ಇಂದಿನಿಂದ ಆರ್ಬಿಐ ಎಂಪಿಸಿ ಸಭೆ; ಆಗಸ್ಟ್ 10ರಂದು ಪ್ರಮುಖ ಘೋಷಣೆಗಳು; ಬಡ್ಡಿದರ ಏರಿಸುತ್ತಾ ರಿಸರ್ವ್ ಬ್ಯಾಂಕ್?
RBI MPC Meeting: ಆರ್ಬಿಐನ ಎಂಪಿಸಿ ಸಭೆ ಆಗಸ್ಟ್ 8ರಿಂದ 10ರವರೆಗೆ ನಡೆಯುತ್ತಿದ್ದು, ಬಡ್ಡಿದರ ಹೆಚ್ಚಿಸಬೇಕೋ ಬೇಡವೋ ಎಂದು ನಿರ್ಧರಿಸಲಾಗುತ್ತದೆ. ವರದಿಗಳ ಪ್ರಕಾರ ರೆಪೋ ದರ ಏರಿಕೆಯಾಗುವ ಸಾಧ್ಯತೆ ಕಡಿಮೆ ಇದೆ. ಆಗಸ್ಟ್ 10ರಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸಭೆಯ ವಿಚಾರಗಳನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಲಿದ್ದಾರೆ.
ನವದೆಹಲಿ, ಆಗಸ್ಟ್ 8: ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯ (RBI MPC Meeting) ದ್ವೈಮಾಸಿಕ ಸಭೆ ಇಂದು ಮಂಗಳವಾರ ಆರಂಭವಾಗುತ್ತಿದೆ. 3 ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ದೇಶದ ಸದ್ಯದ ಹಣಕಾಸು ಪರಿಸ್ಥಿತಿ, ಭವಿಷ್ಯದ ಸ್ಥಿತಿ ಇತ್ಯಾದಿಯನ್ನು ಸಮಗ್ರವಾಗಿ ಅವಲೋಕಿಸಲಾಗುತ್ತದೆ. ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ಹಣಕಾಸು ಕ್ರಮಗಳು, ಹಣದುಬ್ಬರ (Inflation) ಇಳಿಕೆಗೆ ತೆಗೆದುಕೊಳ್ಳಬಹುದಾದ ಕ್ರಮಗಳು ಇತ್ಯಾದಿಯನ್ನು ಚರ್ಚಿಸಲಾಗುತ್ತದೆ. ಹಿಂದಿನ ಎರಡು ಸಭೆಗಳಲ್ಲಿ ಬಡ್ಡಿದರ ಏರಿಸದೇ ಇರುವ ಆರ್ಬಿಐ ಈ ಬಾರಿಯೂ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಆರ್ಬಿಐನ ರೆಪೋ ದರ ಅಥವಾ ಬಡ್ಡಿ ದರ ಶೇ. 6.50ರಷ್ಟಿದೆ. ಇದೇ ದರ ಮುಂದಿನ 2 ತಿಂಗಳು ಮುಂದುವರಿಯಬಹುದು.
ಭಾರತೀಯ ರಿಸರ್ವ್ ಬ್ಯಾಂಕ್ನ ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಆರು ಮಂದಿ ಸದಸ್ಯರಿದ್ದಾರೆ. ಅದರ ಗವರ್ನರ್ ಶಕ್ತಿಕಾಂತ ದಾಸ್, ಡೆಪ್ಯುಟಿ ಗವರ್ನರ್ ಮೈಕೇಲ್ ದೇಬಬ್ರತ ಪಾತ್ರ, ರಾಜೀವ್ ರಂಜನ್, ಜಯಂತ್ ಆರ್ ವರ್ಮಾ, ಅಶಿಮಾ ಗೋಯಲ್ ಮತ್ತು ಶಶಾಂಕ ಭಿಡೆ ಅವರು ಎಂಪಿಸಿ ಸದಸ್ಯರಾಗಿದ್ದಾರೆ.
