ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣ ಎಷ್ಟು ಗೊತ್ತಾ? ಅನ್ಕ್ಲೇಮ್ಡ್ ಡೆಪಾಸಿಟ್ ಮರಳಿಪಡೆಯುವುದು ಹೇಗೆ?
RBI campaign to return unclaimed bank deposits: ಹತ್ತಕ್ಕೂ ಹೆಚ್ಚು ವರ್ಷಗಳಿಂದ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳು ಮತ್ತು ಠೇವಣಿಗಳನ್ನು ವಿಶೇಷ ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ. ಈ ರೀತಿ ದೇಶಾದ್ಯಂತ 75,000 ಕೋಟಿ ರೂನಷ್ಟು ಮೊತ್ತದ ಹಣ ಈ ನಿಧಿಯಲ್ಲಿದೆ. ಕರ್ನಾಟಕದ ವಿವಿಧ ಬ್ಯಾಂಕುಗಳ ಇಂಥ ಹಣವೇ 3,400 ಕೋಟಿ ರೂ ಇದೆ ಎನ್ನಲಾಗಿದೆ.

ಮಂಗಳೂರು, ಡಿಸೆಂಬರ್ 25: ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಕ್ಲೇಮ್ ಆಗದೇ ಉಳಿದಿರುವ ಹಣ 3,400 ಕೋಟಿ ರೂನಷ್ಟಿದೆಯಂತೆ. ಆರ್ಬಿಐ (RBI) ಬೆಂಗಳೂರು ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅರುಣ್ ಕುಮಾರ್ ಈ ಮಾಹಿತಿ ನೀಡಿದ್ದಾರೆ. ಜಿಲ್ಲಾ ಸಮಾಲೋಚನ ಸಮಿತಿ (ಡಿಸಿಸಿ) ಮತ್ತು ಜಿಲ್ಲಾ ಮಟ್ಟದ ಪರಾಮರ್ಶೆ ಸಮಿತಿ (ಡಿಎಲ್ಆರ್ಸಿ) ಸಭೆಯಲ್ಲಿ ಆರ್ಬಿಐ ಅಧಿಕಾರಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಹತ್ತಕ್ಕೂ ಹೆಚ್ಚು ವರ್ಷಗಳಿಂದ ಬ್ಯಾಂಕ್ ಖಾತೆಗಳು, ಡೆಪಾಸಿಟ್ ಪ್ಲಾನ್ಗಳು ಬಳಕೆ ಇಲ್ಲದೇ ನಿಷ್ಕ್ರಿಯವಾಗಿದ್ದರೆ ಅದನ್ನು ಆರ್ಬಿಐನ ಠೇವಣಿದಾರ ಶಿಕ್ಷಣ ಮತ್ತು ಜಾಗೃತಿ ನಿಧಿ (ಡಿಇಎಎಫ್) ಎನ್ನುವ ವಿಶೇಷ ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ. ರಾಷ್ಟ್ರಾದ್ಯಂತ ಎಲ್ಲಾ ಬ್ಯಾಂಕುಗಳ ನಿಷ್ಕ್ರಿಯ ಅಕೌಂಟ್ಗಳಿಂದ ಆರ್ಬಿಐನ ಡಿಇಎಎಫ್ ಫಂಡ್ಗೆ ವರ್ಗಾವಣೆ ಆಗಿರುವುದು ಒಟ್ಟು ಮೊತ್ತ ಸುಮಾರು 75,000 ಕೋಟಿ ರೂ ಆಸುಪಾಸು ಇದೆ. ಈ ಪೈಕಿ ಕರ್ನಾಟಕದ ಬ್ಯಾಂಕುಗಳ ಠೇವಣಿದಾರರ ಅನ್ಕ್ಲೇಮ್ಡ್ ಡೆಪಾಸಿಟ್ಗಳ ಮೊತ್ತವೇ 3,400 ಕೋಟಿ ರೂ ಇದೆ.
ಇದನ್ನೂ ಓದಿ: ಬರಲಿವೆ ಹೊಸ ಏರ್ಲೈನ್ಸ್; ಶಂಖ್ ಏರ್ ಆಯ್ತು, ಈಗ ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್ಪ್ರೆಸ್ಗೂ ಸಿಕ್ಕಿತು ಎನ್ಒಸಿ
ಸಮಾಧಾನದ ಸಂಗತಿ ಎಂದರೆ, ಕ್ಲೇಮ್ ಆಗದ ಶೇ. 80ರಷ್ಟು ಅಕೌಂಟ್ಗಳಲ್ಲಿ ಇರುವ ಹಣ 10,000 ರೂಗಿಂತ ಕಡಿಮೆ. ಹಲವು ದಶಕಗಳ ಹಿಂದೆಯೇ ಇವು ನಿಷ್ಕ್ರಿಯಗೊಂಡಿವೆ. ಮೊಬೈಲ್ ನಂಬರ್ ಅಪ್ಡೇಟ್ ಆಗದೇ ಇರುವುದು, ಕೆವೈಸಿ ಅಪ್ಡೇಟ್ ಆಗದಿರುವುದು, ಖಾತೆದಾರರು ಜೀವಂತ ಇಲ್ಲದಿರುವುದು, ಇತ್ಯಾದಿ ಕಾರಣಕ್ಕೆ ಅಕೌಂಟ್ಗಳು ಇನಾಪರೇಟಿವ್ ಆಗಿವೆ.
