ರಿಲಾಯನ್ಸ್ ಮಹಾಸಭೆ ಇಂದು; ಗರಿಗೆದರಿದ ಷೇರುಪೇಟೆ; ಜಿಯೋದಿಂದ 5ಜಿ ಬಂಪರ್ ಕೊಡುಗೆ ಸಿಗುತ್ತಾ?

|

Updated on: Aug 28, 2023 | 10:42 AM

RIL AGM On 2023 August 28th: ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್​ನ ವಾರ್ಷಿಕ ಮಹಾಸಭೆ ನಡೆಯಲಿದ್ದು, ಸಂಸ್ಥೆಯ ವಿವಿಧ ಷೇರುಗಳು ಹಸಿರು ಬಣ್ಣದಲ್ಲಿವೆ. ರಿಲಾಯನ್ಸ್ ಜಿಯೋ, ರೀಟೇಲ್​ನ ಐಪಿಓಗಳು, ಜಿಯೋ 5ಜಿ ಪ್ಲಾನ್​ಗಳು ಇತ್ಯಾದಿ ಹಲವು ಮಾಹಿತಿಯನ್ನು ಈ ಸಭೆಯಲ್ಲಿ ಹೊರಹಾಕುವ ನಿರೀಕ್ಷೆ ಇದೆ.

ರಿಲಾಯನ್ಸ್ ಮಹಾಸಭೆ ಇಂದು; ಗರಿಗೆದರಿದ ಷೇರುಪೇಟೆ; ಜಿಯೋದಿಂದ 5ಜಿ ಬಂಪರ್ ಕೊಡುಗೆ ಸಿಗುತ್ತಾ?
ಮುಕೇಶ್ ಅಂಬಾನಿ
Follow us on

ಮುಂಬೈ, ಆಗಸ್ಟ್ 28: ರಿಲಾಯನ್ಸ್ ಇಂಡಸ್ಟ್ರೀಸ್ ಲಿ ಸಂಸ್ಥೆಯ ವಾರ್ಷಿಕ ಮಹಾ ಸಭೆ (Reliance Industries Ltd AGM 2023) ಇಂದು ನಡೆಯಲಿದೆ. ತನ್ನ ಉತ್ಪನ್ನ ಮತ್ತು ಬೆಲೆಗಳ ಮೂಲಕ ಮಾರುಕಟ್ಟೆಯನ್ನು ಸೀಳಿ ಮುನ್ನುಗ್ಗುವ ಪ್ರವೃತ್ತಿಯ ರಿಲಾಯನ್ಸ್ ಸಂಸ್ಥೆಯ ಇವತ್ತಿನ ಸಭೆಯಲ್ಲಿ ಸಹಜವಾದ ನಿರೀಕ್ಷೆಗಳಿವೆ. ಇದೇ ಕಾರಣಕ್ಕೆ ಷೇರುಪೇಟೆ ಸೋಮವಾರ ಬೆಳಗ್ಗೆಯಿಂದಲೇ ಗರಿಗೆದರಿ ನಿಂತಿದೆ. ರಿಲಾಯನ್ಸ್ ಗ್ರೂಪ್​ನ ವಿವಿಧ ಷೇರುಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಷೇರುಮಾರುಕಟ್ಟೆಗೆ ಬಂದ ಹೊಸ ರಿಲಾಯನ್ಸ್ ಕೂಸು ಜಿಯೋ ಫೈನಾನ್ಷಿಯಲ್ ಸರ್ವಿಸಸ್​ನ ಷೇರು ಕೂಡ ಉತ್ತಮ ಬೆಲೆಹೆಚ್ಚಳ ಗಿಟ್ಟಿಸುವ ಸಾಧ್ಯತೆ ಇದೆ.

