ಇದೇ ಮೊದಲ ಬಾರಿಗೆ 86,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಷೇರು ಮಾರುಕಟ್ಟೆಯ ಪಾಸಿಟಿವ್ ಓಟಕ್ಕೆ ಕಾರಣಗಳಿವು

Sensex and Nifty in record high: ಭಾರತದ ಷೇರುಮಾರುಕಟ್ಟೆಯ ಎರಡು ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದೂ ಪಾಸಿಟಿವ್ ಆಗಿವೆ. ಸೆನ್ಸೆಕ್ಸ್ ಇದೇ ಮೊದಲ ಬರಿಗೆ 86,000 ಅಂಕಗಳ ಗಡಿ ದಾಟಿದೆ. ನಿಫ್ಟಿ 26,300 ಅಂಕಗಳ ಗಡಿಯನ್ನೂ ಮುಟ್ಟಿದೆ. ಈ ಎರಡೂ ಸೂಚ್ಯಂಕಗಳು ಹೊಸ ದಾಖಲೆ ಎತ್ತರಕ್ಕೆ ಏರಲು ಕಾರಣವಾದ ಅಂಶಗಳು ಯಾವುವು?

ಇದೇ ಮೊದಲ ಬಾರಿಗೆ 86,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಷೇರು ಮಾರುಕಟ್ಟೆಯ ಪಾಸಿಟಿವ್ ಓಟಕ್ಕೆ ಕಾರಣಗಳಿವು
ಷೇರು ಮಾರುಕಟ್ಟೆ

Updated on: Nov 27, 2025 | 12:02 PM

ನವದೆಹಲಿ, ನವೆಂಬರ್ 27: ಭಾರತದ ಷೇರು ಮಾರುಕಟ್ಟೆ (stock market) ನಿನ್ನೆಯಂತೆ ಇಂದೂ ಕೂಡ ಪಾಸಿಟಿವ್ ಆಗಿ ಸಾಗುತ್ತಿದೆ. ಸೆನ್ಸೆನ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಗುರುವಾರ ಹಸಿರುಬಣ್ಣದಲ್ಲಿವೆ. ಈ ಎರಡೂ ಪ್ರಮುಖ ಇಂಡೆಕ್ಸ್​ಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿವೆ. ಇದರೊಂದಿಗೆ ಭಾರತೀಯ ಹೂಡಿಕೆದಾರರಿಗೆ ಉತ್ಸಾಹ ಸಿಕ್ಕಂತಾಗಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕ (sensex) ಗುರುವಾರ ಬೆಳಗ್ಗೆ 86,026.18 ಮಟ್ಟ ಮುಟ್ಟಿತು. ಇದು 80,000 ಅಂಕಗಳ ಮಟ್ಟ ಮುಟ್ಟಿದ್ದು ಇದೇ ಮೊದಲು.

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ50 ಸೂಚ್ಯಂಕ 26,306.95 ಅಂಕಗಳ ಮಟ್ಟಕ್ಕೆ ಹೋಗಿದೆ. ಇದು ನಿಫ್ಟಿಯ ಈವರೆಗಿನ ಗರಿಷ್ಠ ಎತ್ತರವೆನಿಸಿದೆ. 2024ರ ಸೆಪ್ಟೆಂಬರ್ 27ರಂದು ಇದು 26,277.35 ಅಂಕಗಳ ಮಟ್ಟಕ್ಕೆ ಹೋಗಿದ್ದು, ಈವರೆಗಿನ ದಾಖಲೆಯಾಗಿತ್ತು. ಸೆನ್ಸೆಕ್ಸ್ ಮತ್ತು ನಿಫ್ಟಿ ಈ ಉತ್ತಮ ಓಟಕ್ಕೆ ಕಾರಣವಾದ ಕೆಲ ಸಂಗತಿಗಳು ಇಂತಿವೆ:

ಇದನ್ನೂ ಓದಿ: ಭಾರತದ ಜಿಡಿಪಿದರ ಈ ವರ್ಷದ ಮೊದಲಾರ್ಧದಲ್ಲಿ ಶೇ. 7.6; ಐಸಿಐಸಿಐ ವರದಿಯಲ್ಲಿ ನಿರೀಕ್ಷೆ

