ನವದೆಹಲಿ, ಏಪ್ರಿಲ್ 22: ಒಂದು ದೇಶದ ಸೆಂಟ್ರಲ್ ಬ್ಯಾಂಕು ಹೊಂದಿರುವ ಅತ್ಯಂತ ಪ್ರಮುಖ ಅಸ್ತ್ರಗಳಲ್ಲಿ ರೆಪೋ ದರ (Repo Rate) ಒಂದು. ಹಣದುಬ್ಬರ ಹೆಚ್ಚಾದರೆ ಅದಕ್ಕೆ ಕಡಿವಾಣ ಹಾಕಲು ಸಾಮಾನ್ಯವಾಗಿ ರೆಪೋ ದರ ಅಥವಾ ಬಡ್ಡಿದರವನ್ನು ಹೆಚ್ಚಳ ಮಾಡಲಾಗುತ್ತದೆ. ಬಡ್ಡಿದರ ಹೆಚ್ಚಾದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆಯಾದರೂ ಆರ್ಥಿಕತೆಯ ವೇಗ ಕುಂಠಿತಗೊಳ್ಳಬಹುದು. ಭಾರತದ ಸೆಂಟ್ರಲ್ ಬ್ಯಾಂಕ್ ಎನಿಸಿದ ಆರ್ಬಿಐ (RBI) ಈಗ ಇಂಥದ್ದೊಂದು ಗೊಂದಲದ ಸ್ಥಿತಿಯಲ್ಲಿದೆ. ಭಾರತ ಮಾತ್ರವಲ್ಲ ಅಮೆರಿಕ ಸೇರಿದಂತೆ ಹಲವು ದೊಡ್ಡ ಆರ್ಥಿಕತೆಯ ದೇಶಗಳ ಸೆಂಟ್ರಲ್ ಬ್ಯಾಂಕುಗಳದ್ದೂ ಇದೇ ಗೊಂದಲ. ಭಾರತದಲ್ಲಿ ಆರ್ಥಿಕತೆ (economy) ಸದ್ಯಕ್ಕೆ ಉತ್ತಮವಾಗಿದೆ. ಆದರೆ, ಇನ್ನೂ ವೇಗವಾಗಿ ಬೆಳೆಯುವ ಸಾಮರ್ಥ್ಯ ಇದೆ. ಬಡ್ಡಿದರ ಕಡಿತದಿಂದ ಇದು ಸಾಧ್ಯ. ರೆಪೋ ದರ ಕಡಿಮೆ ಮಾಡಬೇಕಾದರೆ ಹಣದುಬ್ಬರ ಕಡಿಮೆ ಆಗಬೇಕು. ಹೀಗಾಗಿ, ಆರ್ಬಿಐ ಸದ್ಯಕ್ಕೆ ಬಡ್ಡಿದರ ಕಡಿತಗೊಳಿಸುವ ವಿಚಾರದಲ್ಲಿ ಕೈ ಕಟ್ಟಿಹಾಕಿದಂತಿದೆ.
ಆರ್ಬಿಐನ ಮಾನಿಟರಿ ಪಾಲಿಸಿ ಕಮಿಟಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಆರ್ಥಿಕ ಮತ್ತ ಹಣಕಾಸು ಪರಿಸ್ಥಿತಿಯನ್ನು ಅವಲೋಕಿಸುತ್ತದೆ. ಹಣದುಬ್ಬರ, ಜಿಡಿಪಿ ಬೆಳವಣಿಗೆ ಹೇಗಿದೆ ಎಂಬುದನ್ನು ಅರಿತು ಅದಕ್ಕೆ ತಕ್ಕಂತೆ ರೆಪೋ ದರ ಇತ್ಯಾದಿ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಈ ಎಂಪಿಸಿ ಸಮಿತಿಯಲ್ಲಿರುವ ಎಲ್ಲಾ ಆರು ಸದಸ್ಯರೂ ಬಡ್ಡಿದರ ಕಡಿತದ ಬಗ್ಗೆ ಒಲವು ಹೊಂದಿರುವುದು ತಿಳಿದುಬಂದಿದೆ. ಆದರೆ, ಯಾವಾಗ ದರ ಕಡಿತ ಮಾಡಬೇಕು ಎಂಬ ಬಗ್ಗೆ ಗೊಂದಲಗಳಿವೆ.
