Anil Ambani: ಫೀನಿಕ್ಸ್ ಮೋಡ್​​ನಲ್ಲಿದ್ದ ಅನಿಲ್ ಅಂಬಾನಿಗೆ ಕಂಟಕ? ಎಸ್​​ಬಿಐನಿಂದ ಸಾಲ ವಂಚನೆ ಆರೋಪ

Anil Ambani faces fresh challenge from SBI: ಅನಿಲ್ ಅಂಬಾನಿಗೆ ಹೊಸ ಸಂಕಷ್ಟ ಎದುರಾಗುವಂತಿದೆ. ಹಿಂದೆ ಬ್ಯಾಂಕುಗಳಿಂದ ಪಡೆದ ಕೆಲ ಸಾಲವನ್ನು ಮೂಲ ಉದ್ದೇಶಕ್ಕೆ ಬಳಕೆ ಮಾಡಿಲ್ಲ ಎಂಬ ಆರೋಪ ಎದುರಾಗಿದೆ. ಎಸ್​​ಬಿಐನ ವಂಚನೆ ಪತ್ತೆ ಸಮಿತಿ ಎರಡು ಪ್ರಕರಣಗಳನ್ನು ಗುರುತಿಸಿದೆ. ಈ ಸಂಬಂದ ಅನಿಲ್ ಅಂಬಾನಿ ವಿರುದ್ಧ ಆರ್​​ಬಿಐ ಬಳಿ ದೂರು ನೀಡಲು ನಿರ್ಧರಿಸಿದೆ.

Anil Ambani: ಫೀನಿಕ್ಸ್ ಮೋಡ್​​ನಲ್ಲಿದ್ದ ಅನಿಲ್ ಅಂಬಾನಿಗೆ ಕಂಟಕ? ಎಸ್​​ಬಿಐನಿಂದ ಸಾಲ ವಂಚನೆ ಆರೋಪ
ಅನಿಲ್ ಅಂಬಾನಿ

Updated on: Jul 02, 2025 | 6:26 PM

ನವದೆಹಲಿ, ಜುಲೈ 2: ಸೋತು ಸುಣ್ಣವಾಗಿ ಈಗ ಪ್ರಮುಖ ಉದ್ಯಮಗಳಲ್ಲಿ ನೆಲೆಯೂರಿ ಭರ್ಜರಿ ಕಂಬ್ಯಾಕ್ ಮಾಡುತ್ತಿರುವ ಅನಿಲ್ ಅಂಬಾನಿ ಅವರಿಗೆ ಈಗ ದೊಡ್ಡ ತಡೆಯೊಂದು ನಿರ್ಮಾಣವಾಗಿದೆ. ಅನಿಲ್ ಅಂಬಾನಿ ವಿರುದ್ಧ ದೂರು ನೀಡಲು ಸ್ಟೇಟ್ ಬ್ಯಾಂಕ್ ಇಂಡಿಯಾ ಯೋಜಿಸಿದೆ. ಅನಿಲ್ ಅಂಬಾನಿ ಅವರ ರಿಲಾಯನ್ಸ್ ಕಮ್ಯೂನಿಕೇಶನ್ಸ್ (Reliance Communications Ltd) ಕಂಪನಿಯ ಸಾಲದ ಖಾತೆಯನ್ನು ‘ವಂಚನೆ’ ಎಂದು ವರ್ಗೀಕರಿಸಲು ಎಸ್​ಬಿಐ ನಿರ್ಧರಿಸಿರುವುದು ತಿಳಿದುಬಂದಿದೆ. ಈ ವಿಚಾರವನ್ನು ಎಕ್ಸ್​ಚೇಂಜ್ ಫೈಲಿಂಗ್​​ನಲ್ಲಿ ತಿಳಿಸಲಾಗಿದೆ.

