
ನವದೆಹಲಿ: ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ (Krishna Godavari Basin) ಅನಿಲ ಹಂಚಿಕೆ ವಿಚಾರದಲ್ಲಿ ಉಂಟಾದ ವ್ಯಾಜ್ಯವೊಂದರಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಪರವಾಗಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. 2018ರಲ್ಲಿ ನ್ಯಾಯಮಂಡಳಿ ನೀಡಿದ್ದ ತೀರ್ಪನ್ನು ದೆಹಲಿ ಉಚ್ಚನ್ಯಾಯಾಲಯ (Delhi High Court) ಮೇ 9ರಂದು ಎತ್ತಿಹಿಡಿದು ಆದೇಶ ಹೊರಡಿಸಿದೆ. ಮೂವರು ಸದಸ್ಯರ ನ್ಯಾಯಪೀಠವು 2:1 ಬಹುಮತದಲ್ಲಿ ಆರ್ಐಎಲ್ ಪರವಾಗಿ ತೀರ್ಪು ನೀಡಿದೆ. ಇದರೊಂದಿಗೆ ರಿಲಾಯನ್ಸ್ ಇಂಡಸ್ಟ್ರೀಸ್ ಹಾಗೂ ಅದರ ಪಾಲುದಾರ ಸಂಸ್ಥೆಗಳಾದ ಬ್ರಿಟಿಷ್ ಪೆಟ್ರೋಲಿಯಂ ಮತ್ತು ನೀಕೋ (NECO) ನಿಟ್ಟುಸಿರುಬಿಡುವಂತಾಗಿದೆ. ನ್ಯಾಯಮಂಡಳಿ ತೀರ್ಪನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿ ಕೇಂದ್ರದ ಪರ ತೀರ್ಪು ನೀಡಿದ್ದರೆ ರಿಲಾಯನ್ಸ್ ಸಂಸ್ಥೆ ಸುಮಾರು 14,000 ಕೋಟಿ ರೂ ಪರಿಹಾರ ಕಟ್ಟಿಕೊಡಬೇಕಿತ್ತು. ಸರ್ಕಾರಿ ಸ್ವಾಮ್ಯದ ಒಎನ್ಜಿಸಿ ಮತ್ತು ರಿಲಾಯನ್ಸ್ ನಡುವಿನ ಅನಿಲ ವ್ಯಾಜ್ಯದ ಪ್ರಕರಣ ಇದು.
ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ ಅನಿಲ ನಿಕ್ಷೇಪ ಹಂಚಿಕೆಗೆ ಸಂಬಂಧಿಸಿದ ಪ್ರಕರಣ ಇದು. ಆಂಧ್ರದ ಕರಾವಳಿ ಭಾಗದಲ್ಲಿ ನೈಸರ್ಗಿಕ ಅನಿಲ ನಿಕ್ಷೇಪ ಶೋಧಿಸಲು ಮತ್ತು ಹೊರತೆಗೆಯಲು 2000ದ ಏಪ್ರಿಲ್ 12ರಂದು ರಿಲಾಯನ್ಸ್ ಮತ್ತಿತರ ಕಂಪನಿಗಳ ಜೊತೆ ಕೇಂದ್ರ ಸರ್ಕಾರ ಪ್ರಾಡಕ್ಟ್ ಶೇರಿಂಗ್ ಗುತ್ತಿಗೆ (ಪಿಎಸ್ಸಿ) ಒಪ್ಪಂದ ಮಾಡಿಕೊಂಡಿತ್ತು. ಎರಡಕ್ಕೂ ಬೇರೆ ಬೇರೆ ಬ್ಲಾಕ್ಗಳನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ: Go First: ಗೋ ಫಸ್ಟ್ ವಿಮಾನಗಳನ್ನು ಪಡೆಯಲು ಟಾಟಾ, ಇಂಡಿಗೋ ಮುಂದು; ಲೀಸಿಂಗ್ ಕಂಪನಿಗಳ ಜೊತೆ ಮಾತುಕತೆ
ಆದರೆ, 2013ರಲ್ಲಿ ಒಎನ್ಜಿಸಿಗೆ ಸೇರಿದ ಬ್ಲಾಕ್ ಮತ್ತು ಆರ್ಐಎಲ್ಗೆ ಸೇರಿದ ಬ್ಲಾಕ್ ಮಧ್ಯೆ ಸಂಪರ್ಕ ಜೋಡಿಸಿ ಆ ಮೂಲಕ ಅನಿಲವನ್ನು ಸಾಗಿಸಲಾಗುತ್ತಿತ್ತು ಎಂದು ಒಎನ್ಜಿಸಿ ಶಂಕಿಸಿತ್ತು. ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ರಿಲಾಯನ್ಸ್ ವಿರುದ್ಧ 2016ರಲ್ಲಿ 1.5 ಬಿಲಿಯನ್ ಡಾಲರ್ ಹಾಗು 174 ಮಿಲಿಯನ್ ಡಾಲರ್ (ಒಟ್ಟು ಸುಮಾರು 14,000 ಕೋಟಿ ರೂ) ದಂಡ ವಿಧಿಸಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ರಿಲಾಯನ್ಸ್ ನೇತೃತ್ವದ ಸಂಸ್ಥೆಗಳು ನ್ಯಾಯಮಂಡಳಿ ಮೊರೆ ಹೋದವು. 2018ರಲ್ಲಿ ನ್ಯಾಯಮಂಡಳಿಯಿಂದ ಆರ್ಐಎಲ್ ಪರವಾಗಿ ತೀರ್ಪು ಬಂದಿತು. ಇದನ್ನು ಪ್ರಶ್ನಿಸಿ ಸರ್ಕಾರವು ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈಗ ದೆಹಲಿ ಕೋರ್ಟ್ನಿಂದಲೂ ಸರ್ಕಾರದ ವಿರುದ್ಧವಾಗಿ ತೀರ್ಪು ಬಂದಿದೆ.