ನವದೆಹಲಿ, ನವೆಂಬರ್ 11: ಸೋಲಾರ್ ಉಪಕರಣಗಳ ತಯಾರಿಕೆಯ ವ್ಯವಸ್ಥೆ ನಿರ್ಮಿಸಲು ಬೇರೆ ದೇಶಗಳಿಗೆ 20 ವರ್ಷ ಬೇಕಾದವು. ಆದರೆ, ಭಾರತದಲ್ಲಿ ನಾಲ್ಕೈದು ವರ್ಷದಲ್ಲಿ ಇದು ಸಾಧ್ಯವಾಗಲಿದೆ ಎಂದು ಅವಾಡ ಗ್ರೂಪ್ನ ಸಂಸ್ಥಾಪಕ ಮತ್ತು ಛೇರ್ಮನ್ ಆದ ವಿನೀತ್ ಮಿಟ್ಟಲ್ ಅಭಿಪ್ರಾಯಪಟ್ಟಿದ್ದಾರೆ. ಯುಎಇ ದೇಶದ ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮವೊಮದರಲ್ಲಿ ಮಾತನಾಡುತ್ತಿದ್ದ ವಿನೀತ್, ಬಹಳ ಶೀಘ್ರದಲ್ಲಿ ಭಾರತವು ಸೌರಶಕ್ತಿ ಉತ್ಪಾದನೆಯಲ್ಲಿ ಪೂರ್ಣ ಸ್ವಾವಲಂಬನೆ ಸಾಧಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೌರಶಕ್ತಿ ಉತ್ಪಾದನೆಯ ಉಪಕರಣಗಳಿಗಾಗಿ ಭಾರತೀಯ ಕಂಪನಿಗಳು ಬೇರೆ ದೇಶಗಳ ಮೇಲೆ ಅವಲಂಬಿತವಾಗಿವೆ. ಇದು ಭಾರತೀಯ ಸೌರ ಸಂಸ್ಥೆಗಳಿಗೆ ಹಿನ್ನಡೆಯಂತೂ ತರುತ್ತಿದೆ. ಈ ಪರಿಸ್ಥಿತಿ ಬಹಳ ಬೇಗ ಬದಲಾಗಲಿದೆ. ಸೌರಶಕ್ತಿ ಉತ್ಪಾದನೆಯ ಸಪ್ಲೈ ಚೈನ್ನಲ್ಲಿರುವ ಪ್ರತಿಯೊಂದು ಭಾಗದ ಪೂರ್ಣ ವ್ಯವಸ್ಥೆಯನ್ನು ನಿರ್ಮಿಸಲು ಹಲವು ದೇಶಗಳು ಕಳೆದ 20 ವರ್ಷಗಳಿಂದ ಮಾಡಿದ ಕಾರ್ಯವನ್ನು ಭಾರತ ಮುಂದಿನ ನಾಲ್ಕೈದು ವರ್ಷದಲ್ಲೇ ಸಾಧಿಸಲಿದೆ ಎಂದು ಮಿಟ್ಟಲ್ ಹೇಳಿದ್ದಾರೆ.