ಬ್ಯಾಂಕುಗಳಿಂದ ಪಡೆದ ಸಾಲವನ್ನು ನಿಗದಿತ ಉದ್ದೇಶಗಳಿಗೆ ಬಳಸದೆ ಬೇರೆಯದಕ್ಕೆ ಬಳಸಿರುವ ಎರಡು ಪ್ರಮುಖ ಪ್ರಕರಣಗಳನ್ನು ಎಸ್​​ಬಿಐನ ಎಫ್​​ಐಸಿ ಅಥವಾ ವಂಚನೆ ಪತ್ತೆ ಸಮಿತಿ ಗುರುತಿಸಿದೆ. ಹೀಗಾಗಿ, ಲೋನ್ ಅಕೌಂಟ್ ಅನ್ನು ಫ್ರಾಡ್ ಪಟ್ಟಿಗೆ ಸೇರಿಸಲು ನಿರ್ಧರಿಸಿರುವ ಎಸ್​​ಬಿಐ, ಆ ಕಂಪನಿಯ ನಿರ್ದೇಶಕ ಅನಿಲ್ ಅಂಬಾನಿ ವಿರುದ್ಧ ಆರ್​ಬಿಐನಲ್ಲಿ ದೂರು ನೀಡಲೂ ಯೋಜಿಸಿದೆ.

ಎಸ್​​ಬಿಐ ಮಾಡುತ್ತಿರುವ ಆರೋಪಗಳೇನು?

ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಗ್ರೂಪ್​ಗೆ ಸೇರಿದ ರಿಲಾಯನ್ಸ್ ಕಮ್ಯೂನಿಕೇಶನ್ಸ್, ರಿಲಾಯನ್ಸ್ ಇನ್​​ಫ್ರಾಟೆಲ್ ಮತ್ತು ರಿಲಾಯನ್ಸ್ ಟೆಲಿಕಾಂ ಕಂಪನಿಗಳು ವಿವಿಧ ಬ್ಯಾಂಕುಗಳಿಂದ ಒಟ್ಟು 31,580 ಕೋಟಿ ರೂ ಮೊತ್ತದ ಸಾಲ ಪಡೆದಿವೆ. ಈ ಸಾಲವನ್ನು ಉಪಯೋಗಿಸುವ ವಿಚಾರದಲ್ಲಿ ಎರಡು ದೊಡ್ಡ ನಿಯಮ ಉಲ್ಲಂಘನೆಯನ್ನು ಎಸ್​​ಬಿಐನ ಈ ಸಮಿತಿ ಪತ್ತೆ ಮಾಡಿದೆಯಂತೆ.

ಇದನ್ನೂ ಓದಿ: SBI special: 175 ದೇಶಗಳ ಜಿಡಿಪಿಗಿಂತ ಎಸ್​ಬಿಐ ದೊಡ್ಡದು; ಖಾತೆದಾರರ ಸಂಖ್ಯೆ 190 ದೇಶಗಳ ಜನಸಂಖ್ಯೆಗಿಂತ ಹೆಚ್ಚು

2017ರ ಫೆಬ್ರುವರಿ 8ರಂದು ದೇನಾ ಬ್ಯಾಂಕ್​​ನಿಂದ ರಿಲಾಯನ್ಸ್ ಕಮ್ಯೂನಿಕೇಶನ್ಸ್ 250 ಕೋಟಿ ರೂ ಸಾಲ ಪಡೆದಿತ್ತು. ಆದರೆ, ಈ ಸಾಲದ ಹಣವನ್ನು ರೈಲ್​ಟೆಲ್ ಕಾರ್ಪೊರೇಶನ್ (ಆರ್​​ಸಿಐಎಲ್) ಸಂಸ್ಥೆಗೆ ಪಾವತಿಸಲು ಬಳಕೆ ಮಾಡಲಾಗಿತ್ತು. ದೇನಾ ಬ್ಯಾಂಕ್​​ನಿಂದ ಸಾಲ ಪಡೆದ ಉದ್ದೇಶವೇ ಬೇರೆಯಾಗಿತ್ತು. ಕಂಪನಿ ಅದನ್ನು ಬಳಸಿದ್ದೇ ಬೇರೆ ಉದ್ದೇಶಕ್ಕಾಗಿತ್ತು. ಬಿಎನ್​​ಪಿ ಪರಿಬಾಸ್​​ನಿಂದ ಪಡೆದಿದ್ದ ವಾಣಿಜ್ಯ ಸಾಲವನ್ನು (ಇಸಿಬಿ ಲೋನ್) ಮರುಪಾವತಿಸಲು ಅದನ್ನು ಬಳಸಲಾಗಿತ್ತು ಎಂದು ರಿಲಾಯನ್ಸ್ ಕಮ್ಯೂನಿಕೇಶನ್ ಸಂಸ್ಥೆ ಹೇಳಿಕೊಂಡಿತ್ತು.

