Mukesh Ambani: 20 ವರ್ಷಗಳಲ್ಲಿ ಭಾರತವು ಜಾಗತಿಕ ಗ್ರೀನ್ ಎನರ್ಜಿಯ ಸೂಪರ್ ಪವರ್ ಎಂದ ಮುಕೇಶ್ ಅಂಬಾನಿ

| Updated By: Srinivas Mata

Updated on: Feb 23, 2022 | 5:04 PM

ಮುಂದಿನ ಇಪ್ಪತ್ತು ವರ್ಷಗಳಲ್ಲಿ ಗ್ರೀನ್ ಎನರ್ಜಿಯಲ್ಲಿ ಭಾರತವು ಸೂಪರ್ ಪವರ್ ಆಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್​ನ ಮುಕೇಶ್ ಅಂಬಾನಿ ಅಭಿಪ್ರಾಯ ಪಟ್ಟಿದ್ದಾರೆ.

Mukesh Ambani: 20 ವರ್ಷಗಳಲ್ಲಿ ಭಾರತವು ಜಾಗತಿಕ ಗ್ರೀನ್ ಎನರ್ಜಿಯ ಸೂಪರ್ ಪವರ್ ಎಂದ ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ (ಸಂಗ್ರಹ ಚಿತ್ರ)
Follow us on

ಮುಂದಿನ 20 ವರ್ಷಗಳಲ್ಲಿ ಸ್ವಚ್ಛ ಇಂಧನ ರಫ್ತು 500 ಬಿಲಿಯನ್‌ ಯುಎಸ್​ಡಿಗೆ ಏರಿಕೆ ಆಗುವುದರೊಂದಿಗೆ ಭಾರತವು ಜಾಗತಿಕ ಗ್ರೀನ್ ಎನರ್ಜಿಯ ಸೂಪರ್ ಪವರ್ ಆಗಬಹುದು ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿ  (Mukesh Ambani)  ಬುಧವಾರ ಅಭಿಪ್ರಾಯ ಪಟ್ಟಿದ್ದಾರೆ. ರಿಲಯನ್ಸ್ ಸೇರಿದಂತೆ ಭಾರತೀಯ ಕಂಪೆನಿಗಳು ಬ್ಯಾಟರಿ ಸಂಗ್ರಹಣೆ, ಇಂಧನ ಸೆಲ್​ಗಳನ್ನು ನಿರ್ಮಿಸುವುದು ಮತ್ತು ಹಸಿರು ಹೈಡ್ರೋಜನ್ ಅನ್ನು ಪ್ರತಿ ಕಿಲೋಗ್ರಾಂಗೆ 1 ಡಾಲರ್​ಗಿಂತ ಕಡಿಮೆಗೆ ಉತ್ಪಾದಿಸುವುದು ಸೇರಿದಂತೆ ಭಾರತದ ರಿನೀವಬಲ್ (ನವೀಕರಿಸಬಹುದಾದ) ಇಂಧನ ಸಾಮರ್ಥ್ಯವನ್ನು ಹೆಚ್ಚಿಸಲು ಶತಕೋಟಿ ಡಾಲರ್ ಮೌಲ್ಯದ ಯೋಜನೆಗಳನ್ನು ಘೋಷಿಸಿವೆ. “ಕಳೆದ 20 ವರ್ಷಗಳಲ್ಲಿ ನಾವು (ಭಾರತವು) ಐಟಿ ಸೂಪರ್ ಪವರ್ ಆಗಿ ಹೊರಹೊಮ್ಮಲು ಹೆಸರುವಾಸಿಯಾಗಿದ್ದರೆ, ಮುಂದಿನ 20 ವರ್ಷಗಳಲ್ಲಿ ತಂತ್ರಜ್ಞಾನದ ಜತೆಗೆ ಇಂಧನ ಮತ್ತು ಜೀವ ವಿಜ್ಞಾನದಲ್ಲಿ ಹೊರಹೊಮ್ಮುವುದನ್ನು ಗುರುತಿಸಲಾಗುತ್ತದೆ ಎಂಬುದಾಗಿ ನಾನು ನಂಬುತ್ತೇನೆ,” ಎಂದು ಮುಕೇಶ್ ಅಂಬಾನಿ ಅವರು ಏಷ್ಯಾ ಆರ್ಥಿಕ ಸಂವಾದದಲ್ಲಿ ಹೇಳಿದ್ದಾರೆ.

ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ಹಾಗೂ ಅದರ ವಿದ್ಯುತ್ ವಲಯವು ಕಲ್ಲಿದ್ದಲಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮುಂದಿನ ಎರಡು ಮೂರು ದಶಕಗಳಲ್ಲಿ ಫಾಸಿಲ್ ಇಂಧನಗಳ ಮೇಲಿನ ಅವಲಂಬನೆಯನ್ನು ಕೊನೆಗೊಳಿಸುವ ಕಾರ್ಯತಂತ್ರವನ್ನು ಭಾರತ ಹೊಂದಿರಬೇಕು ಎಂದು ಅಂಬಾನಿ ಹೇಳಿದ್ದಾರೆ. “ಮುಂದಿನ ಎರಡು- ಮೂರು ದಶಕಗಳವರೆಗೆ ಕಲ್ಲಿದ್ದಲು ಮತ್ತು ಆಮದು ಮಾಡಿಕೊಳ್ಳುವ ತೈಲದ ಮೇಲೆ ಭಾರತದ ಅವಲಂಬನೆ ಮುಂದುವರಿಯುತ್ತದೆ. ಆದರೆ ಮುಂದಿನ ಎರಡು ಮೂರು ದಶಕಗಳಲ್ಲಿ ಅದನ್ನು ಪೂರ್ತಿ ತೊಡೆದುಹಾಕಲು ನಾವು ಯೋಜನೆಯನ್ನು ಹೊಂದಿರಬೇಕು,” ಎಂದಿದ್ದಾರೆ. ಸಮೀಪ ಮತ್ತು ಮಧ್ಯಮ ಅವಧಿಯಲ್ಲಿ ಭಾರತವು “ಕಡಿಮೆ-ಕಾರ್ಬನ್ ಮತ್ತು ಕಾರ್ಬನ್ ರಹಿತ ಕಾರ್ಯತಂತ್ರಗಳನ್ನು,” ಅನುಸರಿಸಬೇಕಾಗುತ್ತದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

2070ರ ವೇಳೆಗೆ ಭಾರತವನ್ನು ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆ ಮಾಡುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ರಾಷ್ಟ್ರವು 2030ರ ವೇಳೆಗೆ 450 ಗಿಗಾವ್ಯಾಟ್ (GW) ನವೀಕರಿಸಬಹುದಾದ ಇಂಧನವನ್ನು ಸ್ಥಾಪಿಸಲು ಯೋಜಿಸಿದೆ. ಸದ್ಯಕ್ಕೆ ಸುಮಾರು 105 GWನಿಂದ 2030ರ ವೇಳೆಗೆ ಪ್ರತಿ ವರ್ಷ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವ ಯೋಜನೆಯನ್ನು ಇತ್ತೀಚೆಗೆ ಪ್ರಕಟಿಸಿದೆ. “ಹಸಿರು ಹೈಡ್ರೋಜನ್​ ಪ್ರತಿ ಕಿಲೋಗೆ ಒಂದು ಡಾಲರ್‌ಗೆ ಬೆಲೆಯನ್ನು ತರಬೇಕು ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಮತ್ತು ನಾವು ಅದನ್ನು ಕಿಲೋಗೆ ಒಂದು ಡಾಲರ್‌ಗಿಂತ ಕಡಿಮೆ ದರದಲ್ಲಿ ಸಾಗಿಸುತ್ತೇವೆ ಮತ್ತು ವಿತರಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳಬೇಕು,” ಎಂದು ಅಂಬಾನಿ ಹೇಳಿದ್ದಾರೆ.

ಇದನ್ನೂ ಓದಿ: Green energy corridor: 12 ಸಾವಿರ ಕೋಟಿ ರೂಪಾಯಿಯ ಗ್ರೀನ್ ಎನರ್ಜಿ ಕಾರಿಡಾರ್​ಗೆ ಕೇಂದ್ರ ಸಂಪುಟದ ಅನುಮೋದನೆ