ಭಾರತ್​ಪೇ ಹಣದಿಂದ ಗ್ರೋವರ್ ಕುಟುಂಬದ ವಿಲಾಸಿ ಜೀವನ; ಇದೇ ಮೊದಲ ಬಾರಿಗೆ ಮಂಡಳಿ ಆರೋಪ

ಭಾರತ್​ಪೇ ಹಣದಿಂದ ಗ್ರೋವರ್ ಕುಟುಂಬದ ವಿಲಾಸಿ ಜೀವನ; ಇದೇ ಮೊದಲ ಬಾರಿಗೆ ಮಂಡಳಿ ಆರೋಪ
ಅಶ್ನೀರ್ ಗ್ರೋವರ್ (ಸಂಗ್ರಹ ಚಿತ್ರ)

ಕಂಪೆನಿ ಹಣವನ್ನು ದುರುಪಯೋಗ ಮಾಡಿಕೊಂಡು ಅಶ್ನೀರ್ ಗ್ರೋವರ್ ಮತ್ತು ಕುಟುಂಬ ವಿಲಾಸಿ ಜೀವನ ಶೈಲಿ ನಡೆಸಿದೆ ಎಂದು ಇದೇ ಮೊದಲ ಬಾರಿಗೆ ಭಾರತ್​ಪೇ ಆಡಳಿತ ಮಂಡಳಿಯು ಆರೋಪ ಮಾಡಿದೆ.

TV9kannada Web Team

| Edited By: Srinivas Mata

Mar 02, 2022 | 6:33 PM

ಅಶ್ನೀರ್ ಗ್ರೋವರ್ ಮತ್ತು ಭಾರತ್‌ಪೇ (BharatPe) ಮಂಡಳಿಯ ಮಧ್ಯೆ ಹೋರಾಟ ಆರಂಭ ಆಗಿದ್ದು ಎರಡು ತಿಂಗಳ ಹಿಂದೆ. ಆದರೆ ಕಂಪೆನಿಯು ಮೊದಲ ಬಾರಿಗೆ ಅಧಿಕೃತವಾಗಿ ಸಂಸ್ಥಾಪಕರ ಕುಟುಂಬ ಮತ್ತು ಸಂಬಂಧಿಕರು ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದೆ. “ಗ್ರೋವರ್ ಕುಟುಂಬ ಮತ್ತು ಅವರ ಸಂಬಂಧಿಕರು ಕಂಪೆನಿ ನಿಧಿಯ ವ್ಯಾಪಕ ದುರುಪಯೋಗದಲ್ಲಿ ತೊಡಗಿದ್ದರು. ಆದರೆ ಇದಕ್ಕೆ ಮಾತ್ರ ಸೀಮಿತವಾಗಿಲ್ಲ. ನಕಲಿ ಮಾರಾಟಗಾರರನ್ನು ಸೃಷ್ಟಿಸಿ, ಆ ಮೂಲಕ ಅವರು ಕಂಪೆನಿಯ ಖಾತೆಯಿಂದ ಹಣವನ್ನು ಹೊರ ಸಾಗಿಸಿದ್ದಾರೆ. ಮತ್ತು ಕಂಪೆನಿಯ ವೆಚ್ಚದ ಖಾತೆಯನ್ನು ದುರುಪಯೋಗ ಮಾಡಿಕೊಂಡು ತಾವು ಶ್ರೀಮಂತರಾಗಿ, ತಮ್ಮ ಅದ್ಧೂರಿ ಜೀವನ ಶೈಲಿಗಾಗಿ ಆ ಹಣವನ್ನು ಬಳಸಿಕೊಂಡಿದ್ದಾರೆ,” ಎಂದು ಭಾರತ್‌ಪೇ ಹೇಳಿದೆ. “ಕಂಪೆನಿಯು ಗ್ರೋವರ್ ಮತ್ತು ಅವರ ಕುಟುಂಬದ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಎಲ್ಲ ಹಕ್ಕುಗಳನ್ನು ಕಾಯ್ದಿರಿಸಿಕೊಂಡಿದೆ. ಗ್ರೋವರ್ ಕುಟುಂಬದ ಇಂಥ ನಡವಳಿಕೆಯಿಂದಾಗಿ ಭಾರತ್​ಪೇ ಪ್ರತಿಷ್ಠೆಗೆ ಅಥವಾ ಅದರ ಕಷ್ಟಪಟ್ಟು ದುಡಿಯುವ ಉದ್ಯೋಗಿಗಳು ಹಾಗೂ ವಿಶ್ವದರ್ಜೆಯ ತಂತ್ರಜ್ಞಾನಕ್ಕೆ ಕಳಂಕ ತರಲು ಮಂಡಳಿಯು ಅವಕಾಶ ನೀಡುವುದಿಲ್ಲ. ಈ ದುಷ್ಕೃತ್ಯಗಳ ಪರಿಣಾಮವಾಗಿ ಗ್ರೋವರ್ ಇನ್ನು ಮುಂದೆ ಕಂಪೆನಿಯ ಉದ್ಯೋಗಿ, ಸಂಸ್ಥಾಪಕ ಅಥವಾ ನಿರ್ದೇಶಕರಾಗಿ ಇರುವುದಿಲ್ಲ,” ಎಂದು ಅದು ಸೇರಿಸಿದೆ.

