Reliance Industries FY22 Q3 Results: ರಿಲಯನ್ಸ್ ಇಂಡಸ್ಟ್ರೀಸ್ 3ನೇ ತ್ರೈಮಾಸಿಕ ಲಾಭ ಶೇ 41ರಷ್ಟು ಹೆಚ್ಚಳ; 18549 ಕೋಟಿಗೆ

| Updated By: Srinivas Mata

Updated on: Jan 21, 2022 | 8:48 PM

ರಿಲಯನ್ಸ್ ಇಂಡಸ್ಟ್ರೀಸ್ 2022ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕವಾದ ಡಿಸೆಂಬರ್​ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಾಭದಲ್ಲಿ ಶೇ 41ರಷ್ಟು ಹೆಚ್ಚಳವಾಗಿದೆ.

Reliance Industries FY22 Q3 Results: ರಿಲಯನ್ಸ್ ಇಂಡಸ್ಟ್ರೀಸ್ 3ನೇ ತ್ರೈಮಾಸಿಕ ಲಾಭ ಶೇ 41ರಷ್ಟು ಹೆಚ್ಚಳ; 18549 ಕೋಟಿಗೆ
ಮುಕೇಶ್​ ಅಂಬಾನಿ (ಸಂಗ್ರಹ ಚಿತ್ರ)
Follow us on

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್​ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್​ ಲಿಮಿಟೆಡ್ (Reliance Industries Limited) ಜನವರಿ 21ನೇ ತಾರೀಕಿನ ಶುಕ್ರವಾರದಂದು 2021-22ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕವಾದ ಅಕ್ಟೋಬರ್​ನಿಂದ ಡಿಸೆಂಬರ್​ನ ಫಲಿತಾಂಶವನ್ನು ಪ್ರಕಟಿಸಿದೆ. ಏಕೀಕೃತ ನಿವ್ವಳ ಲಾಭವಾದ 18,549 ಕೋಟಿ ರೂಪಾಯಿಯನ್ನು ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಗಳಿಸಿದ 13,101 ಕೋಟಿ ರೂಪಾಯಿಗೆ ಹೋಲಿಸಿದರೆ ಶೇ 41ರಷ್ಟು ಹೆಚ್ಚಳ ಆಗಿದೆ. ತೈಲದಿಂದ ರೀಟೇಲ್- ಟೆಲಿಕಾಂ ತನಕ ಸಮೂಹ ಸಂಸ್ಥೆ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಆದಾಯ ಕಾರ್ಯಾಚರಣೆ ಮೂಲಕ 1,91,271 ಕೋಟಿ ರೂಪಾಯಿ ಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬಂದಿದ್ದ 1,23,997 ಕೋಟಿ ರೂಪಾಯಿಗೆ ಹೋಲಿಸಿದರೆ ಶೇ 54ರಷ್ಟು ಆದಾಯ ಹೆಚ್ಚಾಗಿದೆ. ಬ್ಲೂಮ್​ಬರ್ಗ್​ ಸರಾಸರಿ ಅಂದಾಜಿನಂತೆ, ರಿಲಯನ್ಸ್​ 15,264 ಕೋಟಿ ಲಾಭ ಹಾಗೂ ಆದಾಯ 1.75 ಲಕ್ಷ ಕೋಟಿ ರೂಪಾಯಿ ಮಾಡಬಹುದು ಎನ್ನಲಾಗಿತ್ತು.

ರಿಲಯನ್ಸ್ ಇಂಡಸ್ಟ್ರೀಸ್ ಷೇರು ಬೆಲೆ ಶುಕ್ರವಾರದಂದು ಎನ್​ಎಸ್​ಇಯಲ್ಲಿ 2476 ರೂಪಾಯಿ ಇತ್ತು. ಸೂಚ್ಯಂಕದ ಹೆವಿವೇಯ್ಟ್​ ಆದ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ ಕಳೆದ ಒಂದು ವರ್ಷದಲ್ಲಿ ಶೇ 18.26ರಷ್ಟು ಏರಿಕೆ ಕಂಡಿದೆ. “ನಮ್ಮ ಎಲ್ಲ ವ್ಯವಹಾರಗಳಿಂದ ಬಲವಾದ ಕೊಡುಗೆಯೊಂದಿಗೆ FY22Q3ನಲ್ಲಿ ರಿಲಯನ್ಸ್ ಅತ್ಯುತ್ತಮ ತ್ರೈಮಾಸಿಕ ಕಾರ್ಯಕ್ಷಮತೆಯನ್ನು ಪ್ರಕಟಿಸಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ನಮ್ಮ ಗ್ರಾಹಕ ವ್ಯವಹಾರಗಳು, ರೀಟೇಲ್ ವ್ಯಾಪಾರ ಮತ್ತು ಡಿಜಿಟಲ್ ಸೇವೆಗಳು ಅತ್ಯಧಿಕ ಆದಾಯ ಮತ್ತು EBITDA ಅನ್ನು ದಾಖಲಿಸಿವೆ. ಈ ತ್ರೈಮಾಸಿಕದಲ್ಲಿ ಭವಿಷ್ಯದ ಬೆಳವಣಿಗೆಯನ್ನು ಹೆಚ್ಚಿಸಲು ನಮ್ಮ ವ್ಯವಹಾರಗಳಾದ್ಯಂತ ಕಾರ್ಯತಂತ್ರದ ಹೂಡಿಕೆಗಳು ಮತ್ತು ಪಾಲುದಾರಿಕೆಗಳ ಮೇಲೆ ಗಮನ ಹರಿಸುವುದನ್ನು ಮುಂದುವರಿಸಿದ್ದೇವೆ,” ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ.

ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಪ್ರಮುಖ ಬಳಕೆಯ ಬ್ಯಾಸ್ಕೆಟ್​ಗಳಲ್ಲಿ ಬಲವಾದ ಬೆಳವಣಿಗೆಯೊಂದಿಗೆ ರೀಟೇಲ್ ವ್ಯಾಪಾರ ಚಟುವಟಿಕೆಯು ಸಾಮಾನ್ಯವಾಗಿದೆ ಮತ್ತು ದೇಶಾದ್ಯಂತ ಲಾಕ್‌ಡೌನ್‌ಗಳು ಸಡಿಲಗೊಂಡಿವೆ. ನಮ್ಮ ಡಿಜಿಟಲ್ ಸೇವೆಗಳ ವ್ಯವಹಾರವು ಸುಧಾರಿತ ಗ್ರಾಹಕರ ತೊಡಗಿಸಿಕೊಳ್ಳುವಿಕೆ ಮತ್ತು ಚಂದಾದಾರರ ಮಿಶ್ರಣದ ಮೂಲಕ ವಿಶಾಲ ಆಧಾರಿತ, ಸಮರ್ಥನೀಯ ಮತ್ತು ಲಾಭದಾಯಕ ಬೆಳವಣಿಗೆಯನ್ನು ನೀಡಿದೆ ಎಂದು ಅವರು ಹೇಳಿದ್ದಾರೆ. ಕಂಪೆನಿಯ ಟೆಲಿಕಾಂ ಅಂಗವಾದ ರಿಲಯನ್ಸ್ ಜಿಯೋ ಡಿಸೆಂಬರ್ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭ ಶೇ 10ರಷ್ಟು ಏರಿಕೆಯಾಗಿ, ರೂ. 3,615 ಕೋಟಿಗಳಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರೂ. 3,291 ಕೋಟಿ ಇತ್ತು.

ಜಿಯೋ ಆದಾಯವು ಕಳೆದ ವರ್ಷದ ಅವಧಿಯಲ್ಲಿ ರೂ. 18,492 ಕೋಟಿಗೆ ಹೋಲಿಸಿದರೆ, ಶೇ 5ರಷ್ಟು ಏರಿಕೆ ಕಂಡು, ರೂ. 19,347 ಕೋಟಿಗೆ ತಲುಪಿದೆ. ತ್ರೈಮಾಸಿಕದಲ್ಲಿ ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ (ARPU) ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರೂ. 143.6ರಿಂದ ಪ್ರತಿ ಚಂದಾದಾರರಿಗೆ ತಿಂಗಳಿಗೆ ರೂ. 151.6ಕ್ಕೆ ಸುಧಾರಿಸಿದೆ. ತೈಲದಿಂದ ರಾಸಾಯನಿಕಗಳ ವಿಭಾಗದಲ್ಲಿ ಮೂರನೇ ತ್ರೈಮಾಸಿಕದ ಆದಾಯವು ಶೇ 57ರಷ್ಟು ಹೆಚ್ಚಿ ರೂ. 1.31 ಲಕ್ಷ ಕೋಟಿಗೆ ತಲುಪಿದ್ದು, ಪ್ರಾಥಮಿಕವಾಗಿ ಕಚ್ಚಾ ತೈಲ ಬೆಲೆಗಳ ಹೆಚ್ಚಳ ಮತ್ತು ಹೆಚ್ಚಿನ ಪ್ರಮಾಣಗಳ ಕಾರಣದಿಂದಾಗಿ ಹೀಗಾಗಿದೆ.

ಇದನ್ನೂ ಓದಿ: Reliance Industries: ಫೋರ್ಬ್ಸ್​ನಿಂದ ಭಾರತದ ಟಾಪ್ 1 ಉದ್ಯೋಗದಾತ ಸಂಸ್ಥೆಯಾಗಿ ರಿಲಯನ್ಸ್​ ಇಂಡಸ್ಟ್ರೀಸ್ ಆಯ್ಕೆ

Published On - 8:46 pm, Fri, 21 January 22