆರ್​ಬಿಐನ ಎಂಪಿಸಿಯು ರಿಪೋ ದರವನ್ನು ಇಳಿಸುವ ನಿರ್ಧಾರ ಮಾಡುವುದಿಲ್ಲ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಹಣದುಬ್ಬರ ನಿಯಂತ್ರಣದಲ್ಲಿರುವುದರಿಂದ, ಹಾಗೂ ಆಂತರಿಕ ಅನುಭೋಗ ಮತ್ತಷ್ಟು ಹೆಚ್ಚಿದರೆ ಆರ್ಥಿಕತೆ ಗಟ್ಟಿಗೊಳ್ಳುವುದರಿಂದ ರಿಪೋ ದರವನ್ನು ಇಳಿಸುವ ಯತ್ನ ಮಾಡಬಹುದು ಎಂದು ಇತರ ಕೆಲ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಷೇರು vs ಚಿನ್ನ vs ರಿಯಲ್ ಎಸ್ಟೇಟ್; ಕಳೆದ 20 ವರ್ಷದಲ್ಲಿ ಯಾವುದರಿಂದ ಸಿಕ್ಕಿದೆ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್

ಆರ್​ಬಿಐನ ಎಂಪಿಸಿ ಸಭೆಯಲ್ಲಿ ರಿಪೋ ದರದ ಬಗ್ಗೆ ಮಾತ್ರವಲ್ಲ, ಹಣದುಬ್ಬರ, ಜಿಡಿಪಿ ಬೆಳವಣಿಗೆ ಇತ್ಯಾದಿ ಹತ್ತು ಹಲವು ಅಂಶಗಳ ಬಗ್ಗೆ ಚರ್ಚೆಯಾಗುತ್ತದೆ. ಹಣದುಬ್ಬರ ಮತ್ತು ಜಿಡಿಪಿ ಮುಂದಿನ ನಾಲ್ಕು ಕ್ವಾರ್ಟರ್​ಗಳು ಎಷ್ಟಿರಬಹುದು ಎಂದು ಅಂದಾಜು ಮಾಡಲಾಗುತ್ತದೆ. ಅನುಭೋಗ ಹೆಚ್ಚಿಸಲು ಪಾಲಿಸಿ ಕ್ರಮದಲ್ಲಿ ಏನಾದರೂ ಬದಲಾವಣೆ ಬೇಕಿದ್ದರೆ ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