ಆ್ಯಪಲ್, ಎನ್​ವಿಡಿಯಾವನ್ನೂ ಮೀರಿಸಿದ ಬೆಳ್ಳಿ ಈಗ ಜಗತ್ತಿನಲ್ಲಿ ಎರಡನೇ ಅತಿಹೆಚ್ಚು ಮಾರುಕಟ್ಟೆ ಮೌಲ್ಯದ ಆಸ್ತಿ

Assets with largest market value: ಚಿನ್ನದ ನಂತರ ಬೆಳ್ಳಿ ವಿಶ್ವದ ಅತಿಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಆಸ್ತಿ ಎನಿಸಿದೆ. ಚಿನ್ನದ ಮಾರುಕಟ್ಟೆ ಮೌಲ್ಯ 31.5 ಟ್ರಿಲಿಯನ್ ಡಾಲರ್ ಇದ್ದರೆ, ಬೆಳ್ಳಿಯದ್ದು 4.7 ಟ್ರಿಲಿಯನ್ ಡಾಲರ್ ಇದೆ. ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿಗಳಾದ ಎನ್​ವಿಡಿಯಾ, ಆ್ಯಪಲ್, ಮೈಕ್ರೋಸಾಫ್ಟ್, ಆಲ್ಫಬೆಟ್ ಕಂಪನಿಗಳ ಮಾರ್ಕೆಟ್ ವ್ಯಾಲ್ಯೂ 4.5 ಟ್ರಿಲಿಯನ್ ಡಾಲರ್​ಗಿಂತ ಕಡಿಮೆ ಇದೆ.

ಆ್ಯಪಲ್, ಎನ್​ವಿಡಿಯಾವನ್ನೂ ಮೀರಿಸಿದ ಬೆಳ್ಳಿ ಈಗ ಜಗತ್ತಿನಲ್ಲಿ ಎರಡನೇ ಅತಿಹೆಚ್ಚು ಮಾರುಕಟ್ಟೆ ಮೌಲ್ಯದ ಆಸ್ತಿ
ಬೆಳ್ಳಿ

Updated on: Dec 29, 2025 | 1:22 PM

ನವದೆಹಲಿ, ಡಿಸೆಂಬರ್ 29: ಬೆಳ್ಳಿ ಬೆಲೆ (Silver) ಹುಚ್ಚೆದ್ದು ಓಡುತ್ತಿದೆ. ಅತಿವೇಗವಾಗಿ ಬೆಲೆ ಏರಿಕೆ ಆಗುತ್ತಿರುವ ಸರಕುಗಳಲ್ಲಿ ಚಿನ್ನವನ್ನೂ ಮೀರಿಸಿ ಬೆಳ್ಳಿ ಬೆಳೆಯುತ್ತಿದೆ. ವಿಶ್ವದಲ್ಲೇ ಅತಿಹೆಚ್ಚು ಮಾರ್ಕೆಟ್ ಕ್ಯಾಪಿಟಲ್ ಇರುವ ಸ್ವತ್ತುಗಳಲ್ಲಿ ಬೆಳ್ಳಿ ಎರಡನೇ ಸ್ಥಾನಕ್ಕೇರಿದೆ. ಎನ್​ವಿಡಿಯಾ, ಆ್ಯಪಲ್ ಇತ್ಯಾದಿ ದೈತ್ಯ ಕಂಪನಿಗಳ ಷೇರು ಬಂಡವಾಳವನ್ನೂ ಮೀರಿಸಿ ಬೆಳ್ಳಿ ಮೌಲ್ಯ ಬೆಳೆದಿದೆ.

ಬೆಳ್ಳಿ ಬೆಲೆ ಒಂದು ಔನ್ಸ್​ಗೆ 84 ಡಾಲರ್​ಗಿಂತ ಹೆಚ್ಚಾಗಿದೆ. ಭಾರತದಲ್ಲಿ ಇದರ ಬೆಲೆ ಒಂದು ಗ್ರಾಮ್​ಗೆ 260 ರೂ ಆಸುಪಾಸಿನಲ್ಲಿ ಇದೆ. ಈ ವರ್ಷ ಅದರ ಬೆಲೆ ಬರೋಬ್ಬರಿ ಶೇ. 170ರಷ್ಟು ಹೆಚ್ಚಿದೆ. ಶೇ. 72ರಷ್ಟು ಇರುವ ಚಿನ್ನದ ಬೆಲೆ ಏರಿಕೆಯು ಬೆಳ್ಳಿ ಮುಂದೆ ಗೌಣವೆನಿಸಿದೆ. ಈ ಅಮೂಲ್ಯ ಬೆಳ್ಳಿ ಲೋಹದ ಒಟ್ಟು ಮಾರುಕಟ್ಟೆ ಮೌಲ್ಯ 4.7 ಟ್ರಿಲಿಯನ್ ಡಾಲರ್​ಗೆ ಏರಿದೆ. 4.6 ಟ್ರಿಲಿಯನ್ ಡಾಲರ್ ಇರುವ ಎನ್​ವಿಡಿಯಾ ಷೇರುಗಳ ಮೌಲ್ಯವನ್ನು ಬೆಳ್ಳಿ ದಾಟಿ ಹೋಗಿದೆ.

