ನವದೆಹಲಿ, ಫೆಬ್ರುವರಿ 13: ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್ (RIL) ಸಂಸ್ಥೆಯ ಷೇರುಬೆಲೆ ಇಂದೂ ಗಣನೀಯವಾಗಿ ಏರಿದೆ. ಈ ಮೂಲಕ ಅದರ ಮಾರುಕಟ್ಟೆ ಬಂಡವಾಳ ಅಥವಾ ಷೇರುಸಂಪತ್ತು (Market Capital) 20 ಲಕ್ಷ ಕೋಟಿ ರೂ ದಾಟಿದೆ. ಭಾರತದ ಒಂದು ಕಂಪನಿ ಇಷ್ಟು ಮಾರುಕಟ್ಟೆ ಬಂಡವಾಳವನ್ನು ಹೊಂದಿರುವುದು ಇದೇ ಮೊದಲು. ಕಳೆದ ಆರೇಳು ವರ್ಷದಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ನ ಮಾರ್ಕೆಟ್ ಕ್ಯಾಪ್ ಅದ್ಭುತವಾಗಿ ಬೆಳೆದಿದೆ. ವಿಶ್ವದಲ್ಲಿ ಕೇವಲ 43 ಕಂಪನಿಗಳು ಮಾತ್ರವೇ 20 ಲಕ್ಷ ಕೋಟಿ ರೂ ಮೌಲ್ಯದ ಮಾರುಕಟ್ಟೆ ಬಂಡವಾಳ ಹೊಂದಿರುವುದು. ಈ ಅಮೂಲ್ಯ ಕಂಪನಿಗಳ ಸಾಲಿನಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಇರುವುದು ಗಮನಾರ್ಹ.
ರಿಲಾಯನ್ಸ್ ಇಂಡಸ್ಟ್ರೀಸ್ನ ಷೇರುಗಳಿಗೆ ಈ ವರ್ಷ ಉತ್ತಮ ಬೇಡಿಕೆ ಬಂದಂತೆ ತೋರಿದೆ. 2024ರಲ್ಲಿ ಅದರ ಷೇರುಬೆಲೆ ಶೇ. 14ರಷ್ಟು ಹೆಚ್ಚಾಗಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಇವತ್ತಿನ ವಹಿವಾಟಿನಲ್ಲಿ ರಿಲಾಯನ್ಸ್ ಷೇರುಬೆಲೆ 2,957 ರೂಗೆ ಏರಿತ್ತು. ಆಗ ಇದರ ಒಟ್ಟು ಷೇರುಸಂಪತ್ತು ಅಥವಾ ಮಾರ್ಕೆಟ್ ಕ್ಯಾಪ್ 20 ಲಕ್ಷ ಕೋಟಿ ರೂ ಗಡಿದಾಟಿತ್ತು. ಮಧ್ಯಾಹ್ನ 12ಕ್ಕೆ ಅದರ ಷೇರುಬೆಲೆ 2,950 ರೂನಷ್ಟಿದೆ. ಅದರ ಷೇರುಸಂಪತ್ತು 19.96 ಲಕ್ಷ ಕೋಟಿ ರೂಗೆ ಇಳಿದಿದೆ. ಆದರೆ 20 ಲಕ್ಷ ಕೋಟಿ ರೂ ಗಡಿ ಮುಟ್ಟಿದ ಮೊದಲ ಕಂಪನಿ ಎಂಬ ದಾಖಲೆಯಂತೂ ರಿಲಾಯನ್ಸ್ ಹೆಸರಿಗೆ ಸಂದಾಯವಾಗಿದೆ.
