ಇನ್ಫೋಸಿಸ್ನಲ್ಲಿ ಭರ್ಜರಿ ಸಂಬಳ; ಎಂಟ್ರಿ ಲೆವೆಲ್ನಲ್ಲೇ 21 ಲಕ್ಷ ರೂ ಸ್ಯಾಲರಿ ಆಫರ್
Infosys offering Rs 21 lakh salary package at entry level: ಇನ್ಫೋಸಿಸ್ ದೊಡ್ಡ ಸಂಬಳ ಕೊಟ್ಟು ಹೊಸಬರನ್ನು ನೇಮಕ ಮಾಡಿಕೊಳ್ಳುತ್ತಿದೆ. ವರದಿ ಪ್ರಕಾರ ಎಂಟ್ರಿ ಲೆವೆಲ್ ಸಂಬಳ ವರ್ಷಕ್ಕೆ 7ರಿಂದ 21 ಲಕ್ಷ ರೂವರೆಗೆ ಆಫರ್ ಮಾಡಲಾಗುತ್ತಿದೆ. ಸ್ಪೆಷಲೈಸ್ಡ್ ಹುದ್ದೆಗಳಿಗೆ 11 ಲಕ್ಷ ರೂನಿಂದ 21 ಲಕ್ಷ ರೂವರೆಗೆ ಪ್ಯಾಕೇಜ್ ಇದೆ. ಡಿಜಿಟಲ್ ಎಂಜಿನಿಯರ್ಗೆ 7 ಲಕ್ಷ ರೂ ಸಂಬಳ ಕೊಡಲಾಗುತ್ತಿದೆ ಎಂದು ಹೇಳಲಾಗಿದೆ.

ಬೆಂಗಳೂರು, ಡಿಸೆಂಬರ್ 26: ಐಟಿ ಸರ್ವಿಸಸ್ ಸಂಸ್ಥೆಯಾದ ಇನ್ಫೋಸಿಸ್ (Infosys) ತನ್ನಲ್ಲಿ ಎಂಟ್ರಿ ಲೆವೆಲ್ ಸಂಬಳದ ಮಟ್ಟವನ್ನು ಹೆಚ್ಚಿಸಿದೆ. ಹೊಸಬರಿಗೆ ಈ ಕಂಪನಿ 21 ಲಕ್ಷ ರೂವರೆಗೂ ವಾರ್ಷಿಕ ಪ್ಯಾಕೇಜ್ ಆಫರ್ ಮಾಡುತ್ತಿದೆ. ಇದು ವಿಶೇಷ ಟೆಕ್ನಾಲಜಿ ವಿಭಾಗದಲ್ಲಿ (Specialized technology roles) ನೇಮಕವಾಗುವ ಹೊಸ ಉದ್ಯೋಗಿಗಳಿಗೆ ಇನ್ಫೋಸಿಸ್ ಮಾಡುತ್ತಿರುವ ಭರ್ಜರಿ ಆಫರ್ ಆಗಿದೆ. ಐಟಿ ಸೆಕ್ಟರ್ನಲ್ಲಿ ಅಷ್ಟೇನೂ ದೊಡ್ಡ ಮೊತ್ತದ ಸಂಬಳ ಕೊಡದ ಇನ್ಫೋಸಿಸ್ ಈಗ ಹೊಸ ಬಾರ್ ಸೆಟ್ ಮಾಡಿದೆ.
ಎಐ ಅಳವಡಿಕೆ ಹೆಚ್ಚಿಸಲು ಹಾಗೂ ಡಿಜಿಟಲ್ ಪ್ರತಿಭೆಗಳನ್ನು ಆಕರ್ಷಿಸಲು ಇನ್ಫೋಸಿಸ್ ತನ್ನ ಆರಂಭಿಕ ಹಂತದ ಸಂಬಳದ ಮಟ್ಟ ಹೆಚ್ಚಿಸಿರಬಹುದು. ಇನ್ಫೋಸಿಸ್ ಸೇರಿದಂತೆ ಹೆಚ್ಚಿನ ಐಟಿ ಕಂಪನಿಗಳು ಫ್ರೆಶರ್ಗಳನ್ನು ನೇಮಕ ಮಾಡಿಕೊಳ್ಳಲು ಯೂನಿವರ್ಸಿಟಿ ಕ್ಯಾಂಪಸ್ಗಳಲ್ಲಿ ಸಂದರ್ಶನ ನಡೆಸುತ್ತವೆ. ಆದರೆ, ಮನಿಕಂಟ್ರೋಲ್ನಲ್ಲಿ ಗುರುವಾರ (ಡಿ. 25) ಬಂದ ವರದಿ ಪ್ರಕಾರ ಇನ್ಫೋಸಿಸ್ ಸಂಸ್ಥೆ ಆಫ್-ಕ್ಯಾಂಪಸ್ ನೇಮಕಾತಿ ಮಾಡಲು ಸಜ್ಜಾಗಿದೆ. ಅಂದರೆ, ಕಾಲೇಜು ಕ್ಯಾಂಪಸ್ಗಳಲ್ಲಿ ರೆಕ್ರ್ಯುಟ್ಮೆಂಟ್ ಡ್ರೈವ್ ಮಾಡದೇ ಹೋಗಬಹುದು.
ಇದನ್ನೂ ಓದಿ: ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣ ಎಷ್ಟು ಗೊತ್ತಾ? ಅನ್ಕ್ಲೇಮ್ಡ್ ಡೆಪಾಸಿಟ್ ಮರಳಿಪಡೆಯುವುದು ಹೇಗೆ?
