ಎಫ್ ಅಂಡ್ ಒ ಕರ್ಮಕಾಂಡ; ಭಾರತದಿಂದ ಅಮೆರಿಕಕ್ಕೆ ಹರಿದುಹೋಗುತ್ತಿದೆಯಾ ವರ್ಷಕ್ಕೆ ಲಕ್ಷ ಕೋಟಿ ರೂ?
F & O trading loss: ಎಫ್ ಅಂಡ್ ಓ ಟ್ರೇಡಿಂಗ್ನಲ್ಲಿ ಪಾಲ್ಗೊಳ್ಳುವ ರೀಟೇಲ್ ಹೂಡಿಕೆದಾರರಲ್ಲಿ ಶೇ. 90ರಷ್ಟು ಮಂದಿ ನಷ್ಟ ಮಾಡಿಕೊಳ್ಳುತ್ತಿದ್ದಾರೆ. ಮಾರುಕಟ್ಟೆ ತಜ್ಞ ಸೌರಭ್ ಮುಖರ್ಜಿ ಪ್ರಕಾರ, ಹೀಗೆ ನಷ್ಟವಾದ ಹಣ ವರ್ಷಕ್ಕೆ 12 ಬಿಲಿಯನ್ ಡಾಲರ್ ಅಂತೆ. ಮಧ್ಯಮ ವರ್ಗದ ಜನರ ಈ ಹಣ ಶ್ರೀಮಂತ ಅಮೆರಿಕನ್ನರ ಜೇಬು ತುಂಬಿಸುತ್ತಿದೆಯಾ?

ನವದೆಹಲಿ, ಡಿಸೆಂಬರ್ 26: ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಟ್ರೇಡಿಂಗ್ (F & O- Futures and Options) ಎನ್ನುವ ಮಾಯಾಜಿಂಕೆಯನ್ನು ಹಿಡಿಯಲು ಹೋಗುವ ಭಾರತೀಯರಲ್ಲಿ ಹೆಚ್ಚಿನವರಿಗೆ ಅದು ಸಿಕ್ಕೋದೇ ಇಲ್ಲ. ಎಫ್ ಅಂಡ್ ಒ ಟ್ರೇಡಿಂಗ್ನಲ್ಲಿ ಶೇ. 90ರಷ್ಟು ರೀಟೇಲ್ ಹೂಡಿಕೆದಾರರು ಹಣ ಕಳೆದುಕೊಳ್ಳುತ್ತಾರಂತೆ. ಈ ರೀಟೇಲ್ ಹೂಡಿಕೆದಾರರಲ್ಲಿ ಬಹಳ ಸಂಖ್ಯೆಯಲ್ಲಿ ಜನರು ಸಣ್ಣ ಪಟ್ಟಣಗಳಿಂದ ಬಂದ ಯುವಜನರೇ ಅಧಿಕವಂತೆ.
ಎಫ್ ಅಂಡ್ ಒ ಟ್ರೇಡಿಂಗ್ನಲ್ಲಿ ಮಾರುಕಟ್ಟೆಯನ್ನು ಬುಗುರಿಯಂತೆ ಆಡಿಸುವವರು ದೊಡ್ಡ ಸಾಂಸ್ಥಿಕ ಹೂಡಿಕೆದಾರರು. ಇವರ ಬಳಿ ಎಐ ಶಕ್ತ ಅಲ್ಗಾರಿದಂ ಇತ್ಯಾದಿ ಆಧುನಿಕ ಪರಿಕರಗಳಿರುತ್ತವೆ. ರೀಟೇಲ್ ಹೂಡಿಕೆದಾರರ ಬಳಿ ಕೇವಲ ಆಸೆ, ಭರವಸೆ, ಅದೃಷ್ಟ ನಿರೀಕ್ಷೆ, ಹಾಗೂ ಸ್ವಲ್ಪ ಮಟ್ಟಿಗೆ ಮಾರುಕಟ್ಟೆ ಜ್ಞಾನ ಇರುತ್ತದೆ. ಆದರೆ, ದೊಡ್ಡ ದೊಡ್ಡ ಪರಿಣಿತರ ಪಡೆಗಳನ್ನೇ ಹೊಂದಿರುವ ಸಾಂಸ್ಥಿಕ ಹೂಡಿಕೆದಾರರ ಮುಂದೆ ರೀಟೇಲ್ ಹೂಡಿಕೆದಾರರ ಆಟ ನಡೆಯುವುದು ಬಹಳ ಕಡಿಮೆ. ಹೀಗಾಗಿ, ಎಫ್ ಅಂಡ್ ಒ ಟ್ರೇಡಿಂಗ್ನಲ್ಲಿ ಇನ್ಸ್ಟಿಟ್ಯೂಶನಲ್ ಇನ್ವೆಸ್ಟರ್ಗಳು ಹಣ ಬಾಚಿಕೊಳ್ಳುತ್ತಾರೆ.