ರಿಲಾಯನ್ಸ್​ನ ಷೇರುಗಳಿಗಿಂತ ಹೆಚ್ಚಾಗಿ ಒಟ್ಟಾರೆ ಷೇರುಪೇಟೆ ಇಂದು ಕಳೆಗಟ್ಟಿದೆ. ಆರ್​ಐಎಲ್ ವಾರ್ಷಿಕ ಮಹಾಸಭೆ ನಿರೀಕ್ಷೆಗಿಂತ ಹೆಚ್ಚಾಗಿ ಜಾಗತಿಕ ವಿದ್ಯಮಾನದ ಪರಿಣಾಮ ಇದು. ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ. 0.23ರಷ್ಟು ಮತ್ತು ನಿಫ್ಟಿ ಶೇ. 0.28ರಷ್ಟು ಏರಿಕೆ ಕಂಡಿದೆ. ಅದಾನಿ ಎಂಟರ್​ಪ್ರೈಸಸ್, ಅದಾನಿ ಪೋರ್ಟ್ಸ್, ಎಲ್ ಅಂಡ್ ಟಿ, ಸಿಪ್ಲಾ, ಬಿಪಿಸಿಎಲ್ ಮೊದಲಾದ ಷೇರುಗಳು ನಿಫ್ಟಿಯಲ್ಲಿ ಲಾಭ ಮಾಡಿವೆ.

ನಿಫ್ಟಿಯ ಎಫ್​ಎಂಸಿಜಿ ಸೂಚ್ಯಂಕ ಹೊರತುಪಡಿಸಿ ಉಳಿದ ಎಲ್ಲಾ ವಲಯಗಳ ಸೂಚ್ಯಂಕಗಳು ಮೇಲೇರಿರುವುದು ಗಮನಾರ್ಹ. ಎಫ್​ಎಂಸಿಜಿ ವಲಯದ ಕಂಪನಿಗಳಾದ ನೆಸ್ಲೆ, ಹಿಂದೂಸ್ತಾನ್ ಯುನಿಲಿವರ್ ಲಿ, ಬ್ರಿಟಾನಿಯಾ ಇಂಡಸ್ಟ್ರೀಸ್ ಮೊದಲಾದ ಸಂಸ್ಥೆಗಳ ಷೇರುಗಳು ತುಸು ಕುಸಿತ ಕಂಡಿವೆ.

ಇದನ್ನೂ ಓದಿ: 47 ವರ್ಷದಲ್ಲಿ ಆಗುವಂಥದ್ದು 9 ವರ್ಷದಲ್ಲಿ ಆಗಿದೆ; ಭಾರತದ ಡಿಜಿಟಲ್ ಪರಿವರ್ತನೆ ಕೊಂಡಾಡಿದ ನಂದನ್ ನಿಲೇಕಣಿ

ರಿಲಾಯನ್ಸ್ ವಾರ್ಷಿಕ ಮಹಾಸಭೆ ಯಾವಾಗ?

ಆರ್​ಐಎಲ್​ನ ವಾರ್ಷಿಕ ಮಹಾಸಭೆ ಮಧ್ಯಾಹ್ನ 2ಗಂಟೆಗೆ ಪ್ರಾರಂಭವಾಗುವ ನಿರೀಕ್ಷೆ ಇದೆ. ರಿಲಾಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಎಜಿಎಂ ಉದ್ದೇಶಿಸಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಲಿದ್ದಾರೆ. ಇದು ರಿಲಾಯನ್ಸ್ ಇಂಡಸ್ಟ್ರೀಸ್​ನ 46ನೇ ಎಜಿಎಂ ಸಭೆ ಆಗಿಲಿರಲಿದೆ.

ಈ ಸಭೆಯನ್ನು 2 ಗಂಟೆಗೆ ಲೈವ್ ಆಗಿ ವೀಕ್ಷಿಸಲು ಇಲ್ಲಿದೆ ಲಿಂಕ್: jiomeet.jio.com/rilagm/joinmeeting

ಆರ್​ಐಎಲ್ ಸಭೆಯಿಂದ ಏನು ನಿರೀಕ್ಷೆಗಳಿಟ್ಟುಕೊಳ್ಳಬಹುದು?

