Mukesh Ambani salary: ರಿಲಯನ್ಸ್ ಇಂಡಸ್ಟ್ರೀಸ್​ನ ಒಂದೇ ಒಂದು ರೂಪಾಯಿ ವೇತನವೂ ಮುಟ್ಟದ ಮುಕೇಶ್ ಅಂಬಾನಿ

| Updated By: Srinivas Mata

Updated on: Jun 04, 2021 | 9:15 PM

ಏಷ್ಯಾದ ಅತಿ ಶ್ರೀಮಂತ ಮುಕೇಶ್ ಅಂಬಾನಿ ವೇತನ ಎಷ್ಟು ಗೊತ್ತಾ? 2020-21ರ ಹಣಕಾಸು ವರ್ಷದಲ್ಲಿ ಒಂದೇ ಒಂದು ರೂಪಾಯಿ ವೇತನ ಕೂಡ ಪಡೆದಿಲ್ಲ.

Mukesh Ambani salary: ರಿಲಯನ್ಸ್ ಇಂಡಸ್ಟ್ರೀಸ್​ನ ಒಂದೇ ಒಂದು ರೂಪಾಯಿ ವೇತನವೂ ಮುಟ್ಟದ ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ
Follow us on

ಅಷ್ಟು ದೊಡ್ಡ ಬಂಗಲೆ, ಅಂಥ ಕಾರು, ಇಷ್ಟೆಲ್ಲ ಆಸ್ತಿ-ಪಾಸ್ತಿ, ಹಣ ಇದೆಯಲ್ಲಾ, ಅವರಿಗೆ ಎಷ್ಟು ಸಂಬಳ ಬರುತ್ತೆ? – ಇಂಥದ್ದೊಂದು ಪ್ರಶ್ನೆ, ಕುತೂಹಲ ಯಾರ ಬಗ್ಗೆಯಾದರೂ ನಿಮಗೆ ಬಂದಿತ್ತಾ? ಹಾಗೆ ಬಂದಿದ್ದರೂ ಬಾರದಿದ್ದರೂ ಆಸಕ್ತಿಕರವಾದ ಸುದ್ದಿಯೊಂದು ನಿಮ್ಮೆದುರು ಇದೆ. ಏಷ್ಯಾದ ಅತ್ಯಂತ ಶ್ರೀಮಂತ- ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ವೇತನ ಎಷ್ಟು ಗೊತ್ತಾ? 2021ರ ಮಾರ್ಚ್ 31ಕ್ಕೆ ಕೊನೆಯಾದ ಆರ್ಥಿಕ ವರ್ಷದಲ್ಲಿ ಅವರು ಯಾವುದೇ ವೇತನವನ್ನು ಪಡೆದಿಲ್ಲ. ಜತೆಗೆ ಕಳೆದ ಹನ್ನೆರಡು ವರ್ಷಗಳಿಂದ 15 ಕೋಟಿ ರೂಪಾಯಿಗಳಿಗಿಂತ ವೇತನ ಹೆಚ್ಚಿಸಿಕೊಂಡಿಲ್ಲ. ಕೋವಿಡ್- 19 ಕಾರಣಕ್ಕೆ ಮುಕೇಶ್ ಅಂಬಾನಿ ತಮ್ಮ ವೇತನವನ್ನು ಕಳೆದ ವರ್ಷ ಪೂರ್ತಿ ಬಿಟ್ಟುಕೊಟ್ಟಿದ್ದಾರೆ. ಅಂದ ಹಾಗೆ ಮುಕೇಶ್ ಅಂಬಾನಿಯ ಒಟ್ಟು ಆಸ್ತಿ ಮೌಲ್ಯ 8580 ಕೋಟಿ ಅಮೆರಿಕನ್ ಡಾಲರ್. ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 6.25 ಲಕ್ಷ ಕೋಟಿಯನ್ನು ದಾಟುತ್ತದೆ. ಇನ್ನು ಫೋರ್ಬ್ಸ್​ನ ಬಿಲಿಯನೇರ್ಸ್ 2021 ಪಟ್ಟಿಯಲ್ಲಿ ಅಂಬಾನಿ ಹತ್ತನೇ ಸ್ಥಾನದಲ್ಲಿದ್ದಾರೆ. 2008- 09ನೇ ಸಾಲಿನಿಂದ ತಮ್ಮ ವೇತನ, ಸವಲತ್ತು, ಭತ್ರೆ ಮತ್ತ ಕಮಿಷನ್ ಇವೆಲ್ಲ ಒಟ್ಟು ಸೇರಿ 15 ಕೋಟಿಯಲ್ಲೇ ಇದ್ದಾರೆ. ವರ್ಷಕ್ಕೆ 24 ಕೋಟಿ ರೂಪಾಯಿಗೂ ಹೆಚ್ಚು ಬಿಟ್ಟುಕೊಟ್ಟಿದ್ದಾರೆ.