ಇದನ್ನೂ ಓದಿ: 2025ರಲ್ಲಿ ಭಾರತದ ಬಿಲಿಯನೇರ್ಗಳ ಪಟ್ಟಿ; ಯಾರು ಅತಿ ಶ್ರೀಮಂತರು, ಯಾರ ಶ್ರೀಮಂತಿಕೆ ಹೆಚ್ಚು ಏರಿದ್ದು?
ಮಾರುಕಟ್ಟೆ ತಜ್ಞ ಸೌರಭ್ ಮುಖರ್ಜಿಯಾ ಪ್ರಕಾರ, ಭಾರತದಲ್ಲಿ ಟ್ರೇಡಿಂಗ್ ಮಾಡುವ ಹೆಚ್ಚಿನ ಸಾಂಸ್ಥಿಕ ಹೂಡಿಕೆದಾರರು ಅಮೆರಿಕದವರೇ ಆಗಿದ್ದಾರೆ. ರೀಟೇಲ್ ಹೂಡಿಕೆದಾರರಲ್ಲಿ ಹೆಚ್ಚಿನವರು ಸಣ್ಣ ಪಟ್ಟಣದಿಂದ ಬಂದ 30-40ರ ವಯಸ್ಸಿನ ಮಧ್ಯಮ ವರ್ಗದ ಜನರೇ ಆಗಿರುತ್ತಾರೆ. ಇವರು ಒಂದು ವರ್ಷದಲ್ಲಿ ಎಫ್ ಅಂಡ್ ಒ ಟ್ರೇಡಿಂಗ್ ಮೂಲಕ ಮಾಡಿಕೊಳ್ಳುವ ನಷ್ಟ 12 ಬಿಲಿಯನ್ ಡಾಲರ್. ಅಂದರೆ ಸುಮಾರು ಒಂದು ಲಕ್ಷ ಕೋಟಿ ರೂ.
ಮಧ್ಯಮ ಮತ್ತು ಕೆಳ ಮಧ್ಯಮ ಭಾರತೀಯರಿಂದ ವರ್ಷಕ್ಕೆ ಒಂದು ಲಕ್ಷ ಕೋಟಿ ರೂ ಹಣವು ಅಮೆರಿಕಕ್ಕೆ ಹೋಗುತ್ತದೆ ಎನ್ನುತ್ತಾರೆ ಸೌರಭ್ ಮುಖರ್ಜಿ. ಹೀಗೆನ್ನುತ್ತಾ ಅವರು ಷೇರು ಮಾರುಕಟ್ಟೆಯ ಕಹಿ ಚಿತ್ರ ಬಿಚ್ಚಿಟ್ಟಿದ್ದಾರೆ.
ಎಕ್ಸ್ನಲ್ಲಿ ಬಂದ ಇವರ ಒಂದು ವಿಡಿಯೋ
India’s Massive $12 Billion Donation to Wall Street.
Yes, you read that right. That’s effectively what’s happening in the Indian F&O market right now.
According to the latest data, 90% of retail investors are losing money. We’re witnessing a massive capital outflow—roughly $12… pic.twitter.com/wqwUVcIxo4
— Marcellus Investment Managers (@MarcellusInvest) December 25, 2025
ಇದನ್ನೂ ಓದಿ: ಇನ್ಫೋಸಿಸ್ನಲ್ಲಿ ಭರ್ಜರಿ ಸಂಬಳ; ಎಂಟ್ರಿ ಲೆವೆಲ್ನಲ್ಲೇ 21 ಲಕ್ಷ ರೂ ಸ್ಯಾಲರಿ ಆಫರ್
ಅವರು ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿರುವ ವಿಡಿಯೋ ತುಣಕನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ. ಅದಕ್ಕೆ ಪ್ರತಿಕ್ರಿಯಿಸಿದವರಲ್ಲಿ ಕೆಲವರು ಸೌರಭ್ ಮುಖರ್ಜಿ ಅವರ ವಾದವನ್ನು ಒಪ್ಪಿಲ್ಲ. ಎಫ್ ಅಂಡ್ ಒ ಮಾರುಕಟ್ಟೆಯು ಒಟ್ಟಾರೆ ಷೇರು ಮಾರುಕಟ್ಟೆಗೆ ವಿಮೆ ರೀತಿ ಇರುತ್ತದೆ. ಇಡೀ ವ್ಯವಸ್ಥೆಯ ಪ್ರಮಾಣಕ್ಕೆ ಹೋಲಿಸಿದರೆ ಇದರಲ್ಲಿನ ನಷ್ಟ ದೊಡ್ಡದೆನಿಸುವುದಿಲ್ಲ ಎಂದು ಕೆಲವರು ವಾದಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




