Elon Musk vs Sam Altman: ನನ್ನ ನೀನು ‘ಕೊಳ್ಳ’ಲಾರೆ… ಎಕ್ಸ್ ಮ್ಯಾನ್ vs ಆಲ್ಟ್ಮ್ಯಾನ್ ‘ಓಪನ್’ ವಾರ್; ಎಕ್ಸ್ ಹಿಂದಿಕ್ಕಿದ ಚ್ಯಾಟ್ಜಿಪಿಟಿ
X vs OpenAI: ಓಪನ್ಎಐ ಸಂಸ್ಥೆಯನ್ನು 97.4 ಬಿಲಿಯನ್ ಡಾಲರ್ಗೆ ಖರೀದಿಸುವುದಾಗಿ ಇಲಾನ್ ಮಸ್ಕ್ ನೇತೃತ್ವದಲ್ಲಿ ಹೂಡಿಕೆದಾರರ ಗುಂಪೊಂದು ಓಪನ್ ಆಫರ್ ಕೊಟ್ಟಿದೆ. ಈ ಆಫರ್ ಅನ್ನು ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ ತಣ್ಣಗೆ ತಿರಸ್ಕರಿಸಿದ್ದಾರೆ. ಬದಲಾಗಿ, ತಾನೆಯೇ ಟ್ವಿಟ್ಟರ್ (ಎಕ್ಸ್) ಅನ್ನು 9.74 ಬಿಲಿಯನ್ ಡಾಲರ್ಗೆ ಖರೀದಿಸುವುದಾಗಿ ಪ್ರತಿ ಆಫರ್ ನೀಡಿದ್ದಾರೆ. ಇದಕ್ಕೆ ಇಲಾನ್ಸ್ ಮಸ್ಕ್ ‘ಸ್ವಿಂಡ್ಲರ್’ ಎಂದು ಪ್ರತಿಕ್ರಿಯಿಸಿದ್ದಾರೆ.

ವಾಷಿಂಗ್ಟನ್, ಫೆಬ್ರುವರಿ 11: ಓಪನ್ಎಐನಿಂದ ಚ್ಯಾಟ್ಜಿಪಿಟಿ ಆರಂಭವಾದಾಗಿನಿಂದ ಇಲಾನ್ ಮಸ್ಕ್ ಮತ್ತು ಸ್ಯಾಮ್ ಆಲ್ಟ್ಮ್ಯಾನ್ ನಡುವಿನ ಆನ್ಲೈನ್ ವಾಗ್ಯುದ್ಧ ಹೆಸರುವಾಸಿಯಾಗಿದೆ. ಇಲಾನ್ ಮಸ್ಕ್ ಸಾಕಷ್ಟು ಬಾರಿ ಓಪನ್ ಎಐ ಕಂಪನಿ ಹಾಗೂ ಅದರ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ ವಿರುದ್ಧ ಕಟುವಾಗಿ ಮಾತನಾಡಿದ್ದಿದೆ. ಇದೀಗ ಇಲಾನ್ ಮಸ್ಕ್ ನೇತೃತ್ವದಲ್ಲಿ ಹೂಡಿಕೆದಾರರ ಗುಂಪೊದು ಓಪನ್ಎಐ ಅನ್ನು 97.4 ಬಿಲಿಯನ್ ಡಾಲರ್ಗೆ ಖರೀದಿಸುವುದಾಗಿ ಆಫರ್ ಮಾಡಿರುವುದು ತಿಳಿದುಬಂದಿದೆ.
ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ ಅವರು ಎಕ್ಸ್ನಲ್ಲಿ ಈ ಬಗ್ಗೆ ನೇರವಾಗಿ ಸ್ಪಂದಿಸಿದ್ದಾರೆ. ತಾವು ಬಯಸಿದರೆ ಟ್ವಿಟ್ಟರ್ ಅನ್ನು 9.74 ಬಿಲಿಯನ್ ಡಾಲರ್ಗೆ ಖರೀದಿಸುವುದಾಗಿ ನೇರವಾಗಿ ಇಲಾನ್ ಮಸ್ಕ್ ಅವರಿಗೆ ಸ್ಯಾಮ್ ಸವಾಲು ಹಾಕಿದ್ದಾರೆ. ಇದಕ್ಕೆ ಇಲಾನ್ ಮಸ್ಕ್ ಅಷ್ಟೇ ಖಾರದ ಪ್ರತಿಕ್ರಿಯೆ ನೀಡಿದ್ದಾರೆ. ‘ಸ್ವಿಂಡ್ಲರ್’ ಎಂದು ಏಕಪದದಲ್ಲಿ ಉತ್ತರ ಕೊಟ್ಟಿದ್ದಾರೆ. ಇಲ್ಲಿ ಸ್ವಿಂಡ್ಲರ್ ಎಂದರೆ ವಂಚಕ ಎಂದರ್ಥ.
no thank you but we will buy twitter for $9.74 billion if you want
— Sam Altman (@sama) February 10, 2025
ಇದನ್ನೂ ಓದಿ: ಭಾರತದ ಆಧಾರ್ ಪ್ರಾಜೆಕ್ಟ್ ಟ್ರೋಲ್ ಮಾಡಿದ ಹಾಟ್ಮೇಲ್ ಸಂಸ್ಥಾಪಕ ಸಬೀರ್ ಭಾಟಿಯಾ
ಸ್ಯಾಮ್ ಆಲ್ಟ್ಮ್ಯಾನ್ರನ್ನು ಮಸ್ಕ್ ವಂಚಕ ಅಂದಿದ್ಯಾಕೆ?
