ಮುಂಬೈ: ರಿಲಾಯನ್ಸ್ ಇಂಡಸ್ಟ್ರೀಸ್ ಒಡೆತನದ ಜಿಯೋಮಾರ್ಟ್ ಸಂಸ್ಥೆ 1,000 ಉದ್ಯೋಗಿಗಳನ್ನು ಲೇ ಆಫ್ (JioMart Layoffs) ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇದು ಸಣ್ಣ ಪೂರ್ವಭಾವಿ ಕ್ರಮ ಅಷ್ಟೇ. ಮುಂದಿನ ದಿನಗಳಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ನ ಹೋಲ್ಸೇಲ್ ವಿಭಾಗದಲ್ಲಿ ಕೆಲಸ ಮಾಡುವ ಕಾಲುಭಾಗದಷ್ಟು ಮಂದಿಯನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಇದೆ. ಬೆಲೆ ಇಳಿಕೆ ಸಮರ ಆರಂಭಿಸಿ ಈಗ ಅದನ್ನು ಉಳಿಸಿಕೊಳ್ಳುವ ಧಾವಂತದಲ್ಲಿರುವ ರಿಲಾಯನ್ಸ್ಗೆ ಈಗ ತನ್ನ ವೆಚ್ಚಗಳನ್ನು ಕಡಿಮೆ ಮಾಡುವುದು ಅನಿವಾರ್ಯ. ಅದಕ್ಕೆ ಲೇ ಆಫ್ ಒಂದು ಪ್ರಮುಖ ದಾರಿ.
ಇದೀಗ ಜಿಯೋಮಾರ್ಟ್ನಿಂದ 1,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದು ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿ ಎಫೆಕ್ಟ್ ಎನ್ನಲಾಗಿದೆ. 3,500 ಉದ್ಯೋಗಿಗಳಿರುವ ಮೆಟ್ರೋ ಕಂಪನಿಯನ್ನು ರಿಲಾಯನ್ಸ್ ಇತ್ತೀಚೆಗೆ ಖರೀದಿಸಿತ್ತು. ಈಗ ತನ್ನ ಕಾರ್ಯಾಚರಣೆಗಳ ಮರುಜೋಡಣೆ ಮಾಡುವ ನಿಟ್ಟಿನಲ್ಲಿ ವಿವಿಧ ಉದ್ಯೋಗಕಡಿತಕ್ಕೆ ಕೈಹಾಕಿದೆ.
ಇದನ್ನೂ ಓದಿ: Meta Layoffs: ಅವರ ಬಗ್ಗೆ ಅಭಿಮಾನ ಹೆಚ್ಚಾಯ್ತು; ಕೆಲಸ ಕಳೆದುಕೊಳ್ಳುತ್ತಿರುವ ಉದ್ಯೋಗಿಗಳ ಬಗ್ಗೆ ಮೆಟಾ ಅಧಿಕಾರಿ ಹೇಳಿದ್ದಿದು
ಜಿಯೋಮಾರ್ಟ್ ಈಗಾಗಲೇ 1,000 ಉದ್ಯೋಗಿಗಳನ್ನು ರಾಜೀನಾಮೆ ನೀಡುವಂತೆ ಆದೇಶಿಸಿದೆ. ಇದರಲ್ಲಿ ಮುಂಬೈನಲ್ಲಿರುವ ಅದರ ಕಾರ್ಪೊರೇಟ್ ಆಫೀಸ್ನಲ್ಲಿ ಕೆಲಸ ಮಾಡುವ 500 ಮಂದಿಯೂ ಇದ್ದಾರೆ. ಇದಷ್ಟೇ ಅಲ್ಲ, ನೂರಾರು ಉದ್ಯೋಗಿಗಳನ್ನು ಪಿಐಪಿ (ಪರ್ಫಾರ್ಮೆನ್ಸ್ ಇಂಪ್ರೂವ್ಮೆಂಟ್ ಪ್ಲಾನ್) ಅಡಿಗೆ ಒಳಪಡಿಸಲಾಗಿದೆ. ಅಂದರೆ, ಈ ಉದ್ಯೋಗಿಗಳದ್ದು ಮಾಡು ಇಲ್ಲ ಮಡಿ ಪರಿಸ್ಥಿತಿ ಆಗಿರುತ್ತದೆ. ಇನ್ನುಳಿದ ಉದ್ಯೋಗಿಗಳ ಸಂಬಳಕಡಿತ ಮಾಡಲು ಜಿಯೋಮಾರ್ಟ್ ಮುಂದಾಗಿರುವ ವಿಚಾರ ಎಕನಾಮಿಕ್ ಟೈಮ್ಸ್ ವರದಿಯಿಂದ ತಿಳಿದುಬಂದಿದೆ.
ಇದನ್ನೂ ಓದಿ: Amazon Layoff: ಅಮೇಜಾನ್ 9,000 ಲೇ ಆಫ್; ಭಾರತದಲ್ಲಿ ಕೆಲಸ ಕಳೆದುಕೊಂಡ 500 ಮಂದಿ
ಇದೇ ವೇಳೆ, ಜಿಯೋಮಾರ್ಟ್ನ 150ಕ್ಕೂ ಹೆಚ್ಚು ಫುಲ್ಫಿಲ್ಮೆಂಟ್ ಸೆಂಟರ್ಗಳ ಪೈಕಿ ಅರ್ಧದಷ್ಟು ಸ್ಟೋರ್ಗಳನ್ನು ಬಂದ್ ಮಾಡುವ ಆಲೋಚನೆಯಲ್ಲಿ ಕಂಪನಿ ಇದೆ. ಈ ಫುಲ್ಫಿಲ್ಮೆಂಟ್ ಸೆಂಟರ್ಗಳು ರಿಲಾಯನ್ಸ್ನ ಸ್ಟೋರ್ಗಳಿಗೆ ವಿವಿಧ ವಸ್ತುಗಳ ಪೂರೈಕೆ ಮಾಡುತ್ತವೆ.