ರಿಲಾಯನ್ಸ್ ಮಂಡಳಿಗೆ ನೀತಾ ಅಂಬಾನಿ ರಾಜೀನಾಮೆ; ಮಂಡಳಿ ನಿರ್ದೇಶಕ ಸ್ಥಾನಕ್ಕೇರಿದ ಮೂವರು ಮಕ್ಕಳು
Nita Ambani Resigns To Reliance Board: ರಿಲಾಯನ್ಸ್ ಫೌಂಡೇಶನ್ನ ಸಂಸ್ಥಾಪಕಾಧ್ಯಕ್ಷೆ ನೀತಾ ಅಂಬಾನಿ ಅವರು ಆರ್ಐಎಲ್ ನಿರ್ದೇಶಕರ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಅವರ ಮೂವರು ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರು ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ಸ್ ಆಗಿ ಬೋರ್ಡ್ಗೆ ನೇಮಕವಾಗಿದ್ದಾರೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಲಿ ಸಂಸ್ಥೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಮುಂಬೈ, ಆಗಸ್ಟ್ 28: ರಿಲಾಯನ್ಸ್ ಗ್ರೂಪ್ನ ಸಾಮ್ರಾಟ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ (Nita Ambani) ರಿಲಾಯನ್ಸ್ ಬೋರ್ಡ್ನಿಂದ ಕೆಳಗಿಳಿದಿದ್ದಾರೆ. ಅವರ ಮೂವರು ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರು ಬೋರ್ಡ್ ನಿರ್ದೇಶಕರಾಗಿ (Board Directors) ನೇಮಕವಾಗಿದ್ದಾರೆ. ಈ ಮೂವರೂ ಕೂಡ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ಗಳಾಗಲಿದ್ದಾರೆ. ಇನ್ನು, ನೀತಾ ಅಂಬಾನಿ ಅವರು ರಿಲಾಯನ್ಸ್ ಫೌಂಡೇಶನ್ನ (Reliance Foundation) ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಈ ವಿಚಾರಗಳನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಲಿ ಇಂದು ಹೇಳಿಕೆ ಮೂಲಕ ತಿಳಿಸಿದೆ.
ಆರ್ಐಎಲ್ನ ವಾರ್ಷಿಕ ಮಹಾಸಭೆಗೆ (RIL Annual General Body Meeting) ಮುನ್ನ ಅದರ ನಿರ್ದೇಶಕರ ಮಂಡಳಿಯ ಸಭೆ ನಡೆದಿತ್ತು. ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು ಕಂಪನಿಯ ನಾನ್ ಎಕ್ಸಿಕ್ಯೂಟಿವ್ ನಿರ್ದೇಶಕರನ್ನಾಗಿ ನೇಮಕ ಮಾಡುವಂತೆ ಮಾನವ ಸಂಪನ್ಮೂಲ ಸಮಿತಿಯಿಂದ ಶಿಫಾರಸು ಮಾಡಲಾಗಿತ್ತು. ಬೋರ್ಡ್ ಡೈರೆಕ್ಟರ್ಸ್ ಸಭೆಯಲ್ಲಿ ಈ ಶಿಫಾರಸನ್ನು ಅಂಗೀಕರಿಸಲಾಗಿದೆ. ಷೇರುದಾರರ ಅನುಮೋದನೆ ಬಳಿಕ ಈ ಮೂವರು ಅಧಿಕಾರ ಸ್ವೀಕರಿಸಿದ ಬಳಿಕ ಅವರ ನೇಮಕಾತಿ ಜಾರಿಗೆ ಬರುತ್ತದೆ ಎಂದು ಆರ್ಐಎಲ್ ತನ್ನ ಹೇಳಿಕೆಯಲ್ಲಿ ಹೇಳಿದೆ.
ಇದನ್ನೂ ಓದಿ: ಟ್ವಿಟ್ಟರ್ನಲ್ಲಿ ಇಲಾನ್ ಮಸ್ಕ್ ಕತ್ತರಿಹಾಕಿದಂತೆ ನನ್ನ ಆಡಳಿತ ಇರುತ್ತೆ: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ
ನೀತಾ ಅಂಬಾನಿ ರಿಲಾಯನ್ಸ್ ಬೋರ್ಡ್ಗೆ ರಾಜೀನಾಮೆ ನೀಡಿದ್ದು ಯಾಕೆ?
ರಿಯಾಲನ್ಸ್ ಫೌಂಡೇಶನ್ನ ಚಟುವಟಿಕೆಗಳತ್ತ ಸಂಪೂರ್ಣ ಗಮನ ಕೊಡುವ ಸಲುವಾಗಿ ರಿಲಾಯನ್ಸ್ ಬೋರ್ಡ್ ನಿರ್ದೇಶಕಿ ಸ್ಥಾನದ ಜವಾಬ್ದಾರಿಯಿಂದ ನೀತಾ ಅಂಬಾನಿ ಬದಿಗೆ ಸರಿದಿರುವುದು ತಿಳಿದುಬಂದಿದೆ. ಬೋರ್ಡ್ಗೆ ನೀತಾ ನೀಡಿದ ರಾಜೀನಾಮೆಯನ್ನು ಹೆಚ್ಚು ಪ್ರಶ್ನೆ ಮಾಡದೇ ಒಪ್ಪಿಕೊಳ್ಳಲಾಯಿತು. ಬೋರ್ಡ್ ನಿರ್ದೇಶಕಿಯಾಗಿ ಮಾಡುವ ಕೆಲಸಕ್ಕಿಂತ ರಿಲಾಯನ್ಸ್ ಫೌಂಡೇಶನ್ ಮುಖ್ಯಸ್ಥೆಯಾಗಿ ನೀತಾ ಅಂಬಾನಿ ಹೆಚ್ಚು ಗುರುತರ ಜವಾಬ್ದಾರಿ ಹೊಂದಿದ್ದಾರೆ. ಹೀಗಾಗಿ, ಅವರ ರಾಜೀನಾಮೆ ನಿರ್ಧಾರವನ್ನು ತಾವು ಗೌರವಿಸುವುದಾಗಿ ನಿರ್ದೇಶಕರ ಮಂಡಳಿ ಅಭಿಪ್ರಾಯಪಟ್ಟಿದೆ.
ಆದರೆ, ರಿಲಾಯನ್ಸ್ ಫೌಂಡೇಶನ್ ಛೇರ್ಪರ್ಸನ್ ಆಗಿ ನೀತಾ ಅಂಬಾನಿ ಅವರು ಆರ್ಐಎಲ್ ಮಂಡಳಿಯ ಎಲ್ಲಾ ಸಭೆಗಳಿಗೂ ಖಾಯಂ ಆಹ್ವಾನಿತೆಯಾಗಿ ಪಾಲ್ಗೊಳ್ಳಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Mon, 28 August 23