ಓಪನ್ಎಐ ಸಂಸ್ಥೆಗೆ ಮೂಲನಿಧಿಗಳನ್ನು ಕೊಟ್ಟವರಲ್ಲಿ, ಅಂದರೆ ಸೀಡಿಂಗ್ ಫಂಡ್ ನೀಡಿದವರಲ್ಲಿ ಇಲಾನ್ ಮಸ್ಕ್ ಕೂಡ ಒಬ್ಬರು. ಸೀಡಿಂಗ್ ಫಂಡ್ ಎಂದರೆ ಒಂದು ಸಂಸ್ಥೆಯ ಆರಂಭಿಕ ಹಂತದಲ್ಲಿ ನೀಡಲಾಗುವ ಬಂಡವಾಳ. ಇಲಾನ್ ಮಸ್ಕ್ ಹೇಳುವ ಪ್ರಕಾರ ಓಪನ್ಎಐ ಒಂದು ನಾನ್ ಪ್ರಾಫಿಟ್ ಸಂಸ್ಥೆ. ಅಂದರೆ ಲಾಭಾಪೇಕ್ಷೆ ಇಲ್ಲದ ಸಂಸ್ಥೆ. ಆದರೆ, ಚ್ಯಾಟ್ಜಿಪಿಟಿ ಇತ್ಯಾದಿ ಹೊರತಂದು ಅದು ಕಮರ್ಷಿಯಲ್ ಆಗಿದೆ. ಎಐ ಅನ್ನು ಮನುಕುಲದ ಒಳಿತನ್ನು ಬಿಟ್ಟು ಲಾಭಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಇಲಾನ್ ಮಸ್ಕ್ ಹಾಗು ಕೆಲವರು ಆರೋಪಿಸುತ್ತಿದ್ದಾರೆ.
ಓಪನ್ಎಐ ಸ್ಥಾಪನೆಯ ಮೂಲ ಉದ್ದೇಶದ ಹಾದಿ ಬಿಟ್ಟು ಹೋಗಲಾಗಿದೆ ಎನ್ನುವ ಕಾರಣಕ್ಕೆ ಸ್ಯಾಮ್ ಆಲ್ಟ್ಮ್ಯಾನ್ ಅವರನ್ನು ಇಲಾನ್ ಮಸ್ಕ್ ಸ್ವಿಂಡ್ಲರ್ ಅಥವಾ ವಂಚಕ ಎಂದು ಕರೆದಿರಬಹುದು.
ಇದನ್ನೂ ಓದಿ: India AI: ಪ್ಯಾರಿಸ್ನಲ್ಲಿ ಎಐ ಆ್ಯಕ್ಷನ್ ಸಮಿಟ್ 2025: ಭಾರತದಿಂದ ‘ಅಭಿವೃದ್ಧಿಗೆ ದತ್ತಾಂಶ’
ಎಕ್ಸ್ ಅನ್ನು ಹಿಂದಿಕ್ಕಿದ ಚ್ಯಾಟ್ಜಿಪಿಟಿ
ಇದೇ ವೇಳೆ, ವಿಶ್ವದ ಟಾಪ್ ವೆಬ್ಸೈಟ್ಗಳ ಪಟ್ಟಿಯಲ್ಲಿ ಎಕ್ಸ್ ಅನ್ನು ಚ್ಯಾಟ್ಜಿಪಿಟಿ ಹಿಂದಿಕ್ಕಿದೆ. ಚ್ಯಾಟ್ಜಿಪಿಟಿ 6ನೇ ಸ್ಥಾನಕ್ಕೆ ಏರಿದೆ. ಎಕ್ಸ್ 7ನೇ ಸ್ಥಾನಕ್ಕೆ ಕುಸಿದಿದೆ. ಸಿಮಿಲರ್ ವೆಬ್ ಖಾತೆಯಲ್ಲಿ ಟಾಪ್-10 ವೆಬ್ಸೈಟ್ಗಳ ಪಟ್ಟಿ ಇದ್ದ ಪೋಸ್ಟ್ವೊಂದನ್ನು ಸ್ಯಾಮ್ ಆಲ್ಟ್ಮ್ಯಾನ್ ಹಂಚಿಕೊಂಡಿದ್ದಾರೆ.
man, still a long way to go to run down google 🥺 https://t.co/MdD3as1lIU
— Sam Altman (@sama) February 9, 2025
ಈ ಪಟ್ಟಿಯಲ್ಲಿ ಗೂಗಲ್ ಅಗ್ರಸ್ಥಾನದಲ್ಲಿದೆ. ಶೇ. 29.21ರಷ್ಟು ವೆಬ್ ಟ್ರಾಫಿಕ್ ಗೂಗಲ್ಗೆ ಹೋಗುತ್ತಿದೆ. ಗೂಗಲ್ ಮತ್ತು ಯೂಟ್ಯೂಬ್ ಸೇರಿಸಿದರೆ ಅರ್ಧದಷ್ಟು ಟ್ರಾಫಿಕ್ನ ಪಾಲು ಅವುಗಳಿಗೆ ಸಿಗುತ್ತದೆ. ಚ್ಯಾಟ್ಜಿಪಿಟಿಗೆ ಸಿಗುತ್ತಿರುವ ಟ್ರಾಫಿಕ್ ಶೇ. 2.44 ಇದೆ. ಎಕ್ಸ್ ಶೇ. 1.92ರಷ್ಟು ಟ್ರಾಫಿಕ್ ಪಡೆಯುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