  • ಹೊಸದಾಗಿ ರೂಪುಗೊಂಡ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಬಗ್ಗೆ ಸ್ಪಷ್ಟತೆ ಸಿಗಬಹುದು.
  • ರಿಲಾಯನ್ಸ್ ಜಿಯೋ ಮತ್ತು ರಿಲಾಯನ್ಸ್ ರೀಟೇಲ್ ಕಂಪನಿಗಳ ನಿರೀಕ್ಷಿತ ಐಪಿಒಗಳ ಬಗ್ಗೆ ಏನಾದರೂ ಮಾಹಿತಿ ಹೊರಬರಬಹುದು.
  • ರಿಲಾಯನ್ಸ್ ಜಿಯೋದ ಹೊಸ 5ಜಿ ಪ್ಯಾಕೇಜ್​ಗಳನ್ನು ಪ್ರಕಟಿಸಬಹುದು.
  • ರಿಲಾಯನ್ಸ್ ಜಿಯೋದಿಂದ ಜಿಯೋ ಏರ್​ಫೈಬರ್ ಉತ್ಪನ್ನ ಬಿಡುಗಡೆ ಆಗಬಹುದು. ಇದು ಫಿಕ್ಸೆಡ್ ವೈರ್​ಲೆಸ್ ಅಕ್ಸೆಸ್ ಸಾಧನವಾಗಿದ್ದು, ಮಾರುಕಟ್ಟೆಯಲ್ಲಿರುವ ಇತರ ಇಂಥ ಸಾಧನಗಳಿಗಿಂತ ಶೇ. 20ರಷ್ಟು ಕಡಿಮೆಬೆಲೆಗೆ ಬಿಡುಗಡೆ ಆಗುವ ನಿರೀಕ್ಷೆ ಇದೆ.
  • ರಿಲಾಯನ್ಸ್ ಇಂಡಸ್ಟ್ರೀಸ್​ನ ಹೊಸ ಸ್ವಚ್ಛ ಇಂಧನ ವ್ಯವಹಾರದ ಬಗ್ಗೆ ಟಿಪ್ಪಣಿ ಬರಬಹುದು.

ಇದನ್ನೂ ಓದಿ: ಭಾರತದ ಜೊತೆ ಗಟ್ಟಿಸ್ನೇಹ ಹೊಂದಿದವರಿಗೆ ಉಜ್ವಲ ಆರ್ಥಿಕತೆ: ಜಿ20 ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ

ರಿಲಾಯನ್ಸ್ ಇಂಡಸ್ಟ್ರೀಸ್​ನ ವಾರ್ಷಿಕ ಮಹಾಸಭೆಯಲ್ಲಿ ಇನ್ನೂ ಹಲವು ನಿರೀಕ್ಷೆಗಳಿವೆ. ಆರ್​ಐಎಲ್​ನ ಷೇರಿಗೆ ಇರುವ ಬೇಡಿಕೆ ಹೆಚ್ಚಾಗಲಿದೆ. 40 ಅನಾಲಿಸ್ಟ್​ಗಳ ಪೈಕಿ 32 ಸಂಸ್ಥೆಗಳು ರಿಲಾಯನ್ಸ್ ಷೇರು ಖರೀದಿಗೆ ಹಸಿರು ನಿಶಾನೆ ತೋರಿವೆ. ಐದು ಅನಾಲಿಸ್ಟ್ ಸಂಸ್ಥೆಗಳು ಮಾತ್ರ ನೆಗಟಿವ್ ಅನಿಸಿಕೆ ತೋರ್ಪಡಿಸಿವೆ. ಸದ್ಯ 2,469 ರೂ ಇರುವ ಆರ್​ಐಎಲ್​ನ ಷೇರು ಬೆಲೆ ಮುಂದಿನ ದಿನಗಳಲ್ಲಿ 3,000 ರೂ ದಾಟಿ ಹೋಗಬಹುದು ಎಂದು ಭಾವಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