47 ವರ್ಷದಲ್ಲಿ ಆಗುವಂಥದ್ದು 9 ವರ್ಷದಲ್ಲಿ ಆಗಿದೆ; ಭಾರತದ ಡಿಜಿಟಲ್ ಪರಿವರ್ತನೆ ಕೊಂಡಾಡಿದ ನಂದನ್ ನಿಲೇಕಣಿ

Nandan Nilekani on India Digital Transformation: ಕಳೆದ ಹಲವು ವರ್ಷಗಳಲ್ಲಿ ಭಾರತ ಹಲವು ರೀತಿಯಲ್ಲಿ ಪರಿವರ್ತನೆ ಹೊಂದಿದ್ದು, ಈಗ ಡಿಜಿಟಲ್ ಪರಿವರ್ತನೆಯು ಆರ್ಥಿಕ ಪ್ರಗತಿಗೆ ಕಾರಣವಾಗಿದೆ ಎಂದು ಇನ್ಫೋಸಿಸ್​ನ ಮಾಜಿ ಛೇರ್ಮನ್ ನಂದನ್ ನಿಲೇಕಣಿ ಹೇಳಿದ್ದಾರೆ.

47 ವರ್ಷದಲ್ಲಿ ಆಗುವಂಥದ್ದು 9 ವರ್ಷದಲ್ಲಿ ಆಗಿದೆ; ಭಾರತದ ಡಿಜಿಟಲ್ ಪರಿವರ್ತನೆ ಕೊಂಡಾಡಿದ ನಂದನ್ ನಿಲೇಕಣಿ
ನಂದನ್ ನಿಲೇಕಣಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 27, 2023 | 6:23 PM

ನವದೆಹಲಿ, ಆಗಸ್ಟ್ 27: ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ಆಗಿರುವ ಡಿಜಿಟಲ್ ಪರಿವರ್ತನೆಯು (Digital Transformation) ದೇಶಕ್ಕೆ ಹೊಸ ಮಾದರಿಯ ಆರ್ಥಿಕ ಪ್ರಗತಿಗೆ ನಾಂದಿ ಹಾಡಿದೆ ಎಂದು ಇನ್​ಫೋಸಿಸ್ ಸಹ-ಸಂಸ್ಥಾಪಕ ಹಾಗೂ ಮಾಜಿ ಛೇರ್ಮನ್ ನಂದನ್ ನಿಲೇಕಣಿ (Nandan Nilekani) ಅಭಿಪ್ರಾಯಪಟ್ಟಿದ್ದಾರೆ. ತಂತ್ರಜ್ಞಾನ ಅಳವಡಿಕೆಯಿಂದ ಸಮರ್ಪಕವಾದ ಸಾರ್ವಜನಿಕ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಯಾಗಿದೆ. ಸಾಂಪ್ರದಾಯಿಕ ವಿಧಾನಗಳಿಂದ (Traditional Means) 47 ವರ್ಷಗಳಲ್ಲಿ ಆಗುವ ಅಭಿವೃದ್ಧಿಯನ್ನು ತಂತ್ರಜ್ಞಾನ ನೆರವಿನಿಂದ 9 ವರ್ಷದಲ್ಲೇ ಸಾಧಿಸಲಾಗಿದೆ ಎಂದು ಆಧಾರ್ ಯೋಜನೆಯ ರೂವಾರಿ ನಂದನ್ ನಿಲೇಕಣಿ ಹೇಳಿದ್ದಾರೆ. ಹಣಕಾಸು ಒಳಗೊಳ್ಳುವಿಕೆ ಯೋಜನೆಯಿಂದ ಹಿಡಿದು ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವವರೆಗೂ ತಂತ್ರಜ್ಞಾನ ಬಳಕೆ ಬಹಳ ಮಹತ್ತರ ಪಾತ್ರ ವಹಿಸಿರುವ ಸಂಗತಿಯನ್ನು ನಿಲೇಕಣಿ ತೋರಿಸಿದ್ದಾರೆ.

‘ಆಧಾರ್ ಎಂದು ಕರೆಯಲಾಗುವ ಐಡಿ ವ್ಯವಸ್ಥೆಯೊಂದಿಗೆ ಈ ಡಿಜಿಟಲ್ ಪರಿವರ್ತನೆ ಶುರುವಾಯಿತು. ಪ್ರತಿಯೊಬ್ಬ ಭಾರತೀಯನಿಗೂ ಡಿಜಿಟಲ್ ಐಡಿ ಕೊಡುವುದು ಉದ್ದೇಶವಾಗಿತ್ತು. ಇವತ್ತು 130 ಕೋಟಿ ಭಾರತೀಯರು ಡಿಜಿಟಲ್ ಐಡಿ ಹೊಂದಿದ್ದಾರೆ. ನಿಮ್ಮ ಬೆರಳತ್ತು, ಕಣ್ಣಿನ ಐರಿಸ್, ಒಟಿಪಿ ಮತ್ತು ಮುಖಚರ್ಯೆ ಬಳಸಿ ಈ ಗುರುತಿನ ಐಡಿಗೆ ಆನ್​ಲೈನ್ ಅಥೆಂಟಿಕೇಶನ್ ಒದಗಿಸಲಾಗುತ್ತದೆ. ಇವತ್ತು ಒಂದು ದಿನದಲ್ಲಿ 8 ಕೋಟಿ ಆಧಾರ್ ವಹಿವಾಟು ನಡೆಯುತ್ತದೆ. ಅಂದರೆ ಒಂದು ದಿನದಲ್ಲಿ ಭಾರತೀಯರು 8 ಕೋಟಿ ಬಾರಿ ಆನ್​ಲೈನ್ ವೆರಿಫಿಕೇಶನ್ ಮಾಡುತ್ತಾರೆ,’ ಎಂದು ಯುಐಡಿಎಐ ಛೇರ್ಮನ್ ನಂದನ್ ನಿಲೇಕಣಿ ಹೇಳಿದ್ದಾರೆ.

