ನವದೆಹಲಿ, ಫೆಬ್ರುವರಿ 5: ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಗಾದೆ ಮಾತನ್ನು ಈಗ ಅಕ್ಷರಶಃ ಪಾಲಿಸಬೇಕಾದ ಸಂದರ್ಭ ಬಂದಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ (AI Technology) ಬಂದ ಮೇಲೆ ಹೊಸ ಬೆಳಕಿನ ಹೊಸ ಜಗತ್ತು ಸೃಷ್ಟಿಯಾಗುತ್ತಿದೆ. ಹಾಗೆಯೇ, ಕತ್ತಲೆ ಪ್ರಪಂಚವೂ ಸೃಷ್ಟಿಯಾಗುತ್ತಿದೆ. ಅಸಲಿಗೆ ತಲೆಗೆ ಹೊಡೆದಂತೆ ನಕಲಿ ಸೃಷ್ಟಿಯಾಗುತ್ತದೆ. ಎಐ ಟೆಕ್ನಾಲಜಿಯ ಸೈಡ್ ಎಫೆಕ್ಟ್ಗಳಲ್ಲಿ ಡೀಪ್ಫೇಕ್ (Deepfake) ಒಂದು. ಡೀಪ್ಫೇಕ್ ಈಗಾಗಲೇ ಸೃಷ್ಟಿಸಿರುವ ಅವಾಂತರಗಳು ಗಾಬರಿ ಹುಟ್ಟಿಸುವಂತಿವೆ. ರಶ್ಮಿಕಾ ಮಂದಣ್ಣರ ಡೀಪ್ಫೇಕ್ ವಿಡಿಯೋ ಅದೆಷ್ಟು ಸಂಚಲನ ಸೃಷ್ಟಿಸಿತ್ತು ನೋಡಿ. ಇದೀಗ ಹಾಂಕಾಂಗ್ನ ಕಂಪನಿಯೊಂದು ಡೀಪ್ಫೇಕ್ ವಂಚನೆಗೆ ಒಳಗಾಗಿ 200ಕ್ಕೂ ಕೋಟಿ ರೂ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಸೌತ್ ಚೀನಾ ಮಾರ್ನಿಂಗ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ, ವಂಚಕರು ಕಂಪನಿಯೊಂದರ ಉದ್ಯೋಗಿಗಳ ಕಾನ್ಫರೆನ್ಸ್ ಕಾಲ್ ಸೃಷ್ಟಿಸಿದ್ದಾರೆ. ಅದರಲ್ಲಿ ಕಂಪನಿಯ ಸಿಎಫ್ಒ ಅವರ ರೀತಿಯಲ್ಲೇ ಇರುವ ಅವತಾರ್ ಅನ್ನು ಸೃಷ್ಟಿಸಿ ಕಾನ್ಫರೆನ್ಸ್ ಕಾಲ್ನಲ್ಲಿ ಅವರಂತೆಯೇ ಕಾಣುವ ಹಾಗೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ಧ್ವನಿ ಕೂಡ ನೈಜ ಸಿಎಫ್ಒ ಅವರದ್ದಂತೆಯೇ ನಕಲು ಮಾಡಲಾಗಿತ್ತು. ಎಲ್ಲವೂ ಕೂಡ ರಿಯಲ್ ಟೈಮ್ನಲ್ಲಿ ಕಾನ್ಫರೆನ್ಸ್ ಕಾಲ್ ನಡೆದಿತ್ತು. ಈ ಕಾಲ್ನಲ್ಲಿದ್ದ ರಿಯಲ್ ಉದ್ಯೋಗಿಗಳಿಗೆ ತಾವು ನಕಲಿ ಸಿಎಫ್ಒ ಜೊತೆ ಮಾತನಾಡುತ್ತಿದ್ದೇವೆ ಎಂಬುದು ಗೊತ್ತೇ ಆಗಲಿಲ್ಲ. ಅಷ್ಟು ಮಟ್ಟಿಗೆ ಸಿಎಫ್ಒ ಅವರ ಚಹರೆ ಮತ್ತು ಧ್ವನಿಯನ್ನು ಡೀಪ್ಫೇಕ್ ಮೂಲಕ ಸೃಷ್ಟಿಸಲಾಗಿತ್ತು.
