ಏಪ್ರಿಲ್ 1ರಿಂದ ಭಾರತದಲ್ಲಿ ಹೊಸ ಹಣಕಾಸು ವರ್ಷ ಆರಂಭವಾಗಿದೆ. 2023-24ರ ವರ್ಷ ಹಲವು ಬದಲಾವಣೆಗಳೊಂದಿಗೆ ಅಡಿ ಇಟ್ಟಿದೆ. ಪ್ರಮುಖ ಹಣಕಾಸು ನಿಯಮಗಳು ಬಂದಿವೆ. ವೈಯಕ್ತಿಕ ತೆರಿಗೆ, ಹೂಡಿಕೆಗಳಲ್ಲಿ ಒಂದಿಷ್ಟು ಬದಲಾವಣೆಗಳಾಗಿವೆ. ಬ್ಯಾಂಕುಗಳ ಬಡ್ಡಿ ದರದಲ್ಲಿ ವ್ಯತ್ಯಯಗಳಾಗಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್ ಮತ್ತು ಪೇಮೆಂಟ್ ಸೇವೆಗಳಲ್ಲಿ ಒಂದಿಷ್ಟು ಮಹತ್ವದ ಬದಲಾವಣೆಗಳಾಗಿವೆ. ಈ ತಿಂಗಳು ಮೇ 1ರಿಂದಲೇ ಈ ಪರಿಷ್ಕೃತ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳ ಬಗ್ಗೆ ಎಸ್ಬಿಐ ತನ್ನ ವೆಬ್ಸೈಟ್ನಲ್ಲಿ ಮಾಹಿತಿ ನೀಡಿದೆ. ಕ್ಯಾಷ್ಬ್ಯಾಕ್, ರಿವಾರ್ಡ್ ಪಾಯಿಂಟ್ಸ್ ಇತ್ಯಾದಿ ಸಂಗತಿಯಲ್ಲಿ ಎಸ್ಬಿಐ ಕೆಲ ನಿಯಮ ಬದಲಾವಣೆ ಮಾಡಿದೆ. ಬೇರೆ ಬೇರೆ ಕ್ರೆಡಿಟ್ ಕಾರ್ಡ್ಗಳು ನೀಡುವ ಆಫರ್ನಲ್ಲಿ ಬದಲಾವಣೆ ಆಗಿದೆ. ಈ ಬಗ್ಗೆ ವಿವರ ಇಲ್ಲಿದೆ.
SimplyCLICK ಎಸ್ಬಿಐ ಕಾರ್ಡ್ ಮತ್ತು SimplyCLICK ಅಡ್ವಾಂಟೇಜ್ ಎಸ್ಬಿಐ ಕಾರ್ಡ್ ಮೂಲಕ ಲೆನ್ಸ್ಕಾರ್ಟ್ನಿಂದ ಏನಾದರೂ ಖರೀದಿಸಿದರೆ ರಿವಾರ್ಡ್ ಪಾಯಿಂಟ್ ಸಿಗುತ್ತಿತ್ತು. ಏಪ್ರಿಲ್ 1ರಿಂದ ಒಂದನೇ ಹತ್ತು ಭಾಗದಷ್ಟು ರಿವಾರ್ಡ್ ಪಾಯಿಂಟ್ ಇಳಿಸಲಾಗಿದೆ. 10 ಅಂಕ ಪಡೆಯುತ್ತಿದ್ದವರಿಗೆ 1 ಅಂಕವಷ್ಟೇ ಸಿಗುತ್ತದೆ.
ಇದನ್ನೂ ಓದಿ: Cognizant Layoffs: ಆಗ ಅಕ್ಸೆಂಚರ್ನಲ್ಲಿ 19 ಸಾವಿರ, ಈಗ ಕಾಗ್ನಿಜೆಂಟ್ನಲ್ಲಿ 3,500 ಉದ್ಯೋಗಿಗಳ ಲೇ ಆಫ್
ಆದರೆ, ಅಪೋಲೋ 24/7 ಮತ್ತು ಬುಕ್ ಮೈ ಶೋನಲ್ಲಿ ಈ ಎರಡು ಎಸ್ಬಿಐ ಕಾರ್ಡ್ ಉಪಯೋಗಿಸಿ ಹಣ ಪಾವತಿಸಿದರೆ 10 ಪಟ್ಟು ಹೆಚ್ಚು ರಿವಾರ್ಡ್ ಪಾಯಿಂಟ್ಸ್ ಸಿಗಲಿದೆ. ಕ್ಲಿಯರ್ಟ್ರಿಪ್, ಈಜಿಡೈನರ್ ಮತ್ತು ನೆಟ್ಮೆಡ್ಸ್ ಮೊದಲಾದವುಗಳಲ್ಲಿ ಪಾವತಿಗಳಿಗೂ 10 ಪಟ್ಟು ರಿವಾರ್ಡ್ ಪಾಯಿಂಟ್ಸ್ ದೊರಕುತ್ತದೆ.
ಎಸ್ಬಿಐನ ಕ್ರೆಡಿಟ್ ಕಾರ್ಡ್ಗಳ ಮೂಲಕ ಬಾಡಿಗೆ ಪಾವತಿಸುತ್ತಿದ್ದರೆ 99 ರೂ ಹಾಗೂ ತೆರಿಗೆ ಪಾವತಿಸಬೇಕಿತ್ತು. ಈಗ ಈ ಪ್ರೋಸಸಿಂಗ್ ಶುಲ್ಕವನ್ನು 199 ರೂಗೆ ಹೆಚ್ಚಿಸಲಾಗಿದೆ. ಶೇ. 18ರಷ್ಟು ಜಿಎಸ್ಟಿಯನ್ನೂ ತೆರಬೇಕಾಗುತ್ತದೆ. ಮಾರ್ಚ್ 17ರಿಂದಲೇ ಹೊಸ ಶುಲ್ಕ ಜಾರಿಗೆ ಬಂದಿದೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಪ್ರೋಸಸಿಂಗ್ ಫೀಸ್ ಅನ್ನು 99 ರೂಗೆ ಹೆಚ್ಚಿಸಲಾಗಿತ್ತು. ಕೆಲ ತಿಂಗಳ ಅಂತರದಲ್ಲೇ ಎರಡನೇ ಬಾರಿ ಈ ದರ ಹೆಚ್ಚಳವಾಗಿದೆ.