ಲೆಕ್ಕಪರಿಶೋಧನಾ ಸಮಿತಿ, ಆಂತರಿಕ ಲೆಕ್ಕಪರಿಶೋಧಕರ ನೇಮಕ ಮತ್ತು ಇತರ ಪ್ರಮುಖ ಆಂತರಿಕ ನಿಯಂತ್ರಣಗಳ ಅನುಷ್ಠಾನ ಸೇರಿ ಕಂಪೆನಿಯ ಕಾರ್ಪೊರೇಟ್ ಆಡಳಿತವನ್ನು ಮತ್ತಷ್ಟು ಬಲಪಡಿಸಲು ಮಂಡಳಿಯು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಲಾಗಿದೆ.”ಕಂಪೆನಿ ಹೇಳಿಕೆಯ ವೈಯಕ್ತಿಕ ಸ್ವರೂಪದ ಬಗ್ಗೆ ನಾನು ದಿಗ್ಭ್ರಮೆಗೊಂಡಿದ್ದೇನೆ. ಆದರೆ ಆಶ್ಚರ್ಯವೇನಿಲ್ಲ. ಇದು ವೈಯಕ್ತಿಕ ದ್ವೇಷ ಮತ್ತು ಕೆಳ ಮಟ್ಟದ ಚಿಂತನೆಯಿಂದಾಗಿ ಬಂದಿದೆ. ಸೀರೀಸ್ Cನಲ್ಲಿ ನನ್ನಿಂದ ಖರೀದಿಸಿದ 1 ಮಿಲಿಯನ್ ಯುಎಸ್​ಡಿ ಸೆಕೆಂಡರಿ ಷೇರುಗಳ ಹೂಡಿಕೆದಾರರನ್ನು ಮಂಡಳಿಗೆ ನೆನಪಿಸಬೇಕಾಗಿದೆ. ಜತೆಗೆ ಸೀರೀಸ್ Dನಲ್ಲಿ 2.5 ಮಿಲಿಯನ್ ಯುಎಸ್​ಡಿ ಮತ್ತು ಸೀರೀಸ್ Eನಲ್ಲಿ 8.5 ಮಿಲಿಯನ್ ಷೇರು ನೆನಪಿಸಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ,” ಎಂಬುದಾಗಿ ಭಾರತ್​ಪೇ ಆರೋಪಗಳಿಗೆ ಅಶ್ನೀರ್ ಗ್ರೋವರ್ ಹೇಳಿದ್ದಾರೆ.

