ಮೇ 28ರಂದು ನೂತನ ಸಂಸದ್ ಭವನ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದ ಸ್ಮರಣಾರ್ಥವಾಗಿ 75 ರೂ ನಾಣ್ಯವನ್ನು (Rs 75 Coin Commemorate) ಬಿಡುಗಡೆ ಮಾಡಿದರು. ಭಾರತದ 75ನೇ ಸ್ವಾತಂತ್ರ್ಯೋತ್ಸವದ ಸ್ಮರಣೆಗಾಗಿ ಈ ನಾಣ್ಯ ತಯಾರಿಸಲಾಗಿದ್ದು, ಸಂಸದ್ ಭವನದ ಉದ್ಘಾಟನೆ ದಿನ ಅನಾವರಣಗೊಂಡಿದೆ. ಈ ವಿಶೇಷ ನಾಣ್ಯವನ್ನು ಮಾರುಕಟ್ಟೆಯಲ್ಲಿ ಚಲಾವಣೆಗೆಂದು ತಯಾರಿಸಲಾಗಿಲ್ಲ ಎಂದು ಹಣಕಾಸ ಸಚಿವಾಲಯವೇ ಸ್ಪಷ್ಟಪಡಿಸಿದೆ. ನಾವು ನಿತ್ಯ ವಹಿವಾಟಿಗೆ ಬಳಸುವ ಸಾಮಾನ್ಯ ನಾಣ್ಯಗಳ ತಯಾರಿಕೆಗೆ ಅ ನಾಣ್ಯದ ಮುಖಬೆಲೆಯ ಹಣ ಖರ್ಚಾಗುತ್ತದೆ. ಅಂದರೆ ಒಂದು 5 ರೂ ನಾಣ್ಯವನ್ನು ತಯಾರಿಸಲು ಹೆಚ್ಚೂಕಡಿಮೆ 5 ರೂ ಖರ್ಚಾಗುತ್ತದೆ. ಕೆಲವೊಮ್ಮೆ ತುಸು ಹೆಚ್ಚಿರಬಹುದು. ಆದರೆ, ವಿಶೇಷ ನಾಣ್ಯಗಳ ತಯಾರಿಕೆಗೆ ಬಹಳಷ್ಟು ಬಾರಿ ತೀರಾ ಹೆಚ್ಚು ವೆಚ್ಚವಾಗುತ್ತದೆ. ಹೀಗಾಗಿ, ಈ ನಾಣ್ಯವನ್ನು ಚಲಾವಣೆಗೆಂದು ಪರಿಗಣಿಸಲಾಗುವುದಿಲ್ಲ.
ನೂತನ ಸಂಸದ್ ಭವನ ಉದ್ಘಾಟನೆಯ ನೆನಪಿಗಾಗಿ ತಯಾರಿಸಲಾಗಿರುವ 75 ರೂ ನಾಣ್ಯವನ್ನು ಬೆಳ್ಳಿ, ತಾಮ್ರ, ನಿಕೆಲ್, ಜಿಂಕ್ ಲೋಹಗಳಿಂದ ತಯಾರಿಸಲಾಗಿದೆ. 35 ಗ್ರಾಮ್ ಆಸುಪಾಸಿನ ತೂಕ ಹಾಗೂ 44 ಮಿಮೀ ವ್ಯಾಸ (Diameter) ಇರುವ ಈ ಕಾಯಿನ್ನಲ್ಲಿ ಶೇ. 50ರಷ್ಟು ಬೆಳ್ಳಿ ಮತ್ತು ಶೇ. 40ರಷ್ಟು ತಾಮ್ರ ಇದೆ. ಇನ್ನುಳಿದ ಭಾಗವು ನಿಕೆಲ್ ಮತ್ತು ಜಿಂಕ್ನಿಂದ ಮಿಶ್ರವಾಗಿದೆ. ಒಂದು ನಾಣ್ಯದ ತಯಾರಿಕೆಗೆ ಕನಿಷ್ಠವೆಂದರೂ 1,300 ರೂ ವೆಚ್ಚವಾಗುತ್ತದೆ ಎಂಬುದು ಆಭರಣ ವ್ಯಾಪಾರಿಗಳ ಅನಿಸಿಕೆ. ಸರ್ಕಾರದಿಂದ ಇನ್ನೂ ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.
