ನವದೆಹಲಿ, ಸೆಪ್ಟೆಂಬರ್ 7: ಡಾಲರ್ ಎದುರು ರುಪಾಯಿ ಮೌಲ್ಯ (Rupee vs Dollar) ಇನ್ನಷ್ಟು ಕುಸಿದಿದೆ. ಫಾರೆಕ್ಸ್ ಮಾರುಕಟ್ಟೆಯಲ್ಲಿ ನಿನ್ನೆ ಬುಧವಾರ ಸೆಪ್ಟೆಂಬರ್ 6ರಂದು ಡಾಲರ್ ಎದುರು ರುಪಾಯಿ ಮೌಲ್ಯ 10 ಪೈಸೆ ಕುಸಿದಿದೆ. ಇದರೊಂದಿಗೆ ಪ್ರತೀ ಡಾಲರ್ಗೆ 83.14 ರುಪಾಯಿ ಆಗಿದೆ. ಇದು ಡಾಲರ್ ಎದುರು ರುಪಾಯಿಯ ಅತ್ಯಂತ ದುರ್ಬಲ ಮಟ್ಟವಾಗಿದೆ. ಕಳೆದ ತಿಂಗಳು, 2023ರ ಆಗಸ್ಟ್ 21ರಂದು ರುಪಾಯಿ ಮೌಲ್ಯ 83.13 ಮಟ್ಟಕ್ಕೆ ಹೋಗಿತ್ತು. ಅದು ಸಾರ್ವಕಾಲಿಕ ಕನಿಷ್ಠ ಮಟ್ಟವೆನಿಸಿತ್ತು. ನಿನ್ನೆ ಆ ಮಟ್ಟಕ್ಕಿಂತಲೂ ಕೆಳಗೆ ಕುಸಿದಿದೆ. ಮೊನ್ನೆ (ಸೆ. 5) ಕೂಡ 33 ಪೈಸೆಯಷ್ಟು ಕುಸಿತವಾಗಿತ್ತು.
ಡಾಲರ್ ಬಲವೃದ್ಧಿ: ರುಪಾಯಿ ಕುಸಿಯಲು ಪ್ರಮುಖವಾಗಿ ಕಾರಣವಾಗಿರುವುದು ಡಾಲರ್ನ ಮೌಲ್ಯವೃದ್ಧಿ. ವಿಶ್ವದ ಪ್ರಮುಖ ಅಂತಾರಾಷ್ಟ್ರೀಯ ಕರೆನ್ಸಿಯಾದ ಡಾಲರ್ ಕಳೆದ 6 ತಿಂಗಳಲ್ಲೇ ಗರಿಷ್ಠ ಬಲ ಪಡೆದುಕೊಂಡಿದೆ. 104 ಇದ್ದ ಡಾಲರ್ ಇಂಡೆಕ್ಸ್ ನಿನ್ನೆ 104.78ಕ್ಕೆ ಹೋಗಿದೆ. ಇಂದು (ಸೆ. 7) ಇದು ಇನ್ನಷ್ಟು ಕುಸಿದು 104.88ಕ್ಕೆ ಕುಸಿದಿದೆ.
ಇದನ್ನೂ ಓದಿ: ಸರ್ಕಾರಿ ನೌಕರರು ಷೇರು ವಹಿವಾಟು ನಡೆಸಬಹುದೇ? ನಿಯಮಗಳು ಏನು ಹೇಳುತ್ತವೆ?
ಅಮೆರಿಕದ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರ ಏರಿಸುವ ಸಂಭವದಿಂದಲೂ ಅಲ್ಲಿನ ಸರ್ಕಾರಿ ಬಾಂಡ್ಗಳಿಗೆ ಬೇಡಿಕೆ ಹೆಚ್ಚಾಗಿರುವುದೂ ಒಂದು ಕಾರಣ.
ಕಚ್ಛಾ ತೈಲ ಬೆಲೆ ಹೆಚ್ಚಳ: ಜಾಗತಿಕ ಕಚ್ಚಾ ತೈಲ ಬೆಲೆ ಹೆಚ್ಚಳವೂ ರುಪಾಯಿ ಮೇಲೆ ಪರಿಣಾಮ ಬೀರಿದೆ. ತೈಲ ಬೆಲೆ 90 ಡಾಲರ್ ಮುಟ್ಟಿದ್ದು ಭಾರತದ ವ್ಯಾಪಾರ ಕೊರತೆ ಅಥವಾ ಟ್ರೇಡ್ ಡೆಫಿಸಿಟ್ ಅನ್ನು ಹೆಚ್ಚಿಸಿದೆ. ಆಮದು ಹೆಚ್ಚಾದ್ದರಿಂದ ಡಾಲರ್ ಬೇಡಿಕೆಯೂ ಹೆಚ್ಚಾಗಿದೆ.
ಇದನ್ನೂ ಓದಿ: ಇಂಡಿಯಾ ಹೆಸರು ಭಾರತ್ ಆಗಿ ಬದಲಾಯಿಸಲು 14,000 ಕೋಟಿ ರೂ ವೆಚ್ಚ? ಇದ್ಯಾವ ಲೆಕ್ಕಾಚಾರ?
ಹೊರಹೋದ ಬಂಡವಾಳ: ಫಾರೀನ್ ಪೋರ್ಟ್ಫೋಲಿಯೋ ಇನ್ವೆಸ್ಟರ್ಗಳು (ಎಫ್ಪಿಐ) ಭಾರತದ ಮಾರುಕಟ್ಟೆಯಿಂದ ಬಂಡವಾಳ ಹಿಂತೆಗೆದುಕೊಂಡ ಪ್ರಮಾಣ ಹೆಚ್ಚಾಗಿದೆ. ಸೆಪ್ಟೆಂಬರ್ 4 ಮತ್ತು 5ರಂದು ಎರಡು ದಿನ ಷೇರುಮಾರುಕಟ್ಟೆಗಳಿಂದ 5,000 ಕೋಟಿ ರೂನಷ್ಟು ಎಫ್ಪಿಐಗಳು ಹೂಡಿಕೆ ಹಿಂಪಡೆದಿವೆ.
ಇತರ ಏಷ್ಯನ್ ಕರೆನ್ಸಿಗಳು ದುರ್ಬಲ: ಅಮೆರಿಕದ ಡಾಲರ್ ಎದುರು ಕುಸಿದಿರುವುದು ರುಪಾಯಿ ಮಾತ್ರವಲ್ಲ, ವಿಶ್ವದ ಇತರ ಬಹುತೇಕ ಕರೆನ್ಸಿಗಳು ಹಿನ್ನಡೆ ಅನುಭವಿಸಿವೆ. ಚೀನಾ ಯುವಾನ್ ಕರೆನ್ಸಿ ಡಾಲರ್ ಎದುರು 7.32ಕ್ಕೆ ಕುಸಿದಿದೆ. ಇದೂ ಕೂಡ ರುಪಾಯಿ ಮೌಲ್ಯ ಕಡಿಮೆ ಆಗಲು ಕಾರಣವಾಗಿದೆ.