AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದಾನಿ ಗ್ರೂಪ್​ನ ಆರು ಕಂಪನಿಗಳಿಗೆ ಸೆಬಿಯಿಂದ ಶೋಕಾಸ್ ನೋಟೀಸ್

SEBI show-cause notice to 6 Adani companies: ರಿಲೇಟೆಡ್ ಪಾರ್ಟಿ ಟ್ರಾನ್ಸಾಕ್ಷನ್, ಲಿಸ್ಟಿಂಗ್ ನಿಯಮ, ಆಡಿಟಿಂಗ್ ಸರ್ಟಿಫಿಕೇಟ್ ವಿಚಾರದಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಹೇಳಿ ಅದಾನಿ ಗ್ರೂಪ್​ನ ಆರು ಕಂಪನಿಗಳಿಗೆ ಸೆಬಿ ಶೋಕಾಸ್ ನೋಟೀಸ್ ಜಾರಿ ಮಾಡಿದೆ. ಅದಾನಿ ಎಂಟರ್ಪ್ರೈಸಸ್, ಅದಾನಿ ಪೋರ್ಟ್ಸ್ ಎಸ್​ಇಝಡ್, ಅದಾನಿ ಪವರ್, ಅದಾನಿ ಎನರ್ಜಿ ಸಲ್ಯೂಶನ್ಸ್, ಅದಾನಿ ವಿಲ್ಮರ್, ಅದಾನಿ ಟೋಟಲ್ ಗ್ಯಾಸ್ ಸಂಸ್ಥೆಗಳು ಶೋಕಾಸ್ ಪಡೆದಿರುವುದಾಗಿ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿವೆ.

ಅದಾನಿ ಗ್ರೂಪ್​ನ ಆರು ಕಂಪನಿಗಳಿಗೆ ಸೆಬಿಯಿಂದ ಶೋಕಾಸ್ ನೋಟೀಸ್
ಅದಾನಿ ಗ್ರೂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 03, 2024 | 1:02 PM

Share

ಮುಂಬೈ, ಮೇ 3: ಕಳೆದ ಎರಡು ವರ್ಷದಿಂದ ಒಂದಿಲ್ಲೊಂದು ವಿವಾದ, ತೊಂದರೆಗಳಿಗೆ ಸಿಲುಕುತ್ತಿರುವ ಅದಾನಿ ಸಮೂಹ ಸಂಸ್ಥೆಗಳಿಗೆ (Adani group companies) ಈಗ ಮತ್ತೊಂದು ತಡೆ ಎದುರಾಗಿದೆ. ಆಡಿಟಿಂಗ್ ಮತ್ತು ವಹಿವಾಟು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎನ್ನುವ ಆರೋಪದ ಮೇಲೆ ಅದಾನಿ ಗ್ರೂಪ್​ನ ಆರು ಕಂಪನಿಗಳಿಗೆ ಸೆಬಿ ಶೋಕಾಸ್ ನೋಟೀಸ್ (Show-cause notice) ಕೊಟ್ಟಿದೆ. ರಿಲೇಟೆಡ್ ಪಾರ್ಟಿ ಟ್ರಾನ್ಸಾಕ್ಷನ್ ನಿಯಮದ ಉಲ್ಲಂಘನೆ, ಲಿಸ್ಟಿಂಗ್ ನಿಯಮಗಳಿಗೆ ಬದ್ಧವಾಗದೇ ಇರುವುದು, ಹಿಂದಿನ ವರ್ಷಗಳಲ್ಲಿ ಪಡೆಯಲಾದ ಆಡಿಟಿಂಗ್ ಸರ್ಟಿಫಿಕೇಟ್​ಗಳ ಸಿಂಧುತ್ವ ಇದರಲ್ಲಿ ಲೋಪವಾಗಿರುವುದನ್ನು ತೋರಿಸಿ ತಮಗೆ ನೋಟೀಸ್ ಬಂದಿದೆ ಎಂದು ಆರು ಕಂಪನಿಗಳು ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಲಾದ ರೆಗ್ಯುಲೇಟರಿ ಫೈಲಿಂಗ್​ನಲ್ಲಿ ತಿಳಿಸಿವೆ.