ಗ್ರಾಹಕರಿಗೆ ಹಣ ಮರಳಿಸಲು ಆರ್ಬಿಐ ಅಭಿಯಾನ
ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣವನ್ನು ಖಾತೆದಾರರಿಗೆ ಅಥವಾ ವಾರಸುದಾರರಿಗೆ ತಲುಪಿಸಲು ಆರ್ಬಿಐ ಒಂದು ದೊಡ್ಡ ಅಭಿಯಾನವನ್ನೇ ನಡೆಸಿದೆ. ಮೂರು ತಿಂಗಳ ಹಿಂದೆ ಆರಂಭವಾದ ಈ ‘ನಿಮ್ಮ ಹಣ ನಿಮ್ಮ ಹಕ್ಕು’ ಕೆಂಪೇನ್ ಡಿಸೆಂಬರ್ 31ರವರೆಗೂ ಇರಲಿದೆ. ಈ ಅಕೌಂಟ್ಗಳ ಖಾತೆದಾರರನ್ನು ಗುರುತಿಸಿ, ಅವರು ಜೀವಂತ ಇದ್ದರೆ ಖಾತೆ ಸಕ್ರಿಯಗೊಳಿಸುವುದೋ ಅಥವಾ ಹಣ ಮರಳಿಸುವುದೋ ಮಾಡಲಾಗುತ್ತದೆ. ಜೀವಂತ ಇಲ್ಲದಿದ್ದರೆ ವಾರಸುದಾರರಿಗೆ ಹಣ ಮರಳಿಸುವ ಪ್ರಯತ್ನ ಮಾಡಲಾಗುತ್ತದೆ.
ವಾರಸುದಾರರು ಹಣ ಕ್ಲೇಮ್ ಮಾಡುವುದು ಹೇಗೆ?
ಆರ್ಬಿಐ ಪ್ರಕಟಿಸಿರುವ ಮಾಹಿತಿ ಪ್ರಕಾರ, ಅನ್ಕ್ಲೇಮ್ಡ್ ಡೆಪಾಸಿಟ್ಗಳು ಯಾವುವು ಎಂದು ವೀಕ್ಷಿಸಲು ಪ್ರತ್ಯೇಕ ಪೋರ್ಟಲ್ ರಚಿಸಲಾಗಿದೆ: udgam.rbi.org.in/
ಇದನ್ನೂ ಓದಿ: ಭಾರತದೊಂದಿಗೆ ಇದು ಕೆಟ್ಟ ಒಪ್ಪಂದ: ನ್ಯೂಜಿಲೆಂಡ್ ಸರ್ಕಾರದೊಳಗೆಯೇ ಅಪಸ್ವರ; ಇವರ ತಕರಾರುಗಳೇನು?
ಇಲ್ಲಿಗೆ ಹೋಗಿ ಖಾತೆದಾರ ಹೆಸರು, ಬ್ಯಾಂಕನ್ನು ಆಯ್ಕೆ ಮಾಡಿಕೊಂಡು, ಪ್ಯಾನ್ ಅಥವಾ ವೋಟರ್ ಐಡಿ, ಡಿಎಲ್, ಪಾಸ್ಪೋರ್ಟ್ ನಂಬರ್ನಿಂದ ಸರ್ಚ್ ಮಾಡಿ ನಿಮ್ಮದೋ ಅಥವಾ ಪೋಷಕರದ್ದೋ ಅನ್ಕ್ಲೇಮ್ಡ್ ಡೆಪಾಸಿಟ್ ಇದ್ದರೆ ಪತ್ತೆ ಮಾಡಬಹುದು.
ಅಥವಾ, ಕ್ಲೇಮ್ ಆಗದೇ ಯಾವುದಾದರೂ ಖಾತೆ ಇರುವುದು ಗೊತ್ತಾದರೆ, ನೀವೇ ಖುದ್ದಾಗಿ ಆ ಬ್ಯಾಂಕ್ ಕಚೇರಿಗೆ ಹೋಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸಿದರೆ ಹಣವನ್ನು ಮರಳಿ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