ವಿದೇಶೀ ಹೂಡಿಕೆಗಳ ಹೆಚ್ಚಿನ ಒಳಹರಿವು

ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು (ಎಫ್​ಪಿಐ) ಭಾರತದ ಮಾರುಕಟ್ಟೆಯತ್ತ ನುಗ್ಗಿ ಬರುತ್ತಿದ್ದಾರೆ. ಮೊನ್ನೆಯಿಂದಲೂ ಈ ಟ್ರೆಂಡ್ ನಡೆದಿದೆ. ಮಂಗಳವಾರ 785 ಕೋಟಿ ರೂ, ಬುಧವಾರ 4,778 ಕೋಟಿ ರೂ ಮೊತ್ತದ ಹೂಡಿಕೆಗಳು ಎಫ್​ಪಿಐಗಳಿಂದ ಬಂದಿವೆ. ಇವತ್ತು ಗುರುವಾರವೂ ಇದು ಮುಂದುವರಿದಿದೆ.

ಅಮೆರಿಕದ ಬಡ್ಡಿದರ ಕಡಿತದ ಸಾಧ್ಯತೆ

ಅಮೆರಿಕದ ಸೆಂಟ್ರಲ್ ಬ್ಯಾಂಕ್ ಎನಿಸಿದ ಫೆಡರಲ್ ರಿಸರ್ವ್ ಡಿಸೆಂಬರ್​ನಲ್ಲಿ ತನ್ನ ಬಡ್ಡಿದರ ಕಡಿತದ ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವ ಸುದ್ದಿ ದಟ್ಟವಾಗಿದೆ. ಈ ನಿರೀಕ್ಷೆಯಲ್ಲಿ ಮಾರುಕಟ್ಟೆಗೆ ಸ್ವಲ್ಪ ಉತ್ಸಾಹ ಮೂಡಿಸಿದೆ. ಜಾಗತಿಕವಾಗಿ ವಿವಿಧ ಮಾರುಕಟ್ಟೆಗಳೂ ಕೂಡ ಅಮೆರಿಕದ ಬಡ್ಡಿದರ ಇಳಿಯುವ ನಿರೀಕ್ಷೆಯಲ್ಲಿ ಉತ್ಸಾಹದಲ್ಲಿವೆ. ಭಾರತದಲ್ಲೂ ಆರ್​ಬಿಐ ರಿಪೋ ದರ ಕಡಿತಗೊಳಿಸುವ ನಿರೀಕ್ಷೆ ಇದೆ. ಭಾರತದ ಮಾರುಕಟ್ಟೆಗೂ ಇದು ಸಕಾರಾತ್ಮಕ ಸುದ್ದಿ ಎನಿಸಿದೆ.

ಇದನ್ನೂ ಓದಿ: ಮುಂದಿನ ವರ್ಷ 5,000 ರೂ ಡಾಲರ್​ಗೆ ಏರಲಿದೆ ಚಿನ್ನದ ಬೆಲೆ; ಭಾರತದಲ್ಲಿ ಎಷ್ಟು ಹೆಚ್ಚಬಹುದು ಇದರ ಬೆಲೆ?

ಕಚ್ಚಾ ತೈಲ ಬೆಲೆಗಳ ಇಳಿಕೆ

ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳು (crude oil) ಕಡಿಮೆಗೊಳ್ಳುತ್ತಿವೆ. ಬ್ರೆಂಟ್ ಕ್ರೂಡ್ (Brent Crude) ಬ್ಯಾರಲ್​ಗೆ 62.83 ಡಾಲರ್​ಗೆ ಇಳಿದಿದೆ. ತೈಲ ಬೆಲೆ ಕಡಿಮೆ ಆದರೆ ಭಾರತಕ್ಕೆ ಆಮದು ವೆಚ್ಚ ತಗ್ಗುತ್ತದೆ. ಇದರಿಂದ ಆರ್ಥಿಕತೆಗೆ ಒಟ್ಟಾರೆ ಲಾಭ ಸಿಕ್ಕಂತಾಗುತ್ತದೆ. ಹೀಗಾಗಿ, ಷೇರು ಮಾರುಕಟ್ಟೆಯೂ ಪಾಸಿಟಿವ್ ಆಗಿರಲು ಇದು ಸಹಾಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