SBI Pensioners Facility: ಪೆನ್ಷನ್ದಾರರಿಗೆ ಎಸ್ಬಿಐನಿಂದ ವಿಶೇಷ ವ್ಯವಸ್ಥೆ; ಈಗ ಸಲ್ಲಿಸಬಹುದು ವಿಡಿಯೋ ಜೀವಿತ ಪ್ರಮಾಣಪತ್ರ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪೆನ್ಷನ್ದಾರರಿಗೆ ವಿಶೇಷ ಸೌಲಭ್ಯ ಒದಗಿಸಲಾಗುತ್ತಿದೆ. ಇದೀಗ ವಿಡಿಯೋ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಬಹುದು. ಆ ಬಗ್ಗೆ ವಿವರ ಇಲ್ಲಿದೆ.
ಇಂದಿನಿಂದ, ಅಂದರೆ ನವೆಂಬರ್ 1, 2021ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪಿಂಚಣಿದಾರರು ತಮ್ಮ ಮನೆಯಿಂದಲೇ ಸರಳ ವಿಡಿಯೋ ಕರೆ ಮೂಲಕ ತಮ್ಮ ಜೀವಿತ ಪ್ರಮಾಣಪತ್ರ (Life Certificate) ಸಲ್ಲಿಸಬಹುದು. “ಈಗ ನಿಮ್ಮ #ಲೈಫ್ ಸರ್ಟಿಫಿಕೇಟ್ ಅನ್ನು ಮನೆಯಿಂದಲೇ ಸಲ್ಲಿಸಿ! ನಮ್ಮ #VideoLifeCertificate ಸೇವೆಯು 1ನೇ ನವೆಂಬರ್ 2021ರಂದು ಪ್ರಾರಂಭವಾಗಲಿದ್ದು, ಪಿಂಚಣಿದಾರರು ತಮ್ಮ ಜೀವಿತ ಪ್ರಮಾಣಪತ್ರಗಳನ್ನು ಸರಳ ವಿಡಿಯೋ ಕರೆ ಮೂಲಕ ಸಲ್ಲಿಸಲು ಅನುವು ಮಾಡಿಕೊಡುತ್ತದೆ,” ಎಂದು ದೇಶದ ಅಗ್ರ ಬ್ಯಾಂಕ್ ಆದ ಎಸ್‌ಬಿಐ ಟ್ವೀಟ್ ಮೂಲಕ ತಿಳಿಸಿದೆ.
SBI ಪಿಂಚಣಿದಾರರು ವಿಡಿಯೋ ಕರೆ ಮೂಲಕ ಜೀವಿತ ಪ್ರಮಾಣಪತ್ರವನ್ನು ಹೇಗೆ ಸಲ್ಲಿಸಬಹುದು? 1) ಎಸ್‌ಬಿಐ ಪಿಂಚಣಿ ಸೇವಾ ಪೋರ್ಟಲ್‌ಗೆ ಭೇಟಿ ನೀಡಬೇಕು 2) ಈಗ, VLC ಪ್ರಕ್ರಿಯೆಯನ್ನು ಪ್ರಾರಂಭಿಸಲು ‘VideoLC’ ಮೇಲೆ ಕ್ಲಿಕ್ ಮಾಡಬೇಕು 3) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪೆನ್ಷನ್ ಖಾತೆ ಸಂಖ್ಯೆಯನ್ನು ನಮೂದಿಸಬೇಕು ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒಂದು-ಬಾರಿಯ ಪಾಸ್‌ವರ್ಡ್ (OTP) ಅನ್ನು ನಮೂದಿಸಬೇಕು. 4) ‘ನಿಯಮಗಳು ಮತ್ತು ಷರತ್ತುಗಳನ್ನು’ ಓದಿ ಮತ್ತು ಸ್ವೀಕರಿಸಿದ ನಂತರ ‘ಪ್ರಯಾಣ ಪ್ರಾರಂಭಿಸಿ’ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. 5) ಮೂಲ PAN ಕಾರ್ಡ್ ಅನ್ನು ಕೈಯಲ್ಲಿ ಇರಿಸಿ ಮತ್ತು ‘I am Ready’ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. 6) ವಿಡಿಯೋ ಕರೆಯನ್ನು ಪ್ರಾರಂಭಿಸಲು ಅನುಮತಿ ನೀಡಿ ಮತ್ತು SBI ಅಧಿಕಾರಿಯು ಲಭ್ಯವಾದ ತಕ್ಷಣ ಸಂವಹನ ಪ್ರಾರಂಭವಾಗುತ್ತದೆ. 7) ಅನುಕೂಲಕ್ಕೆ ಅನುಗುಣವಾಗಿ ಸಂವಹನ ನಡೆಸಲು ವೇಳಾಪಟ್ಟಿಯನ್ನು ಸಹ ಹೊಂದಿಸಬಹುದು. 8) ಲಭ್ಯವಿರುವ SBI ಅಧಿಕಾರಿಯು ಪರದೆಯ ಮೇಲೆ 4-ಅಂಕಿಯ ಪರಿಶೀಲನೆ ಕೋಡ್ ಅನ್ನು ಓದಲು ಕೇಳುತ್ತಾರೆ. 9) ಈಗ ಪ್ಯಾನ್ ಕಾರ್ಡ್ ಅನ್ನು ಅಧಿಕಾರಿಗೆ ತೋರಿಸಿ ಮತ್ತು ಅದನ್ನು ಸೆರೆ ಹಿಡಿಯಲು ಅವರಿಗೆ ಅನುಮತಿಸಬೇಕಾಗುತ್ತದೆ. 10) ಈಗ ಅಧಿಕಾರಿಗಳು ಪಿಂಚಣಿದಾರರ ಚಿತ್ರವನ್ನು ಸೆರೆ ಹಿಡಿಯುತ್ತಾರೆ ಮತ್ತು ವಿಡಿಯೋ ಜೀವಿತ ಪ್ರಮಾಣಪತ್ರ (VLC) ಪೂರ್ಣಗೊಳ್ಳುತ್ತದೆ.
