Dhanteras Gold Purchase: ಧನ್ತೇರಸ್ನಲ್ಲಿ ಚಿನ್ನವನ್ನು ಏಕೆ ಖರೀದಿಸಬೇಕು ಎಂಬುದಕ್ಕೆ ಇಲ್ಲಿದೆ ವಿವರಣೆ
ಧನ್ತೇರಸ್ ಸಂದರ್ಭದಲ್ಲಿ ಚಿನ್ನವನ್ನು ಏಕೆ ಖರೀದಿ ಮಾಡಬೇಕು ಎಂಬ ಬಗ್ಗೆ ಈ ಲೇಖನದಲ್ಲಿ ವಿವರಣೆ ಇದೆ. ದೀಪಾವಳಿಗೂ ಮುಂಚೆ ಈ ಧನ್ತೇರಸ್ ಬರುತ್ತದೆ.
ದೀಪಾವಳಿ ಹಬ್ಬದ ಮೊದಲ ದಿನವಾದ ಧನ್ತೇರಸ್ ಸಮಯದಲ್ಲಿ ಚಿನ್ನದ ಖರೀದಿಯನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಹಬ್ಬದ ಸಮಯದಲ್ಲಿ ಹಳದಿ ಲೋಹವನ್ನು ಖರೀದಿಸುವುದು ಮತ್ತು ಉಡುಗೊರೆಯಾಗಿ ನೀಡುವುದು ಸಾಮಾನ್ಯವಾಗಿದೆ. ಈ ಸಮಯದಲ್ಲಿ ಚಿನ್ನದ ಬೇಡಿಕೆಯು ವಾರ್ಷಿಕ ಉತ್ತುಂಗವನ್ನು ತಲುಪಲು ಇದು ಕಾರಣವಾಗುತ್ತದೆ. ಹೂಡಿಕೆದಾರರು ಚಿನ್ನದ ಖರೀದಿಯಿಂದಾಗಿ ತಮ್ಮ ಬಂಡವಾಳಕ್ಕೆ ಆರ್ಥಿಕ ಭದ್ರತೆಯನ್ನು ತರುತ್ತದೆ ಎಂದು ನಂಬುತ್ತಾರೆ. ಈ ಹಬ್ಬದ ಋತುವಿನಲ್ಲಿ ಚಿನ್ನವನ್ನು ಖರೀದಿಸಲು ಬಯಸುವ ಹೂಡಿಕೆದಾರರಿಗೆ ಇದು ಸೂಕ್ತ ಸಮಯ ಎಂದು ತಜ್ಞರಾದ ರೆನಿಶಾ ಚೈನಾನಿ ಹೇಳಿದ್ದಾರೆ. “ಚಿನ್ನದ ದೃಷ್ಟಿಕೋನವು ಸಕಾರಾತ್ಮಕವಾಗಿದೆ ಮತ್ತು ಶೀಘ್ರದಲ್ಲೇ ದಾಖಲೆಯ ಎತ್ತರವನ್ನು ಮುಟ್ಟುವ ನಿರೀಕ್ಷೆಯಿದೆ. ಇದು ಮುಖ್ಯವಾಗಿ ಮೂರು ವಿಷಯಗಳ ಮೇಲೆ ಅವಲಂಬಿತವಾಗಿದೆ – ಹಣದುಬ್ಬರ, ಆರ್ಥಿಕ ದೃಷ್ಟಿಕೋನ ಮತ್ತು ಬೇಡಿಕೆ,” ಎಂದು ಮಾಧ್ಯಮವೊಂದರ ಜತೆಗಿನ ವಿಶೇಷ ಸಂವಾದದಲ್ಲಿ ಚೈನಾನಿ ಹೇಳಿದ್ದಾರೆ.