ಇದನ್ನೂ ಓದಿ: ಚೀನಾ ಎಲ್ಲಾ ದೇಶಗಳಿಗೂ ತೊಂದರೆ ಕೊಡುವ ಪುಂಡ ದೇಶ; ತಪ್ಪಿಸಿಕೊಳ್ಳುವುದು ಕಷ್ಟ: ಓಆರ್​ಎಫ್ ವಿಪಿ ಅನಿಸಿಕೆ

ಕೆವೈಸಿ ಕೂಡ ಆಗಿರುವ ಆಧಾರ್ ಆನ್​ಲೈನ್ ವೆರಿಫಿಕೇಶನ್ ಅನ್ನು ಬ್ಯಾಂಕ್ ಖಾತೆ ತೆರೆಯಲು ಕಡ್ಡಾಯ ಮಾಡಲಾಗಿದೆ. ಮೊಬೈಲ್ ಕನೆಕ್ಷನ್ ಪಡೆಯಲೂ ಇದು ಅಗತ್ಯ ಮಾಡಲಾಗಿದೆ. ಈ ತಳಹದಿಗಳ ಮೇಲೆ ಡಿಜಿಲಾಕರ್, ಡಿಜಿಟಲ್ ಸಿಗ್ನೇಚರ್, ಯುಪಿಐ ಇತ್ಯಾದಿ ಹಲವು ಸೇವೆಗಳನ್ನು ರೂಪಿಸಲಾಗಿದೆ ಎಂದು ನಿಲೇಕಣಿ ಅವರು ಡಿಜಿಟಲ್ ಪರಿವರ್ತನೆಯ ಮಾದರಿಯನ್ನು ವಿವರಿಸಿದ್ದಾರೆ.

2014ರಿಂದ 2016ರವರೆಗೂ ಇವೆಲ್ಲವೂ ಒಟ್ಟು ಸೇರಿ ಭಾರತದ ಬೆಳವಣಿಗೆಗೆ ರೂಪುರೇಖೆ ಒದಗಿಸಿವೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಇದು ಭಾರತಕ್ಕೆ ವರದಾನವಾಯಿತು. 16 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 4.5 ಬಿಲಿಯನ್ ಡಾಲರ್ (ಸುಮಾರು 37,000 ಕೋಟಿ ರೂ) ಹಣ ವರ್ಗಾಯಿಸುವುದು, ಎರಡು ವರ್ಷದಲ್ಲಿ 25 ಲಕ್ಷ ಲಸಿಕೆಗಳನ್ನು ಹಂಚಲು ಸಾಧ್ಯವಾಗಿದ್ದು, ರಿಯಲ್ ಟೈಮ್​ನಲ್ಲಿ ಮೊಬೈಲ್​ಗಳಲ್ಲಿ ಲಸಿಕೆ ಪ್ರಮಾಣಪತ್ರ ಒದಗಿಸಲು ಸಾಧ್ಯವಾಗಿದ್ದು ಇವೆಲ್ಲವೂ ತಂತ್ರಜ್ಞಾನ ಅಳವಡಿಕೆಯಿಂದ ಆಗಿದೆ.

ಇದನ್ನೂ ಓದಿ: ಭಾರತದ ಜೊತೆ ಗಟ್ಟಿಸ್ನೇಹ ಹೊಂದಿದವರಿಗೆ ಉಜ್ವಲ ಆರ್ಥಿಕತೆ: ಜಿ20 ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ

ಐದು ವರ್ಷದಲ್ಲಿ 50 ದೇಶಗಳಿಗೆ ಭಾರತದ ಮಾದರಿ

‘ಭಾರತದ ಈ ಮಾದರಿಯು ವಿಶೇಷವಾಗಿದೆ, ಸರ್ವರಿಗೂ ಸಮವಾಗಿ ಉಪಯುಕ್ತ ಎನಿಸಿದೆ. ದೇಶದಲ್ಲಿ ಯಾವ ಮೂಲೆಯಲ್ಲೇ ಇರಲಿ ಎಲ್ಲರಿಗೂ ಸಮಾನ ಅವಕಾಶ ಇರಬೇಕು ಎನ್ನುವ ತತ್ವದಲ್ಲಿ ಈ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಮಾದರಿ ನಿಂತಿದೆ. ಇದು ಈಗ ಜಾಗತಿಕ ಮಾನ್ಯತೆ ಪಡೆಯತೊಡಗಿದೆ. ಐಎಂಎಫ್ ಆಗಲೀ, ಬಿಲ್ ಗೇಟ್ಸ್ ಆಗಲೀ ಸಾರ್ವಜನಿಕ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್​ಗೆ ಭಾರತದ ವಿಶೇಷ ಕೊಡುಗೆಯನ್ನು ಗುರುತಿಸಿದ್ದಾರೆ. ಈ ಮಾದರಿಯನ್ನು ಐದು ವರ್ಷದಲ್ಲಿ 50 ದೇಶಗಳಿಗೆ ತೆಗೆದುಕೊಂಡು ಹೋಗುವ ದೊಡ್ಡ ಪ್ರಯತ್ನ ನಡೆದಿದೆ’ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕರಾದ ಅವರು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Sun, 27 August 23