ನವದೆಹಲಿ, ಅಕ್ಟೋಬರ್ 20: ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆ ವಿಚಾರದಲ್ಲಿ ಇಲಾನ್ ಮಸ್ಕ್ ಅನಿಸಿಕೆಯ ಪ್ರಕಾರ ಭಾರತ ಸರ್ಕಾರದ ನಡೆ ಇರುವ ಸಾಧ್ಯತೆ ಇದೆ. ಸ್ಪೆಕ್ಟ್ರಂ ಅನ್ನು ಹರಾಜು ಮೂಲಕ ಹಂಚಿಕೆ ಮಾಡಬೇಕು ಎಂಬ ಜಿಯೋ ಮತ್ತು ಏರ್ಟೆಲ್ ಅನಿಸಿಕೆಯನ್ನು ಇಲಾನ್ ಮಸ್ಕ್ ವಿರೋಧಿಸಿದ್ದರು. ಜಾಗತಿಕವಾಗಿ ಸೆಟಿಲೈಟ್ ಸ್ಪೆಕ್ಟ್ರಂ ಇಂಟರ್ನೆಟ್ ಅನ್ನು ಹರಾಜು ಮಾಡಲಾಗುವುದಿಲ್ಲ. ಬದಲಾಗಿ ಆಡಳಿತಾತ್ಮಕವಾಗಿ ಹಂಚಲಾಗುತ್ತದೆ ಎಂದು ಇಲಾನ್ ಮಸ್ಕ್ ವಾದಿಸಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆಯನ್ನು ಜಾಗತಿಕ ನಿಯಮಗಳ ಅನುಸಾರ ಮಾಡಲಾಗುವುದು ಎಂದು ಹೇಳಿದೆ. ಇದು ಇಲಾನ್ ಮಸ್ಕ್ ಅವರಿಗೆ ಸಿಕ್ಕ ಆರಂಭಿಕ ಗೆಲುವು ಎನ್ನಲಾಗುತ್ತಿದೆ.
ಸದ್ಯ ಭಾರತದಲ್ಲಿ ಇರುವ ಇಂಟರ್ನೆಟ್ ಸರ್ವಿಸ್ ಅನ್ನು ಮೊಬೈಲ್ ಟವರ್ ಮತ್ತು ಆಪ್ಟಿಕಲ್ ಫೈಬರ್ ಕೇಬಲ್ಗಳ ಮೂಲಕ ಸಿಗುತ್ತದೆ. ಇದು ಟೆರಿಟರಿ ಸ್ಪೆಕ್ಟ್ರಂ. ಮೊಬೈಲ್ ಫೋನ್ನಿಂದ ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಇನ್ನೊಂದು ಫೋನ್ಗೆ ಡಾಟಾ ರವಾನೆಯಾಗುತ್ತದೆ. ಅಥವಾ ಮೊಬೈಲ್ ಫೋನ್ನಿಂದ ಮೊಬೈಲ್ ಟವರ್ಗೆ ಸಿಗ್ನಲ್ ಹೋಗಿ, ಅಲ್ಲಿಂದ ಬೇರೆ ಮೊಬೈಲ್ಗೆ ಡಾಟಾ ರವಾನೆಯಾಗುತ್ತದೆ. ಈ ಮೂಲಕ ಒಂದು ಮೊಬೈಲ್ನಿಂದ ಇನ್ನೊಂದು ಮೊಬೈಲ್ಗೆ ಸಂವಹನ ನಡೆಯುತ್ತದೆ
ಸೆಟಿಲೈಟ್ ಸ್ಪೆಕ್ಟ್ರಂನಲ್ಲಿ ಮೊಬೈಲ್ಗಳ ನಡುವಿನ ಸಂವಹನಕ್ಕೆ ಮೊಬೈಲ್ ಟವರ್ ಅಥವಾ ಫೈಬರ್ ಕೇಬಲ್ ಬದಲು ಸೆಟಿಲೈಟ್ ನೆರವು ಪಡೆಯಲಾಗುತ್ತದೆ. ಇದಕ್ಕೆ ಜಿಪಿಎಸ್ ಅನ್ನು ನಿದರ್ಶನವಾಗಿ ತೆಗೆದುಕೊಳ್ಳಬಹುದು. ಸೆಟಿಲೈಟ್ ಇಂಟರ್ನೆಟ್ಗೆ ಮೊಬೈಲ್ ಟವರ್ ಬೇಕಾಗುವುದಿಲ್ಲ. ನೇರವಾಗಿ ಸೆಟಿಲೈಟ್ ಮೂಲಕ ಸಿಗ್ನಲ್ ರವಾನೆಯಾಗುತ್ತದೆ.