“ಅಮರ್​ಚಂದ್, PWC ಮತ್ತು A&M ಈ ಪೈಕಿ ಜೀವನಶೈಲಿಯ ‘ಅದ್ದೂರಿತನ’ ಕುರಿತು ಆಡಿಟ್ ಮಾಡಲು ಯಾರು ಪ್ರಾರಂಭಿಸಿದ್ದಾರೆಂದು ತಿಳಿಯುವುದಕ್ಕೆ ನಾನು ತಿಳಿಯಬಹುದೇ? ನನ್ನ ಬಗ್ಗೆ ಅದ್ದೂರಿ ವಿಷಯವೆಂದರೆ ಕನಸುಗಳು ಮತ್ತು ಕಠಿಣ ಪರಿಶ್ರಮ ಹಾಗೂ ಉದ್ಯಮದ ಮೂಲಕ ಅವುಗಳನ್ನು ಸಾಧಿಸುವ ಸಾಮರ್ಥ್ಯ. ಮಂಡಳಿಯು ಶೀಘ್ರದಲ್ಲೇ ಕೆಲಸಕ್ಕೆ ಮರಳುತ್ತದೆ ಎಂದು ಭಾವಿಸುತ್ತೇವೆ – ನಾನು ಷೇರುದಾರನಾಗಿ ಮೌಲ್ಯ ನಾಶದ ಬಗ್ಗೆ ಚಿಂತಿತನಾಗಿದ್ದೇನೆ. ಕಂಪೆನಿ ಮತ್ತು ಮಂಡಳಿಯು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಬಯಸುತ್ತೇನೆ,” ಎಂಬುದಾಗಿ ಅವರು ಹೇಳಿದ್ದಾರೆ.

ಈ ಬೆಳವಣಿಗೆ ಬಗ್ಗೆ ತಿಳಿದಿರುವ ಮೂಲಗಳ ಪ್ರಕಾರ, ಫಿನ್‌ಟೆಕ್ ಯುನಿಕಾರ್ನ್ ಮುಖ್ಯ ಹಣಕಾಸು ಅಧಿಕಾರಿ, ಆಂತರಿಕ ಲೆಕ್ಕಪರಿಶೋಧನಾ ಮುಖ್ಯಸ್ಥರನ್ನು ನೇಮಿಸಿಕೊಳ್ಳಲು ಮತ್ತು ಮುಂದಿನ ಒಂದು ತಿಂಗಳಲ್ಲಿ ತನ್ನ ಸಂಗ್ರಹಣೆ ಪ್ರಕ್ರಿಯೆಗಳನ್ನು ಬಲಪಡಿಸಲು ನೋಡುತ್ತಿದೆ ಎಂದು ಬಿಜಿನೆಸ್ ಸ್ಟ್ಯಾಂಡರ್ಡ್ ಮೊದಲೇ ವರದಿ ಮಾಡಿದೆ. ಗ್ರೋವರ್ ಸೋಮವಾರ ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಕಂಪೆನಿಯ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಲೆಕ್ಕಪರಿಶೋಧಕ ಸಂಸ್ಥೆ PwCಯಿಂದ ಆಡಿಟ್ ವರದಿಯ ಮೇಲೆ ಉದ್ದೇಶಪೂರ್ವಕವಾಗಿ ಮಂಡಳಿಯ ಸಭೆಯನ್ನು ಕರೆದ ನಂತರ ಗ್ರೋವರ್ ಅವರ ರಾಜೀನಾಮೆ ಪತ್ರವನ್ನು ನಿಮಿಷಗಳಲ್ಲಿ ಸ್ವೀಕರಿಸಲಾಗಿದೆ ಎಂದು ಕಂಪೆನಿ ನಂತರ ಹೇಳಿದೆ. ಮಂಡಳಿಯ ಸಭೆ ಮಂಗಳವಾರ ರಾತ್ರಿ ನಡೆದಿದ್ದರೂ ಕಂಪೆನಿಯಿಂದ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ – ಮತ್ತು ಲೆಕ್ಕಪರಿಶೋಧನಾ ವರದಿ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು.

