ಮುಂಬೈ, ಆಗಸ್ಟ್ 28: ರಿಲಾಯನ್ಸ್ನ 46ನೇ ವಾರ್ಷಿಕ ಮಹಾಸಭೆ ಇಂದು ನಡೆದಿದ್ದು, ಆರ್ಐಎಲ್ ಛೇರ್ಮನ್ ಮುಕೇಶ್ ಅಂಬಾನಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಷಣ ಮಾಡಿದರು. ರಿಲಾಯನ್ಸ್ ಸಮೂಹದ ಕಂಪನಿಗಳ ಸಾಧನೆಯನ್ನು ತಿಳಿಸುವುದರ ಜೊತೆಗೆ ಕೆಲ ಹೊಸ ಸೇವೆಗಳನ್ನೂ ಘೋಷಿಸಿದ್ದಾರೆ. ಎಲ್ಲರ ನಿರೀಕ್ಷೆಯ ಜಿಯೋ ಫೈನಾನ್ಸ್ ಸರ್ವಿಸಸ್ ಸಂಸ್ಥೆಯ ಭವಿಷ್ಯದ ರೂಪ ಬಿಚ್ಚಿಟ್ಟ ಅಂಬಾನಿ, ಈ ಹೊಸ ಕಂಪನಿ ಇನ್ಷೂರೆನ್ಸ್ ವಲಯದ ವ್ಯವಹಾರ ಹೊಂದಿರುತ್ತದೆ ಎಂದು ಹೇಳಿದ್ದಾರೆ. ಇನ್ನು, ಜಿಯೋ ಏರ್ಫೈಬರ್, ಜಿಯೋ ಸ್ಮಾರ್ಟ್ ಹೋಮ್ ಸರ್ವಿಸಸ್ ಇತ್ಯಾದಿ ಸೇವೆಗಳು ಅನಾವರಣಗೊಳ್ಳಲಿವೆ. ಭಾರತ್ ಪೆಟ್ರೋಲಿಯಂ ಸಹಯೋಗದಲ್ಲಿ ರಿಲಾಯನ್ಸ್ ಸಂಸ್ಥೆ ಗ್ಯಾಸ್ ಉತ್ಪಾದನೆಯನ್ನು ಹೆಚ್ಚಿಸಲಿದೆ. ಮುಕೇಶ್ ಅಂಬಾನಿ ಅವರು ಈ ಎಜಿಎಂ ಸಭೆಯಲ್ಲಿ ಮಾಡಿದ ಭಾಷಣದ ಪ್ರಮುಖಾಂಶಗಳು ಇಲ್ಲಿವೆ.
ಈ ವರ್ಷ ರಿಲಾಯನ್ಸ್ನಿಂದ 3.4 ಲಕ್ಷಕೋಟಿ ರೂನಷ್ಟು ರಫ್ತಾಗಿದೆ. ಕಳೆದ ವರ್ಷಕ್ಕೆ ಹೋಲಿಸದರೆ ಶೇ. 33.4ರಷ್ಟು ರಫ್ತು ಹೆಚ್ಚಾಗಿದೆ. ಭಾರತದ ಒಟ್ಟಾರೆ ಸರಕು ರಫ್ತಿನಲ್ಲಿ ರಿಲಾಯನ್ಸ್ ಪಾಲು ಶೇ. 9.3ರಷ್ಟಿದೆ. ಈ ಮೊದಲು ಇದರ ಪಾಲು ಶೇ. 8.4ರಷ್ಟಿತ್ತು.
ರಿಲಾಯನ್ಸ್ ಸಂಸ್ಥೆ ಭಾರತದಲ್ಲಿ ಒಟ್ಟಾರೆ 150 ಬಿಲಿಯನ್ ಡಾಲರ್ನಷ್ಟು (12 ಲಕ್ಷಕೋಟಿ ರೂ) ಹೂಡಿಕೆ ಮಾಡಿದೆ. ಇದು ಭಾರತದ ಯಾವುದೇ ಕಂಪನಿಯ ಮೌಲ್ಯಕ್ಕಿಂತಲೂ ದೊಡ್ಡದು.