ಟವರ್ ಅಥವಾ ಕೇಬಲ್ ಆಧಾರಿತ ಇಂಟರ್ನೆಟ್ನ ವ್ಯಾಪ್ತಿಗೆ ಮಿತಿ ಇದೆ. ಪ್ರತಿಯೊಂದು ಜಾಗದಲ್ಲೂ ಮೊಬೈಲ್ ಟವರ್ ಸ್ಥಾಪಿಸುವುದು ಅಥವಾ ಕೇಬಲ್ ಹಾಕುವುದು ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ಸೆಟಿಲೈಟ್ ಇಂಟರ್ನೆಟ್ ನೀಗಿಸುತ್ತದೆ. ಮೇಲೆ ಭೂಕಕ್ಷೆಯ ವಿವಿಧ ಕಡೆ ಸಂವಹನ ಸೆಟಿಲೈಟ್ಗಳನ್ನು ಇರಿಸಿದರೆ ಭೂಮಿಯ ಯಾವುದೇ ಮೂಲೆಗೂ ಇಂಟರ್ನೆಟ್ ದೊರಕುವಂತೆ ಮಾಡಬಹುದು.
ಮುಕೇಶ್ ಅಂಬಾನಿ ಮತ್ತು ಇಲಾನ್ ಮಸ್ಕ್ ಭಿನ್ನ ಧ್ವನಿ ಎತ್ತಿದ್ದರು. 2ಜಿ, 3ಜಿ, 4ಜಿ, 5ಜಿ ಸ್ಪೆಕ್ಟ್ರಂ ಹಂಚಿಕೆಗೆ ಮಾಡಿದ ರೀತಿಯಲ್ಲೇ ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆಗೂ ಹರಾಜು ಪ್ರಕ್ರಿಯೆ ಇಡಬೇಕು. ಇದರಿಂದ ಸ್ಪರ್ಧಾತ್ಮಕತೆ ಇರುತ್ತದೆ ಎಂಬುದು ಮುಕೇಶ್ ಅಂಬಾನಿ ಅನಿಸಿಕೆ. ಏರ್ಟೆಲ್ ಮುಖ್ಯಸ್ಥ ಸುನೀಲ್ ಮಿಟ್ಟಲ್ ಕೂಡ ಈ ಅನಿಸಿಕೆಗೆ ಧ್ವನಿಗೂಡಿಸಿದ್ದರು.
ಮೇಲಿನ ಆಗಸದಲ್ಲಿರುವ ಜಾಗವು ಯಾವ ದೇಶಕ್ಕೂ ಸೀಮಿತವಲ್ಲವಾದ್ದರಿಂದ ಅದನ್ನು ಹರಾಜು ಹಾಕಲು ಆಗುವುದಿಲ್ಲ. ಅಲ್ಲದೆ, ಜಾಗತಿಕವಾಗಿ ಆಡಳಿತಾತ್ಮಕವಾಗಿ ಸ್ಪೆಕ್ಟ್ರಂ ಹಂಚಿಕೆ ಮಾಡಲಾಗುತ್ತದೆ. ಭಾರತ ಮಾತ್ರವೇ ಭಿನ್ನ ದಾರಿ ತುಳಿಯುವುದು ತಪ್ಪಾಗುತ್ತದೆ ಎಂಬುದು ಇಲಾನ್ ಮಸ್ಕ್ ವಾದ.
ಇದನ್ನೂ ಓದಿ: ಬೈಜುಸ್ 1,80,000 ಕೋಟಿ ರೂನಿಂದ ಸೊನ್ನೆಗೆ: ಆದರೆ ಮೋಸ ಮಾಡೋನಲ್ಲ: ಬೈಜು ರವೀಂದ್ರನ್
ಇಲ್ಲಿ ಆಡಳಿತಾತ್ಮಕ ಸ್ಪೆಕ್ಟ್ರಂ ಹಂಚಿಕೆ ಎಂದರೆ, ಸರ್ಕಾರ ಹರಾಜು ಪ್ರಕ್ರಿಯೆ ಬದಲು ಆಯ್ದ ಕಂಪನಿಗಳಿಗೆ ನೇರವಾಗಿ ಸ್ಪೆಕ್ಟ್ರಂ ಹಂಚಿಕೆ ಮಾಡುತ್ತದೆ.
