ನೊಂದಾಯಿತ ಸ್ಟಾರ್ಟಪ್ಗಳ ಸಂಖ್ಯೆ 10 ಲಕ್ಷಕ್ಕೆ ಏರಿಸುವ ಗುರಿ: ಪಿಯೂಶ್ ಗೋಯಲ್
Piyush Goyal speaks during India-Israel business meet: ಸರ್ಕಾರದೊಂದಿಗೆ ನೊಂದಾಯಿತವಾದ ಸ್ಟಾರ್ಟಪ್ಗಳ ಸಂಖ್ಯೆ 1,57,000 ಇದ್ದು, ಅದನ್ನು 10 ಲಕ್ಷಕ್ಕೆ ಏರಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಕೇಂದ್ರ ಸಚಿವ ಪೀಯೂಶ್ ಗೋಯಲ್. 2016ರಲ್ಲಿ ದೇಶದಲ್ಲಿ 450 ನವೋದ್ಯಮಗಳಿದ್ದವು. ಆ ವರ್ಷ ಆರಂಭವಾದ ಸ್ಟಾರ್ಟಪ್ ಇಂಡಿಯಾ ಉಪಕ್ರಮದಿಂದಾಗಿ ಇವತ್ತು ಒಂದೂವರೆ ಲಕ್ಷ ಸ್ಟಾರ್ಟಪ್ಗಳಾಗಿವೆ ಎಂದಿದ್ದಾರೆ ಗೋಯಲ್.

ನವದೆಹಲಿ, ಫೆಬ್ರುವರಿ 11: ಸರ್ಕಾರಿ ನೊಂದಾಯಿತ ನವೋದ್ಯಮಗಳ ಸಂಖ್ಯೆ ಮುಂದಿನ ಹತ್ತು ವರ್ಷದಲ್ಲಿ ಹತ್ತು ಲಕ್ಷಕ್ಕೆ ಏರಬಹುದು ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯುಶ್ ಗೋಯಲ್ ಆಶಯ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಉದ್ದಿಮೆದಾರರ ಬೆಳವಣಿಗೆಗೆ ಪೂರಕವಾಗುವ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದ್ದರ ಫಲವಾಗಿ ಈ ಹತ್ತು ಲಕ್ಷ ಸ್ಟಾರ್ಟಪ್ಗಳ ಸ್ಥಾಪನೆಯ ಕನಸು ಸಾಕಾರಗೊಳ್ಳಬಹುದು ಎಂಬುದು ಅವರ ವಿಶ್ವಾಸ.
2016ರಲ್ಲಿ ನೊಂದಾಯಿತ ಸ್ಟಾರ್ಟಪ್ಗಳ ಸಂಖ್ಯೆ 450 ಮಾತ್ರ ಇತ್ತು. 2016ರ ಜನವರಿ 16ರಂದು ಸರ್ಕಾರವು ಸ್ಟಾರ್ಟಪ್ ಇಂಡಿಯಾ ಯೋಜನೆ ಆರಂಭಿಸಿತು. ದೇಶದಲ್ಲಿ ಉದ್ಯಮ ವಲಯದಲ್ಲಿ ನಾವೀನ್ಯತೆಗೆ ಆದ್ಯತೆ ಕೊಡಲು ಮತ್ತು ಸ್ಟಾರ್ಟಪ್ಗಳಿಗೆ ಉತ್ತೇಜಿಸಲು ಸರ್ಕಾರ ಪ್ರಬಲ ಸ್ಟಾರ್ಟಪ್ ಇಕೋಸಿಸ್ಟಂ ನಿರ್ಮಿಸಲು ಆರಂಭಿಸಿತು. ಇದರ ಫಲವಾಗಿ ಇವತ್ತು ನೊಂದಾಯಿತ ಸ್ಟಾರ್ಟಪ್ಗಳ ಸಂಖ್ಯೆ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚಿದೆ. ಇಕೋಸಿಸ್ಟಂ ಪ್ರಬಲಗೊಳ್ಳುತ್ತಿರುವಂತೆಯೇ ದೇಶದಲ್ಲಿ ಮತ್ತಷ್ಟು ಸ್ಟಾರ್ಟಪ್ಗಳು ಗಣನೀಯ ಸಂಖ್ಯೆಯಲ್ಲಿ ಆರಂಭವಾಗುವ ಸಾಧ್ಯತೆ ಇಲ್ಲದಿಲ್ಲ.