ಎಸ್​​ಬಿಐನ ವಂಚಕ ಪತ್ತೆ ಸಮಿತಿ ಪ್ರಕಾರ ಇದು ಆರ್​ಬಿಐನ ಗಮನ ತಪ್ಪಿಸಲು ಮಾಡಿದ ಪ್ರಯತ್ನವಾಗಿತ್ತು. ಇಸಿಬಿ ಲೋನ್​​ಗಳ ವಿಚಾರದಲ್ಲಿ ಆರ್​​ಬಿಐನ ಅನುಮೋದನೆ ಬೇಕಾಗುತ್ತದೆ. ಇದನ್ನು ತಪ್ಪಿಸಲು ರಿಲಾಯನ್ಸ್ ಕಮ್ಯೂನಿಕೇಶನ್ಸ್ ತನ್ನ ಅಂಗಸಂಸ್ಥೆ ಮೂಲಕ ವರ್ಗಾವಣೆ ಮಾಡಿದಂತೆ ಕಾಣುತ್ತದೆ ಎಂದು ಹೇಳಿದೆ.

ಐಐಎಫ್​ಸಿಎಲ್ ಸಾಲದಲ್ಲೂ ರಿಲಾಯನ್ಸ್ ವಂಚನೆ?

ರಿಲಾಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆ ತನ್ನ ಬಂಡವಾಳ ವೆಚ್ಚದ ಅಗತ್ಯಗಳನ್ನು ಪೂರೈಸಲು ಇಂಡಿಯಾ ಇನ್​​ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ (ಐಐಎಫ್​ಸಿಎಲ್) ಎನ್ನುವ ಹಣಕಾಸು ಸಂಸ್ಥೆಯಿಂದ 248 ಕೋಟಿ ರೂ ಸಾಲ ಮಂಜೂರಾತಿತ್ತು. ಆದರೆ, ರಿಲಾಯನ್ಸ್ ಕಮ್ಯೂನಿಕೇಶನ್ಸ್ ನಿಯಮಬಾಹಿರವಾಗಿ ಆರ್​​ಐಟಿಎಲ್​ಗೆ 63 ಕೋಟಿ ರೂ, ಆರ್​​ಐಇಎಲ್​​ಗೆ 77 ಕೋಟಿ ರೂ ರವಾನೆ ಮಾಡಿತ್ತು. ನೇರವಾಗಿ ಹಣ ವರ್ಗಾವಣೆ ಮಾಡುವ ಬದಲು ರೈಲ್​ಟೆಲ್ ಕಾರ್ಪೊರೇಶನ್ (ಆರ್​​ಸಿಐಎಲ್) ಮುಖಾಂತರ ಮಾಡಲಾಗಿತ್ತು ಎಂದು ಎಸ್​​ಬಿಐನ ಫ್ರಾಡ್ ಡಿಟೆಕ್ಷನ್ ಕಮಿಟಿ ಪತ್ತೆ ಮಾಡಿದೆ.

ಇದನ್ನೂ ಓದಿ: ಆರ್​ಬಿಐನ ನೂತನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಕೇಶವನ್ ರಾಮಚಂದ್ರನ್ ನೇಮಕ; ಇಲ್ಲಿದೆ ರಿಸರ್ವ್ ಬ್ಯಾಂಕ್ ಮುಖ್ಯ ಅಧಿಕಾರಿಗಳ ಪಟ್ಟಿ

ರಿಲಾಯನ್ಸ್ ಕಮ್ಯೂನಿಕೇಶನ್ಸ್​​ನ ಬ್ಯಾಂಕ್ ಸಾಲದ ಹರಿವನ್ನು ಕೂಲಂಕಷವಾಗಿ ಪರಿಶೀಲಿಸಿರುವ ಎಸ್​​ಬಿಐನ ಈ ಸಮಿತಿಯು ಎರಡು ಪ್ರಮುಖ ಪ್ರಕರಣಗಳನ್ನು ಹೈಲೈಟ್ ಮಾಡಿದೆ. ಈ ಎರಡು ಪ್ರಕರಣಗಳಲ್ಲಿ, ಕೆಲ ಫಂಡ್​​ಗಳನ್ನು ಘೋಷಿತ ಉದ್ದೇಶಕ್ಕೆ ಬಳಸದೇ ಇರುವುದು ಎಸ್​​ಬಿಐನ ಆರೋಪವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