ಇದನ್ನೂ ಓದಿ: ಇಸ್ರೇಲ್ನ ಟವರ್ ಸೆಮಿಕಂಡಕ್ಟರ್ನ ಅತಿದೊಡ್ಡ ಚಿಪ್ ಫ್ಯಾಕ್ಟರಿ ಭಾರತದಲ್ಲಿ ಸ್ಥಾಪನೆ ಸಾಧ್ಯತೆ
ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ನ ಮಾರುಕಟ್ಟೆ ಬಂಡವಾಳ 1 ಲಕ್ಷ ಕೋಟಿ ರೂ ಮೈಲಿಗಲ್ಲು ಮುಟ್ಟಿದ್ದು 2005ರ ಆಗಸ್ಟ್ನಲ್ಲಿ. 2017ಕ್ಕೆ ಅದರ ಮಾರ್ಕೆಟ್ ಕ್ಯಾಪ್ 5 ಲಕ್ಷ ಕೋಟಿ ರೂ ಆಯಿತು. ಆದರೆ, 2024ರಲ್ಲಿ ಅದು 20 ಲಕ್ಷ ಕೋಟಿ ರೂ ಆಗಿದೆ. ಒಂದು ಲಕ್ಷ ಕೋಟಿ ರೂನಿಂದ ಐದು ಲಕ್ಷ ಕೋಟಿ ರೂಗೆ ಮಾರ್ಕೆಟ್ ಕ್ಯಾಪ್ ಏರಲು 12 ವರ್ಷ ಬೇಕಾಯಿತು. ಆದರೆ, 15 ಲಕ್ಷ ಕೋಟಿ ರೂನಷ್ಟು ಬಂಡವಾಳ ಹೆಚ್ಚಳ ಪಡೆಯಲು ಕೇವಲ ಆರೇಳು ವರ್ಷ ಸಾಕಾಗಿದೆ. 2017ರಿಂದ ಈಚೆಗೆ ಆರ್ಐಎಲ್ ಷೇರು ಅಗಾಧವಾಗಿ ಬೆಳೆದಿದೆ.
ಡಾಲರ್ ಲೆಕ್ಕದಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಮಾರ್ಕೆಟ್ ಕ್ಯಾಪ್ 242 ಡಾಲರ್ ಇದೆ. ಮೈಕ್ರೋಸಾಫ್ಟ್ ಸಂಸ್ಥೆ 3 ಟ್ರಿಲಿಯನ್ ಡಾಲರ್ನೊಂದಿಗೆ ಅಗ್ರಸ್ಥಾನದಲ್ಲಿದೆ. ದೀರ್ಘ ಕಾಲ ಅಗ್ರಸ್ಥಾನದಲ್ಲಿದ್ದ ಆ್ಯಪಲ್ ತನ್ನ ಪಟ್ಟ ಕಳೆದುಕೊಂಡಿದ್ದು, ಮೊದಲ ಸ್ಥಾನದೊಂದಿಗಿನ ಅಂತರ ಇನ್ನಷ್ಟು ಹೆಚ್ಚಾಗಿದೆ. ಸೌದಿ ಅರಾಮ್ಕೋ, ಗೂಗಲ್, ಅಮೇಜಾನ್ ಮತ್ತು ಎನ್ವಿಡಿಯಾ ಸಂಸ್ಥೆಗಳ ಮಧ್ಯೆ 3ರಿಂದ 6ನೇ ಸ್ಥಾನಕ್ಕೆ ಪೈಪೋಟಿ ನಡೆದಿದೆ.
ಇದನ್ನೂ ಓದಿ: ಗೂಗಲ್ ಸಿಇಒ ಸುಂದರ್ ಪಿಚೈ ಬೆಳಗ್ಗೆ ಎದ್ದು ಮಾಡೋ ಮೊದಲ ಕೆಲಸ ಇದು…
ಈ ಪಟ್ಟಿಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ 42ನೇ ಸ್ಥಾನದಲ್ಲಿದೆ. ಭಾರತೀಯ ಕಂಪನಿಗಳ ಪೈಕಿ ರಿಲಾಯನ್ಸ್ ಇಂಡಸ್ಟ್ರೀಸ್ ನಂತರ ಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವುದು ಟಿಸಿಎಸ್ನದ್ದು. ಅದು 180.79 ಬಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪ್ ಹೊಂದಿದೆ. ಸುಮಾರು 15 ಲಕ್ಷ ಕೋಟಿ ರೂನಷ್ಟಾಗುತ್ತದೆ. ಇನ್ನು, ಮೂರನೇ ಸ್ಥಾನ ಎಚ್ಡಿಎಫ್ಸಿ ಬ್ಯಾಂಕ್ನದ್ದು. ಭಾರತದ ಈ ಮೂರು ಕಂಪನಿಗಳು ಜಾಗತಿಕವಾಗಿ ಟಾಪ್ 100 ಪಟ್ಟಿಯಲ್ಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