
ನವದೆಹಲಿ, ನವೆಂಬರ್ 18: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold rates) ಕಳೆದ ಒಂದು ವಾರದಲ್ಲಿ ನಾಲ್ಕು ಬಾರಿ ಇಳಿಕೆ ಕಂಡಿವೆ. ಸತತ ಮೂರು ದಿನ ಬೆಲೆ ತಗ್ಗಿದೆ. ಜಾಗತಿಕ ಮಾರುಕಟ್ಟೆ ಮಾತ್ರವಲ್ಲ, ಭಾರತದಲ್ಲೂ ಇವೆರಡು ಲೋಹಗಳ ಬೆಲೆ ಕಡಿಮೆಗೊಂಡಿದೆ. ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಡಿಸೆಂಬರ್ನ ಗೋಲ್ಡ್ ಫ್ಯೂಚರ್ಸ್ 10 ಗ್ರಾಮ್ಗೆ 1,807 ರೂಗಳಷ್ಟು ಬೆಲೆ ಕಡಿಮೆ ಆಗಿದೆ. 2026ರ ಫೆಬ್ರುವರಿಯ ಗೋಲ್ಡ್ ಕಾಂಟ್ರಾಕ್ಟ್ ಕೂಡ ಇಷ್ಟೇ ಪ್ರಮಾಣದಲ್ಲಿ ತಗ್ಗಿದೆ.
ಗೋಲ್ಡ್ ಫ್ಯೂಚರ್ಸ್ ಶೇ. 1.45-1.50ರಷ್ಟು ಕಡಿಮೆ ಆದರೆ, ಸಿಲ್ವರ್ ಫ್ಯೂಚರ್ಸ್ ಶೇ. 2.36ರಷ್ಟು ಕಡಿಮೆ ಆಗಿದೆ. ಎಂಸಿಎಕ್ಸ್ನಲ್ಲಿ ಡಿಸೆಂಬರ್ನ ಗೋಲ್ಡ್ ಫ್ಯೂಚರ್ ಕಾಂಟ್ರಾಕ್ಟ್ನಲ್ಲಿ 10 ಗ್ರಾಮ್ ಚಿನ್ನದ ಬೆಲೆ 1.21 ಲಕ್ಷ ರೂ ಇದೆ. ಫೆಬ್ರುವರಿ ಕಾಂಟ್ರಾಕ್ಟ್ನಲ್ಲಿ 1.22 ಲಕ್ಷ ರೂ ಆಗಿದೆ. ಡಿಸೆಂಬರ್ನಲ್ಲಿ ಸಿಲ್ವರ್ ಫ್ಯೂಚರ್ ಕಿಲೋಗೆ 1.51 ಲಕ್ಷ ರೂ ಇದೆ.
ಇದನ್ನೂ ಓದಿ: ಸೌತ್ ಇಂಡಿಯನ್ ಬ್ಯಾಂಕ್ನಿಂದ ಮಹಿಳೆಯರಿಗೆ ವಿಶೇಷ ಅಕೌಂಟ್; ಭರ್ಜರಿ ಇನ್ಷೂರೆನ್ಸ್, ಎಟಿಎಂ ಇತ್ಯಾದಿ ಸೌಲಭ್ಯ
ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಸಂಸ್ಥೆ ತನ್ನ ಬಡ್ಡಿದರವನ್ನು ಕಡಿಮೆಗೊಳಿಸುವ ನಿರೀಕ್ಷೆ ಬಹಳ ಇತ್ತು. ಆದರೆ, ಆ ಸಾಧ್ಯತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಬಡ್ಡಿದರ ಇಳಿಸುವ ನಿರ್ಧಾರವನ್ನು ಪ್ರಚೋದಿಸುವಂತಹ ಬೆಳವಣಿಗೆಗಳೂ ಯಾವುದು ಆಗುತ್ತಿಲ್ಲ. ಹೀಗಾಗಿ, ಬಹಳಷ್ಟು ಹೂಡಿಕೆದಾರರು ಬಡ್ಡಿದರ ಕಡಿತದ ನಿರೀಕ್ಷೆಯನ್ನೇ ಕೈಬಿಟ್ಟಿದ್ದಾರೆ. ಇದು ಚಿನ್ನ ಹಾಗೂ ಬೆಳ್ಳಿ ಮೇಲಿನ ಹೂಡಿಕೆಗಳಿಂದ ನಿರ್ಗಮಿಸಲು ದಾರಿಯಾಗಿದೆ ಎನ್ನುತ್ತಾರೆ ತಜ್ಞರು.
ಕಳೆದ ಬಾರಿಯ ಫೆಡರಲ್ ರಿಸರ್ವ್ ಸಭೆಯಲ್ಲಿ ಬಡ್ಡಿದರ ಇಳಿಸಲಾಯಿತಾದರೂ, ಮುಂಬರುವ ದಿನಗಳಲ್ಲಿ ತಾಳ್ಮೆ ವಹಿಸುವ ನೀತಿ ಅನುಸರಿಸುವುದಾಗಿ ಹೇಳಲಾಗಿದೆ. ಹೀಗಾಗಿ, ಡಿಸೆಂಬರ್ನಲ್ಲಿ ದರ ಕಡಿತ ಮಾಡುವ ಸಂಭವ ಕಡಿಮೆ ಎಂದು ತೋರುತ್ತಿದೆ.
ಇದನ್ನೂ ಓದಿ: ಡಿಜಿಟಲ್ ಗೋಲ್ಡ್ನಲ್ಲಿ ಹೂಡಿಕೆ ಸುರಕ್ಷಿತವಲ್ಲವಾ? ಸೆಬಿ ಹೇಳಿದ್ದೇನು? ಪರ್ಯಾಯಗಳೇನು?
ನಾಳೆ ಬುಧವಾರ (ನ. 19) ಫೆಡರಲ್ ಮೀಟಿಂಗ್ ನಡೆಯುತ್ತಿದ್ದು, ಅದರಲ್ಲಿ ಚರ್ಚೆಯಾಗುವ ಅಂಶಗಳು ಬಡ್ಡಿದರ ಕಡಿತ ಸಾಧ್ಯತೆ ಬಗ್ಗೆ ಸುಳಿವು ನೀಡಬಹುದು. ನ. 20ರಂದು ಅಮೆರಿಕದ ನಾನ್-ಫಾರ್ಮ್ ಪೇರೋಲ್ ಡಾಟಾ ಬಿಡುಗಡೆ ಆಗುತ್ತದೆ. ಅದರಲ್ಲಿರುವ ದತ್ತಾಂಶವು ಫೆಡರಲ್ ರಿಸರ್ವ್ನ ನಿರ್ಧಾರದ ಮೇಲೆ ಪ್ರಭಾವ ಬೀರಬಹುದು. ಈ ಬೆಳವಣಿಗೆಗಳು ಚಿನ್ನ ಹಾಗೂ ಬೆಳ್ಳಿ ಹೂಡಿಕೆದಾರರ ಮುಂದಿನ ನಡೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅಂತೆಯೇ, ಇವೆರಡು ಲೋಹಗಳ ಬೆಲೆಗಳು ಯಾವ ದಿಕ್ಕಿನಲ್ಲಿ ಹೋಗುತ್ತವೆ ಎಂಬುದೂ ಗೊತ್ತಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