ಇದನ್ನೂ ಓದಿ: ಆಧಾರ್ ನಂಬರ್ ದುರುಪಯೋಗವಾಗುವ ಭಯವಾ? ಈ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ
ಈ ವಿಡಿಯೋ ಕಾನ್ಫೆರೆನ್ಸ್ನಲ್ಲಿ ಉದ್ಯೋಗಿಗಳಿಗೆ ಬ್ಯಾಂಕ್ ಹಣ ವರ್ಗಾವಣೆ ಮಾಡುವಂತೆ ಸೂಚಿಸಲಾಗಿತ್ತು. ಐದು ಬೇರೆ ಬೇರೆ ಬ್ಯಾಂಕ್ ಅಕೌಂಟ್ಗಳಿಗೆ ಒಟ್ಟು 200 ಮಿಲಿಯನ್ ಹಾಂಕಾಂಗ್ ಡಾಲರ್ ಹಾಕಿದ್ದರು ಉದ್ಯೋಗಿಗಳು. ಅಂದರೆ ಸುಮಾರು 200 ಕೋಟಿ ರುಪಾಯಿ ಹಣವನ್ನು ಕಂಪನಿಯ ಬ್ಯಾಂಕ್ ಅಕೌಂಟ್ಗಳಿಂದಲೇ ಟ್ರಾನ್ಸ್ಫರ್ ಮಾಡಲಾಗಿತ್ತು. ಸ್ವತಃ ಸಿಎಫ್ಒ ಅವರೇ ಹೇಳಿದ್ದಾರೆಂದು ತಪ್ಪಾಗಿ ಭಾವಿಸಿ ಉದ್ಯೋಗಿಗಳು ಹಣ ಟ್ರಾನ್ಸ್ಫರ್ ಮಾಡಿದ್ದರು.
ಹಾಂಕಾಂಗ್ ಪೊಲೀಸರು ಮೊದಲ ಬಾರಿಗೆ ಹಣಕಾಸು ಸಂಸ್ಥೆಗೆ ಡೀಪ್ ಫೇಕ್ ಟೆಕ್ನಾಲಜಿ ಮೂಲಕ ವಂಚನೆ ಮಾಡಿರುವುದನ್ನು ಕಂಡಿದ್ದರು. ‘ಈ ಬಾರಿ ಬಹು ಜನರಿರುವ ವಿಡಿಯೋ ಕಾನ್ಫರೆನ್ಸ್ನಲ್ಲಿ ನೀವು ನೋಡುವ ಪ್ರತಿಯೊಬ್ಬರೂ ಫೇಕ್ ಆಗಿರುತ್ತಾರೆ’ ಎಂದು ಪೊಲೀಸ್ ಅಧಿಕಾರಿ ಚಾನ್ ಶುನ್ ಚಿಂಗ್ ಹೇಳುತ್ತಾರೆ.
ಇದನ್ನೂ ಓದಿ: ಭಾರತದ ಷೇರುಮಾರುಕಟ್ಟೆಗೆ ಬರಲು ಹ್ಯೂಂಡಾಯ್ ಕಾರ್ ಕಂಪನಿ ಆಲೋಚನೆ; ಬಂದರೆ ಎಲ್ಲಾ ದಾಖಲೆ ಧೂಳೀಪಟವಾಗುವ ಸಾಧ್ಯತೆ
ಡೀಪ್ಫೇಕ್ ಟೆಕ್ನಾಲಜಿ ಈಗ ವಿಶ್ವಾದ್ಯಂತ ತಲೆನೋವಿನ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ದೊಡ್ಡ ಉದ್ಯಮಿಗಳು, ಸೆಲಬ್ರಿಟಿಗಳು ಮೊದಲಾದವರನ್ನು ಡೀಪ್ಫೇಕ್ ಮೂಲಕ ನಕಲು ಮಾಡುತ್ತಿರುವುದು ಹೆಚ್ಚುತ್ತಿದೆ. ಸ್ವತಃ ನರೇಂದ್ರ ಮೋದಿ ಅವರನ್ನೇ ನಕಲು ಮಾಡಲಾಗದೆ. ಇಲಾನ್ ಮಸ್ಕ್ ಅವರಂತಹ ಎಐ ಟೆಕ್ನಾಲಜಿ ಪ್ರೋತ್ಸಾಹಕರೇ ಡೀಪ್ಫೆಕ್ ಬಗ್ಗೆ ಹುಷಾರು ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