ಸೆಟಿಲೈಟ್ ಇಂಟರ್ನೆಟ್ನಲ್ಲಿ ಇಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಸಂಸ್ಥೆ ವಿಶ್ವದಲ್ಲೇ ನಂಬರ್ ಒನ್. ಜಾಗತಿಕವಾಗಿ ಈಗಾಗಲೇ ಹಲವು ದೇಶಗಳಿಗೆ ಇದು ಸೆಟಿಲೈಟ್ ಇಂಟರ್ನೆಟ್ ಸೇವೆ ಒದಗಿಸುತ್ತಿದೆ. ಸ್ಟಾರ್ಲಿಂಕ್ ಭೂಕ್ಷೆಯಲ್ಲಿ 6,000 ಸೆಟಿಲೈಟ್ಗಳ ನೆಟ್ವರ್ಕ್ ಹೊಂದಿದೆ. ಇದಕ್ಕೆ ಹೋಲಿಸಿದರೆ ರಿಲಾಯನ್ಸ್ ಜಿಯೋ ಮತ್ತು ಏರ್ಟೆಲ್ ಹೊಂದಿರುವ ಸೆಟಿಲೈಟ್ಗಳ ಸಂಖ್ಯೆ ತೀರಾ ಕಡಿಮೆ.
ಏರ್ಟೆಲ್ನ ಭಾರ್ತಿ ಎಂಟರ್ಪ್ರೈಸಸ್ ಸಂಸ್ಥೆ ಒನ್ವೆಬ್ ಎನ್ನುವ ಕಂಪನಿಯಲ್ಲಿ ಹೆಚ್ಚಿನ ಷೇರುಪಾಲು ಖರೀದಿಸಿದೆ. ಒನ್ ವೆಬ್ ಸಂಸ್ಥೆ 630 ಸೆಟಿಲೈಟ್ಗಳ ನೆಟ್ವರ್ಕ್ ಹೊಂದಿದೆ.
ಇನ್ನು, ರಿಲಾಯನ್ಸ್ ಸಂಸ್ಥೆ ಲಕ್ಸಂಬರ್ಗ್ನ ಎಸ್ಇಎಸ್ ಎಂಬ ಕಂಪನಿ ಜೊತೆ ಸೇರಿ ಜಿಯೋ ಸ್ಪೇಸ್ ಟೆಕ್ನಾಲಜಿ ಸ್ಥಾಪಿಸಿದೆ. ಇವು ಹೊಂದಿರುವ ಸೆಟಿಲೈಟ್ಗಳ ಸಂಖ್ಯೆ 38 ಮಾತ್ರ. ಹೀಗಾಗಿ, ಸೆಟಿಲೈಟ್ ಇಂಟರ್ನೆಟ್ ಸರ್ವಿಸ್ನಲ್ಲಿ ಇಲಾನ್ ಮಸ್ಕ್ ಬಹಳ ಮುಂದಿದ್ದಾರೆ.
ಇದನ್ನೂ ಓದಿ: ರತನ್ ಟಾಟಾ ವೈಯಕ್ತಿಕ ಆಸ್ತಿ ಯಾರಿಗೆ? ಅವರ ಕೊನೆಯಾಸೆ ಈಡೇರಿಸುವ ಜವಾಬ್ದಾರಿ ನಾಲ್ವರಿಗೆ ವಹಿಸಿದ್ದ ಟಾಟಾ
ಇಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ನ ಸೆಟಿಲೈಟ್ ಇಂಟರ್ನೆಟ್ ಸರ್ವಿಸ್ ಬಹಳ ದುಬಾರಿಯಾಗಿದೆ. ಭಾರತದಲ್ಲಿ ಈಗ ಇರುವ ಮೊಬೈಲ್ ಇಂಟರ್ನೆಟ್ ಅಥವಾ ಬ್ರಾಡ್ಬ್ಯಾಂಡ್ ಇಂಟರ್ನೆಟ್ ವಿಶ್ವದಲ್ಲೇ ಅತ್ಯಂತ ಕಡಿಮೆ ದರ ಹೊಂದಿದೆ. ಹೀಗಾಗಿ, ದುಬಾರಿಯಾದ ಸೆಟಿಲೈಟ್ ಇಂಟರ್ನೆಟ್ಗೆ ಭಾರತದ ಮಾರುಕಟ್ಟೆಯಲ್ಲಿ ಸೀಮಿತ ಅವಕಾಶ ಇರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