ಅದಾನಿ ಎಂಟರ್ಪ್ರೈಸಸ್, ಅದಾನಿ ಪೋರ್ಟ್ಸ್ ಎಸ್​ಇಝಡ್, ಅದಾನಿ ಪವರ್, ಅದಾನಿ ಎನರ್ಜಿ ಸಲ್ಯೂಶನ್ಸ್, ಅದಾನಿ ವಿಲ್ಮರ್, ಅದಾನಿ ಟೋಟಲ್ ಗ್ಯಾಸ್ ಸಂಸ್ಥೆಗಳಿಗೆ ಸೆಬಿಯಿಂದ ನೋಟೀಸ್ ಬಂದಿದೆ. ಅದಾನಿ ಎಂಟರ್​ಪ್ರೈಸಸ್​ಗೆ ಎರಡು ನೋಟೀಸ್ ಸಿಕ್ಕಿವೆ. ಈ ಬೆಳವಣಿಗೆಯಿಂದ ಯಾವ ಹಿನ್ನಡೆಯೂ ಆಗುವುದಿಲ್ಲ ಎಂದು ಈ ಕಂಪನಿಗಳು ಹೇಳಿಕೊಂಡಿವೆ.

ಇದನ್ನೂ ಓದಿ: ದೇಶ ಬಿಟ್ಟು ಹೋಗುತ್ತೇವೆ ಹೊರತು ಗೌಪ್ಯತೆ ಮಾತ್ರ ಬಿಡಲ್ಲ: ವಾಟ್ಸಾಪ್ ಹಠಕ್ಕೇನು ಕಾರಣ?

ಶೋಕಾಸ್ ನೋಟೀಸ್ ಹಿಂದೆ ಹಿಂಡನ್ಬರ್ಗ್ ಪ್ರಕರಣ

2023ರ ಜನವರಿಯಲ್ಲಿ ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್ಬರ್ಗ್ ರಿಸರ್ಚ್ ಅದಾನಿ ಸಾಮ್ರಾಜ್ಯವನ್ನೇ ಅಲುಗಾಡಿಸುವಂತಹ ವರದಿ ಬಿಡುಗಡೆ ಮಾಡಿತ್ತು. ಅಲ್ಲಿಯವರೆಗೆ ಗಣನೀಯವಾಗಿ ಉಬ್ಬಿದ್ದ ಅದಾನಿ ಗ್ರೂಪ್ ಕಂಪನಿಗಳ ಷೇರುಬೆಲೆ ದಿಢೀರ್ ಪತನವಾಗಿದ್ದವು. ಹಿಂಡನ್ಬರ್ಗ್ ರಿಸರ್ಚ್ ಮಾಡಿದ್ದ ಆರೋಪಗಳ ವಿಚಾರವನ್ನು ಕೂಲಂಕಷವಾಗಿ ತನಿಖೆ ಮಾಡುವಂತೆ ಸೆಬಿಗೆ ಸುಪ್ರೀಂಕೋರ್ಟ್ ಆದೇಶ ಕೊಟ್ಟಿದೆ. ಈ ಪ್ರಕಾರವಾಗಿ ಸೆಬಿ ತನಿಖೆ ನಡೆಸುತ್ತಿದ್ದು, ಈ ವೇಳೆ ಸಿಕ್ಕ ಕೆಲ ಮಾಹಿತಿ ಆಧರಿಸಿ ಆರು ಕಂಪನಿಗಳಿಗೆ ಶೋಕಾಸ್ ನೋಟೀಸ್ ಕೊಟ್ಟಿದೆ.