ಇದನ್ನೂ ಓದಿ: ರಿಲಾಯನ್ಸ್ ಮಂಡಳಿಗೆ ನೀತಾ ಅಂಬಾನಿ ರಾಜೀನಾಮೆ; ಮಂಡಳಿ ನಿರ್ದೇಶಕ ಸ್ಥಾನಕ್ಕೇರಿದ ಮೂವರು ಮಕ್ಕಳು
ರಿಲಾಯನ್ಸ್ನ ಒಟ್ಟಾರೆ ಅಧಿಕೃತ ಉದ್ಯೋಗಿಗಳ ಸಂಖ್ಯೆ 3.9 ಲಕ್ಷ
ರಿಲಾಯನ್ಸ್ ಜಿಯೋದ ಒಟ್ಟಾರೆ ಗ್ರಾಹಕರು ಅಥವಾ ಸಬ್ಸ್ಕ್ರೈಬರ್ಗಳ ಸಂಖ್ಯೆ 45 ಕೋಟಿ ಗಡಿ ದಾಟಿದೆ.
ರಿಲಾಯನ್ಸ್ ಜಿಯೋದ ಒಬ್ಬ ಬಳಕೆದಾರ ಬಳಸುವ ಡಾಟಾ ಈಗ ಪ್ರತೀ ತಿಂಗಳು ಸರಾಸರಿ 25ಜಿಬಿಯಷ್ಟಿದೆ.
ಜಿಯೋ 5ಜಿ ಈಗ ಭಾರತದ ಶೇ. 96ರಷ್ಟು ಗಣತಿ ಪಟ್ಟಣಗಳಲ್ಲಿ ಇದೆ. ಈ ವರ್ಷದ ಡಿಸೆಂಬರ್ನಷ್ಟರಲ್ಲಿ ಇಡೀ ದೇಶ ವ್ಯಾಪಿಸಲಿದೆ.
ಭಾರತದಿಂದ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿಹೆಚ್ಚು ಪೇಟೆಂಟ್ಗೆ ಅರ್ಜಿ ಸಲ್ಲಿಸುವ ಸಂಸ್ಥೆಗಳಲ್ಲಿ ರಿಲಾಯನ್ಸ್ ಒಂದು.
ರಿಲಾಯನ್ಸ್ ಜಿಯೋದಿಂದ ಸ್ಮಾರ್ಟ್ ಹೋಮ್ ಸರ್ವಿಸಸ್ಗೆ ಚಾಲನೆ
ರಿಲಾಯನ್ಸ್ ಜಿಯೋದಿಂದ 4ಜಿ ಶಕ್ತ ಜಿಯೋ ಭಾರತ್ ಫೋನ್ ಬಿಡುಗಡೆ.
ಸೆಪ್ಟೆಂಬರ್ 19, ಗಣೇಶ ಚತುರ್ಥಿಯಂದು ಜಿಯೋ ಏರ್ಫೈಬರ್ ಬಿಡುಗಡೆ ಆಗಲಿದೆ.
ಭಾರತದಲ್ಲಿ ಒಂದು ಅತ್ಯುತ್ತಮ ಎಐ ಜೋಡಿತ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಅನ್ನು ಒದಗಿಸುವ ನಿಟ್ಟಿನಲ್ಲಿ ಜನರೇಟಿವ್ ಎಐ ತಂತ್ರಜ್ಞಾನ ಬಳಸಲಾಗುವುದು.
