AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಬಿಟ್​ಕಾಯಿನ್ 68 ಲಕ್ಷ ರೂ; ಕ್ರಿಪ್ಟೋಕರೆನ್ಸಿ ಬೆಲೆ ಈ ಪರಿ ಏರಿಕೆ ಯಾಕೆ? ಭಾರತದಲ್ಲಿ ಹೂಡಿಕೆಗೆ ಅವಕಾಶವಿದೆಯಾ?

Cryptocurrency market: ಒಂದು ಬಿಟ್​ಕಾಯಿನ್ ಬೆಲೆ ನವೆಂಬರ್ 11ರಂದು 81,000 ಡಾಲರ್ ಸಮೀಪಕ್ಕೆ ಬಂದಿದೆ. ರುಪಾಯಿ ಲೆಕ್ಕದಲ್ಲಿ ಬರೋಬ್ಬರಿ 68 ಲಕ್ಷ ರೂಗೂ ಅಧಿಕ. ಈ ಒಂದು ವರ್ಷದಲ್ಲೇ ಬಿಟ್​ಕಾಯಿನ್ ಬೆಲೆ ಶೇ. 80ರಷ್ಟು ಹೆಚ್ಚಾಗಿದೆ. ಡೊನಾಲ್ಡ್ ಟ್ರಂಪ್ ಅಮೆರಿಕ ಚುನಾವಣೆ ಗೆದ್ದ ಬಳಿಕ ಶೇ. 30ರಷ್ಟು ಬೆಲೆ ಹೆಚ್ಚಿದೆ. ಬಿಟ್​ಕಾಯಿನ್ ಮಾತ್ರವಲ್ಲ ಬೇರೆಲ್ಲಾ ಕ್ರಿಪ್ಟೋಕರೆನ್ಸಿಗಳಿಗೂ ಬೇಡಿಕೆ ಹೆಚ್ಚಿದೆ.

ಒಂದು ಬಿಟ್​ಕಾಯಿನ್ 68 ಲಕ್ಷ ರೂ; ಕ್ರಿಪ್ಟೋಕರೆನ್ಸಿ ಬೆಲೆ ಈ ಪರಿ ಏರಿಕೆ ಯಾಕೆ? ಭಾರತದಲ್ಲಿ ಹೂಡಿಕೆಗೆ ಅವಕಾಶವಿದೆಯಾ?
ಬಿಟ್​ಕಾಯಿನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 11, 2024 | 12:20 PM

Share

ನವದೆಹಲಿ, ನವೆಂಬರ್ 11: ಕ್ರಿಪ್ಟೋಕರೆನ್ಸಿ ಭವಿಷ್ಯ ಇನ್ನೂ ಅನಿಶ್ಚಿತವಾಗಿದ್ದರೂ ಬಿಟ್​ಕಾಯಿನ್ ಇತ್ಯಾದಿಗಳಿಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಎನಿಸಿದ ಬಿಟ್​ಕಾಯಿನ್​ನ ಬೆಲೆ ಮೊತ್ತಮೊದಲ ಬಾರಿಗೆ 80,000 ಡಾಲರ್ ಗಡಿ ದಾಟಿದೆ. ಈ ವರ್ಷವೊಂದರಲ್ಲೇ ಅದರ ಬೆಲೆ ಶೇ. 80ಕ್ಕೂ ಅಧಿಕ ಪ್ರಮಾಣದಲ್ಲಿ ಏರಿಕೆ ಆಗಿದೆ. ಇಂದು ಸೋಮವಾರ ಬಿಟ್​ಕಾಯಿನ್ ಬೆಲೆ 80,800 ಯುಎಸ್ ಡಾಲರ್ ಆಗಿದೆ. 81,000 ಡಾಲರ್ ಮೈಲಿಗಲ್ಲು ಇವತ್ತೇ ಮುಟ್ಟುವ ಕುರುಹು ಕಾಣುತ್ತಿದೆ. ಭಾರತೀಯ ರುಪಾಯಿ ಲೆಕ್ಕದಲ್ಲಿ ಈಗ ಒಂದು ಬಿಟ್​ಕಾಯಿನ್ ಬೆಲೆ ಬರೋಬ್ಬರಿ 68 ಲಕ್ಷ ರೂಗೂ ಅಧಿಕ ಇದೆ. ಬಿಟ್​ಕಾಯಿನ್ ಈ ಪರಿ ಬೆಲೆ ಹೆಚ್ಚಲು ಏನು ಕಾರಣ?

