China Economy: ಕೊರೊನಾ ಬಿಕ್ಕಟ್ಟಿನ ನಂತರ ಮೊದಲ ಬಾರಿಗೆ ಚೀನಾದಲ್ಲಿ ರಿಯಲ್ ಎಸ್ಟೇಟ್, ನಿರ್ಮಾಣ ಕ್ಷೇತ್ರ ಕುಸಿತ

| Updated By: Srinivas Mata

Updated on: Oct 19, 2021 | 3:14 PM

ಚೀನಾದಲ್ಲಿ ಕೊವಿಡ್- 19 ನಂತರ ಇದೇ ಮೊದಲ ಬಾರಿಗೆ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್ ವಲಯ ಕುಗ್ಗಿದೆ.

China Economy: ಕೊರೊನಾ ಬಿಕ್ಕಟ್ಟಿನ ನಂತರ ಮೊದಲ ಬಾರಿಗೆ ಚೀನಾದಲ್ಲಿ ರಿಯಲ್ ಎಸ್ಟೇಟ್, ನಿರ್ಮಾಣ ಕ್ಷೇತ್ರ ಕುಸಿತ
ಚೀನಾ ಧ್ವಜ
Follow us on

2021ನೇ ಇಸವಿಯ ಕ್ಯಾಲೆಂಡರ್​ ವರ್ಷದ ಮೂರನೇ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟೆಂಬರ್) ಚೀನಾದ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರಗಳು ಕೊರೊನಾ ಬಿಕ್ಕಟ್ಟಿನ ಆರಂಭಿಕ ಹಂತದಿಂದ ಇಲ್ಲಿಯವರೆಗೆ ಮೊದಲ ಬಾರಿಗೆ ಕುಗ್ಗಿದವು ಎಂಬುದು ಅಧಿಕೃತ ಅಂಕಿ-ಅಂಶಗಳಿಂದ ಮಂಗಳವಾರ ತಿಳಿದುಬಂದಿದೆ. ಏಕೆಂದರೆ ದೇಶದಲ್ಲಿ ಸಂಕಷ್ಟದಲ್ಲಿ ಇರುವ ಆಸ್ತಿ ಉದ್ಯಮದ ಮೇಲಿನ ವ್ಯಾಪಕ ದಮನ ನೀತಿಯಿಂದಾಗಿ ಹೆಚ್ಚಿನ ಒತ್ತಡವನ್ನು ಎದುರಿಸುತ್ತಿದೆ. ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆಯು ನಿರೀಕ್ಷೆಗಿಂತ ಕಡಿಮೆ ವೇಗದಲ್ಲಿ ಬೆಳವಣಿಗೆ ದಾಖಲಿಸಿದೆ ಎಂಬುದು ಅಂಕಿ- ಅಂಶಗಳಿಂದ ತಿಳಿದುಬಂದ ಒಂದು ದಿನದ ನಂತರ ಈ ವಿವರ ಬಹಿರಂಗ ಆಗಿದೆ. ಒಂದು ಕಡೆ ನಿಯಂತ್ರಕ ಸಂಸ್ಥೆಯ ಬಿಗಿಯಾದ ಕ್ರಮಗಳು ಮತ್ತು ಇನ್ನೊಂದು ಕಡೆ ಎನರ್ಜಿ ಕೊರತೆ ದೇಶವನ್ನು ಕಾಡುತ್ತಿದೆ.

ರಿಯಲ್ ಎಸ್ಟೇಟ್ ಉತ್ಪಾದನೆಯು ವರ್ಷದ ಹಿಂದಿನ ಅವಧಿಗೆ ಹೋಲಿಸಿದಲ್ಲಿ ಶೇಕಡಾ 1.6ರಷ್ಟು ಕುಗ್ಗಿದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ (ಎನ್​ಬಿಎಸ್) ವರದಿಯಲ್ಲಿ ತಿಳಿಸಿದೆ. 2020ರ ಮೊದಲ ಮೂರು ತಿಂಗಳ ನಂತರ ಇದೇ ಮೊದಲ ಬಾರಿಗೆ ಕುಗ್ಗಿದೆ- ಚೀನಾದ ಕೊವಿಡ್ -19 ಉತ್ತುಂಗದಲ್ಲಿದ್ದಾಗ- ಮತ್ತು ಏಪ್ರಿಲ್-ಜೂನ್‌ನಲ್ಲಿ ಅದರ ಶೇಕಡಾ 7.1ರಿಂದ ಬೆಳವಣಿಗೆಯಿಂದ ಹಿಮ್ಮುಖವಾಗಿದೆ. ಅದೇ ಸಮಯದಲ್ಲಿ ನಿರ್ಮಾಣದಿಂದ ಉತ್ಪಾದನೆಯು ಶೇ 1.8ರಷ್ಟು ಕುಸಿದಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದ ನಂತರ ಮೊದಲ ಕುಸಿತ ಇದಾಗಿದೆ. ಕೊರೊನಾ ಬಿಕ್ಕಟ್ಟಿನ ಮೊದಲು, ಬ್ಲೂಮ್‌ಬರ್ಗ್ ನ್ಯೂಸ್ ಉಲ್ಲೇಖಿಸಿದ ಮಾಹಿತಿ ಪ್ರಕಾರ, 1992ರಿಂದಲೂ ಡೇಟಾವನ್ನು ಸಂಗ್ರಹಿಸಲು ಆರಂಭಿಸಿದಾಗಿನಿಂದ ಚೀನಾದ ನಿರ್ಮಾಣ ಕ್ಷೇತ್ರವು ಇಷ್ಟು ಕನಿಷ್ಠ ಮಟ್ಟಕ್ಕೆ ಕುಗ್ಗಿರಲಿಲ್ಲ. ಆಸ್ತಿ ಮತ್ತು ನಿರ್ಮಾಣ ಕ್ಷೇತ್ರವು ಚೀನಾದ ಆರ್ಥಿಕತೆಯ ಆಧಾರ ಸ್ತಂಭಗಳಾಗಿವೆ. ಇದು ಇತರ ಪ್ರಮುಖ ವಲಯಗಳಾದ ಸರಕು ಮತ್ತು ಪೀಠೋಪಕರಣಗಳ ಆಧಾರವಾಗಿದೆ.