ಒಂದು ವೇಳೆ ನಿರಾಕರಿಸಿದಲ್ಲಿ ಬ್ಯಾಂಕ್‌ನಿಂದ SMS ಮೂಲಕ ತಿಳಿಸಲಾಗುತ್ತದೆ ಮತ್ತು ಪರ್ಯಾಯವಾಗಿ, ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಲು ಪಿಂಚಣಿ ಪಾವತಿಸುವ ಶಾಖೆಗೆ, ಹತ್ತಿರದ ಶಾಖೆಗೆ ಭೇಟಿ ನೀಡಬಹುದು.
ಪಿಂಚಣಿದಾರರ ಜೀವಿತ ಪ್ರಮಾಣಪತ್ರ ಸಲ್ಲಿಸುವುದು ಹೇಗೆ? ಮ್ಯಾನ್ಯುಯೆಲ್ ಸಲ್ಲಿಕೆ: ಎಸ್‌ಬಿಐ ಶಾಖೆಗೆ ಭೇಟಿ ನೀಡಬೇಕು ಮತ್ತು ಫಾರ್ಮಾಟ್ನ ಭೌತಿಕ ಪ್ರತಿಯನ್ನು ಪಡೆದುಕೊಳ್ಳಬೇಕು. ಅದನ್ನು ಭರ್ತಿ ಮಾಡಿ ಮತ್ತು ಶಾಖೆಯ ಅಧಿಕಾರಿಯಿಂದ ಸಹಿ ಪಡೆಯಬೇಕು.
SBI ಶಾಖೆಯಲ್ಲಿ ಡಿಜಿಟಲ್ ಸಲ್ಲಿಕೆ: ಹತ್ತಿರದ SBI ಶಾಖೆಗೆ ಹೋಗಿ ಮತ್ತು ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಂಚಣಿ ಪಾವತಿ ಆದೇಶ (PPO) ಸಂಖ್ಯೆ ಮತ್ತು ಖಾತೆ ಸಂಖ್ಯೆಯನ್ನು ಹಂಚಿಕೊಳ್ಳಬೇಕು. ಬಯೋಮೆಟ್ರಿಕ್ಸ್ – ಫಿಂಗರ್‌ಪ್ರಿಂಟ್ ಅಥವಾ ಐರಿಸ್ – ನೀಡಿದ ನಂತರ ಬ್ಯಾಂಕ್ ಅಧಿಕಾರಿಯು ಜೀವಿತ ಪ್ರಮಾಣವನ್ನು ರಚಿಸಲು ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣವನ್ನು ಮಾಡುತ್ತಾರೆ. ಪ್ರಮಾಣ್ ಐಡಿಯನ್ನು ಸ್ವೀಕೃತಿಯಾಗಿ ಪಡೆಯಲಾಗುತ್ತದೆ. ಆ ನಂತರ ಜೀವನ್ ಪ್ರಮಾಣ್ ಪೋರ್ಟಲ್ ಮೂಲಕ ಜೀವಿತ ಪ್ರಮಾಣಪತ್ರವನ್ನು ಡಿಜಿಟಲ್ ಮೂಲಕ ಸಲ್ಲಿಸಬಹುದು.
ಉಮಂಗ್ ಅಪ್ಲಿಕೇಷನ್: ಎಸ್‌ಬಿಐ ಶಾಖೆಗೆ ಭೇಟಿ ನೀಡುವ ಬದಲು, ಉಮಂಗ್ ಅಪ್ಲಿಕೇಷನ್ ಮೂಲಕ ಆನ್‌ಲೈನ್‌ನಲ್ಲಿಯೂ ಮಾಡಬಹುದು. ಪಿಂಚಣಿದಾರರು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಪಿಂಚಣಿದಾರರು ಬ್ಯಾಂಕ್, ಪೋಸ್ಟ್ ಆಫೀಸ್, ಮನೆ ಬಾಗಿಲಿನ ಸೇವೆಯನ್ನು ಪಡೆಯುವ ಮೂಲಕ ಅಥವಾ ಜೀವನ್ ಪ್ರಮಾಣ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ತಮ್ಮ ಜೀವಿತ ಪ್ರಮಾಣಪತ್ರಗಳನ್ನು ಸಲ್ಲಿಸಬಹುದು.
ಇದನ್ನೂ ಓದಿ: RBI Rules: ಆಗಸ್ಟ್ 1ರಿಂದ ಭಾನುವಾರ, ಬ್ಯಾಂಕ್ ರಜಾ ದಿನಗಳಲ್ಲೂ ಖಾತೆಗೆ ಜಮೆ ಆಗುತ್ತದೆ ವೇತನ, ಪೆನ್ಷನ್