ಡಾಲರ್ ಎದುರು 2 ವರ್ಷದಲ್ಲಿ ಅತಿದೊಡ್ಡ ಜಿಗಿತ ಕಂಡ ರುಪಾಯಿ; ಇತ್ತೀಚಿನ ಕರೆನ್ಸಿ ಹಿನ್ನಡೆಗೆ ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್

Dollar vs Rupee: ನಿನ್ನೆ ಡಾಲರ್ ಎದುರು 87.47 ಇದ್ದ ರುಪಾಯಿ ಮೌಲ್ಯ ಇವತ್ತು 86.63ಕ್ಕೆ ಏರಿದೆ. ಒಂದು ಪ್ರತಿಶತದಷ್ಟು ಮೌಲ್ಯ ವೃದ್ಧಿ ಕಂಡಿದೆ. ಕಳೆದ ಎರಡು ವರ್ಷದಲ್ಲೇ ಒಂದು ದಿನದಲ್ಲಿ ರುಪಾಯಿ ಕಂಡ ಅತಿದೊಡ್ಡ ಜಿಗಿತ ಇದಾಗಿದೆ. ಡಾಲರ್​ಗಳನ್ನು ಮಾರಾಟ ಮಾಡುವ ಮೂಲಕ ರುಪಾಯಿ ಮೌಲ್ಯ ಕುಸಿತವನ್ನು ತಡೆಯುವಲ್ಲಿ ಆರ್​​ಬಿಐ ಯಶಸ್ವಿಯಾಗಿದೆ.

ಡಾಲರ್ ಎದುರು 2 ವರ್ಷದಲ್ಲಿ ಅತಿದೊಡ್ಡ ಜಿಗಿತ ಕಂಡ ರುಪಾಯಿ; ಇತ್ತೀಚಿನ ಕರೆನ್ಸಿ ಹಿನ್ನಡೆಗೆ ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್
ಡಾಲರ್ ಎದುರು ರುಪಾಯಿ

Updated on: Feb 11, 2025 | 7:16 PM

ನವದೆಹಲಿ, ಫೆಬ್ರುವರಿ 11: ಇತ್ತೀಚಿನ ಕೆಲ ದಿನಗಳಿಂದ ಡಾಲರ್ ಎದುರು ಸತತವಾಗಿ ಕುಸಿಯುತ್ತಾ ಬಂದಿರುವ ರುಪಾಯಿ ಕರೆನ್ಸಿ ಇವತ್ತು ಅಚ್ಚರಿ ರೀತಿಯಲ್ಲಿ ಪುಟಿದೆದ್ದಿದೆ. ಡಾಲರ್ ಎದುರು ಒಮ್ಮೆಗೇ ಒಂದು ಪ್ರತಿಶತದಷ್ಟು ಮೌಲ್ಯ ವೃದ್ಧಿಸಿಕೊಂಡಿದೆ. ಎರಡು ವರ್ಷದಲ್ಲೇ ರುಪಾಯಿ ಈ ಪರಿ ಜಂಪ್ ಕಂಡಿರಲಿಲ್ಲ. 2022ರ ನವೆಂಬರ್ ಬಳಿಕ ರುಪಾಯಿಯ ಅತಿ ದೊಡ್ಡ ಜಿಗಿತ ಇದಾಗಿದೆ. ಮಂಗಳವಾರದ ಟ್ರೇಡಿಂಗ್​ನ ಒಂದು ಹಂತದಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ 86.6362ಕ್ಕೆ ಹೋಗಿತ್ತು. ಈಗ ಅದು 86.75ಕ್ಕೆ ಇಳಿದಿದೆ.

ಮಾಮೂಲಿಯ ದಿನಗಳಲ್ಲಾದರೆ ರುಪಾಯಿಯ ಈ ಚೇತರಿಕೆ ಅಚ್ಚರಿ ಮೂಡಿಸದೇ ಹೋಗಬಹುದು. ಆದರೆ, ಏಷ್ಯಾದ ಮತ್ತು ಇತರ ಉದಯೋನ್ಮುಖ ಆರ್ಥಿಕತೆಯ ದೇಶಗಳ ಕರೆನ್ಸಿಗಳು ಡಾಲರ್ ಎದುರು ಘಾಸಿಗೊಳ್ಳುವುದು ಮುಂದುವರಿದೇ ಇದೆ. ಇವುಗಳ ನಡುವೆ ರುಪಾಯಿ ಪುಟಿದೆದ್ದಿರುವುದು ಅಚ್ಚರಿಯ ಸಂಗತಿ.

