ರಷ್ಯಾ- ಉಕ್ರೇನ್ ಬಿಕ್ಕಟ್ಟು (Russia- Ukraine Crisis) ಏಳನೇ ದಿನ ಪ್ರವೇಶಿಸಿದ ಹಿನ್ನೆಲೆಯಲ್ಲಿ ಮಾರ್ಚ್ 2ನೇ ತಾರೀಕಿನ ಬುಧವಾರದಂದು ದೇಶೀಯ ಈಕ್ವಿಟಿಗಳು ಇಳಿಕೆ ಕಂಡವು. ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ಗೆ 110 ಯುಎಸ್ಡಿ ದಾಟಿದ್ದು, ಇದರ ಜತೆಗೆ ಜಾಗತಿಕ ಅಂಶಗಳು ಕೂಡ ಮಾರುಕಟ್ಟೆ ಭಾವನೆಗಳ ಮೇಲೆ ಪ್ರಭಾವ ಬೀರಿತು. ಅಂದಹಾಗೆ ಇಂಟ್ರಾಡೇಯಲ್ಲಿ ಎಸ್ ಅಂಡ್ ಪಿ ಬಿಎಸ್ಇ ಸೆನ್ಸೆಕ್ಸ್ 1200 ಪಾಯಿಂಟ್ಸ್ ನೆಲ ಕಚ್ಚಿತು. ಆದರೆ ಯಾವಾಗ ರಷ್ಯಾವು ಬುಧವಾರ ರಾತ್ರಿ ಮತ್ತೆ ಮಾತುಕತೆ ಪುನರಾರಂಭಿಸಲು ಸಿದ್ಧ ಎಂದು ಹೇಳಿತೋ ಆಗ ನಷ್ಟದಿಂದ ಚೇತರಿಕೆ ಕಂಡಿತು. ಬುಧವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ 778 ಪಾಯಿಂಟ್ಸ್ ಅಥವಾ ಶೇ 1.38ರಷ್ಟು ಇಳಿಕೆ ಕಂಡು, 55,469 ಪಾಯಿಂಟ್ಸ್ನಲ್ಲಿ ವಹಿವಾಟು ಮುಗಿಸಿತು. ನಿಫ್ಟಿ-50 ಸೂಚ್ಯಂಕ ಕೂಡ ದಿನದ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿತು. ನಿಫ್ಟಿ-50 ಇಂಟ್ರಾಡೇಯಲ್ಲಿ 16,479 ಪಾಯಿಂಟ್ಸ್ ಮುಟ್ಟಿತ್ತು. ಅಲ್ಲಿಂದ ದಿನಾಂತ್ಯಕ್ಕೆ 16,606 ಪಾಯಿಂಟ್ಸ್ನಲ್ಲಿ ವ್ಯವಹಾರ ಮುಗಿಸಿತು. ಆ ಮೂಲಕ ದಿನದ ಕೊನೆಗೆ 188 ಪಾಯಿಂಟ್ಸ್ ಇಳಿಕೆಯಲ್ಲಿ ವ್ಯವಹಾರ ಕೊನೆಗೊಳಿಸಿತು.
ಲೋಹ ಮತ್ತು ಇಂಧನಕ್ಕೆ ಸಂಬಂಧಿಸಿದ ಸ್ಟಾಕ್ಗಳು ಸೂಚ್ಯಂಕಗಳ ನಷ್ಟವನ್ನು ಕಡಿಮೆ ಮಾಡಲು ನೆರವಾದವು. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ತಲಾ ಶೇ 0.1ರಷ್ಟು ಇಳಿಕೆ ಕಂಡವು. ವಲಯವಾರು ನಿಫ್ಟಿ ಲೋಹ ಸೂಚ್ಯಂಕವು ಟಾಪ್ ಗೇಯ್ನರ್ ಆಯಿತು. ಇನ್ನು ನಿಫ್ಟಿ ಆವಾಹನ ಸೂಚ್ಯಂಕ ಶೇ 3ರಷ್ಟು ಇಳಿದರೆ, ನಿಪ್ಟಿ ಬ್ಯಾಂಕ್, ಹಣಕಾಸು ಸೇವೆಗಳು ಮತ್ತು ಫಾರ್ಮಾ ಸೂಚ್ಯಂಕಗಳು ತಲಾ ಶೇ 2ರಷ್ಟು ಕುಸಿದವು.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಕೋಲ್ ಇಂಡಿಯಾ ಶೇ 8.99
ಎಚ್ಡಿಎಫ್ಸಿ ಲೈಫ್ ಶೇ 7.19
ಎಸ್ಬಿಐ ಲೈಫ್ ಇನ್ಷೂರೆನ್ಸ್ ಶೇ 5.75
ಟಾಟಾ ಸ್ಟೀಲ್ ಶೇ 5.62
ಹಿಂಡಾಲ್ಕೋ ಶೇ 4.59
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಮಾರುತಿ ಸುಜುಕಿ ಶೇ -6.01
ಡಾ. ರೆಡ್ಡೀಸ್ ಲ್ಯಾಬ್ಸ್ ಶೇ -5.17
ಏಷ್ಯನ್ ಪೇಂಟ್ಸ್ ಶೇ -4.59
ಬಜಾಜ್ ಆಟೋ ಶೇ -4.48
ಹೀರೋ ಮೋಟೋಕಾರ್ಪ್ ಶೇ -4.30
ಇದನ್ನೂ ಓದಿ: Oil Price: ಜಾಗತಿಕ ತೈಲ ಬೆಲೆ 8 ವರ್ಷಗಳ ಗರಿಷ್ಠ ಮಟ್ಟಕ್ಕೆ; ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಗೆ ಸಿದ್ಧರಾಗಿ ಮಹಾಜನರೇ