Fact Check: 500 ರೂ ನೋಟು ನಿಷೇಧ ಆಗುತ್ತೆ ಅನ್ನೋದು ಸುಳ್ಳು ಸುದ್ದಿ; ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟನೆ ಇದು
No discontinuation of Rs 500 notes, claims PIB fact check: 500 ರೂ ಮುಖಬೆಲೆಯ ನೋಟುಗಳನ್ನು 2026ರ ಮಾರ್ಚ್ ನಂತರ ನಿಷೇಧ ಮಾಡಲಾಗುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಹಿಂದೆ 500 ರೂ, 1,000 ರೂ ಮುಖಬೆಲೆ ನೋಟುಗಳ ನಿಷೇಧ, 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವುದು, ಇವು ಜನರ ಕಣ್ಮುಂದೆ ಇರುವುದರಿಂದ ಹೊಸ ಸುದ್ದಿ ವೈರಲ್ ಆಗಿದೆ. ಆದರೆ, ಇದು ಸುಳ್ಳು ಸುದ್ದಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.

ನವದೆಹಲಿ, ಜೂನ್ 8: ಸೋಷಿಯಲ್ ಮೀಡಿಯಾದಲ್ಲಿ ಊಹಾಪೋಹದ ಸುದ್ದಿಗಳು ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಿಂದ ಸೋಷಿಯಲ್ ಮೀಡಿಯಾದಲ್ಲಿ 500 ರೂ ನೋಟು ನಿಷೇಧವಾಗುವ ಸುದ್ದಿ ವೈರಲ್ ಆಗಿ ಹಬ್ಬುತ್ತಿದೆ. ಮುಂದಿನ ವರ್ಷದೊಳಗೆ (2026) 500 ರೂ ಮುಖಬೆಲೆಯ ನೋಟುಗಳನ್ನು ನಿಲ್ಲಿಸಲಾಗುವುದು ಎಂದು ಈ ವೈರಲ್ ಸುದ್ದಿಯಲ್ಲಿ ಹೇಳಲಾಗಿದೆ. ಆದರೆ, ಸರ್ಕಾರದ ಫ್ಯಾಕ್ಟ್ ಚೆಕ್ ವಿಭಾಗವು ಈ ಸುದ್ದಿಯನ್ನು ಅಲ್ಲಗಳೆದಿದೆ.
ಜೂನ್ 2ರಂದು ಯೂಟ್ಯೂಬ್ ವಾಹಿನಿಯೊಂದರಲ್ಲಿ ಈ ಸುದ್ದಿ ಮೊದಲು ಬಿತ್ತರವಾಯಿತು. 2026ರ ಮಾರ್ಚ್ ತಿಂಗಳ ಬಳಿಕ 500 ರೂ ಬ್ಯಾಂಕ್ ನೋಟುಗಳು ಅಸಿಂಧುಗೊಳ್ಳುತ್ತವೆ ಎನ್ನುವುದು ಆ ಸುದ್ದಿ ಹೇಳಿಕೆ. ಇದು ಸಳ್ಳು ಸುದ್ದಿ ಎಂದು ಸರ್ಕಾರದ ಪಿಐಬಿ ಫ್ಯಾಕ್ಟ್ ಚೆಕ್ ಹೇಳಿದೆ.
500 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಆರ್ಬಿಐ ಯಾವ ಪ್ರಕಟಣೆಯನ್ನೂ ನೀಡಿಲ್ಲ. 500 ರೂ ನೋಟುಗಳು ಕಾನೂನು ಪ್ರಕಾರ ಮಾನ್ಯವಾಗಿದೆ. ಅದನ್ನು ಹಿಂಪಡೆಯಲಾಗಿಲ್ಲ. ಇಂಥ ಸುಳ್ಳು ಸುದ್ದಿಯನ್ನು ನಂಬಬೇಡಿ. ಸುದ್ದಿಯನ್ನು ನಂಬುವ ಮುನ್ನ, ಅದು ಅಧಿಕೃತ ಮೂಲಗಳಿಂದ ಬಂದಿದೆಯಾ ಎಂದು ಪರಿಶೀಲಿಸಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಎಕ್ಸ್ ಪೋಸ್ಟ್ವೊಂದರಲ್ಲಿ ತಿಳಿಸಿದೆ.
Is the ₹500 note set to be phased out by 2026? 🤔
A #YouTube video on the YT Channel ‘CAPITAL TV’ (capitaltvind) falsely claims that the RBI will discontinue the circulation of ₹500 notes by March 2026.#PIBFactCheck
✔️@RBI has made NO such announcement.
✔️₹500 notes have… pic.twitter.com/NeJdcc72z2
— PIB Fact Check (@PIBFactCheck) June 3, 2025
2016ರಲ್ಲಿ ಸರ್ಕಾರವು ಆಗ ಚಾಲ್ತಿಯಲ್ಲಿದ್ದ 1,000 ರೂ ಮತ್ತು 500 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿತು. ಅದಾದ ಬಳಿಕ ಚಲಾವಣೆಗೆ ತಂದ 2,000 ರೂ ಮುಖಬೆಲೆ ನೋಟುಗಳನ್ನು 2023ರ ಮೇ ತಿಂಗಳಲ್ಲಿ ಚಲಾವಣೆಯಿಂದ ಹಿಂಪಡೆಯಿತು. ಹೀಗಾಗಿ, ಕಳೆದ ಕೆಲ ದಿನಗಳಿಂದ 500 ರೂ ನೋಟು ನಿಷೇಧದ ಸುದ್ದಿ ಸಹಜವಾಗಿಯೇ ವೈರಲ್ ಆಗಿದೆ.
ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ
ಕಡಿಮೆ ಮುಖಬೆಲೆಯ ನೋಟುಗಳನ್ನು ಚಲಾವಣೆಯಲ್ಲಿ ಇರಿಸಿದರೆ ಸಾಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ವಾರ ಹೇಳಿದ್ದರು. ಇದು 500 ರೂ ಮುಖಬೆಲೆ ನೋಟು ನಿಷೇಧವಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸಲು ಕಾರಣವಾಗಿರಬಹುದು. ಆದರೆ, ಸರ್ಕಾರವು ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿರುವುದರಿಂದ ಜನರು ಆತಂಕ ಪಡುವ ಅವಶ್ಯಕತೆ ಸದ್ಯಕ್ಕಂತೂ ಇಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Sun, 8 June 25