ತಗ್ಗದ ಹಣದುಬ್ಬರ; ಇಬ್ಬಂದಿಯಲ್ಲಿ ಆರ್ಬಿಐ
ಹಣದುಬ್ಬರಕ್ಕೆ ಕಡಿವಾಣ ಹಾಕಲು ಕಳೆದ ಒಂದು ವರ್ಷದಿಂದ ಆರ್ಬಿಐ ಬಡ್ಡಿದರ ಏರಿಸುತ್ತಾ ಬಂದಿದೆ. ಶೇ. 7ರ ಮೇಲಿದ್ದ ಹಣದುಬ್ಬರ ಶೇ. 6ರ ಒಳಗೆ ಬಂದಿದೆ. ಆದರೆ, ಈಗ ಆಹಾರ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್ನಲ್ಲಿ ಹಣದುಬ್ಬರ ಶೇ. 6ರ ಮಿತಿ ಮೀರಿ ಹೋಗುವ ಸಾಧ್ಯತೆ ಇದೆ.
ಆದರೆ, ಬಡ್ಡಿದರ ಏರಿಕೆ ಮಾಡಿದರೆ ಅದರ ಸೈಡ್ ಎಫೆಕ್ಟ್ ಆಗಿ ಆರ್ಥಿಕತೆಗೆ ಘಾಸಿಯಾಗುತ್ತದೆ. ಹೀಗಾಗಿ, ಹಣದುಬ್ಬರವನ್ನು ಏಕೈಕ ಮಾನದಂಡವನ್ನಾಗಿ ಇಟ್ಟುಕೊಂಡು ರೆಪೋ ದರ ನಿರ್ಧರಿಸುವ ಸ್ಥಿತಿಯಲ್ಲಿ ಆರ್ಬಿಐ ಇಲ್ಲ. ಒಂದು ರೀತಿಯಲ್ಲಿ ಇಬ್ಬಂದಿ ಪರಿಸ್ಥಿತಿಯಲ್ಲಿರುವ ಆರ್ಬಿಐಗೆ ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆಯನ್ನು ಸಮತೋಲನದಲ್ಲಿ ಇಡುವ ದೊಡ್ಡ ಸವಾಲಿದೆ. ಇವೆಲ್ಲಾ ಹಿನ್ನೆಲೆಯಲ್ಲಿ ಆರ್ಬಿಐ ಈ ಬಾರಿ ರೆಪೋ ದರ ಏರಿಸುವ ಸಾಧ್ಯತೆ ಕಡಿಮೆ ಇದೆ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: Vaibhav Taneja: ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆಯ ಹೊಸ ಸಿಎಫ್ಒ ವೈಭವ್ ತನೇಜಾ ಯಾರು?
ಆರ್ಬಿಐ ಎಂಪಿಸಿ ಸಭೆಗೆ ಷೇರುಪೇಟೆ ಪ್ರತಿಕ್ರಿಯೆ
ಆರ್ಬಿಐನ ಎಂಪಿಸಿ ಸಭೆಯಲ್ಲಿ ಬಡ್ಡಿದರ ಹೆಚ್ಚಿಸಬೇಕೋ ಬೇಡವೋ ಎಂದು ತೆಗೆದುಕೊಳ್ಳಲಾಗುವ ನಿರ್ಧಾರದ ಬಗ್ಗೆ ಷೇರುಪೇಟೆಯೂ ಕಾತರದಿಂದಿದೆ. ಇವತ್ತು ಎಂಪಿಸಿ ಸಭೆ ಆರಂಭವಾಗುತ್ತಿರುವ ಹೊತ್ತಿನಲ್ಲಿ ಷೇರುಪೇಟೆಯಲ್ಲಿ ಅಷ್ಟೇನೂ ವ್ಯತ್ಯಯವಾಗಿಲ್ಲ. ಬಡ್ಡಿದರ ಏರುವ ಸಾಧ್ಯತೆ ಇಲ್ಲ ಎಂಬ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ತಣ್ಣಗೆ ಇದ್ದಾರೆ. ಒಂದು ವೇಳೆ ಆಗಸ್ಟ್ 10ರಂದು ಆರ್ಬಿಐ ಬಡ್ಡಿದರ ಹೆಚ್ಚಿಸಿದರೆ ಷೇರುಪೇಟೆಯಲ್ಲಿ ಬಹಳಷ್ಟು ವ್ಯತ್ಯಯವಾಗುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