
ಕಳೆದ ಎರಡು ವರ್ಷದಿಂದ ಭಾರತದ ಷೇರು ಮಾರುಕಟ್ಟೆ (Stock Market) ಸಾಕಷ್ಟು ಏರುಪೇರು, ಏರಿಳಿತಗಳನ್ನು ಕಾಣುತ್ತಾ ಬಂದಿದೆ. ಎರಡು ವರ್ಷದ ಹಿಂದೆ ಯಾರಾದರೂ ಹೂಡಿಕೆ ಆರಂಭಿಸಿದ್ದರೆ ಇವತ್ತು ಅವರ ಗಳಿಕೆ ಮೈನಸ್ನಲ್ಲಿ ಇರುತ್ತದೆ. ಹೊಸಬರು ಈ ಬೇರ್ ಮಾರ್ಕೆಟ್ನಿಂದ (Bear Market) ಭ್ರಮನಿರಸನಗೊಂಡು ಮಾರುಕಟ್ಟೆ ಬಿಟ್ಟು ಹೋಗೋ ಸಾಧ್ಯತೆ ಹೆಚ್ಚು. ಆದರೆ, ಅನುಭವಿಗಳಿಗೆ ಮತ್ತು ಪೇಟೆ ವರ್ತನೆ ತಿಳಿದಿರುವವರಿಗೆ ಈ ಕರಡಿ ಘಳಿಗೆಯೇ ಶ್ರೇಷ್ಠವಾಗಿದೆ. ನಿಮ್ಮ ಸಂಪತ್ತು ಹೆಚ್ಚಿಸಲು ಸಾಧ್ಯವಾಗಿಸುತ್ತದೆ ಎಂದು ಬೇರ್ ಮಾರ್ಕೆಟ್. ಈ ಸಂಕಷ್ಟ ಘಟ್ಟದಲ್ಲಿ ಧೃತಿಗೆಟ್ಟರೆ ಒಳ್ಳೆಯ ಅವಕಾಶ ಕಳೆದುಕೊಳ್ಳುತ್ತೀರಿ. ವಾರೆನ್ ಬಫೆಟ್, ಪೀಟರ್ ಲಿಂಚ್ ಅಥವಾ ಚಾರ್ಲಿ ಮುಂಗರ್ ಆಗಿರಲಿ, ಜಗತ್ತಿನ ಬಹುತೇಕ ಎಲ್ಲಾ ದಿಗ್ಗಜ ಹೂಡಿಕೆದಾರರಿಗೆ ಈ ಬೇರ್ ಮಾರ್ಕೆಟ್ ಸುಗ್ಗಿಯ ಕಾಲ..
ಅದೇ ಸಾಲಿಗೆ ಸೇರಿದ ಅಮೆರಿಕದ ಪ್ರಸಿದ್ಧ ಹೂಡಿಕೆದಾರ, ಉದ್ಯಮಿ ಮತ್ತು ಲೋಕೋಪಕಾರಿ ಶೆಲ್ಬಿ ಕಲ್ಲಮ್ ಡೇವಿಸ್ (Shelby Cullom Davis) ಅವರು ಮಾರುಕಟ್ಟೆಯ ಕುಸಿತದ ಬಗ್ಗೆ ಹೂಡಿಕೆದಾರರಿಗೆ ಅತ್ಯಮೂಲ್ಯವಾದ ಆರ್ಥಿಕ ಪಾಠವೊಂದನ್ನು ಹೇಳಿದ್ದಾರೆ. “ನಿಮ್ಮ ಜೀವನದ ಬಹುಪಾಲು ಹಣವನ್ನು ನೀವು ಗಳಿಸುವುದು ಮಾರುಕಟ್ಟೆಯ ಕುಸಿತದ (Bear Market) ಸಮಯದಲ್ಲಿಯೇ. ಆದರೆ ಆ ಸಮಯದಲ್ಲಿ ನಿಮಗದು ಅರಿವಾಗುವುದಿಲ್ಲ ಅಷ್ಟೆ” ಎಂದು ಶೆಲ್ಬಿ ಅನುಭವದ ನುಡಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿಚಿತ್ರ ಕಾರಣ..! ಅನುಭವಿ ಗೂಗಲ್ ಉದ್ಯೋಗಿಯ ಅರ್ಜಿ ತಿರಸ್ಕಾರ; ಕಾಲೇಜು ಗ್ರೇಡ್ ಕಡಿಮೆ ಬಂದಿದ್ದಕ್ಕೆ ರಿಜೆಕ್ಟ್
ಮಾರುಕಟ್ಟೆಗಳು ತೀವ್ರವಾಗಿ ಕುಸಿಯುತ್ತಿರುವಾಗ ಹೂಡಿಕೆದಾರರು ಪ್ಯಾನಿಕ್ ಆಗಿ ತಮ್ಮ ಷೇರುಗಳನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ಆದರೆ, ಶೆಲ್ಬಿ ಡೇವಿಸ್ ಅವರ ಪ್ರಕಾರ, ಇಂತಹ ಕುಸಿತದ ಸಮಯವೇ ನಿಜವಾದ ಅವಕಾಶ.