ಮೊದಲನೆಯದಾಗಿ, ವಿಶ್ವಾದ್ಯಂತ ಹಣದುಬ್ಬರವು ಈ ವರ್ಷ ಬಹುವರ್ಷದ ಗರಿಷ್ಠ ಮಟ್ಟಕ್ಕೆ ಏರಿದೆ ಮತ್ತು ಮುಂಬರುವ ವರ್ಷಗಳಲ್ಲಿ ಇದು ಮುಂದುವರಿಯುತ್ತದೆ. “ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹಣದುಬ್ಬರವು ಒಂಬತ್ತು ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ಆದರೆ ಅಮೆರಿಕ ಮತ್ತು ಯೂರೋ ಜೋನ್‌ನಲ್ಲಿ ಹಣದುಬ್ಬರ, ಇಂಧನ ಬೆಲೆಗಳು ಹದಿಮೂರು ವರ್ಷಗಳ ಗರಿಷ್ಠ ಮಟ್ಟದಲ್ಲಿವೆ. ಹಣದುಬ್ಬರದ ಚಿಹ್ನೆಗಳು ದಿನದಿಂದ ದಿನಕ್ಕೆ ಹೆಚ್ಚು ಗೋಚರಿಸುತ್ತಿವೆ. ಹೆಚ್ಚುತ್ತಿರುವ ಸಾರಿಗೆ ವೆಚ್ಚಗಳು, ಹೆಚ್ಚುತ್ತಿರುವ ಇಂಧನ ಬಿಲ್‌ಗಳು, ಹೆಚ್ಚುತ್ತಿರುವ ಆಹಾರ ಮತ್ತು ಸಾಮಾನ್ಯ ಸರಕುಗಳ ಬೆಲೆಗಳು, ಉತ್ಪನ್ನ ಮತ್ತು ಕಾರ್ಮಿಕರ ಕೊರತೆಯಿಂದ ಹಿಡಿದು ಎಲ್ಲವೂ ಏರಿಕೆಗೆ ಕೊಡುಗೆ ನೀಡಿದೆ,” ಎಂದು ಅವರು ತಿಳಿಸಿದ್ದಾರೆ.
ಎರಡನೆಯದಾಗಿ, ಕೊವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ದೊಡ್ಡ ರಾಷ್ಟ್ರೀಯ ಸಾಲಗಳನ್ನು ಈಗ ಮರುಪಾವತಿ ಮಾಡಬೇಕು. ಯಾವುದೇ ಸರ್ಕಾರದ ಕಾರ್ಯತಂತ್ರವು ಹಣದುಬ್ಬರದ ಮೂಲಕ ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸುವುದನ್ನು ಒಳಗೊಂಡಿರುತ್ತದೆ. “ಆರ್ಥಿಕ ಪರಿಸ್ಥಿತಿಯು ಭೀಕರವಾಗಿದೆ. ಮತ್ತು ರಾಷ್ಟ್ರೀಯ ಆರ್ಥಿಕತೆಗಳ ಆರೋಗ್ಯ ಕೆಟ್ಟ ಸ್ಥಿತಿಯಲ್ಲಿದೆ. ಆದರೂ ಹೂಡಿಕೆ ಸಮುದಾಯವು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ,” ಎಂದು ಅವರು ಹೇಳಿದ್ದಾರೆ.
“ಮೂರನೆಯದಾಗಿ, ಚಿನ್ನದ ಆಭರಣಗಳು, ಬಾರ್‌ಗಳು ಮತ್ತು ನಾಣ್ಯಗಳಿಗೆ ರೀಟೇಲ್ ಬೇಡಿಕೆಯು ಉದಯೋನ್ಮುಖ ದೇಶಗಳಲ್ಲಿ ಹಬ್ಬದ ಋತುವಿನಲ್ಲಿ ಮತ್ತು ಮುಂದಿನ 5-6 ತಿಂಗಳು ಬಹಳ ಪ್ರಬಲವಾಗಿದೆ” ಎಂದು ಚೈನಾನಿ ತಿಳಿಸಿದ್ದಾರೆ. ಆದರೂ ಕೊವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಕಳವಳಗಳ ಕಾರಣ, ವಿಶೇಷವಾಗಿ ಹಬ್ಬಗಳ ಸಮಯದಲ್ಲಿ ಸೇರುವ ಜನಸಂದಣಿಯನ್ನು ಗಮನಿಸಿದರೆ ಆಭರಣ ಅಂಗಡಿಗಳಿಗೆ ಭೇಟಿ ನೀಡುವುದು ಇನ್ನೂ ಸವಾಲಿನ ಸಂಗತಿಯಾಗಿದೆ. ಆದ್ದರಿಂದ ಡಿಜಿಟಲ್ ಚಿನ್ನದ ಕಡೆಗೆ ಭಾರತದಲ್ಲಿ ಒಲವು ತೋರಲಾಗುತ್ತಿದೆ.