ಸ್ಪೆಷಲೈಸ್ಡ್ ಹುದ್ದೆಗಳಿಗೆ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳನ್ನು 7 ಲಕ್ಷ ರೂನಿಂದ 21 ಲಕ್ಷ ರೂವರೆಗಿನ ಸಂಬಳಕ್ಕೆ ನೇಮಕ ಮಾಡಿಕೊಳ್ಳಲು ಇನ್ಫೋಸಿಸ್ ಯೋಜಿಸಿದೆ. ಸದ್ಯ ಭಾರತದ ಬೇರಾವ ಐಟಿ ಕಂಪನಿಯೂ ಫ್ರೆಷರ್ಗೆ 21 ಲಕ್ಷ ರೂ ಪ್ಯಾಕೇಜ್ ಕೊಡುತ್ತಿಲ್ಲ. ಕಳೆದ ಹಲವು ವರ್ಷಗಳಿಂದ ಐಟಿ ಸೆಕ್ಟರ್ನಲ್ಲಿ ಎಂಟ್ರಿ ಲೆವೆಲ್ನವರಿಗೆ ಸಂಬಳವು ನಿಂತ ನೀರಂತಿದೆ.
ವಿವಿಧ ಹುದ್ದೆಗಳಿಗೆ ವಿವಿಧ ಮಟ್ಟದ ಸಂಬಳ
- ಸ್ಪೆಷಲಿಸ್ಟ್ ಪ್ರೋಗ್ರಾಮರ್ ಎಲ್3 (ಟ್ರೈನೀ): ವರ್ಷಕ್ಕೆ 21 ಲಕ್ಷ ರೂ ಸಂಬಳ
- ಸ್ಪೆಷಲಿಸ್ಟ್ ಪ್ರೋಗ್ರಾಮರ್ ಎಲ್2 (ಟ್ರೈನೀ): 16 ಲಕ್ಷ ರೂ ಸಂಬಳ
- ಸ್ಪೆಷಲಿಸ್ಟ್ ಪ್ರೋಗ್ರಾಮರ್ ಎಲ್1 (ಟ್ರೈನೀ): 11 ಲಕ್ಷ ರೂ ಸಂಬಳ
- ಡಿಜಿಟಲ್ ಸ್ಪೆಷಲಿಸ್ಟ್ ಎಂಜಿನಿಯರ್ (ಟ್ರೈನೀ): 7 ಲಕ್ಷ ರೂ ಸಂಬಳ
ಭಾರತದ ಐಟಿ ಕ್ಷೇತ್ರದ ಕಂಪನಿಗಳಲ್ಲಿ ಉನ್ನತ ಮಟ್ಟದಲ್ಲಿ ಸಂಬಳ ಗಣನೀಯ ಹೆಚ್ಚಳವಾದರೆ, ಕೆಳ ಮಟ್ಟದಲ್ಲಿ ಹೆಚ್ಚಳ ಪ್ರಮಾಣ ಕಡಿಮೆ. ಸರಾಸರಿ ಸಿಇಒ ಸಂಬಳ ಹತ್ತು ವರ್ಷದಲ್ಲಿ ಬಹುತೇಕ ಹತ್ತು ಪಟ್ಟು ಹೆಚ್ಚಿದೆ. ಅದೇ ಹೊಸಬರಿಗೆ ಎಂಟ್ರಿ ಲೆವೆಲ್ ಸಂಬಳ ಹತ್ತು ವರ್ಷದಲ್ಲಿ ಏರಿಕೆ ಆಗಿರುವುದು ಶೇ. 45 ಮಾತ್ರ. 2012ರಲ್ಲಿ ಎಂಟ್ರಿಲ್ ಲೆವೆಲ್ ಸಂಬಳ 2.45 ಲಕ್ಷ ರೂ ಇತ್ತು. 2022ರಲ್ಲಿ ಇದು 3.55 ಲಕ್ಷ ರೂ ಇದೆ. ಇತ್ತೀಚೆಗೆ, ಟಿಸಿಎಸ್, ಎಚ್ಸಿಎಲ್, ವಿಪ್ರೋ ಕಂಪನಿಗಳೂ ಹೆಚ್ಚಿನ ಸಂಬಳ ಕೊಡುತ್ತಿದೆ. ಈಗ ಇನ್ಫೋಸಿಸ್ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.
ಇದನ್ನೂ ಓದಿ: ಬರಲಿವೆ ಹೊಸ ಏರ್ಲೈನ್ಸ್; ಶಂಖ್ ಏರ್ ಆಯ್ತು, ಈಗ ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್ಪ್ರೆಸ್ಗೂ ಸಿಕ್ಕಿತು ಎನ್ಒಸಿ
ಇನ್ಫೋಸಿಸ್ ಎಷ್ಟು ಹೊಸಬರನ್ನು ನೇಮಕ ಮಾಡಿಕೊಳ್ಳುತ್ತದೆ?
ಇನ್ಫೋಸಿಸ್ ಈ ಹಣಕಾಸು ವರ್ಷದಲ್ಲಿ 2025-26) 20,000 ಫ್ರೆಶರ್ಸ್ ಅನ್ನು ನೇಮಕ ಮಾಡಿಕೊಳ್ಳುವ ಗುರಿ ಹೊಂದಿದೆ. ಈಗಾಗಲೇ ಈ ವರ್ಷ 12,000 ಮಂದಿಯನ್ನು ರೆಕ್ರೂಟ್ ಮಾಡಿದೆ. ಮಾರ್ಚ್ 31ರಷ್ಟರಲ್ಲಿ ಇನ್ನಷ್ಟು 8,000 ಮಂದಿಯನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Fri, 26 December 25




