Russia- Ukraine War: ಉಕ್ರೇನ್ ಜೊತೆ ಮತ್ತೆ ಮಾತುಕತೆಗೆ ಸಿದ್ಧ ಎಂದ ರಷ್ಯಾ; 6 ಹೊಸ ಬೆಳವಣಿಗೆಗಳು ಹೀಗಿವೆ
ಉಕ್ರೇನ್ ಜೊತೆ ಮಾತುಕತೆ ಮುಂದುವರಿಸಲು ಸಿದ್ಧ ಎಂದು ರಷ್ಯಾ ಹೇಳಿದೆ. ಮೊದಲ ಸುತ್ತಿನ ಮಾತುಕತೆಗಳು ಸ್ಪಷ್ಟವಾದ ಫಲಿತಾಂಶಗಳನ್ನು ನೀಡಲಿಲ್ಲ. ಹೀಗಾಗಿ, ಮತ್ತೊಮ್ಮೆ ಸಂಧಾನದ ಮಾತುಕತೆ ನಡೆಸಲು ಎರಡೂ ರಾಷ್ಟ್ರಗಳು ಮುಂದಾಗಿವೆ.
ನವದೆಹಲಿ: ಉಕ್ರೇನ್ ಮೇಲೆ ದಂಡೆತ್ತಿ ಹೋಗಿರುವ ರಷ್ಯಾದಿಂದಾಗಿ ಕರ್ನಾಟಕದ ಓರ್ವ ವಿದ್ಯಾರ್ಥಿ ಸೇರಿದಂತೆ ಉಕ್ರೇನ್ನಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಉಕ್ರೇನ್ನಲ್ಲಿ ಉಂಟಾಗಿರುವ ಸಂಘರ್ಷದಿಂದ ಪ್ರಾಣಭಯ ಹೆಚ್ಚಾಗಿದೆ. ಈಗಾಗಲೇ ಮೊದಲ ಸುತ್ತಿನ ಮಾತುಕತೆ ನಡೆಸಿರುವ ಉಕ್ರೇನ್ ಮತ್ತು ರಷ್ಯಾ (Ukraine and Russia) ಯುದ್ಧ ನಿಲ್ಲಿಸುವ ವಿಚಾರದಲ್ಲಿ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಇಂದು 2ನೇ ಸುತ್ತಿನ ಮಾತುಕತೆ ನಡೆಯಲಿದೆ. ಇದರ ನಡುವೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನ ಯುದ್ಧಭೂಮಿಯಲ್ಲಿ ಗೆಲುವು ಸಾಧಿಸಿದರೂ ಅದಕ್ಕೆ ಪ್ರತಿಯಾಗಿ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ರಷ್ಯಾ ಖಾರ್ಕಿವ್, ಕೀವ್ ಮತ್ತು ಇತರ ಉಕ್ರೇನಿಯನ್ ನಗರಗಳಲ್ಲಿ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಯುದ್ಧ ಪ್ರಾರಂಭಿಸಿದೆ. ಹಾಗೇ, ರಷ್ಯಾದ ದಾಳಿಗೆ ಪ್ರತಿಯಾಗಿ ದಾಳಿ ನಡೆಸಿರುವ ಉಕ್ರೇನ್ ತನ್ನ ನೆಲದಲ್ಲಿ 6,000 ರಷ್ಯನ್ನರನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ಅಧ್ಯಕ್ಷ ಖಚಿತಪಡಿಸಿದ್ದಾರೆ. ರಷ್ಯಾ- ಉಕ್ರೇನ್‌ನ ಪ್ರಮುಖ ಬೆಳವಣಿಗೆಗಳು ಹೀಗಿವೆ…
- ಉಕ್ರೇನ್ ಜೊತೆ ಮಾತುಕತೆ ಮುಂದುವರಿಸಲು ಸಿದ್ಧ ಎಂದು ರಷ್ಯಾ ಹೇಳಿದೆ. ಮೊದಲ ಸುತ್ತಿನ ಮಾತುಕತೆಗಳು ಸ್ಪಷ್ಟವಾದ ಫಲಿತಾಂಶಗಳನ್ನು ನೀಡಲಿಲ್ಲ. ಹೀಗಾಗಿ, ಮತ್ತೆ ಮಾತುಕತೆ ನಡೆಸಲು ಸಿದ್ಧ ಎಂದು ರಷ್ಯಾ ಸ್ಪಷ್ಟಪಡಿಸಿದೆ. ಅಲ್ಲದೆ, ರಷ್ಯಾದ ಸೇನೆಯು ಉಕ್ರೇನ್‌ನ ಖೆರ್ಸನ್‌ನನ್ನು ತನ್ನ ವಶಕ್ಕೆ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದೆ. “ಸಶಸ್ತ್ರ ಪಡೆಗಳ ರಷ್ಯಾದ ವಿಭಾಗಗಳು ಖೆರ್ಸನ್ ಪ್ರಾದೇಶಿಕ ಕೇಂದ್ರವನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿವೆ” ಎಂದು ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಘೋಷಿಸಿದ್ದಾರೆ.