ಗಿಲ್ಡೆಡ್‌ನ ಸಂಸ್ಥಾಪಕ ಮತ್ತು ಸಿಇಒ ಅಶ್ರಫ್ ರಿಜ್ವಿ ಅವರ ಮಾತುಗಳಲ್ಲಿ ಹೇಳುವುದಾದರೆ, “ಡಿಜಿಟಲ್ ಚಿನ್ನವು ದೀಪಾವಳಿಯ ಸಮಯದಲ್ಲಿ ಉತ್ತಮ ಖರೀದಿಯಾಗಿದೆ. ಏಕೆಂದರೆ ಇದು ಭೌತಿಕ ಚಿನ್ನದ ಎಲ್ಲ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಭೌತಿಕ ಚಿನ್ನದ ಖರೀದಿಯೊಂದಿಗೆ ಉಂಟಾಗುವ ತೊಂದರೆಗಳನ್ನು ನಿವಾರಿಸುತ್ತದೆ. ಡಿಜಿಟಲ್ ಚಿನ್ನದೊಂದಿಗೆ ಹೂಡಿಕೆದಾರರು ಸಂಗ್ರಹ, ಸುರಕ್ಷತೆ ಮತ್ತು ಸಾರಿಗೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಹೆಚ್ಚುವರಿಯಾಗಿ, ಯಾವುದೇ ವಿಮಾ ವೆಚ್ಚಗಳು ಮತ್ತು ಡಿಜಿಟಲ್ ಚಿನ್ನಕ್ಕೆ ಮೇಕಿಂಗ್ ಶುಲ್ಕಗಳು ಇಲ್ಲ. ಆದ್ದರಿಂದ ಖರೀದಿದಾರರಿಗೆ ಹೆಚ್ಚು ಉಳಿತಾಯವನ್ನು ಒದಗಿಸುತ್ತದೆ.”
ಖರೀದಿಸಿದ ಚಿನ್ನಕ್ಕೆ 24×7 ಬಳಸಲು ಸಾಧ್ಯ ಇರುವ ಮೊಬೈಲ್ ಅಪ್ಲಿಕೇಷನ್ ಮೂಲಕ ಭಾರತೀಯರು ಡಿಜಿಟಲ್ ಚಿನ್ನವನ್ನು ಅನುಕೂಲಕರವಾಗಿ ಖರೀದಿಸಬಹುದು ಮತ್ತು ಉಡುಗೊರೆಯಾಗಿ ನೀಡಬಹುದು. ಒಂದು ಗ್ರಾಂ ಚಿನ್ನವನ್ನು ಸಹ ಖರೀದಿಸಬಹುದು. ಪ್ರತಿಯೊಬ್ಬರ ದೀಪಾವಳಿ ಉಡುಗೊರೆಗೆ ಇದು ಹೊಂದಿಕೊಳ್ಳುತ್ತದೆ. ಇದು ಪ್ರಮುಖ ಪ್ರಯೋಜನವಾಗಿದೆ ಎಂದು ರಿಜ್ವಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: Diwali Festival: ದೀಪಾವಳಿ ಹಬ್ಬಕ್ಕೆ ಜ್ಯುವೆಲ್ಲರಿಗಳಿಂದ ಆಕರ್ಷಕ ಆಫರ್ಗಳು