ಆದರೆ, ಬೀಜಿಂಗ್ ರಿಯಲ್ ಎಸ್ಟೇಟ್ ವಲಯದ ಮೇಲೆ ನಿಯಂತ್ರಕ ಸಂಸ್ಥೆಯು ಪಾವತಿಗಳ ಮೇಲೆ ಮಿತಿ ಹಾಗೂ ಸಾಲದ ಮೇಲಿನ ನಿಯಮಗಳನ್ನು ಬಿಗಿಗೊಳಿಸುವುದರಿಂದ ಸಮಸ್ಯೆ ಎದುರಾಗಿದೆ. ಚೀನಾದ ಎವರ್‌ಗ್ರಾಂಡ್​ನ 300 ಬಿಲಿಯನ್ ಡಾಲರ್ ಸಾಲದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಚೀನಾದ ಅತಿದೊಡ್ಡ ಆಸ್ತಿ ಡೆವಲಪರ್​ಗಳಲ್ಲಿ ಒಂದು- ಇದು ಹೂಡಿಕೆದಾರರ ಭಾವನೆಗೆ ಧಕ್ಕೆ ಮಾಡಿದೆ ಹಾಗೂ ಆರ್ಥಿಕತೆಯಲ್ಲಿ ವ್ಯಾಪಕ ಭಯವನ್ನು ಹುಟ್ಟಿಹಾಕಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ಹೇಳಿರುವಂತೆ, ಸಾಂಕ್ರಾಮಿಕ ಅಪಾಯವನ್ನು “ನಿಯಂತ್ರಿಸಬಹುದಾಗಿದೆ” ಮತ್ತು ಎವರ್‌ಗ್ರಾಂಡ್​ನ ಅಪೂರ್ಣ ಯೋಜನೆಗಳನ್ನು ಪುನರಾರಂಭಿಸಲು ಸಾಧ್ಯವಾಗುತ್ತದೆ.

ಮಂಗಳವಾರದ ವರದಿಯ ಪ್ರಕಾರ, ಚೀನಾದ ತಯಾರಿಕೆ ಉತ್ಪಾದನೆಯ ಬೆಳವಣಿಗೆಯು ಮೂರನೇ ತ್ರೈಮಾಸಿಕದಲ್ಲಿ ಶೇ 4.6ಕ್ಕೆ ಇಳಿದಿದೆ. ಹಿಂದಿನ ಮೂರು ತಿಂಗಳಲ್ಲಿ ಶೇ 9.2ರಿಂದ ಕಡಿಮೆಯಾಗಿದೆ. ಏಕೆಂದರೆ ನಿರಂತರ ಇಂಧನ ಕೊರತೆಯೊಂದಿಗೆ ಹೋರಾಡುತ್ತಿರುವ ಕಾರ್ಖಾನೆಗಳಲ್ಲಿ ಉತ್ಪಾದನೆ ನಿರ್ಬಂಧಗಳು ಕೈಕೊಡಲು ಪ್ರಾರಂಭಿಸಿವೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಎನ್​ಬಿಸ್ ವಕ್ತಾರ ಫು ಲಿಂಗ್ಹುಯಿ, “ಸದ್ಯಕ್ಕೆ ಅಂತರರಾಷ್ಟ್ರೀಯ ಮಟ್ಟದ ಅನಿಶ್ಚಿತತೆಗಳು ಹೆಚ್ಚುತ್ತಿವೆ ಮತ್ತು ದೇಶೀಯ ಆರ್ಥಿಕ ಚೇತರಿಕೆ ಅಸ್ಥಿರ ಮತ್ತು ಅಸಮವಾಗಿದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ: China GDP: ರಿಯಾಲ್ಟಿ, ವಿದ್ಯುತ್ ಬಿಕ್ಕಟ್ಟಿನ ಮಧ್ಯೆ ಕುಸಿದ ಚೀನಾ ಬೆಳವಣಿಗೆ ದರ; ಸೆಪ್ಟೆಂಬರ್​ ತ್ರೈಮಾಸಿಕದಲ್ಲಿ ಶೇ 4.9ಕ್ಕೆ