ನವದೆಹಲಿ, ಫೆಬ್ರುವರಿ 8: ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಎಂಪಿಸಿ ಸಭೆಯ ನಿರ್ಧಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ (RBI Governor Shaktikanta Das Pressmeet) ಪ್ರಕಟಿಸುತ್ತಿರುವಂತೆಯೇ ಷೇರು ಮಾರುಕಟ್ಟೆಯಲ್ಲಿ ತುಸು ಅಲುಗಾಟ ಶುರುವಾಗಿತ್ತು. ರೆಪೋ ದರ (Repo Rate) ಮೊದಲಾದ ಪ್ರಮುಖ ದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿರುವುದು ವಿವಿಧ ಷೇರುಗಳಿಗೆ ಹಿನ್ನಡೆ ತಂದಿದಂತೆ ತೋರಿದೆ. ಹಲವು ಪ್ರಮುಖ ಸೂಚ್ಯಂಕಗಳು ಇಳಿಕೆ ಕಂಡಿವೆ. ಅದರಲ್ಲೂ ಬ್ಯಾಂಕಿಂಗ್ ಸೂಚ್ಯಂಕವಾದ ನಿಫ್ಟಿ ಬ್ಯಾಂಕ್ ಶೇ. 0.71ರಷ್ಟು ಕುಸಿತ ಕಂಡಿದೆ. ಎಸ್ಬಿಐ, ಬ್ಯಾಂಕ್ ಆಫ್ ಬರೋಡಾ ಬಿಟ್ಟರೆ ಉಳಿದ ಬಹುತೇಕ ಪ್ರಮುಖ ಬ್ಯಾಂಕುಗಳ ಷೇರುಬೆಲೆ ಕಡಿಮೆ ಆಗಿದೆ.
ಬ್ಯಾಂಕ್ ಸ್ಟಾಕ್ಗಳು ಒಳಗೊಂಡಿರುವ ಸೂಚ್ಯಂಕಗಳೆಲ್ಲವೂ ಇವತ್ತು ಕಡಿಮೆ ಆಗಿವೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಪ್ರಮುಖ ಸೂಚ್ಯಂಕಗಳು ಹಿನ್ನಡೆ ಕಂಡಿವೆ. ಬಿಎಸ್ಇ ಬ್ಯಾಂಕೆಕ್ಸ್ ಶೇ. 0.81ರಷ್ಟು ಕಡಿಮೆ ಆಗಿದೆ. ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಇಂಡೆಕ್ಸ್ ಹೊರತುಪಡಿಸಿ ಉಳಿದೆಲ್ಲಾ ಬಿಎಸ್ಇ ಸೂಚ್ಯಂಕಗಳು ಕಳೆಗುಂದಿವೆ. ಸೆನ್ಸೆಕ್ಸ್ ಕೂಡ ಇಳಿಮುಖವಾಗಿದೆ.
ಇದನ್ನೂ ಓದಿ: ರೆಪೋ ದರಲ್ಲಿ ಬದಲಾವಣೆ ಇಲ್ಲ: ಬಡ್ಡಿದರ ಶೇ. 6.5ರಲ್ಲಿ ಮುಂದುವರಿಕೆ: ಆರ್ಬಿಐ ಘೋಷಣೆ
ಎನ್ಎಸ್ಇ ಮತ್ತು ಬಿಎಸ್ಇಯ ಹಲವು ಸೂಚ್ಯಂಕಗಳು ಕಡಿಮೆಯಾಗಲು ಹೆಚ್ಚಾಗಿ ಬ್ಯಾಂಕ್ ಸ್ಟಾಕ್ಗಳ ಇಳಿಮುಖ ಕಾರಣವೆಂಬುದು ಮೇಲ್ನೋಟಕ್ಕೆ ತೋರುತ್ತಿದೆ. ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿಸಲು ಆರ್ಬಿಐ ನಿರ್ಧರಿಸಿದ್ದು ಈ ಬೆಳವಣಿಗೆಗೆ ಕಾರಣವಿದ್ದಿರಬಹುದು. ಕಳೆದ ಒಂದು ವರ್ಷದಿಂದಲೂ ಬಡ್ಡಿದರ ಶೇ. 6.5ರಲ್ಲೇ ಇದೆ. ಬ್ಯಾಂಕುಗಳಿಗೆ ಬಡ್ಡಿದರ ಕಡಿಮೆ ಆದಷ್ಟೂ ಬಡ್ಡಿಲಾಭದ ಅಂತರ (ನೆಟ್ ಇಂಟರೆಸ್ಟ್ ಇನ್ಕಮ್) ಕಡಿಮೆ ಆಗುತ್ತಾ ಹೋಗುತ್ತದೆ. ಇದು ಒಂದು ಕಾರಣ ಇರಬಹುದು.
ಇದನ್ನೂ ಓದಿ: ಪ್ರೋಸಸಿಂಗ್ ಫೀ ಸೇರಿ ಎಲ್ಲಾ ಶುಲ್ಕಗಳೂ ಬಡ್ಡಿದರದಲ್ಲೇ ಒಳಗೊಳ್ಳಲಿ: ಬ್ಯಾಂಕುಗಳಿಗೆ ಆರ್ಬಿಐ ಸೂಚನೆ
ರೆಪೋ ದರ ಹಾಗೇ ಮುಂದುವರಿಸಿರುವುದರಿಂದ ವಾಹನ ಮತ್ತು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೆಚ್ಚು ಅನುಕೂಲವಾಗುತ್ತಿದೆ. ಆಗಸ್ಟ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಆರ್ಬಿಐ ರೆಪೋ ದರ ಕಡಿತಗೊಳಿಸುವ ಸಾಧ್ಯತೆ ಇದೆ. ಇದರಿಂದ ಬ್ಯಾಂಕುಗಳು ಹೆಚ್ಚು ಸಾಲ ವಿತರಣೆ ಮಾಡಲು ಸಾಧ್ಯವಾಗಬಹುದು. ಲಾಭದ ಅಂತರ ಕಡಿಮೆ ಆದರೂ ಬ್ಯಾಂಕುಗಳಿಗೆ ಆದಾಯ ಸೃಷ್ಟಿ ಹೆಚ್ಚಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಈಗ ರೆಪೋ ದರದಿಂದ ಬ್ಯಾಂಕಿಂಗ್ ಷೇರುಗಳಿಗೆ ಹಿನ್ನಡೆಯಾಗಿರುವುದು ತಾತ್ಕಾಲಿಕ ಮಾತ್ರ ಎಂಬುದು ತಜ್ಞರ ಅನಿಸಿಕೆ. ಮತ್ತೆ ಈ ಸ್ಟಾಕುಗಳು ಏರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Thu, 8 February 24