ಶೋಕಾಸ್ ನೋಟೀಸ್ ಎಂಬುದು ಆರೋಪಗಳಿಗೆ ಅಥವಾ ಅಕ್ರಮ ನಡೆದಿರುವುದಕ್ಕೆ ಕಾರಣ ಕೇಳುವುದಾಗಿರುತ್ತದೆ. ಉತ್ತರವು ಸಮಾಧಾನ ತರುವಂತಹದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದಿಲ್ಲ. ಈ ಶೋಕಾಸ್ ನೋಟೀಸ್​ನಲ್ಲಿ ಮಾಡಲಾಗಿರುವ ಆರೋಪದಲ್ಲಿ ಹೆಚ್ಚಿನವು ರಿಲೇಟೆಡ್ ಪಾರ್ಟಿ ಟ್ರಾನ್ಸಾಕ್ಷನ್ಸ್​ಗೆ ಸಂಬಂಧಿಸಿದ್ದವೇ ಆಗಿವೆ.

ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ತನ್ನ ವರದಿಯಲ್ಲಿ ಅದಾನಿ ಗ್ರೂಪ್ ಕಂಪನಿಗಳ ವಿರುದ್ಧ 6,000ಕ್ಕೂ ಹೆಚ್ಚು ರಿಲೇಟೆಡ್ ಪಾರ್ಟಿ ಟ್ರಾನ್ಸಾಕ್ಷನ್ಸ್​ಗಳನ್ನು ಉಲ್ಲೇಖಿಸಿ, ಅವುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಈ ಪೈಕಿ ಸೆಬಿ 13 ನಿರ್ದಿಷ್ಟ ರಿಲೇಟ್ ಪಾರ್ಟಿ ಟ್ರಾನ್ಸಾಕ್ಷನ್ಸ್​ಗಳನ್ನು ಗುರುತಿಸಿ ಅದರಲ್ಲಿ ಯಾವುದಾದರೂ ಅಕ್ರಮ ನಡೆದಿದೆಯಾ ಎಂದು ತನಿಖೆ ಮಾಡುತ್ತಿರುವುದಾಗಿ ಸೆಬಿ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸೆಬಿಯಿಂದ ಆರು ಅದಾನಿ ಕಂಪನಿಗಳಿಗೆ ಶೋಕಾಸ್ ಜಾರಿಯಾಗಿರುವುದು.

ಇದನ್ನೂ ಓದಿ: ಭಾರತ, ಚೀನಾ, ಜಪಾನ್​ಗೆ ಜೆನಾಫೋಬಿಯಾದ ಬಣ್ಣ ಹಚ್ಚಿದ ಅಮೆರಿಕ ಅಧ್ಯಕ್ಷ ಜೋ ಬೈಡನ್; ಏನಿದು ಜೆನಫೋಬಿಯಾ?

ಏನಿದು ರಿಲೇಟೆಡ್ ಪಾರ್ಟಿ ಟ್ರಾನ್ಸಾಕ್ಷನ್?

ಇಲ್ಲಿ ಒಂದೇ ಸಮೂಹಕ್ಕೆ ಸೇರಿದ ಸಂಸ್ಥೆಗಳ ಮಧ್ಯೆ ನಡೆಯುವ ವಹಿವಾಟಿಗೆ ರಿಲೇಟೆಡ್ ಪಾರ್ಟಿ ಟ್ರಾನ್ಸಾಕ್ಷನ್ ಎನ್ನುತ್ತಾರೆ. ಸಂಪನ್ಮೂಲ ಹಂಚಿಕೆ, ಸರ್ವಿಸ್, ಹಣದ ರವಾನೆ, ಸಾಲ ಇತ್ಯಾದಿ ವಹಿವಾಟು ಯಾವುದೇ ಆಗಿರಬಹುದು. ಒಂದು ಸಂಸ್ಥೆ ಹಾಗೂ ಅದರ ಅಧೀನ ಸಂಸ್ಥೆಗಳು, ಅಥವಾ ಸೋದರ ಸಂಸ್ಥೆಗಳ ಮಧ್ಯೆ ಈ ವಹಿವಾಟು ನಡೆಯಬಹುದು.

ಸಂಸ್ಥೆ ಹಾಗು ಅದರ ಫ್ರಾಂಚೈಸಿಗಳ ನಡುವೆ ನಡೆಯುವ ವಹಿವಾಟು ಕೂಡ ರಿಲೇಟೆಡ್ ಪಾರ್ಟಿ ಟ್ರಾನ್ಸಾಕ್ಷನ್ಎನಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