ರಿಯಾಯಿತಿ ದರದಲ್ಲಿ ಗುಣಮಟ್ಟದ ಷೇರುಗಳು: ಮಾರುಕಟ್ಟೆ ಜಿಗಿತದ (Bull Run) ಸಮಯದಲ್ಲಿ ಗಗನಕ್ಕೇರಿರುವ ಉತ್ತಮ ಕಂಪನಿಗಳ ಮೌಲ್ಯಯುತ ಷೇರುಗಳು, ಬೇರ್ ಮಾರ್ಕೆಟ್‌ನಲ್ಲಿ ಭಾರಿ ರಿಯಾಯಿತಿ ದರದಲ್ಲಿ (ಡಿಸ್ಕೌಂಟ್‌ನಲ್ಲಿ) ಸಿಗುತ್ತವೆ. ಇಂತಹ ಸಮಯದಲ್ಲಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ಗರಿಷ್ಠ ಲಾಭ ಗಳಿಸಬಹುದು.
ಅಲ್ಪಾವಧಿಯ ಏರಿಳಿತಗಳಿಗೆ ಹೆದರಿ ಕ್ರಮ ತೆಗೆದುಕೊಳ್ಳುವ ಬದಲು ಭಾವನಾತ್ಮಕ ಶಿಸ್ತು ಹೊಂದಿರುವುದು ಮುಖ್ಯ. ದುರಾಸೆ ಇಲ್ಲದ, ಭಯವೂ ಇಲ್ಲದ ಮನಃಸ್ಥಿತಿಯೊಂದಿಗೆ ದೀರ್ಘಾವಧಿಗೆ ಹೂಡಿಕೆ ಮಾಡಿ ಎಂಬುದು ಶೆಲ್ಬಿ ಕಲ್ಲಂ ಡೇವಿಸ್ ಅವರ ಸಲಹೆ.
ಇತ್ತೀಚಿನ ‘ಇಟಿ ವೆಲ್ತ್-ಕ್ರಿಸಿಲ್ ಎಸ್‌ಐಪಿ’ (ET Wealth-Crisil SIP) ಅಧ್ಯಯನವು ಕೂಡ ಇದೇ ಸತ್ಯವನ್ನು ಸಾಬೀತುಪಡಿಸಿದೆ. ದೀರ್ಘಾವಧಿಯವರೆಗೆ ಮಾರುಕಟ್ಟೆಯಲ್ಲಿ ಉಳಿಯುವ ಹೂಡಿಕೆದಾರರು ಹಣ ಕಳೆದುಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ನೀವು ಹೂಡಿಕೆ ಮಾಡುವ ಅವಧಿ ಹೆಚ್ಚಾದಂತೆ ನಷ್ಟದ ಸಂಭವನೀಯತೆ ಕಡಿಮೆಯಾಗುತ್ತಾ ಹೋಗುತ್ತದೆ.
ಇದನ್ನೂ ಓದಿ: ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?
ಷೇರು ಮಾರುಕಟ್ಟೆಯಲ್ಲಿ ಅಲ್ಪಾವಧಿಯ ಮುನ್ಸೂಚನೆಗಳನ್ನು ನಂಬುವುದು “ನಾಣ್ಯವನ್ನು ಟಾಸ್” ಮಾಡಿದಂತೆ. ಆದರೆ 10 ರಿಂದ 20 ವರ್ಷಗಳ ದೀರ್ಘಾವಧಿಯಲ್ಲಿ ಮಾರುಕಟ್ಟೆಯು ಯಾವಾಗಲೂ ಲಾಭದಾಯಕವಾಗಿಯೇ ಇರುತ್ತದೆ ಎಂಬುದನ್ನು ಹೂಡಿಕೆದಾರರು ನೆನಪಿನಲ್ಲಿಡಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:31 pm, Thu, 28 May 26