ಭಾರತ ಇಸ್ರೇಲ್ ಬಿಸಿನೆಸ್ ಫೋರಂ ಸಭೆಯಲ್ಲಿ ಮಾತನಾಡುತ್ತಿದ್ದ ಸಚಿವ ಪೀಯೂಶ್ ಗೋಯಲ್, ಮುಂದಿನ ಹತ್ತು ವರ್ಷದಲ್ಲಿ 10 ಲಕ್ಷ ಸ್ಟಾರ್ಟಪ್ಗಳ ಗುರಿಯನ್ನು ತೆರೆದಿಟ್ಟಿದ್ದಾರೆ.
‘9 ವರ್ಷಗಳ ಹಿಂದೆ ನೊಂದಾಯಿತ ಸ್ಟಾರ್ಟಪ್ಗಳ ಸಂಖ್ಯೆ 450 ಇತ್ತು. ಈಗ 1,57,000 ಆಗಿದೆ. ವಿಶ್ವದಲ್ಲಿ ಮೂರನೇ ಅತಿದೊಡ್ಡ ಸ್ಟಾರ್ಟಪ್ ಇಕೋಸಿಸ್ಟಂ ಹೊಂದಿದ್ದೇವೆ. ಮುಂದಿನ 10 ವರ್ಷದಲ್ಲಿ ಸ್ಟಾರ್ಟಪ್ಗಳ ಸಂಖ್ಯೆಯನ್ನು 10 ಲಕ್ಷಕ್ಕೆ ತೆಗೆದುಕೊಂಡು ಹೋಗುವ ಭರವಸೆಯಲ್ಲಿ ಇದ್ದೇವೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಇಂದಿನಿಂದ 3 ದಿನ ಇನ್ವೆಸ್ಟ್ ಕರ್ನಾಟಕ ಸಮ್ಮಿಟ್: ಈ ಬಾರಿಯ ವಿಶೇಷವೇನು? ಇಲ್ಲಿದೆ ವಿವರ
ಭಾರತ ಇಸ್ರೇಲ್ ಬ್ಯುಸಿನೆಸ್ ಫೋರಂ ಮತ್ತು ಭಾರತ ಇಸ್ರೇಲ್ ಸಿಇಒ ಫೋರಂ ಸಭೆಗಳಲ್ಲಿ ಪಾಲ್ಗೊಳ್ಳಲು ಇಸ್ರೇಲ್ನ ನಿಯೋಗವೊಂದು ಬಂದಿದೆ. ಇಸ್ರೇಲ್ನ ಆರ್ಥಿಕ ಮತ್ತು ಉದ್ಯಮ ಸಚಿವ ನಿರ್ ಎಂ ಬರ್ಕತ್ (Nir M Barkat) ನೇತೃತ್ವದ ಉನ್ನತ ಮಟ್ಟದ ಬಿಸಿನೆಸ್ ನಿಯೋಗ ಇದಾಗಿದೆ. ಭಾರತ ಮತ್ತು ಇಸ್ರೇಲ್ನ ನಿಯೋಗಗಳು ಎರಡೂ ದೇಶಗಳ ನಡುವೆ ಹೂಡಿಕೆ ಮತ್ತು ವ್ಯಾಪಾರಗಳಿಗೆ ಉತ್ತೇಜನ ನೀಡಬಹುದಾದ ಮಾರ್ಗಗಳ ಕುರಿತು ಚರ್ಚೆಗಳನ್ನು ನಡೆಸುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