ಡೊನಾಲ್ಡ್ ಟ್ರಂಪ್ ಪುನರಾಗಮನದಿಂದ ಕೊಡವಿ ನಿಂತ ಕ್ರಿಪ್ಟೋಸ್

ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನದ ಕಣಕ್ಕೆ ಇಳಿದಾಗಿನಿಂದಲೇ ಬಿಟ್​ಕಾಯಿನ್ ಬೇಡಿಕೆ ಗಳಿಸತೊಡಗಿತ್ತು. ಟ್ರಂಪ್ ಗೆಲುವು ಸಾಧಿಸಬಹುದು ಎನ್ನುವ ಸುಳಿವು ದಟ್ಟವಾಗುತ್ತಿರುವಂತೆಯೇ ಬಿಟ್ಕಾಯಿನ್ ಬೆಲೆ ಮೇಲೇರತೊಡಗುತ್ತಲೇ ಹೋಗಿದೆ. ಟ್ರಂಪ್ ಚುನಾವಣೆ ಗೆದ್ದ ಬಳಿಕ ಶೇ. 30ರಷ್ಟು ಬೆಲೆ ಏರಿಕೆ ಆಗಿದೆ. ಬಿಟ್​ಕಾಯಿನ್ ಮಾತ್ರವಲ್ಲ, ಬೇರೆ ಹಲವು ಕ್ರಿಪ್ಟೋಕರೆನ್ಸಿಗಳಿಗೂ ಈ ವೇಳೆ ಬೇಡಿಕೆ ಹೆಚ್ಚತೊಡಗಿದೆ.

ಇದನ್ನೂ ಓದಿ: ಏರ್ ಇಂಡಿಯಾ ಜೊತೆ ವಿಲೀನಗೊಂಡ ವಿಸ್ತಾರ; 9 ವರ್ಷದ ವಿಸ್ತಾರ ಬ್ರ್ಯಾಂಡ್ ಇನ್ನು ಗತ ಇತಿಹಾಸ

ಕ್ರಿಪ್ಟೋಕರೆನ್ಸಿಗಳಿಗೆ ಟ್ರಂಪ್ ಬೆಂಬಲ?

ಡೊನಾಲ್ಡ್ ಟ್ರಂಪ್ 2024ರ ಆಗಸ್ಟ್​ನಲ್ಲಿ ಕ್ರಿಪ್ಟೋಕರೆನ್ಸಿ ಬಗ್ಗೆ ಬಹಳ ಸಕಾರಾತ್ಮಕವಾಗಿ ಮಾತನಾಡಿದ್ದರು. ಕ್ರಿಪ್ಟೋಕರೆನ್ಸಿಗಳು ಭವಿಷ್ಯವನ್ನು ರೂಪಿಸುತ್ತವೆ ಎಂದಿದ್ದರು. ಅಷ್ಟೇ ಅಲ್ಲ, ಸರ್ಕಾರವು ಪೆಟ್ರೋಲಿಯಂ ಅನ್ನು ಸಂಗ್ರಹಿಸಿ ಇಡುವಂತೆ ಭದ್ರತಾ ಕ್ರಮವಾಗಿ ಕ್ರಿಪ್ಟೋಕರೆನ್ಸಿಗಳನ್ನೂ ಖರೀದಿಸಿ ಇಡಲಾಗುವುದು ಎನ್ನುವ ಪ್ರಸ್ತಾವ ಮಾಡಿದ್ದರು.