ಇದನ್ನೂ ಓದಿ: ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಬೆಲೆ ಮತ್ತೆ ದಾಖಲೆ

ಅತಿಹೆಚ್ಚು ಮಾರುಕಟ್ಟೆ ಮೌಲ್ಯದಲ್ಲಿ ಚಿನ್ನವೇ ನಂಬರ್ 1

ಬೆಳ್ಳಿ ಬೆಲೆಯ ಇತ್ತೀಚಿನ ಓಟದ ನಡುವೆಯೂ ಚಿನ್ನವೇ ವಿಶ್ವದಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಆಸ್ತಿ ಎನಿಸಿದೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 31.5 ಟ್ರಿಲಿಯನ್ ಡಾಲರ್ ಇದೆ. ಅತಿಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಕೆಲ ಆಸ್ತಿಗಳ ಪಟ್ಟಿ ಈ ಕೆಳಕಂಡಂತಿದೆ:

  1. ಚಿನ್ನ: 31.5 ಟ್ರಿಲಿಯನ್ ಡಾಲರ್
  2. ಬೆಳ್ಳಿ: 4.7 ಟ್ರಿಲಿಯನ್ ಡಾಲರ್
  3. ಎನ್​ವಿಡಿಯಾ: 4.6 ಟ್ರಿಲಿಯನ್ ಡಾಲರ್
  4. ಆ್ಯಪಲ್: 4 ಟ್ರಿಲಿಯನ್ ಡಾಲರ್
  5. ಆಲ್ಫಬೆಟ್: 3.8 ಟ್ರಿಲಿಯನ್ ಡಾಲರ್
  6. ಮೈಕ್ರೋಸಾಫ್ಟ್: 3.6 ಟ್ರಿಲಿಯನ್ ಡಾಲರ್

ಬೆಳ್ಳಿಗೆ ಯಾಕಿಷ್ಟು ಡಿಮ್ಯಾಂಡ್?

ವಿಶ್ವಾದ್ಯಂತ ಹೆಚ್ಚಿನ ದೇಶಗಳಲ್ಲಿ ಚಿನ್ನವನ್ನು ಹೂಡಿಕೆಗಾಗಿ ಹೆಚ್ಚಾಗಿ ಖರೀದಿಸಲಾಗುತ್ತದೆ. ಕಷ್ಟದ ಸಂದರ್ಭಕ್ಕೆ ಹೆಡ್ಜಿಂಗ್ ಆಗಿ ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತದೆ. ಭಾರತ ಹಾಗೂ ಚೀನಾದಲ್ಲಿ ಮಾತ್ರ ಚಿನ್ನವನ್ನು ಆಭರಣ ಮತ್ತು ಹೂಡಿಕೆಗೆ ಬಳಸುವುದುಂಟು.

ಇದನ್ನೂ ಓದಿ: ಎಫ್ ಅಂಡ್ ಒ ಕರ್ಮಕಾಂಡ; ಭಾರತದಿಂದ ಅಮೆರಿಕಕ್ಕೆ ಹರಿದುಹೋಗುತ್ತಿದೆಯಾ ವರ್ಷಕ್ಕೆ ಲಕ್ಷ ಕೋಟಿ ರೂ?

ಆದರೆ, ಬೆಳ್ಳಿಯದ್ದು ಭಿನ್ನ ಕಥೆ. ಬೆಳ್ಳಿಯನ್ನು ಅನೇಕ ಉದ್ಯಮಗಳಲ್ಲಿ ಬಳಕೆ ಆಗುವುದುಂಟು. ಸೋಲಾರ್ ಪ್ಯಾನಲ್, ಎಲೆಕ್ಟ್ರಿಕ್ ವಾಹನ, ಎಲೆಕ್ಟ್ರಾನಿಕ್ಸ್ ವಸ್ತು ಇತ್ಯಾದಿಗಳಲ್ಲಿ ಬೆಳ್ಳಿಯನ್ನು ಬಳಸಲಾಗುತ್ತದೆ. ಹೀಗಾಗಿ, ಇದಕ್ಕೆ ಅತಿಹೆಚ್ಚು ಬೇಡಿಕೆ ಇದೆ. ಇದರ ಉತ್ಪಾದನೆ ಬಹಳ ಸೀಮಿತ ಪ್ರಮಾಣದಲ್ಲಿ ಇದೆ. ಹೀಗಾಗಿ, ಬೆಳ್ಳಿಗೆ ಬೇಡಿಕೆ ಇರುವಷ್ಟು ಪೂರೈಕೆ ಇಲ್ಲ. ಇದರ ಜೊತೆಗೆ, ಹೆಡ್ಜಿಂಗ್ ಆಗಿ ಚಿನ್ನದ ಜೊತೆಗೆ ಬೆಳ್ಳಿಯ ಮೇಲೂ ಹೂಡಿಕೆ ಮಾಡುವ ಟ್ರೆಂಡ್ ಹೆಚ್ಚುತ್ತಿದೆ.

ಬೆಳ್ಳಿ ಬೆಲೆ ಜಿಗಿಜಿಗಿದು ಏರಲು ಮೂರು ಪ್ರಮುಖ ಕಾರಣಗಳು ಕಂಡಿವೆ. ಮೊದಲನೆಯದು, ಬೆಳ್ಳಿಯನ್ನು ಕೈಗಾರಿಕೆಗಳಲ್ಲಿ ಬಳಸಲಾಗುತ್ತಿರುವುದು. ಎರಡನೆಯದು, ಚಿನ್ನದಂತೆ ಬೆಳ್ಳಿಯನ್ನೂ ಹೆಡ್ಜಿಂಗ್ ಆಗಿ ಹೂಡಿಕೆಗೆ ಬಳಸಲಾಗುತ್ತಿರುವುದು. ಮೂರನೆಯದು, ಬೆಳ್ಳಿಯ ಮೈನಿಂಗ್​ಗಳು ತೀರಾ ಕಡಿಮೆ ಇರುವುದು, ಮತ್ತು ಅದರ ಉತ್ಪಾದನೆ ಬಹಳ ಕಡಿಮೆ ಇರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