ಇದನ್ನೂ ಓದಿ: ನೊಂದಾಯಿತ ಸ್ಟಾರ್ಟಪ್​ಗಳ ಸಂಖ್ಯೆ 10 ಲಕ್ಷಕ್ಕೆ ಏರಿಸುವ ಗುರಿ: ಪಿಯೂಶ್ ಗೋಯಲ್

ಡಾಲರ್ ಎದುರು ರುಪಾಯಿಯ ಚೇತರಿಕೆಗೆ ಕಾರಣವಾಗಿರುವುದು ಭಾರತೀಯ ರಿಸರ್ವ್ ಬ್ಯಾಂಕ್ ತೆಗೆದುಕೊಂಡ ಕ್ರಮ. ರುಪಾಯಿ ಮೌಲ್ಯ ಕುಸಿತ ತಡೆಯಲು ಆರ್​ಬಿಐ ನಿನ್ನೆ ಸೋಮವಾರ ದೊಡ್ಡ ಪ್ರಯತ್ನಕ್ಕೆ ಕೈಹಾಕಿತು. ಸ್ಥಳೀಯ ಸ್ಪಾಟ್ ಮಾರ್ಕೆಟ್ ತೆರೆಯುವ ಮುನ್ನ ಆರ್​ಬಿಐ ಬಹಳ ದೊಡ್ಡ ಸಂಖ್ಯೆಯಲ್ಲಿ ಡಾಲರ್ ಕರೆನ್ಸಿ ನೋಟುಗಳನ್ನು ಮಾರಿತು. ಸರ್ಕಾರಿ ಬ್ಯಾಂಕುಗಳ ನೆರವಿನಿಂದ ಆರ್​ಬಿಐ ಈ ಹೆಜ್ಜೆ ಇಟ್ಟಿದ್ದು ರುಪಾಯಿಯ ಕುಸಿತ ತಡೆಯಲು ಸಾಧ್ಯವಾಯಿತು ಎನ್ನಲಾಗಿದೆ.

ಹಿಂದಿನ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ರುಪಾಯಿ ಕುಸಿತ ತಡೆಯಲು ಈ ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದುಂಟು. ಈಗಿನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಮಾರುಕಟ್ಟೆ ಪರಿಣಾಮಕ್ಕೆ ಬಿಟ್ಟುಬಿಟ್ಟಿದ್ದಂತಿತ್ತು. ಡೊನಾಲ್ಡ್ ಟ್ರಂಪ್ ಅವರು ಆಮದು ಸುಂಕ ಹೇರಿಕೆಯ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗುತ್ತಿರುವಂತೆಯೇ, ವಿಶ್ವದ ಹಲವು ಕರೆನ್ಸಿಗಳು ಡಾಲರ್ ಎದುರು ಕುಂಠಿತಗೊಂಡವು. ಇದರಲ್ಲಿ ರುಪಾಯಿಯೂ ಇದೆ. ರುಪಾಯಿ ಮೌಲ್ಯ ತೀರಾ ವೇಗವಾಗಿ ಕುಸಿಯುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಆರ್​ಬಿಐ ಮಧ್ಯಪ್ರವೇಶಿಸುವುದು ಅನಿವಾರ್ಯವಾಗಿರಬಹುದು.

ಇದನ್ನೂ ಓದಿ: Elon Musk vs Sam Altman: ನನ್ನ ನೀನು ‘ಕೊಳ್ಳ’ಲಾರೆ… ಎಕ್ಸ್ ಮ್ಯಾನ್ vs ಆಲ್ಟ್​ಮ್ಯಾನ್ ‘ಓಪನ್’ ವಾರ್; ಎಕ್ಸ್ ಹಿಂದಿಕ್ಕಿದ ಚ್ಯಾಟ್​ಜಿಪಿಟಿ

ರುಪಾಯಿ ಕುಸಿತಕ್ಕೆ ಕಾರಣ ತಿಳಿಸಿದ ನಿರ್ಮಲಾ ಸೀತಾರಾಮನ್

ರುಪಾಯಿ ಮೌಲ್ಯದ ಇತ್ತೀಚಿನ ಕುಸಿತಕ್ಕೆ ಈ ಕರೆನ್ಸಿಯ ಲೋಪ ಕಾರಣವಲ್ಲ. ಡಾಲರ್ ಪ್ರಬಲಗೊಳ್ಳುತ್ತಿರುವುದು ಕಾರಣ ಎಂದು ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಂಸತ್​ನಲ್ಲಿ ಇಂದು ಅವರು ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಅವರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ ಈ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