ಇದನ್ನೂ ಓದಿ: ಜೊಮಾಟೊ ಪ್ಲಾಟ್ಫಾರ್ಮ್ ಶುಲ್ಕ ಶೇ. 25ರಷ್ಟು ಹೆಚ್ಚಳ; ಒಂದು ಆರ್ಡರ್ಗೆ ಈಗ ಹೆಚ್ಚುವರಿ 5 ರೂ
‘ನಾವೀಗ ಪುನಶ್ಚೇತನದ ಹಂತದಲ್ಲಿದ್ದೇವೆ. ಯುವಜನರಿಗೆ ಉದ್ಯೋಗ ಸೃಷ್ಟಿಸಲು, ಹೂಡಿಕೆ ಚಕ್ರ ರೂಪುಗೊಳ್ಳಲು ಆರ್ಥಿಕತೆ ವೃದ್ಧಿ ಹೆಚ್ಚಾಗಬೇಕು. ಹಣದುಬ್ಬರವು ನಮ್ಮ ತಾಳಿಕೆ ಮಿತಿಯ ಗುರಿಯೊಳಗೆಯೇ ಇದೆ. ಇನ್ನೂ ಹೆಚ್ಚಿನ ವೇಗದಲ್ಲಿ ನಾವು ಬೆಳವಣಿಗೆ ಹೊಂದಲು ಸಾಧ್ಯವಿದೆ,’ ಎಂದು ಎಂಪಿಸಿ ಸಮಿತಿಯ ಆರು ಸದಸ್ಯರಲ್ಲಿ ಒಬ್ಬರಾದ ಆಶಿಮಾ ಗೋಯಲ್ ಹೇಳಿದ್ದಾರೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಎಂಪಿಸಿಯಲ್ಲಿ ಆರು ಸದಸ್ಯರಲ್ಲಿ ಮೂವರು ಬಾಹ್ಯ ಸದಸ್ಯರಿದ್ದಾರೆ. ಈ ಮೂವರಲ್ಲಿ ಅಶಿಮಾ ಗೋಯಲ್ ಒಬ್ಬರು.
ಆದರೆ, ಸದ್ಯದ ಮಟ್ಟಿಗೆ ರೆಪೋ ದರದ ಯಥಾಸ್ಥಿತಿ ಮುಂದುವರಿಸುವ ಅಭಿಪ್ರಾಯ ಗೋಯಲ್ ಅವರದ್ದು. 2023-24ಕ್ಕೆ ಜಿಡಿಪಿ ಶೇ. 7.6ರಷ್ಟು ಬೆಳೆಯಬಹುದು ಎಂಬ ಅಂದಾಜಿದೆ. ಹಣದುಬ್ಬರ ಹೇಗೆ ಸಾಗಬಹುದು ಎಂಬುದು ಸ್ಪಷ್ಟವಿಲ್ಲ. ಈ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿರತೆ ಸಾಧಿಸುವುದು ಉತ್ತಮ. ಅದಕ್ಕಾಗಿ ಬಡ್ಡಿದರದ ಯಥಾಸ್ಥಿತಿ ಇರಬೇಕಾಗುತ್ತದೆ ಎಂದು ಆಶಿಮಾ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನಾನು ನಂದಿನಿ, ಅಮೆರಿಕಾಗೆ ಬಂದಿವ್ನಿ… ಟಿ20 ವಿಶ್ವಕಪ್ನಲ್ಲಿ ಐರ್ಲೆಂಡ್, ಸ್ಕಾಟ್ಲೆಂಡ್ ತಂಡಗಳಿಗೆ ಕೆಎಂಎಫ್ ಸ್ಪಾನ್ಸರ್
ಭಾರತದಲ್ಲಿ ಸದ್ಯ ರೆಪೋ ದರ ಅಥವಾ ಬಡ್ಡಿದರ ಶೇ. 6.5ರಷ್ಟಿದೆ. ಕಳೆದ ಏಳು ಸಭೆಗಳಿಂದಲೂ ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತಿದೆ. ಹಣದುಬ್ಬರ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ 2022ರ ಮೇನಿಂದ ಶುರುವಾಗಿ 2023ರ ಫೆಬ್ರುವರಿಯವರೆಗೆ 250 ಮೂಲಾಂಶಗಳಷ್ಟು ಬಡ್ಡಿದರ ಹೆಚ್ಚಿಸಲಾಗಿತ್ತು. ಶೇ. 4ರಷ್ಟಿದ್ದ ಬಡ್ಡಿದರ ಶೇ. 6.5ಕ್ಕೆ ಏರಿದೆ. ಮೇ ತಿಂಗಳಲ್ಲಿ ಎಂಪಿಸಿ ಸಭೆ ನಡೆಯಲಿದ್ದು, ಆಗಲೂ ಕೂಡ ಬಡ್ಡಿದರ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಬಹುದು ಎನ್ನಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