ನಿಖಿಲ್ ಮತ್ತು ಹಿತಲ್ ಮೇಸ್ವಾನಿ
ನಿಖಿಲ್ ಮತ್ತು ಹಿತಲ್ ಮೇಸ್ವಾನಿ (ಸೋದರ ಸಂಬಂಧಿಗಳು) ವೇತನ 24 ಕೋಟಿ ರೂಪಾಯಿ ಇದೆ ಎಂದು ವಾರ್ಷಿಕ ವರದಿಯಲ್ಲಿದೆ. ಇವರಿಬ್ಬರು ಮುಕೇಶ್​ಗೆ ಸೋದರ ಸಂಬಂಧಿಗಳು. ಎರಡು ವರ್ಷಗಳ ಹಿಂದೆ ಇವರ ಸಂಬಳ ರೂ. 20.57 ಕೋಟಿಯಿಂದ ತಲಾ 24 ಕೋಟಿ ರೂ.ಗೆ ಏರಿಕೆ ಆಗಿದೆ. 2017- 18ರಲ್ಲಿ ಇವರಿಬ್ಬರು ತಲಾ 19.99 ಕೋಟಿ ರೂ., 2016- 17ರಲ್ಲಿ ತಲಾ ರೂ. 16.58 ಕೋಟಿ ಮತ್ತು 2015-16ರಲ್ಲಿ ನಿಖಿಲ್​ಗೆ ರೂ. 14.42 ಕೋಟಿ ಮತ್ತು ಹಿತಲ್​ಗೆ ರೂ. 14.41 ಕೋಟಿ ಇತ್ತು. ಅದರ ಹಿಂದಿನ ವರ್ಷ ತಲಾ ರೂ. 12.03 ಕೋಟಿ ಪಡೆದಿದ್ದಾರೆ.

ನೀತಾ ಅಂಬಾನಿ
ಮುಕೇಶ್ ಪತ್ನಿ ನೀತಾ ಅಂಬಾನಿ ಕಾರ್ಯ ನಿರ್ವಾಹಕೇತರ ನಿರ್ದೇಶಕಿ ಎಂಬ ಹುದ್ದೆ ಇದೆ. ಅದಕ್ಕೆ ವಾರ್ಷಿಕ ಸಿಟ್ಟಿಂಗ್ ಫೀ 8 ಲಕ್ಷ ರೂ., ಕಮಿಷನ್ 1.65 ಕೋಟಿ ರೂ. ಇದೆ. ಕಲೆದ ವರ್ಷ ಸಿಟ್ಟಿಂಗ್ ಶುಲ್ಕ 7 ಲಕ್ಷ ರೂಪಾಯಿ ಇದೆ.

ಅಂಬಾನಿ ವೇತನ ಲೆಕ್ಕಾಚಾರ
ಅಂಬಾನಿ ವೇತನ ಮತ್ತು ಇತರ ಭತ್ಯೆಗಳು 2019- 20ರ ಹಣಕಾಸು ವರ್ಷಕ್ಕೆ ರೂ. 4.36 ಕೋಟಿ. ಅದರ ಹಿಂದಿನ ಹಣಕಾಸು ವರ್ಷದಲ್ಲಿ ರೂ. 4.45 ಕೋಟಿ ಇತ್ತು. ಸವಲತ್ತುಗಳನ್ನು ಹಿಂದಿನ ವರ್ಷ 31 ಲಕ್ಷ ರೂ. ಇತ್ತು. ಅದು 40 ಲಕ್ಷಕ್ಕೆ ಏರಿಕೆ ಆಗಿದೆ. ಆದರೆ ಕಮಿಷನ್ ಬದಲಾಗದೆ ರೂ. 9.53 ಕೋಟಿ ರೂಪಾಯಿ ಇದೆ. ಇನ್ನು ಪೆನ್ಷನ್ ಬೆನಿಫಿಟ್ ರೂ. 71 ಲಕ್ಷ ಇದೆ.

ಫೋರ್ಬ್ಸ್ ಗ್ಲೋಬಲ್ 2000 ಪಟ್ಟಿಯಲ್ಲಿ ಕಳೆದ ವರ್ಷ ವಿಶ್ವದ ಅತಿ ದೊಡ್ಡ ಪಬ್ಲಿಕ್ ಕಂಪೆನಿಗಳಲ್ಲಿ ಅತಿ ಹೆಚ್ಚಿನ ಶ್ರೇಯಾಂಕವನ್ನು ರಿಲಯನ್ಸ್ ಪಡೆದಿದೆ. ಜಿಯೋದಿಂದ 2000 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಜಿಯೋ ಪ್ಲಾಟ್​ಫಾರ್ಮ್​ನಲ್ಲಿನ ಷೇರಿನ ಪಾಲನ್ನು ಫೇಸ್​ಬುಕ್, ಗೂಗಲ್, ಇಂಟೆಲ್ ಸೇರಿದಂತೆ ವಿವಿಧ ಕಂಪೆನಿಗಳಿಗೆ ಮಾರಾಟ ಮಾಡಿದ ಮೇಲೆ ಈ ಬೆಳವಣಿಗೆ ಆಗಿತ್ತು.

ಇದನ್ನೂ ಓದಿ: Happy birthday Mukesh Ambani: ಮುಕೇಶ್ ಅಂಬಾನಿ ಜನ್ಮದಿನದಂದು 5 ಆಸಕ್ತಿಕರ ಮಾಹಿತಿಗಳು

ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ಉದ್ಯೋಗಿಗಳ ಕುಟುಂಬಕ್ಕೆ 5 ವರ್ಷ ಸಂಬಳ; ಮಕ್ಕಳಿಗೆ ಉಚಿತ ಶಿಕ್ಷಣ: ರಿಲಯನ್ಸ್​ ಉದಾತ್ತ ನಿರ್ಣಯ

(Reliance Industries chairman Mukesh Ambani forego Rs 15 crore salary in FY21 due to corona pandemic)

Published On - 9:12 pm, Fri, 4 June 21