- ರಷ್ಯಾದ ಸೈನ್ಯದ ಪ್ಯಾರಾಟ್ರೂಪರ್‌ಗಳು ಉಕ್ರೇನ್‌ನ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಖಾರ್ಕಿವ್‌ನಲ್ಲಿ ಬಂದಿಳಿದಿದ್ದಾರೆ. ರಷ್ಯಾದ ವಾಯುಗಾಮಿ ಪಡೆಗಳು ಬಂದಿಳಿದ ತಕ್ಷಣ ಘರ್ಷಣೆಗಳು ನಡೆದವು ಎಂದು ಉಕ್ರೇನ್ ಸೇನೆ ಹೇಳಿದೆ. ಖಾರ್ಕಿವ್ ರಷ್ಯಾದ ಗಡಿಯ ಸಮೀಪದಲ್ಲಿರುವ ಹೆಚ್ಚಾಗಿ ರಷ್ಯಾದ ಭಾಷೆ ಮಾತನಾಡುವ ನಗರವಾಗಿದ್ದು, ಸುಮಾರು 1.4 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ.
- ಉಕ್ರೇನ್ನಲ್ಲಿ ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸಲು ಮೂರು C-17 ವಿಮಾನಗಳು ಹೊರಟಿವೆ ಎಂದು ಭಾರತೀಯ ವಾಯುಪಡೆಯ ಉಪಾಧ್ಯಕ್ಷ ಏರ್ ಮಾರ್ಷಲ್ ಸಂದೀಪ್ ಸಿಂಗ್ ಹೇಳಿದ್ದಾರೆ. ಎಲ್ಲಾ ಭಾರತೀಯರನ್ನು ಮರಳಿ ಕರೆತರುವವರೆಗೂ ಸ್ಥಳಾಂತರಿಸುವ ಕಾರ್ಯಾಚರಣೆಯು ಹಗಲಿರುಳು ನಡೆಯುತ್ತದೆ ಎಂದು ಸಿಂಗ್ ಹೇಳಿದ್ದಾರೆ.
- ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ‘ಸರ್ವಾಧಿಕಾರಿ’ ವ್ಲಾಡಿಮಿರ್ ಪುಟಿನ್‌ಗೆ ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್ ಆಕ್ರಮಣಕ್ಕಾಗಿ ರಾಜತಾಂತ್ರಿಕ ಮತ್ತು ಆರ್ಥಿಕ ಪ್ರತ್ಯೇಕತೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
- ಕಳೆದ ಗುರುವಾರ ಪ್ರಾರಂಭವಾದ ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಹಲವು ದೇಶಗಳು ರಷ್ಯಾದ ಮೇಲೆ ವ್ಯಾಪಾರ ನಿರ್ಬಂಧಗಳು ಮತ್ತು ಆರ್ಥಿಕ ನಿರ್ಬಂಧ, ವೈಮಾನಿಕ ಮಾರ್ಗದ ನಿರ್ಬಂಧವನ್ನು ಹೇರಿದ್ದವು. ಪ್ರಮುಖ ಸಂಸ್ಥೆಗಳಾದ ಆಪಲ್ ಮತ್ತು ನೈಕ್ ಎರಡೂ ರಷ್ಯಾದಲ್ಲಿ ತನ್ನ ಉತ್ಪನ್ನದ ಮಾರಾಟವನ್ನು ನಿಲ್ಲಿಸುವುದಾಗಿ ಘೋಷಿಸಿವೆ.
- ಉಕ್ರೇನ್-ರಷ್ಯಾ ಗಡಿಯಲ್ಲಿ ಆಶ್ರಯ ಪಡೆದಿರುವ ಸಾವಿರಾರು ವಿದ್ಯಾರ್ಥಿಗಳನ್ನು ರಷ್ಯಾ ಮೂಲಕವೇ ರಕ್ಷಿಸಿ, ಸ್ವದೇಶಕ್ಕೆ ಕರೆತರಲು ಭಾರತ ಸರ್ಕಾರ ಮುಂದಾಗಿದೆ. ರಷ್ಯಾ ರಾಜಧಾನಿ ಮಾಸ್ಕೊದಲ್ಲಿರುವ ಭಾರತ ರಾಜತಾಂತ್ರಿಕ ಕಚೇರಿ ಈಗಾಗಲೇ ಒಂದು ನಿಯೋಗವನ್ನು ಗಡಿಗೆ ಕಳಿಸಿದೆ. ಈವರೆಗೆ ತೆರೆಮರೆಯಲ್ಲಿ ನಡೆಯುತ್ತಿದ್ದ ಪ್ರಯತ್ನದ ಬಗ್ಗೆ ಇದೇ ಮೊದಲ ಬಾರಿಗೆ ಭಾರತದಲ್ಲಿರುವ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಭಾರತದ ಧ್ವಜದಿಂದಾಗಿ ಉಕ್ರೇನ್ನಿಂದ ಸುರಕ್ಷಿತವಾಗಿ ಪಾರಾದ ಪಾಕಿಸ್ತಾನಿ, ಟರ್ಕಿಶ್ ವಿದ್ಯಾರ್ಥಿಗಳು!
Published On - 3:56 pm, Wed, 2 March 22