ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank Of India) ಕೆಲವು ಗ್ರಾಹಕರು ಮಾರ್ಚ್ 12ರಂದು ಬ್ಯಾಂಕ್‌ನ ಇಂಟರ್ನೆಟ್ ಬ್ಯಾಂಕಿಂಗ್ ಚಾನೆಲ್‌ಗಳು ಮತ್ತು ಅದರ ಅಪ್ಲಿಕೇಷನ್‌ಗಳಲ್ಲಿ ಸ್ಥಗಿತದ ಬಗ್ಗೆ ದೂರು ನೀಡಿದ್ದಾರೆ. ಮಾರ್ಚ್ 12ರಂದು ತಮ್ಮ ಅಪ್ಲಿಕೇಷನ್‌ಗಳ ತಂತ್ರಜ್ಞಾನ ಅಪ್ಗ್ರೇಡ್ ಮಾಡಲಾಗುವುದು ಎಂದು ಎಸ್‌ಬಿಐ ಟ್ವೀಟ್ ಮಾಡಿತ್ತು. ಮಾರ್ಚ್ 12ರಂದು ರಾತ್ರಿ 11.30 ಮತ್ತು ಮಾರ್ಚ್ 13ರಂದು ಬೆಳಿಗ್ಗೆ 2ರ ಮಧ್ಯೆ ಪ್ಲಾಟ್ಫಾರ್ಮ್ಗಳು ಬ್ಯಾಂಕ್‌ನ ಅಪ್ಲಿಕೇಷನ್‌ಗಳಾದ YONO (ಯೋನೋ), YONO ಲೈಟ್, YONO ಬಿಜಿನೆಸ್ ಮತ್ತು ಯುಪಿಐಗಳಲ್ಲಿ ತಂತ್ರಜ್ಞಾನ ಅಪ್ಡೇಟ್ಗಳು ನಡೆಯುವುದರಿಂದ ಅವುಗಳ ಸೇವೆಗಳಿಗೆ ಅಡ್ಡಿ ಆಗಲಿದೆ ಎಂದು ಬ್ಯಾಂಕ್ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.
ಟ್ವೀಟ್ ಮಾಡಿದ ತಕ್ಷಣ ಹಲವಾರು ಗ್ರಾಹಕರು ಅಪ್ಲಿಕೇಷನ್‌ಗಳು ಮತ್ತು ಇಂಟರ್ನೆಟ್ ಬ್ಯಾಂಕಿಂಗ್‌ನಲ್ಲಿನ ದೋಷಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. ಮತ್ತು ಕೆಲವರು ಎಂದಿಗೂ ಮಾಡದೇ ಇರುವ ವಹಿವಾಟುಗಳ ನೋಟಿಫಿಕೇಷನ್ ಪಡೆದ ಬಗ್ಗೆ ದೂರಿದ್ದಾರೆ. ಈ ದೋಷದಿಂದ 30,000 ರೂಪಾಯಿ ನಷ್ಟವಾಗಿದೆ ಎಂದು ಗ್ರಾಹಕರೊಬ್ಬರು ಟ್ವೀಟ್ ಮಾಡಿದ್ದಾರೆ. ಹಲವಾರು ಗ್ರಾಹಕರು ಇಂತಹ ಅನಗತ್ಯ ವಹಿವಾಟುಗಳು ಮತ್ತು ಕಡಿತಗಳ ಬಗ್ಗೆ ದೂರು ನೀಡಿದರೆ, ಕೆಲವರು Yono ಅಪ್ಲಿಕೇಷನ್‌ನಲ್ಲಿ ತಮ್ಮ ಖಾತೆಗಳನ್ನು ನಿಷ್ಕ್ರಿಯಗೊಳಿಸುವುದರ ಕುರಿತು ಪುನರಾವರ್ತಿತ ನೋಟಿಫಿಕೇಷನ್ಗಳನ್ನು ಪಡೆಯುವ ಬಗ್ಗೆ ದೂರು ನೀಡಿದ್ದಾರೆ. ಕೆಲವರು ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಶುಲ್ಕವನ್ನು ಕಡಿತಗೊಳಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಅಂತಹ ಟ್ವೀಟ್‌ಗಳಿಗೆ ಎಸ್‌ಬಿಐ ಹೆಚ್ಚಾಗಿ ಉತ್ತರಿಸಿದೆ ಮತ್ತು “ಅನನುಕೂಲಕ್ಕಾಗಿ ನಾವು ವಿಷಾದಿಸುತ್ತೇವೆ. ತಾಂತ್ರಿಕ ಸಮಸ್ಯೆಗಳಿಂದಾಗಿ, ಕೆಲವು ಬಳಕೆದಾರರು ತಮ್ಮ Yono Lite ಅಪ್ಲಿಕೇಷನ್‌ನಲ್ಲಿ ತಪ್ಪಾದ ನೋಟಿಫಿಕೇಷನ್ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ. ನಮ್ಮ ತಾಂತ್ರಿಕ ತಂಡವು ಈ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದೆ. ದಯವಿಟ್ಟು ನಮ್ಮೊಂದಿಗೆ ಸಹಕರಿಸಿ,” ಎಂದಿದೆ. ತಮ್ಮ ಸಹಾಯವಾಣಿ ಸಂಖ್ಯೆಯಿಂದ ತಪ್ಪಾಗಿ ಡೆಬಿಟ್ ಮಾಡಿದರೆ ಫಿಶಿಂಗ್ ದಾಳಿ ಬಗ್ಗೆ ವರದಿ ಮಾಡಲು ಮತ್ತು ಇಮೇಲ್ ಮೂಲಕ ದೂರು ಸಲ್ಲಿಸಲು ಬ್ಯಾಂಕ್ ಗ್ರಾಹಕರಿಗೆ ತಿಳಿಸಿದೆ.
ಇತ್ತೀಚೆಗೆ ಎಸ್‌ಬಿಐ ತಮ್ಮ ಮೊಬೈಲ್ ಅಪ್ಲಿಕೇಷನ್ ಅನ್ನು ‘ಓನ್ಲಿ ಯೋನೋ’ ಎಂದು ಮರು ಪ್ರಾರಂಭಿಸುವ ಕುರಿತು ಟ್ವೀಟ್ ಮಾಡಿದ್ದು, ಹೆಚ್ಚಿನ ಪ್ರಮಾಣದ ವಹಿವಾಟುಗಳನ್ನು ನಿರ್ವಹಿಸಲು ಕ್ಲೌಡ್ ಸಾಮರ್ಥ್ಯವನ್ನು ಸಕ್ರಿಯಗೊಳಿಸಲು ಮತ್ತು ಉತ್ತಮ ಗ್ರಾಹಕ ಅನುಭವಗಳನ್ನು ಖಾತ್ರಿಪಡಿಸುತ್ತದೆ. ಯೋನೋಗೆ ಮಾತ್ರ ಆರ್ಕಿಟೆಕ್ಚರ್ ಮತ್ತು ವಿನ್ಯಾಸಕ್ಕಾಗಿ ಉತ್ತಮ ತಾಂತ್ರಿಕ ಮಾರ್ಗದರ್ಶನವನ್ನು ಪಡೆಯಲು ಬ್ಯಾಂಕ್ ವಿವಿಧ ಸಲಹೆಗಾರರಿಂದ ಬಿಡ್‌ಗಳನ್ನು ಆಹ್ವಾನಿಸಿದೆ. ಇತ್ತೀಚೆಗೆ ನಿತಿನ್ ಚುಗ್ ಅವರನ್ನು ಎಸ್‌ಬಿಐ ನೇಮಿಸಿಕೊಂಡಿದ್ದು, ಅವರು ಮೊದಲು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಡಿಜಿಟಲ್ ಬ್ಯಾಂಕಿಂಗ್ ವಿಭಾಗವನ್ನು ಮುನ್ನಡೆಸಿದ್ದರು.
ಇದನ್ನೂ ಓದಿ: State Bank Of India: ಎಸ್‌ಬಿಐ ಯೋನೋ ಆ್ಯಪ್ ಮೂಲಕ ಚೆಕ್ ಪಾವತಿ ನಿಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