ಹಿಂದಿನ ಬೈಡನ್ ಸರ್ಕಾರ ಕ್ರಿಪ್ಟೋಗಳ ಬಗ್ಗೆ ನಕಾರಾತ್ಮಕ ಧೋರಣೆ ಹೊಂದಿತ್ತು. ಕುತೂಹಲ ಎಂದರೆ ಟ್ರಂಪ್ ಈ ಹಿಂದೆ ಕ್ರಿಪ್ಟೋ ಬಗ್ಗೆ ಇದ್ದ ಅಭಿಪ್ರಾಯ ಅಷ್ಟಕಷ್ಟೇ. ಇತ್ತೀಚೆಗೆ ಟ್ರಂಪ್ ನಿಲುವು ಬದಲಾದಂತಿದೆ. ಕ್ರಿಪ್ಟೋದ ಸಮರ್ಥಕರಾಗಿ ಬದಲಾಗಿ ಹೋಗಿದ್ದಾರೆ. ಟ್ರಂಪ್​ಗೆ ಆಪ್ತರಾಗಿರುವ ಇಲಾನ್ ಮಸ್ಕ್ ಅವರು ಕ್ರಿಪ್ಟೋ ಕರೆನ್ಸಿಗಳ ಪ್ರಬಲ ಸಮರ್ಥಕರಾಗಿದ್ದಾರೆ. ಈಗ ಟ್ರಂಪ್ ಆಡಳಿತದಲ್ಲಿ ಕ್ರಿಪ್ಟೋ ಮಾರುಕಟ್ಟೆಗೆ ಭರ್ಜರಿ ಪುಷ್ಟಿ ಸಿಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಿಟ್​ಕಾಯಿನ್ ಇತ್ಯಾದಿ ಕ್ರಿಪ್ಟೋಕರೆನ್ಸಿಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಇದನ್ನೂ ಓದಿ: ಒಂದು ದೇಶ ಸೂಪರ್​ಪವರ್ ಆಗಲು ಹೇಗಿರಬೇಕು? ಭಾರತದ ಬಗ್ಗೆ ಪುಟಿನ್ ನಿರೀಕ್ಷೆಗಳೇನು?

ಭಾರತದಲ್ಲಿ ಬಿಟ್​ಕಾಯಿನ್ ನಿಷೇಧವಾಗಿದೆಯಾ?

ಭಾರತ ಸರ್ಕಾರ ಕ್ರಿಪ್ಟೋಕರೆನ್ಸಿಯನ್ನು ನಿಷೇಧಿಸಿಲ್ಲವಾದರೂ ಅದರ ವಹಿವಾಟಿಗೆ ಉತ್ತೇಜನವನ್ನಂತೂ ನೀಡುತ್ತಿಲ್ಲ. ಈ ಡಿಜಿಟಲ್ ಕರೆನ್ಸಿ ಬಗ್ಗೆ ಸರ್ಕಾರಕ್ಕೆ ಇನ್ನೂ ಹಲವು ಅನುಮಾನಗಳು ಉಳಿದಿವೆ. ಆದರೆ, ಕ್ರಿಪ್ಟೋದಲ್ಲಿ ಹೂಡಿಕೆ ಮಾಡಲು ಅಡ್ಡಿ ಇಲ್ಲ. ಇದರಲ್ಲಿ ಗಳಿಸಿದ ಲಾಭದ ಮೇಲೆ ಶೇ. 30ರಷ್ಟು ತೆರಿಗೆ ಹಾಕಲಾಗುತ್ತಿದೆ. ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವ ಭಾರತೀಯರು ಈ ವಿಚಾರ ಅರಿತು ಮುಂದಡಿ ಇಡುವುದು ಸರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