“ಅಶ್ನೀರ್ ಗ್ರೋವರ್ ಎಂ.ಡಿ. ಮತ್ತು ನಿರ್ದೇಶಕರ ಹುದ್ದೆಗೆ ರಾಜೀನಾಮೆ ನೀಡಿದ ಪರಿಣಾಮವಾಗಿ ಅವರನ್ನು ಉದ್ಯೋಗದಿಂದ ತೆಗೆಯಲಾಗಿದೆ ಎಂಬ ಬಗ್ಗೆ ಗಮನ ಸೆಳೆದಿದೆ. ಆದರೂ ಅವರು ಮಂಡಳಿಯ ಮತ್ತು ಪ್ರಮುಖ ಹೂಡಿಕೆದಾರರ ಅನುಮೋದನೆ ಇಲ್ಲದೆ ರಾಜೀನಾಮೆ ನೀಡಿದ್ದರಿಂದ ಷೇರುದಾರರ ಒಪ್ಪಂದದ ಅಡಿಯಲ್ಲಿ ಪರಿಣಾಮಗಳು ಉಂಟಾಗುತ್ತವೆ,” ಎಂದು ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಮೂಲಗಳು ತಿಳಿಸಿವೆ.

ಗ್ರೋವರ್ ಅವರು ಸದ್ಯಕ್ಕೆ ಕಂಪೆನಿಯಲ್ಲಿ ಸುಮಾರು ಶೇಕಡಾ 9ರಷ್ಟು ಷೇರುಗಳನ್ನು ಹೊಂದಿದ್ದಾರೆ. ಮಂಗಳವಾರ ಸಂಜೆ ತಡವಾಗಿ ಆರಂಭವಾದ ಮಂಡಳಿಯ ಸಭೆಯು (ಕೆಲವು ನಿರ್ದೇಶಕರು ಯುಎಸ್‌ನಲ್ಲಿ ಇದ್ದಾರೆ) ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ​​ಮತ್ತು ಷೇರು ಒಪ್ಪಂದದ ಅನುಗುಣವಾಗಿ ಗ್ರೋವರ್ ಷೇರುಗಳನ್ನು ಹಿಂತೆಗೆದುಕೊಳ್ಳುವ ಸಾಧ್ಯತೆ ಕುರಿತು ಚರ್ಚಿಸುವ ನಿರೀಕ್ಷೆಯಿತ್ತು. “ಷೇರುದಾರರ ಒಪ್ಪಂದವು (ಎಸ್‌ಎಚ್‌ಎ) ಅವರಿಗೆ (ಷೇರುಗಳನ್ನು ಹಿಂಪಡೆಯಲು) ಅನುಮತಿಸದ ಕಾರಣ ಷೇರುಗಳೊಂದಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ,” ಎಂದು ಗ್ರೋವರ್ ಈ ವಾರದ ಆರಂಭದಲ್ಲಿ ಬಿಜಿನೆಸ್ ಸ್ಟ್ಯಾಂಡರ್ಡ್‌ಗೆ ತಿಳಿಸಿದ್ದರು.

ಸಿಂಗಾಪೂರ್ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಕ್ಕೆ ಅವರು ಸಲ್ಲಿಸಿದ ಮನವಿಯನ್ನು ವಜಾಗೊಳಿಸಿದ ದಿನಗಳ ನಂತರ ಗ್ರೋವರ್ ರಾಜೀನಾಮೆ ನೀಡಿದರು. ತಮ್ಮ ಅರ್ಜಿಯಲ್ಲಿ, ಭಾರತ್​ಪೇ ಸಹ-ಸಂಸ್ಥಾಪಕರು ಆಡಿಟ್ ವರದಿಯಿಂದ ರಕ್ಷಣೆ ಕೋರಿದ್ದಾರೆ ಮತ್ತು ಎಸ್​ಎಚ್​ಎಯನ್ನು ಅನುಸರಿಸದ ಕಾರಣ ಅದನ್ನು ಅಮಾನ್ಯಗೊಳಿಸುವಂತೆ ಕೇಳಿದ್ದಾರೆ.

ಇದನ್ನೂ ಓದಿ: ಹಣಕಾಸು ಅಕ್ರಮ ಆರೋಪ: ಭಾರತ್‌ಪೇ ಸಂಸ್ಥೆಯ ಸಹ ಸಂಸ್ಥಾಪಕ ಅಶ್ನೀರ್ ಗ್ರೋವರ್​ ಪತ್ನಿ ಮಾಧುರಿ ಜೈನ್ ವಜಾ

Follow us on

Related Stories

Most Read Stories

Click on your DTH Provider to Add TV9 Kannada