ರಿಲಾಯನ್ಸ್ ರೀಟೇಲ್ ಸಂಸ್ಥೆ 2022-23ರ ಹಣಕಾಸು ವರ್ಷದಲ್ಲಿ 2,60,364 ಕೋಟಿ ರೂನಷ್ಟು ಆದಾಯ ದಾಖಲಿಸಿದೆ. ನಿವ್ವಳ ಲಾಭ 9,181 ಕೋಟಿ ರೂ ಇದೆ.
ರಿಲಾಯನ್ಸ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆ ಇನ್ಷೂರೆನ್ಸ್ ಉದ್ಯಮ ಪ್ರವೇಶಿಸಲಿದೆ. ಇದಕ್ಕಾಗಿ ಜಾಗತಿಕ ಸಂಸ್ಥೆಹಯೊಂದಿಗೆ ಸಹಭಾಗಿತ್ವ ಇರಲಿದೆ.
ಜಿಯೋ ಫೈನಾನ್ಷಿಯಲ್ ಸರ್ವಿಸಸ್ಗೆ 1,20,000 ಕೋಟಿ ರೂ ಬಂಡವಾಳ ಕೊಡಲಾಗಿದೆ. ಇದರಿಂದ ವಿಶ್ವದಲ್ಲೇ ಅತಿಹೆಚ್ಚು ಆರಂಭಿಕ ಬಂಡವಾಳ ಪಡೆದ ಕಂಪನಿಗಳಲ್ಲಿ ಜೆಎಫ್ಎಸ್ ಒಂದೆನಿಸಿದೆ.
ಇದನ್ನೂ ಓದಿ: ಟ್ವಿಟ್ಟರ್ನಲ್ಲಿ ಇಲಾನ್ ಮಸ್ಕ್ ಕತ್ತರಿಹಾಕಿದಂತೆ ನನ್ನ ಆಡಳಿತ ಇರುತ್ತೆ: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ
ಕೆಲ ವರ್ಷದ ಹಿಂದಷ್ಟೇ ಕೆಜಿ-ಡಿ6 ಬ್ಲಾಕ್ನಿಂದ ಅನಿಲ ಉತ್ಪಾದನೆ ಶೂನ್ಯ ಇದ್ದದ್ದು ಈಗ ದಿನಕ್ಕೆ 2 ಕೋಟಿ ಕ್ಯುಬಿಕ್ ಮೀಟರ್ನಷ್ಟು ತೈಲ ಉತ್ಪಾದನೆಯನ್ನು ಭಾರತ್ ಪೆಟ್ರೋಲಿಯಂ ಜೊತೆ ಸೇರಿ ಮಾಡಲಾಗುತ್ತಿದೆ.
ದಿನಕ್ಕೆ 3 ಕೋಟಿ ಕ್ಯೂಬಿಕ್ ಮೀಟರ್ನಷ್ಟು ಅನಿಲ ಉತ್ಪಾದನೆ ಆಗುವ ಮಟ್ಟಕ್ಕೆ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ. ಇದು ಭಾರತದ ಒಟ್ಟಾರೆ ಗ್ಯಾಸ್ ಪ್ರೊಡಕ್ಷನ್ನಲ್ಲಿ ಶೇ. 30ರಷ್ಟಿರಲಿದೆ.
ರಿನಿವಬಲ್ ಎನರ್ಜಿ ಮತ್ತು ಬಯೋ ಎನರ್ಜಿ ಬಳಕೆ ಮೂಲಕ 2035ರಷ್ಟರಲ್ಲಿ ಕಾರ್ಬನ್ ಮುಕ್ತ ವ್ಯವಸ್ಥೆ ಹೊಂದುತ್ತೇವೆ.
ಇವಿಷ್ಟೂ ಕೂಡ ರಿಲಾಯನ್ಸ್ನ ಎಜಿಎಂ ಸಭೆಯಲ್ಲಿ ಮುಕೇಶ್ ಅಂಬಾನಿ ಮಾಡಿದ ಭಾಷಣದ ಮುಖ್ಯಾಂಶಗಳಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