ಇದನ್ನೂ ಓದಿ: Rs 75 Coin: 75 ರೂ ನಾಣ್ಯ ಬಿಡುಗಡೆ; ಎಲ್ಲಿ ಸಿಗುತ್ತೆ ಈ ಕಾಯಿನ್? ಏನಿದರ ವಿಶೇಷತೆ? ಇಲ್ಲಿದೆ ಡೀಟೇಲ್ಸ್
1,300 ರೂಗೂ ಹೆಚ್ಚು ಬೆಲೆಯ ಈ 75 ರೂ ವಿಶೇಷ ನಾಣ್ಯವನ್ನು ಸರ್ಕಾರದ ನಾಣ್ಯ ಮುದ್ರಕ ಸಂಸ್ಥೆಗಳ ವೆಬ್ಸೈಟ್ಗೆ ಹೋಗಿ ಖರೀದಿಸಬಹುದು. ಗವರ್ನ್ಮೆಂಟ್ ಮಿಂಟ್ ವೆಬ್ಸೈಟ್ನ ಲಿಂಕ್ ಇಲ್ಲಿದೆ:
ಇಲ್ಲಿ ಎಲ್ಲಾ ರೀತಿಯ ವಿಶೇಷ ನಾಣ್ಯಗಳು, ವಿಶೇಷ ಚಿನ್ನದ ನಾಣ್ಯಗಳು ಇತ್ಯಾದಿಯನ್ನು ಮಾರಲಾಗುತ್ತದೆ. ಅದರ ಬೆಲೆಗಳನ್ನೂ ನಮೂಸಲಾಗಿರುತ್ತದೆ. ಇದೇ ವೆಬ್ಸೈಟ್ನಲ್ಲಿ ಬೇರೆ ಬೇರೆ ವಿಭಾಗದ ಮಿಂಟ್ ವೆಬ್ಸೈಟ್ಗಳ ಲಿಂಕ್ ಇವೆ. ಇಲ್ಲಿಯೂ ಬೇಕಾದರೆ ಹೋಗಿ ಪರಿಶೀಲಿಸಬಹುದು.
ಮೋತಿಲಾಲ್ ನೆಹರೂ ಅವರ 150ನೇ ಜಯಂತಿ ಪ್ರಯುಕ್ತ ತಯಾರಿಸಲಾಗಿದ್ದ ವಿಶೇಷ ನಾಣ್ಯಕ್ಕೆ 10,890 ರೂ ಬೆಲೆ ನಿಗದಿ ಮಾಡಲಾಗಿದೆ. ಅಂತೆಯೇ ಬೇರೆ ವಿಶೇಷ ನಾಣ್ಯಗಳು ಹಾಗೂ ಅವುಗಳ ಬೆಲೆಯ ಪಟ್ಟಿ ಈ ವೆಬ್ಸೈಟ್ನಲ್ಲಿ ನೋಡಬಹುದು. ಆದರೆ, ಈಗ ಹೊಸ ಸಂಸತ್ ಭವನದ ಸ್ಮರಣಾರ್ಥ ಬಿಡುಗಡೆ ಆಗಿರುವ 75 ರೂ ನಾಣ್ಯವನ್ನು ಇನ್ನೂ ಕೂಡ ಈ ವೆಬ್ಸೈಟ್ನ ಪಟ್ಟಿಯಲ್ಲಿ ಇಡಲಾಗಿಲ್ಲ. ಎಷ್ಟಕ್ಕೆ ಈ ನಾಣ್ಯ ಸಿಗುತ್ತೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.