ಇದನ್ನೂ ಓದಿ: ಮೆಡಿಕಲ್ ಡಿವೈಸ್ ಕ್ಷೇತ್ರದ ಬೆಳವಣಿಗೆಗೆ ಪುಷ್ಟಿ ಕೊಡಲು ಸರ್ಕಾರದಿಂದ ಯೋಜನೆ; ಮೂರು ವರ್ಷಗಳಿಗೆ 500 ಕೋಟಿ ರೂ ವಿನಿಯೋಗ
ವಿನೀತ್ ಮಿಟ್ಟಲ್ ಅವರ ಅವಾಡ ಗ್ರೂಪ್ ಸಂಸ್ಥೆ ಮರುಬಳಕೆ ಇಂಧ ಉತ್ಪಾದನೆಯ ಕ್ಷೇತ್ರದ ಬಿಸಿನೆಸ್ ಹೊಂದಿದೆ. ಮುಂಬೈನಲ್ಲಿ ಇದರ ಕಚೇರಿ ಇದ್ದು, ಸೌರಶಕ್ತಿ, ವಾಯುಶಕ್ತಿ, ಹಸಿರು ಇಂಧನ ಇತ್ಯಾದಿ ಬಿಸಿನೆಸ್ ನಡೆಸುತ್ತಿದೆ. ತಮ್ಮ ಕ್ಷೇತ್ರದಲ್ಲಿ ಉಪಕರಣಗಳ ತಯಾರಿಕೆಯಲ್ಲಿ ದೇಶವು ಸ್ವಾವಲಂಬನೆ ಹೊಂದಬೇಕು ಎಂಬುದು ಈ ಸಂಸ್ಥೆಯ ಆಶಯ. ‘ಫ್ಯಾಕ್ಟರಿಯ ಒಂದು ಭಾಗದಿಂದ ವೇಫರ್ ಹಾಕಿದರೆ, ಮತ್ತೊಂದು ಭಾಗದಿಂದ ಸೋಲಾರ್ ಪ್ಯಾನಲ್ ಬರುತ್ತದೆ. ಅಂಥದ್ದೊಂದು ಕ್ಯಾಂಪಸ್ ಅನ್ನು ಸ್ಥಾಪಿಸುತ್ತಿದ್ದೇವೆ. ಇದು ರಿನಿವಬಲ್ ಎನರ್ಜಿ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗಬಲ್ಲುದು’ ಎಂದು ತಿಳಿಸಿದ್ದಾರೆ.
ಹೈಡ್ರೋಜನ್ ಇಂಧನದ ಉಪಯುಕ್ತತೆ ಬಗ್ಗೆ ಮಾತನಾಡಿದ ಅವರು, ಅದರ ಇಕೋಸಿಸ್ಟಂ ಸರಿಯಾಗಿ ಬೆಳೆಯದ ಕಾರಣ ಉತ್ಪಾದನಾ ವೆಚ್ಚ ಬಹಳ ಹೆಚ್ಚಿದೆ. ಇದು ಕಡಿಮೆ ಆಗಬೇಕು ಎನ್ನುವುದು ಅವರ ಅನಿಸಿಕೆ.
ಇದನ್ನೂ ಓದಿ: ಗುಜರಿ ಅಂತ ಜರೀಬೇಡಿ… ಗುಜರಿ ಮಾರಿ ಸರ್ಕಾರ ಗಳಿಸಿದ್ದೆಷ್ಟು ನೋಡಿ
‘ಸೋಲಾರ್ನಲ್ಲಿ ನಾನು ಮೊದಲ ಪ್ರಾಜೆಕ್ಟ್ ಮಾಡಿದಾಗ ಬೆಲೆ 30 ಸೆಂಟ್ನಷ್ಟಿತ್ತು. ಈಗ ನಾವು ಕೇವಲ ನಾಲ್ಕು ಸೆಂಟ್ಗಿಂತ ಕಡಿಮೆ ಬೆಲೆಗೆ ಮಾಡುತ್ತಿದ್ದೇವೆ. ಇದೇ ರೀತಿಯಲ್ಲಿ ಹೈಡ್ರೋಜನ್ ಎನರ್ಜಿ ಸೆಕ್ಟರ್ ಕೂಡ ಅಭಿವೃದ್ದಿಯಾಗಬೇಕು. ಜಾಗತಿಕವಾಗಿ ಸರ್ಕಾರಗಳಿಂದ ಹಲವಾರು ಯೋಜನೆಗಳು ಬರದೇ ಹೋದರೆ ಈ ಸೆಕ್ಟರ್ನಲ್ಲಿ ಇಂಧನ ಉತ್ಪಾದನಾ ವೆಚ್ಚ ಕಡಿಮೆ ಆಗುವುದೇ ಇಲ್ಲ’ ಎಂದು ವಿನೀತ್ ಮಿಟ್ಟಲ್ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